ಪಂಡಿತರಿಗೆ ತವರಿಗೆ ತೆರಳುವ ಕಾತರ
ಸರ್ಕಾರ ನಮ್ಮ ಕುಟುಂಬಗಳಿಗೆ ಸೂಕ್ತ ಭದ್ರತೆ, ಗೌರವದಿಂದ ಕರೆಸಿಕೊಳ್ಳುವಂತಾಗಬೇಕು
Team Udayavani, Aug 7, 2019, 12:56 PM IST
ಬೆಂಗಳೂರು: ಕರ್ನಾಟಕ ನಮಗೆ ಎಲ್ಲವನ್ನು ಕೊಟ್ಟಿದೆ. ಈಗ ಕೇಂದ್ರ ಸರ್ಕಾರ ಸಕಲ ಭದ್ರತೆ ಹಾಗೂ ಗೌರವದೊಂದಿಗೆ ನಮ್ಮ ತವರು ನೆಲ ಕಾಶ್ಮೀರಕ್ಕೆ ಕರೆಸಿಕೊಂಡರೆ ಹೋಗಲು ಉತ್ಸುಕರಾಗಿದ್ದೇವೆ!
ಇದು, ಕಾಶ್ಮೀರ ಕಣಿವೆಯಿಂದ ಕಂಗೆಟ್ಟು 30-40 ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಬಂದು ನೆಲೆಸಿರುವ ಕಾಶ್ಮೀರ ವಾಸಿಗಳ ಹರ್ಷೋದ್ಘಾರ.
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸಹಿತವಾಗಿ ರಾಜ್ಯದ ವಿವಿಧ ಭಾಗದಲ್ಲಿ ಸುಮಾರು 400 ಕಾಶ್ಮೀರಿ ಪಂಡಿತರ ಕುಟುಂಬಗಳು ವಾಸಿಸುತ್ತಿವೆ. ಸಂಖ್ಯಾ ಲೆಕ್ಕಾಚಾರದಲ್ಲಿ 2,000ದಿಂದ 2,500 ಮಂದಿ ಕರ್ನಾಟಕದಲ್ಲಿ ಇರಬಹುದು. ರಾಜಧಾನಿಯ ವಿದ್ಯಾರಣ್ಯಪುರ, ಎಚ್ಎಂಟಿ ಬಡವಾಣೆ, ಯಲಹಂಕ, ಯಶವಂತಪುರ, ಕೆ.ಆರ್.ಪುರ ಮೊದಲಾದ ಕಡೆಗಳಲ್ಲಿ ಹೆಚ್ಚು ಕುಟುಂಬಗಳಿವೆ. ಇಡೀ ಕರ್ನಾಟಕದಲ್ಲಿರುವ ಒಟ್ಟಾರೆ ಕಾಶ್ಮೀರಿ ಪಂಡಿತರ ಕುಟುಂಬಗಳ ಪೈಕಿ ಬೆಂಗಳೂರಿನಲ್ಲೇ ಹೆಚ್ಚಿವೆ ಎಂದು ಕಾಶ್ಮೀರದ ಮೂಲ ನಿವಾಸಿ ದಿಲೀಪ್ ಕಾಚ್ರೂ ‘ಉದಯವಾಣಿ’ಗೆ ಮಾಹಿತಿ ನೀಡಿದರು.
ಯಾವಾಗ ಬೇಕಾದರೂ ಕಾಶ್ಮೀರಕ್ಕೆ ಹೋಗಲು ಸಿದ್ಧರಿದ್ದೇವೆ. ಅಲ್ಲಿಯೇ ನಮ್ಮ ಕುಟುಂಬಗಳು ನೆಲೆಸಲು ತಯಾರಿದ್ದೇವೆ. ಆದರೆ, ಸರ್ಕಾರ ನಮ್ಮ ಕುಟುಂಬಗಳಿಗೆ ಸೂಕ್ತ ಭದ್ರತೆ ಹಾಗೂ ಗೌರವದಿಂದ ಕರೆಸಿಕೊಳ್ಳುವಂತಾಗಬೇಕು ಎಂದು ಕಾಶ್ಮೀರ ಮೂಲದ ಓಪೇಂದ್ರ ಬಲಿ ಅಭಿಪ್ರಾಯ ವ್ಯಕ್ತಪಡಿಸಿದರು.
1970-80ರ ದಶಕದಲ್ಲಿ ಅತ್ಯಂತ ದುಃಖೀತವಾಗಿ ಕಾಶ್ಮೀರದಿಂದ ದೇಶದ ಬೇರೆ ಬೇರೆ ರಾಜ್ಯಗಳಿಗೆ ನಾವು( ಕಾಶ್ಮೀರಿ ಪಂಡಿತರ ಸಮೂಹ) ವಲಸೆ ಹೋಯಿತು. ಕೆಲವು ಕುಟುಂಬಗಳು ಕರ್ನಾಟಕಕ್ಕೂ ಬಂದಿವೆ. ಕರ್ನಾಟಕಕ್ಕೆ ಬಂದ ದಿನಗಳಲ್ಲಿ ನಮ್ಮ ಬಳಿ ಯಾವ ಉದ್ಯೋಗವೂ ಇರಲಿಲ್ಲ. ಜಮೀನು ಮತ್ತು ವಸತಿ ದೂರದ ಮಾತಾಗಿತ್ತು. ನಮ್ಮ ಅಳಲು ಕೇಳುವವರು ಇರಲಿಲ್ಲವಾಗಿತ್ತು. ನಂತರ ವರ್ಷಗಳಲ್ಲಿ ಸ್ಥಳೀಯರ ಸಹಕಾರದಿಂದ ಇಲ್ಲಿನವರೊಂದಿಗೆ ಅನ್ಯೋನ್ಯವಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಇಲ್ಲಿನ ಸರ್ಕಾರ ಕೂಡ ನಮಗೆ ಯಾವುದೇ ಸಮಸ್ಯೆ ನೀಡಿಲ್ಲ. ಮಕ್ಕಳು ಇಲ್ಲಿಯೇ ಓದಿ, ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಎಲ್ಲರೂ ಒಟ್ಟಿಗೆ ಸೇರುತ್ತೇವೆ ಎಂದು ಅವರು ಭಾವುಕರಾದರು.
