ಆರು ಬೋಗಿ ಮೆಟ್ರೋಗೆ ಮುಗಿಬಿದ್ದ ಪ್ರಯಾಣಿಕರು
Team Udayavani, Jun 24, 2018, 11:05 AM IST
ಬೆಂಗಳೂರು: “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ನಿತ್ಯ 40ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ಆದರೆ, ಶನಿವಾರ ಬಹುತೇಕ ಪ್ರಯಾಣಿಕರ ದೃಷ್ಟಿ ನೆಟ್ಟಿದ್ದು ಮಾತ್ರ ಅದೊಂದೇ ರೈಲಿನ ಮೇಲೆ! ಆ ರೈಲು ಪ್ಲಾಟ್‌ಫಾರಮ್‌ಗೆ ಬಂದು ನಿಲ್ಲುತ್ತಿದ್ದಂತೆ ಪ್ರಯಾಣಿಕರು ರೈಲು ಏರಲು ಮುಗಿಬೀಳುತ್ತಿದ್ದರು!
ಶುಕ್ರವಾರವಷ್ಟೇ ಕಾರ್ಯಾಚರಣೆ ಆರಂಭಿಸಿದ ಆರು ಬೋಗಿಗಳ ಮೆಟ್ರೋ ರೈಲು ಮೊದಲ ದಿನ ಪ್ರಯಾಣಿಕರ ಗಮನಸೆಳೆಯಿತು. ಅದೇ ರೈಲಿಗಾಗಿ ಪ್ರಯಾಣಿಕರು ಕಾದುಕುಳಿತಿದ್ದರು. ಅತಿ ಉದ್ದದ ಮೆಟ್ರೋದಲ್ಲಿ ಮೊದಲ ದಿನವೇ ಸಂಚರಿಸಿ ಖುಷಿಪಟ್ಟರು.
ಆರು ಬೋಗಿಗಳ ಮೆಟ್ರೋ ರೈಲಿನ ಪ್ರಯಾಣ ನಗರದ ಜನರ ಬಹುದಿನಗಳ ನಿರೀಕ್ಷೆಯಾಗಿತ್ತು. ಹೀಗಾಗಿ ರೈಲಿನ ಸಾಮರ್ಥ್ಯ ದುಪ್ಪಟ್ಟಾಗಿದ್ದರೂ “ಪೀಕ್ ಅವರ್’ನಲ್ಲಿ ತುಂಬಿತುಳುಕುತ್ತಿತ್ತು. ಸುಮಾರು ಆರು ತಿಂಗಳಿಂದ ಈ ರೈಲಿನ ಬಗ್ಗೆ ಬರೀ ಸುದ್ದಿಗಳನ್ನು ಕೇಳುತ್ತಿದ್ದರು. ಈಗ ಅದು ಆಚರಣೆಗೆ ಬಂದಿದ್ದು ಕುತೂಹಲವನ್ನು ಇಮ್ಮಡಿಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಮೊದಲ ದಿನ ಆರು ಬೋಗಿಯ ಮೆಟ್ರೋ ರೈಲು ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ನಡುವೆ ಆರು ಟ್ರಿಪ್‌ಗ್ಳಲ್ಲಿ ಕಾರ್ಯಾಚರಣೆ ಮಾಡಿದೆ. ಸುಮಾರು 15,600 ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಿದ್ದು, ಅಂದಾಜು 7 ಲಕ್ಷ ರೂ. ಆದಾಯ ಸಂಗ್ರಹವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಮೂರು ಬೋಗಿಯ ಒಂದು ಮೆಟ್ರೋ ರೈಲು ನಿತ್ಯ 7 ಟ್ರಿಪ್‌ಗ್ಳಲ್ಲಿ ಸಂಚರಿಸುತ್ತದೆ. ಇದರಲ್ಲಿ ಸುಮಾರು 7 ಸಾವಿರ ಜನ ಪ್ರಯಾಣಿಸುತ್ತಿದ್ದು, ಅಂದಾಜು 3.5 ಲಕ್ಷ ರೂ. ಆದಾಯ ಸಂಗ್ರಹ ಆಗುತ್ತದೆ. ಆದರೆ, ರೈಲಿನ ಸಾಮರ್ಥ್ಯ ದುಪ್ಪಟ್ಟಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಳ ಆಗಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್ ಹೇಳಿದರು.
