ದಿನಪೂರ್ತಿ ಪರಮೇಶ್ವರ ಸ್ಮರಣೆ
Team Udayavani, Feb 13, 2018, 12:02 PM IST
ಬೆಂಗಳೂರು: ವಿಶೇಷ ಪೂಜೆ, ಜಾಗರಣೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಹಾಶಿವರಾತ್ರಿಯ ಆಚರಣೆಗೆ ಬೆಂಗಳೂರು ನಗರದ ಶಿವನ ದೇವಾಲಯಗಳು ಸಜ್ಜಾಗಿವೆ. ಶಿವನ ದೇವಸ್ಥಾನಗಳಲ್ಲಿ ಮುಂಜಾನೆ 5 ಗಂಟೆಯಿಂದಲೇ ಅಭಿಷೇಕ , ವಿವಿಧ ಪೂಜೆಗಳು ಆರಂಭವಾಗಲಿವೆ.. ಭಕ್ತರು ದಿನಪೂರ್ತಿ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಲಿದ್ದಾರೆ. ಮನೆಗಳಲ್ಲೂ ವಿಶೇಷ ಪೂಜೆ ನಡೆಯಲಿದೆ.
ದೇವಸ್ಥಾನದ ಆವರಣದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೆಯೇ ವಿವಿಧ ಸಂಘ ಸಂಸ್ಥೆಗಳು, ಯುವಕ ಮಂಡಳಿಗಳು ಜಾಗರಣೆ ರಾತ್ರಿಯಲ್ಲಿ ಸ್ಪರ್ಧೆ, ನಗೆಹಬ್ಬವನ್ನು ಹಮ್ಮಿಕೊಂಡಿವೆ. ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ನಿರಂತರ ಅಭಿಷೇಕ, ಚಾಮರಾಜಪೇಟೆಯ ಮಲೈ ಮಹದೇಶ್ವರ,
ಬನಶಂಕರಿ ಎರಡನೇ ಹಂತದ ಧರ್ಮಗಿರಿ ಮಂಜುನಾಥ, ಹಳೆ ವಿಮಾನ ನಿಲ್ದಾಣ ರಸ್ತೆಯ ಕೆಂಪ್‌ಫೋರ್ಟ್ ಬಳಿಯ 65 ಅಡಿ ಶಿವನ ದೇವಸ್ಥಾನ, ಶೇಷಾದ್ರಿಪುರದ ಕಾಶಿ ವಿಶ್ವೇಶ್ವರ ದೇವಸ್ಥಾನ, ಹಲಸೂರು ಸೋಮೇಶ್ವರ ದೇವಸ್ಥಾನ, ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನ ಸೇರಿದಂತೆ ನಗರದಾದ್ಯಂತ ಇರುವ ಶಿವನ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಶಿವನ ಆರಾಧನೆ ನಡೆಯಲಿದೆ.
ನಾಗರ ಬಾವಿಯ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆಯಿದೆ. ಜೆ.ಪಿ.ನಗರದ ಆರ್‌ಬಿಐ ಬಡವಾಣೆಯಲ್ಲಿ ಶಿವರಾತ್ರಿಯ ವಿಶೇಷವಾಗಿ ಭಜನೆ, ಹಿಂದುಸ್ತಾನಿ ಜನಪದ ಹಾಗೂ ಭಕ್ತಿಗೀತೆ ಗಾಯನ ಆಯೋಜಿಸಲಾಗಿದೆ. ಜೆ.ಪಿ.ನಗರದ 6ನೇ ಹಂತದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಜತೆಗೆ ಸುಗಮ ಸಂಗೀತ ನಡೆಯಲಿದೆ.
ವಿಜಯನಗರ ಆರ್ಯವೈಶ್ಯ ಮಂಡಳಿಯ ಶ್ರೀವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮುಖೀ ಪಶುಪತಿನಾಥ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಾಯಂಡಹಳ್ಳಿಯ ಮೆಟ್ರೋ ಬಡಾವಣೆಯ ಶ್ರೀಬಲಮುರಿ ವಿನಾಯಕ ದೇವಸ್ಥಾನದಲ್ಲಿ ನಾಗಾ ಸಾಧುಗಳಿಂದ ಶ್ರೀ ಮಂಜುನಾಥೇಶ್ವರನಿಗೆ ರುದ್ರಾಭಿಷೇಕ ಹಾಗೂ ಲೋಕ ಕಲ್ಯಾಣಾರ್ಥ ರುದ್ರ ಹೋಮ ನಡೆಸಲಿದ್ದಾರೆ.
