ಕುಂತ್ರು ನಿಂತ್ರು ಸೆಲ್ಫಿ ಧ್ಯಾನ ಜೀವಕ್ಕಿಲ್ಲ ಸಮಾಧಾನ!
Team Udayavani, Oct 9, 2017, 11:56 AM IST
ನೀ ಸೆಲ್ಫಿಯೊಳಗೋ, ಸೆಲ್ಫಿ ನಿನ್ನೊಳಗೋ ಎಂಬಂತಾಗಿದೆ ಯುವಜನರ ಬದುಕು. ನಿಂತಲ್ಲಿ, ಕೂತಲ್ಲಿ, ಮಲಗುವಾಗ, ಎದ್ದೇಳುವಾಗ, ಓಡುವಾಗ, ಆಡುವಾಗ, ಡ್ರೈವಿಂಗ್ ಮಾಡುವಾಗ ಸೆಲ್ಫಿ ತೆಗೆಯುವುದು ಈಗ ಫ್ಯಾಷನ್. ಹಿಂದೆ ಸಣ್ಣ ಗುಂಡಿಯಿರಲಿ, ದೊಡ್ಡ ಪ್ರಪಾತವಿರಲಿ, ರೈಲು ಹಳಿ ಮೇಲೆ ರೈಲು ಬರುತ್ತಿರಲಿ ಸೆಲ್ಫಿ ಕ್ರೇಜ್ ಮುಂದೆ ಅವೆಲ್ಲವೂ ನಗಣ್ಯ.
ಹೀಗಾಗಿ, ಸ್ಮಾರ್ಟ್‌ಫೋನ್ ಹಿಡಿದು ಮನೆಯಿಂದ ಹೊರಟ ಮಕ್ಕಳು ಸೇಫಾಗಿ ಮರಳುತ್ತಾರೆಂಬ ನಂಬಿಕೆ ಮನೆಯವರಿಗೆ ಇಲ್ಲದಾಗಿದೆ. ಈಗ ಸ್ಮಾರ್ಟ್‌ಫೋನ್ ಜತೆಗೆ ಕೆಲವೊಂದು ಅಪಾಯಕಾರಿ ಗೇಮ್ ಯುವ ಜನತೆಯನ್ನು ಸಾವಿನ ದವಡೆಗೆ ತಳ್ಳುತ್ತಿದೆ. ಬ್ಲೂವೇಲ್ ಸೇರಿದಂತೆ ಅನೇಕ ಗೇಮ್‌ಗಳ ಬಗ್ಗೆ ವ್ಯಾಪಾಕವಾಗಿ ಜಾಗೃತಿ ಅಭಿಯಾನ ನಡೆಯುತ್ತಿದೆ. ಸರ್ಕಾರವೂ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಆದ್ರೆ ಸೆಲ್ಫಿಗೆ ಲಂಗುಲಗಾಮಿಲ್ಲ.
ಪಾಲಕರಿಗೆ ತಜ್ಞರು ಹೇಳ್ತಾರೆ…
-ಮಕ್ಕಳಿಗೆ ಮೊಬೈಲ್ ನೀಡುವ ಮೊದಲು ಯೋಚಿಸಿ
-ಸೆಲ್ಫಿ ತೆಗೆಯುವ ಸ್ಥಳ, ಅದರಿಂದಾಗಬಹುದಾದ ಅನಾಹುತದ ಬಗ್ಗೆ ಮಕ್ಕಳನ್ನು ಎಚ್ಚರಿಸಿ
-ಪ್ರವಾಸಕ್ಕೆ ಹೋಗುವಾಗ ಮಕ್ಕಳ ಬಳಿ ಮೊಬೈಲ್ ಇರುವ ಬಗ್ಗೆ ಸಂಯೋಜಕರಿಗೆ ಮಾಹಿತಿ ನೀಡಿ
-ಸೆಲ್ಫಿ ಗೀಳು ಹೆಚ್ಚಾಗದಂತೆ ಮುಂಜಾಗ್ರತೆ ವಹಿಸಿ
ಸಾವಿನ ಸೆಲ್ಫಿ
-2017ರ ಅಕ್ಟೋಬರ್ 3 ವಂಡರ್ ಲಾ ಗೇಟ್ ಸಮೀಪ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಗರದ ಮೂವರು ವಿದ್ಯಾರ್ಥಿಗಳಿಗೆ ರೈಲು ಬಡಿದು ಸಾವು.
