ಪೇಪರ್‌ಲೆಸ್ ಇ-ಕೌನ್ಸಿಲ್ ಆ್ಯಪ್
Team Udayavani, Jun 5, 2018, 11:51 AM IST
ಬೆಂಗಳೂರು: ಬಿಬಿಎಂಪಿ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಕಾಗದ ರಹಿತ ವ್ಯವಹಾರಕ್ಕಾಗಿ ಮೊದಲ ಹೆಜ್ಜೆ ಇಟ್ಟಿರುವ ಪಾಲಿಕೆ ಕೌನ್ಸಿಲ್ ವಿಭಾಗ “ಬಿಬಿಎಂಪಿ ಇ-ಕೌನ್ಸಿಲ್’ ಆ್ಯಪ್ ಅಭಿವೃದ್ಧಿಪಡಿಸಿದ್ದು, ಆ ಮೂಲಕ ಪಾಲಿಕೆ ಸದಸ್ಯರಿಗೆ ಸುಲಭ ಹಾಗೂ ಶೀಘ್ರವಾಗಿ ಮಾಹಿತಿ ತಲುಪಿಸಲು ನಿರ್ಧರಿಸಿದೆ. ಬಿಬಿಎಂಪಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳ ಕುರಿತು ತಮಗೆ ಮಾಹಿತಿಯಿಲ್ಲ.
ಪಾಲಿಕೆ ಸದಸ್ಯರನ್ನು ಕತ್ತಲಲ್ಲಿರಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹಲವಾರು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರಿಗೆ ಸಮರ್ಪಕ ಮಾಹಿತಿ ರವಾನಿಸುವ ಉದ್ದೇಶದಿಂದ ಬಿಬಿಎಂಪಿ ಇ-ಕೌನ್ಸಿಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಪಾಲಿಕೆಯಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಣಯದ ಮಾಹಿತಿ ಕಾಲಕಾಲಕ್ಕೆ ಸದಸ್ಯರಿಗೆ ಲಭ್ಯವಾಗಲಿದೆ.
ಪಾಲಿಕೆಯಿಂದ ಕರೆಯಲಾಗುವ ಮಾಸಿಕ ಸಭೆ, ತುರ್ತು ಹಾಗೂ ವಿಶೇಷ ಸಭೆಗಳ ಮಾಹಿತಿಯನ್ನು ಸದ್ಯ ಪತ್ರದ ಮೂಲಕ ಪಾಲಿಕೆ ಸದಸ್ಯರಿಗೆ ತಲುಪಿಸಲಾಗುತ್ತಿದೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಪತ್ರಗಳು ಸದಸ್ಯರಿಗೆ ತಲುಪದ ಹಿನ್ನೆಲೆಯಲ್ಲಿ ಗೈರಾಗಿರುವ ಉದಾಹರಣೆಗಳಿವೆ. ಆ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ನಡೆದಿವೆ.
ಹೀಗಾಗಿ ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗವು ಕೌನ್ಸಿಲ್ ವಿಭಾಗದ ಅಧಿಕಾರಿಗಳ ಬೇಡಿಕೆಗೆ ಅನುಸಾರವಾಗಿ ಪಾಲಿಕೆ ಸದಸ್ಯರಿಗೆ ವಿಶೇಷವಾದ ಆ್ಯಪ್ ಅಭಿವೃದ್ಧಿಪಡಿಸಿದೆ. ಪಾಲಿಕೆಯ ಸಭೆಗಳಲ್ಲಿ ತೆಗೆದುಕೊಳ್ಳುವಂತಹ ಪ್ರತಿಯೊಂದು ನಿರ್ಣಯಗಳು ಪಾಲಿಕೆ ಸದಸ್ಯರಿಗೆ ಆ್ಯಪ್ ಮೂಲಕ ರವಾನೆಯಾಗಲಿದ್ದು, ಮುಂದಿನ ದಿನಗಳಲ್ಲಿ ಸದಸ್ಯರು ತಮಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.
ಕಾರ್ಪೊರೇಟರ್‌ಗಳ ಐಪ್ಯಾಡ್‌ಗಳಲ್ಲಿ “ಇ-ಕೌನ್ಸಿಲ್’: ಪಾರದರ್ಶಕ ಹಾಗೂ ಕಾಗದ ರಹಿತ ಆಡಳಿತಕ್ಕಾಗಿ ಎಲ್ಲ ಪಾಲಿಕೆ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರಿಗೆ ಆ್ಯಪಲ್ ಸಂಸ್ಥೆಯ ಐಪ್ಯಾಡ್‌ಗಳನ್ನು ಪಾಲಿಕೆಯಿಂದ ವಿತರಿಸಲಾಗಿದೆ. ಅದರಂತೆ ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ಸುಮಾರು 30 ಸದಸ್ಯರ ಐಪ್ಯಾಡ್‌ಗಳಲ್ಲಿ “ಬಿಬಿಎಂಪಿ ಇ-ಕೌನ್ಸಿಲ್’ ಆ್ಯಪ್ ಡೌನ್‌ಲೋಡ್ ಮಾಡಿಕೊಟ್ಟಿರುವ ಕೌನ್ಸಿಲ್ ಅಧಿಕಾರಿಗಳು, ಆ್ಯಪ್ ಬಳಕೆಯ ಕುರಿತು ಮಾಹಿತಿ ನೀಡಿದ್ದಾರೆ.