ಪಾರಮಾರ್ಥ ಅದ್ವೆ„ತ ಆಧ್ಯಾತ್ಮಿಕ ಸಿದ್ಧಿ ಮಹಾವಿದ್ಯಾಲಯದಿಂದ ದೊಡ್ಡಕಲ್ಲಸಂದ್ರದ ಮುನಿರೆಡ್ಡಿ ಪಾಳ್ಯದಲ್ಲಿ 101 ಲಿಂಗಕ್ಕೆ ಬಿಲ್ವಾರ್ಚನೆ, ಸಂಜೆ ಭಕ್ತ ಮಾರ್ಕಂಡೇಯ ನಾಟಕ ಪ್ರದರ್ಶನ ಆಯೋಜಿಸಿದ್ದಾರೆ. ಬಿಜೆಪಿ ಗಾಂಧಿನಗರ ಮಂಡಲದ ವತಿಯಿಂದ ಶಿವರಾತ್ರಿ ಅಂಗವಾಗಿ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ ನಾಲ್ಕುಯಾವ ಪೂಜೆ ಹಾಗೂ ಲಡ್ಡು ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಸಂಭ್ರಮ: ಮಲ್ಲೇಶ್ವರ ಸಾಂಸ್ಕೃತಿಕ ಸಂಘ ಹಾಗೂ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಫೌಂಡೇಷನ್ ವತಿಯಿಂದ ಮಲ್ಲೇಶ್ವರ ಸರ್ಕಾರಿ ಶಾಲಾ ಮೈದಾನದಲ್ಲಿ ಮಹಾಶಿರಾತ್ರಿ ಉತ್ಸವ ಹಮ್ಮಿಕೊಂಡಿದ್ದು, ಭರತನಾಟ್ಯ, ಕರಾಟೆ ಪ್ರದರ್ಶನ, ಹಾಸ್ಯಲಾಸ್ಯ, ಜಾದು ಪ್ರದರ್ಶನ ಹೀಗೆ ನಾನಾ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಸದಾನಂದಗೌಡ ಅವರು ಉದ್ಘಾಟಿಸಲಿದ್ದಾರೆ.
ಶೇಷಾದ್ರಿಪುರದ ಸಿರೂರು ಪಾರ್ಕ್‌ನಲ್ಲಿ ಜಾಣಜಾಣೆಯರ ನಗೆಜಾಗರಣೆ ನಡೆಯಲಿದ್ದು, ಡಾ. ಗುರುರಾಜ್ ಕರ್ಜಗಿ, ಸಾಹಿತಿ ಪ್ರೊ. ಕೃಷ್ಣೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ್ ಅವರಿಂದ ಯಾರು ಹಿತವರು ನಿಗಮಗೆ ಕಾರ್ಯಕ್ರಮ ನಡೆಯಲಿದೆ. ನಯನ ರಂಗಮಂದಿರದಲ್ಲಿ ಅಭಿವ್ಯಕ್ತಿ ಆಧ್ಯಾತ್ಮಿಕ ರಾಷ್ಟ್ರೀಯ ನೃತ್ಯ ಉತ್ಸವವನ್ನು ಏರ್ಪಡಿಸಲಾಗಿದೆ. 6 ಕಲಾವಿದರು ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ.
ವಿಜಯನಗರದ ಆರ್‌ಪಿಸಿ ಬಡಾವಣೆಯಲ್ಲಿ ವರನಟ ಡಾ. ರಾಜ್‌ಕುಮಾರ್ ಗೀತೆಗಳ ಮೆಗಾ ಮ್ಯೂಜಿಕಲ್ ಸ್ಟಾರ್‌ನೆçಟ್ ಹಮ್ಮಿಕೊಳ್ಳಲಾಗಿದೆ. ನಟರಾದ ಡಾ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಸತಿ ಸಚಿವ ಎಂ. ಕೃಷ್ಣಪ್ಪ, ಶಾಸಕ ಪ್ರಿಯಾಕೃಷ್ಣ ಭಾಗವಹಿಸಲಿದ್ದಾರೆ.
ಗಂಗಾಜಲ ವಿತರಣೆ: ಶಿವರಾತ್ರಿ ವಿಶೇಷವಾಗಿ ನಗರದ ಶಿವ ದೇವಾಲಯಗಳಲ್ಲಿ ಗಂಗಾಜಲ ವಿತರಣೆ ಮಾಡಲಾಗಿದೆ. ಮಾಜಿ ಸಚಿವ ಕೃಷ್ಣಯ್ಯಶೆಟ್ಟಿಯವರು ಹರಿದ್ವಾರದಿಂದ ಮೂರು ಟ್ಯಾಂಕರ್‌ಗಳಲ್ಲಿ 40,000 ಲೀಟರ್ ಗಂಗಾಜಲ ತರಿಸಿದ್ದರು. ರಾಮಲಿಂಗೇಶ್ವರ ದೇವಾಲಯದಲ್ಲಿ ಗಂಗಾಜಲಕ್ಕೆ ಆನಂದ ಗುರೂಜಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದಲೇ ನಗರದ ಬೇರೆಲ್ಲ ದೇವಾಲಯಕ್ಕೆ ಕ್ಯಾನ್ ಮತ್ತು ಬಾಟಲಿ ಮೂಲಕ ಗಂಗಾಜಲ ವಿತರಿಸಲಾಯಿತು. ಗಂಗಾಜಲ ಪಡೆಯಲು ದೇವಸ್ಥಾನದ ಮುಂದೆ ಭಕ್ತರು ನೂಕುನುಗ್ಗಲು ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.