ಕರ್ನಾಟಕ ಮತ್ತು ಕಾಶ್ಮೀರಕ್ಕೆ ಅವಿನಾಭಾವ ಸಂಬಂಧವಿದೆ. ಅಲ್ಲಿನ ಸಂಸ್ಕೃತಿ, ಸಂಪ್ರದಾಯದ ಕೆಲವು ಅಂಶಗಳನ್ನು ಇಲ್ಲಿಯೂ ಕಾಣಬಹುದಾಗಿದೆ. ನಾವು ಕಾಶ್ಮೀರದಿಂದ ಬಂದಿದ್ದರೂ, ಕರ್ನಾಟಕದ ಆಹಾರ ಪದ್ಧತಿಗೆ ಹೊಂದಿಕೊಂಡಿದ್ದೇವೆ. ಹಾಗಂತ ಕಾಶ್ಮೀರಿ ಆಹಾರ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ದೇವಿ ಹಾಗೂ ಶಿವನ ಆರಾಧಕರಾಗಿರುವ ನಾವು ಅಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಣೆ ಮಾಡುತ್ತೇವೆ. ನಮ್ಮ ಪುರ್ವಜರು ಕಾಶ್ಮೀರದಲ್ಲಿ ಯಾವೆಲ್ಲ ಹಬ್ಬ, ಉತ್ಸವ ಇತ್ಯಾದಿಗಳನ್ನು ಮಾಡುತ್ತಿದ್ದರೋ ಅದನ್ನೆಲ್ಲವನ್ನೂ ಈಗಲೂ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಚರಣೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿದ್ದೇವೆ ಎಂದು ನುಡಿದರು.
ನಮ್ಮಲ್ಲಿ ವ್ಯಾಪಾರಿಗಳು ತುಂಬಾ ಕಡಿಮೆ. ಹೀಗಾಗಿ ಉದ್ಯಮ ಅಥವಾ ಸಗಟು ವ್ಯಾಪರಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳು ತೀರ ಕಡಿಮೆ. ಬಹುತೇಕರು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳು ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ಇತರೆ ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆದು ಬೆಂಗಳೂರಿನಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದೊಂದಿಗೆ ಒಂದಾಗಿ ಬಾಳುತ್ತಿರುವ ನಮಗೆ ಕೇಂದ್ರ ಸರ್ಕಾರದಿಂದ ಈಗ ಹೊಸ ಆಶಾಕಿರಣ ಸಿಕ್ಕಿದೆ. ತವರು ನೆಲಕ್ಕೆ ವಾಪಾಸ್ ಹೋಗುತ್ತೇವೆ ಎಂಬ ಭರವಸೆಯೂ ಮೂಡಿದೆ ಎಂದು ಖುಷಿಯನ್ನು ಹಂಚಿಕೊಂಡರು.
ಕರ್ನಾಟಕದಲ್ಲಿರುವ ಕಾಶ್ಮೀರಿ ಪಂಡಿತ ಸಮೂಹದ ಮೂರ್‍ನಾಲ್ಕು ಸಂಘಟನೆಗಳು ಇವೆ. ಇದಲ್ಲೆ, ಕಾಶ್ಮೀರದ ಸಮಸ್ಯೆಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವ ಸಾಮಾಜಿಕ ಸಂಘಟನೆಗಳಲ್ಲೂ ಕಾಶ್ಮೀರಿ ಪಂಡಿತರ ಕುಟುಂಬದ ಸದಸ್ಯರು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯಕ್ಕೆ ಯಾವುದೆ ಸಮಸ್ಯೆ ಎದುರಾದರೂ ಒಂದಾಗುತ್ತೇವೆ. ನಮ್ಮ ಆಚರಣೆಯಲ್ಲೂ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ. ಅತ್ಯಂತ ಕಷ್ಟದ ದಿನಗಳಲ್ಲೂ ಆಚರಣೆಗಳನ್ನು ಬಿಟ್ಟು ಬದುಕಲಿಲ್ಲ. ಈಗಲೂ ನಾವು ಕುಟುಂಬ ಸಮೇತರಾಗಿ ಕಾಶ್ಮೀರಕ್ಕೆ ಹೋಗಲು ಶೇ.100ರಷ್ಟು ಸಿದ್ಧರಿದ್ದೇವೆ. ಶಾರದಾ ದೇವಿಯ ನೆಲೆಬೀಡಾಗಿರುವ ಕಾಶ್ಮೀರದಲ್ಲಿ ವಾಸವಾಗಿರಲು ಹೆಮ್ಮೆಯಿದೆ ಎಂದು ಬೆಳೆದುಬಂದ ಬಗೆಯನ್ನು ಇನ್ನೋರ್ವ ಕಾಶ್ಮೀರಿ ನಿವಾಸಿ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.