ಕೌನ್ಸಿಲ್, ಸ್ಥಾಯಿ ಸಮಿತಿ ನಿರ್ಣಯಗಳು ಲಭ್ಯ: ಗಲಾಟೆ ನಡೆಯುವಾಗ ವಿಷಯಗಳಿಗೆ ಅನುಮೋದನೆ ನಡೆಯಲಾಗುತ್ತಿದೆ, ಪಾಲಿಕೆಯ 12 ಸ್ಥಾಯಿ ಸಮಿತಿಗಳಲ್ಲಿ ಕೈಗೊಳ್ಳುತ್ತಿರುವ ನಿರ್ಣಯಗಳು ಯಾರಿಗೂ ತಿಳಿಯುತ್ತಲೇ ಇಲ್ಲ ಎಂಬ ವಿಚಾರಗಳು ಹೆಚ್ಚು ಚರ್ಚೆಯಾಗಿವೆ. ಹಾಗಾಗಿ ಪಾಲಿಕೆ ಸಭೆ ಹಾಗೂ ಎಲ್ಲ ಸ್ಥಾಯಿ ಸಮಿತಿಗಳಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯವನ್ನು ಆ್ಯಪ್ ಮೂಲಕ ಪಾಲಿಕೆ ಸದಸ್ಯರಿಗೆ ತಲುಪಿಸಲಾಗುತ್ತದೆ.
ಕಾರ್ಯಸೂಚಿ ಲಭ್ಯ: ಪಾಲಿಕೆಯಿಂದ ಕರೆಯಲಾಗುವ ವಿಷಯಾಧಾರಿತ ಸಭೆಗಳಲ್ಲಿ ಚರ್ಚೆಗೆ ತೆಗೆದುಕೊಂಡಿರುವ ಕಾರ್ಯಸೂಚಿಯ (ಅಜೆಂಡಾ) ಪ್ರತಿಯನ್ನು ಪಿಡಿಎಫ್ ಮೂಲಕ ಎಲ್ಲ ಪಾಲಿಕೆ ಸದಸ್ಯರಿಗೆ ಎರಡು ದಿನಗಳ ಮೊದಲೇ ಕಳುಹಿಸಲಾಗುತ್ತದೆ. ಕೌನ್ಸಿಲ್ ವಿಭಾಗದ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಆ್ಯಪ್‌ನಲ್ಲಿ ಹಂಚಿಕೊಂಡಾಗ ಸದಸ್ಯರಿಗೆ ಅದರ ನೋಟಿಫಿಕೇಷನ್ ಬರುವಂತೆ ಸೆಟ್ಟಿಂಗ್ಸ್ ಮಾಡಲಾಗಿದೆ ಎಂದು ಕೌನ್ಸಿಲ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೀ ಕಾರ್ಯದರ್ಶಿ ಕೈಯಲ್ಲಿ: ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಇ-ಕೌನ್ಸಿಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಆ್ಯಪ್‌ನ ಸಂಪೂರ್ಣ ಮೇಲ್ವಿಚಾರಣೆಯ ಜವಾಬ್ದಾರಿ ಕೌನ್ಸಿಲ್ ಕಾರ್ಯದರ್ಶಿಗೆ ನೀಡಲಾಗಿದೆ. ಯಾವುದೇ ಮಾಹಿತಿ, ತಿಳುವಳಿಕೆ ಪತ್ರ, ಸಭೆಯ ಆಹ್ವಾನ ಸೇರಿದಂತೆ ಯಾವುದೇ ಮಾಹಿತಿ ಹಂಚಿಕೊಳ್ಳಲು ಅವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಪಾಲಿಕೆಯ ಕೌನ್ಸಿಲ್ ಹಾಗೂ ಸ್ಥಾಯಿ ಸಮಿತಿಗಳಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿಯಿಲ್ಲ ಎಂದು ಪಾಲಿಕೆ ಸದಸ್ಯರು ದೂರುತ್ತಾರೆ. ಆ ಹಿನ್ನೆಲೆಯಲ್ಲಿ ಪಾರದರ್ಶಕ ಹಾಗೂ ಕಾಗದ ರಹಿತ ಆಡಳಿತ ಪ್ರೋತ್ಸಾಹಿಸುವ ಉದ್ದೇಶದಿಂದ ಪಾಲಿಕೆ ಸದಸ್ಯರಿಗೆ ಈಗಾಗಲೇ ಐಪ್ಯಾಡ್ ನೀಡಲಾಗಿದ್ದು, ಪಾಲಿಕೆ ಸದಸ್ಯರಿಗಾಗಿ “ಬಿಬಿಎಂಪಿ ಇ-ಕೌನ್ಸಿಲ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
-ಆರ್.ಸಂಪತ್‌ರಾಜ್, ಮೇಯರ್
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