-2017ರ ಸೆಪ್ಟೆಂಬರ್ 25 ಕನಕಪುರ ತಾಲೂಕಿನ ರಾಮಗೊಂಡ್ಲು ಕಲ್ಯಾಣಿಯಲ್ಲಿ ಯುವಕ ಮುಳುಗುವ ದೃಶ್ಯ ಆತನ ಸ್ನೇಹಿತರ ಸೆಲ್ಫಿಯಲ್ಲಿ ಸೆರೆಯಾಗಿತ್ತು.
-2017ರ ಜುಲೈ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಜತೆ ಸೆಲ್ಫಿ ತೆಗೆಯಲು ಹೋಗಿ ಗವಿಪುರದ ಅಭಿಲಾಷ್ ಎಂಬ ಯುವಕ ಸಾವನ್ನಪ್ಪಿದ್ದ.
-2016ರ ಜುಲೈ ಚಿಕ್ಕಮಗಳೂರು ಅಲೆಕನ್ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ ಆಯತಪ್ಪಿ ಇಬ್ಬರ ಸಾವು.
-2016ರ ಜುಲೈ ಮಹಾರಾಷ್ಟ್ರದ ಅಂಬೋಲಿ ಜಲಪಾತದ ಬಳಿ ಸೆಲ್ಫಿ ತೆಗೆಯುವಾಗ ಬೆಳಗಾವಿ ಯುವಕ ಸಾವು.
-2016ರ ಫೆಬ್ರವರಿ ಮಂಡ್ಯಜಿಲ್ಲೆಯ ಕೆರೆಗೋಡು ಹತ್ತಿರದ ವಿಶ್ವೇಶರಯ್ಯ ನಾಲೆಯಲ್ಲಿ ಸೆಲ್ಪಿ ಕ್ಲಿಕ್ಕಿಸಲು ಹೋಗಿ ಮೂವರು ವೈದ್ಯ ವಿದ್ಯಾರ್ಥಿಗಳ ಸಾವು.
ಸೆಲ್ಫಿ ಎಲ್ಲಿಲ್ಲ ಹೇಳಿ
ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರೂ ಸೆಲ್ಫಿ ತೆಗೆದುಕೊಂಡಿರುತ್ತಾರೆ. ಮನೆಯ ಸಮಾರಂಭ, ಮದುವೆ, ಶಾಲಾ ಕಾಲೇಜು ಪ್ರವಾಸ, ಫ್ರೆಂಡ್ಸ್ ಜತೆ ಪಿಕ್‌ನಿಕ್ ಹೋದಾಗ ಕ್ಲಿಕ್ಕಿಸಿದ ಸೆಲ್ಫಿಯನ್ನು ಕ್ಷಣ ಮಾತ್ರದಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸಿದರೆ ಸೆಲ್ಫಿ ಪೋಸ್ಟರ್ ಪ್ರಭಾವಳಿ ಅರಿವಿಗೆ ಬರುತ್ತದೆ.
ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗುತ್ತಿದ್ದಂತೆ ಸೆಲ್ಫಿ ಗೀಳು ಹೆಚ್ಚಾಗಿದೆ. ನೋಡಿದ ವಸ್ತುಗಳ ಮುಂದೆ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಲೈಕ್, ಕಮೆಂಟ್ ಪಡೆಯುವುದು, ಗೆಳೆಯರಿಗೆ, ಮನೆಯವರಿಗೆ, ಸಂಬಂಧಿಕರಿಗೆ ತೋರಿಸಿ, ಆತ್ಮ ಸಂತೃಪ್ತಿ ಪಡೆಯುವ ಮನೋವ್ಯಾದಿ ಸೃಷ್ಟಿಯಾಗಿದೆ.