ಕುತೂಹಲ ತಣಿಸಿತು: “ಆರು ಬೋಗಿ ರೈಲಿನ ಬಗ್ಗೆ ಹಲವು ತಿಂಗಳಿಂದ ಟಿವಿ, ರೇಡಿಯೊ, ಪತ್ರಿಕೆಗಳಲ್ಲಿ ಸುದ್ದಿ ಓದುವುದು, ನೋಡುವುದೇ ಆಗಿತ್ತು. ಈಗ ಆ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಇದು ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಕಚೇರಿಗೆ ರಜೆ ಇದ್ದರೂ, ಮೊದಲ ದಿನ ಈ ರೈಲಿನಲ್ಲಿ ಪ್ರಯಾಣಿಸಬೇಕು ಎಂಬ ಉದ್ದೇಶದಿಂದಲೇ ಬಂದಿದ್ದೇನೆ. ಮೂರು ಬೋಗಿಯ ಮೆಟ್ರೋಗಿಂತ ಇದೇನೂ ಭಿನ್ನವಾಗಿಲ್ಲ. ಆದರೂ ಖುಷಿ ಆಗುತ್ತಿದೆ,’ ಎಂದವರು ವಿಜಯನಗರದ ಹರ್ಷ.
“ಎರಡು ಬೋಗಿ ಮಹಿಳೆಯರಿಗಿರಲಿ’: “ಪ್ರಯಾಣಿಕರ ದಟ್ಟಣೆ ತಗ್ಗಿಸಲು ಆರು ಬೋಗಿಗಳ ಮೆಟ್ರೋ ರೈಲು ನಿಜಕ್ಕೂ ಪರಿಹಾರ ಆಗಲಿದೆ. ಮೊದಲ ಬೋಗಿ ಮಹಿಳೆಯರಿಗೆ ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ, ಇದನ್ನು ಎರಡು ಬೋಗಿಗಳಿಗೆ ವಿಸ್ತರಿಸುವ ಅವಶ್ಯಕತೆ ಇದೆ.
ಮೊದಲ ದಿನ ವಾರಾಂತ್ಯವಾದರೂ ಎಲ್ಲ ಬೋಗಿಗಳು ತುಂಬಿತುಳುಕುತ್ತಿವೆ. ಮಹಿಳೆಯರು ನಿರಾತಂಕವಾಗಿ ಹಾಗೂ ಆರಾಮವಾಗಿ ಪ್ರಯಾಣಿಸಲು ಎರಡು ಬೋಗಿ ಮೀಸಲಿಡುವುದು ಅತ್ಯಗತ್ಯ,’ ಎಂದು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಮೆಟ್ರೋ ಏರಿದ ರೂಪಿಣಿ ಹೇಳಿದರು.
ದೂರದೃಷ್ಟಿ ಕೊರತೆ: “ಈಗಷ್ಟೇ ಕೇವಲ ಒಂದು ರೈಲು ಆರು ಬೋಗಿಗಳಿಗೆ ವಿಸ್ತರಣೆ ಆಗಿದೆ. ಆದರೆ, ಇದು ಯಾವುದಕ್ಕೂ ಸಾಕಾಗುವುದಿಲ್ಲ. ಇಷ್ಟೊತ್ತಿಗಾಗಲೇ ಎಲ್ಲ ರೈಲುಗಳು ಆರು ಬೋಗಿಗಳಾಗಿ ಪರಿವರ್ತನೆ ಆಗಬೇಕಿತ್ತು. ಮೊದಲ ಹಂತದ ಅನುಷ್ಠಾನ ಆಗುವಾಗಲೇ ಎರಡನೇ ಹಂತದ ಯೋಜನೆಯನ್ನು ಬಿಎಂಆರ್‌ಸಿಎಲ್ ಸಿದ್ಧಗೊಳಿಸಿದೆ.
ಈಗಿರುವ ಎಂಜಿನ್‌ಗಳೂ ಆರು ಬೋಗಿಗಳನ್ನು ತೆಗೆದುಕೊಂಡು ಹೋಗುವಷ್ಟು ಸಾಮರ್ಥ್ಯ ಹೊಂದಿವೆ. ಹಾಗಿದ್ದರೆ, ಮೊದಲೇ ಹೆಚ್ಚುವರಿ 150 ಬೋಗಿಗಳ ಪೂರೈಕೆಗೆ ನಿಗಮ ಯಾಕೆ ಯೋಚಿಸಲಿಲ್ಲ? ಇದರಿಂದ ನಿರ್ಮಾಣ ವೆಚ್ಚವನ್ನೂ ತಗ್ಗಿಸಬಹುದಿತ್ತಲ್ಲವೇ,’ ಎಂದು ಎಂಜಿನಿಯರ್ ಸುನೀಲ್ ಪ್ರಶ್ನಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.