ಅಪಾಯಕಾರಿ ಸೆಲ್ಫಿಗೆ ಕಾರಣ
-ಪ್ರತಿಭೆ ಮೂಲಕ ಏನೂ ಸಾಧಿಸಲಾಗದಿದ್ದಾಗ ಅಪಾಯಕಾರಿ ಸೆಲ್ಫಿ ಕ್ರೇಜ್ ಮೂಲಕ
-ಇತರರ ಗಮನ ಸೆಳೆಯಬೇಕೆನ್ನುವ ಯತ್ನ
-ಕಾರು, ಬೈಕ್‌ಗಳನ್ನು ವೇಗವಾಗಿ ಚಾಲನೆ ಮಾಡುವುದನ್ನು ಸಾಕ್ಷಿ ಸಮೇತ ತೋರಿಸಿ ಮೆಚ್ಚುಗೆ ಪಡೆದುಕೊಳ್ಳಬೇಕೆನ್ನುವ ಹುಂಬತನ
-ತಾವೇ ಸೆಲ್ಫಿ ಎಕ್ಸ್‌ಪರ್ಟ್, ತಮಗಿಂತ ಯಾರಿಲ್ಲ ಎಂದು ಸಾಬೀತು ಮಾಡುವ ಖಯಾಲಿ
ಸೆಲ್ಫಿ ಎಕ್ಸ್‌ಪರ್ಟ್ ಫೋನ್
ಸೆಲ್ಫಿ ಹುಚ್ಚನ್ನೇ ಬಂಡವಾಳವಾಗಿಸಿಕೊಂಡ ಕೆಲ ಮೊಬೈಲ್ ಕಂಪನಿಗಳು ಹೆಚ್ಚು ಎಂಪಿ ಸಾಮರ್ಥ್ಯದ ಫ್ರಂಟ್ ಕ್ಯಾಮೆರಾ ಹೊಂದಿದ ಮೊಬೈಲ್ ಪರಿಚಯಿಸುತ್ತಿವೆ. ವುಗಳ ಫ್ರಂಟ್ ಕ್ಯಾಮರಾ ಕ್ಲಾರಿಟಿ ತ್ತಮವಾಗಿರುವ ಜತೆಗೆ ಸೆಲ್ಫಿ ಸ್ಟಿಕ್ ಕೂಡ ನೀಡುತ್ತಾರೆ. ಸೆಲ್ಫಿ ಫೋನ್‌ಗಳ ಪ್ರಚಾರಕ್ಕಾಗಿ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುತ್ತಾರೆ. ಯುವ ಜನತೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಿಯೆಟಿವ್ ಜಾಹೀರಾತುಗಳನ್ನು ಪ್ರಕಟಿಸುತ್ತಾರೆ. ಹಲವು ರೀತಿಯ ಆಫರ್ ಕೂಡ ನೀಡುತ್ತಾರೆ.
ನಗರದ ಸೆಲ್ಫಿ ಹಾಟ್ ಸ್ಪಾಟ್‌ಗಳು
ಮಾಲ್‌ಗಳು, ಮೆಟ್ರೊ ನಿಲ್ದಾಣ, ಕಬ್ಬನ್‌ಪಾರ್ಕ್, ಲಾಲ್‌ಬಾಗ್, ಜೆಪಿ ಪಾರ್ಕ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ವಿಧಾನಸೌಧ, ಅರಮನೆ, ಸರ್ ಎಂ.ವಿ ಮ್ಯೂಸಿಯಂ, ತಾರಾಲಯ, ಟಿಪ್ಪು ಅರಮನೆ, ವಂಡರ್ ಲಾ, ಯುಬಿ ಸಿಟಿ, ದೊಡ್ಡಗಣೇಶ ದೇವಸ್ಥಾನ, ಶಿವ ದೇವಸ್ಥಾನ, ಇಸ್ಕಾನ್, ಚರ್ಚ್, ಫ್ಲೈಒವರ್, ಸ್ಯಾಂಕಿ ಕೆರೆ, ಎಂ.ಜಿ.ರಸ್ತೆ ಜತೆಗೆ, ಇತ್ತೀಚೆಗೆ ಮಳೆಗೆ ಜಲಾವೃತವಾಗುವ ಪ್ರದೇಶಗಳೂ ಸೆಲ್ಫಿಗೆ ಹಾಟ್‌ಸ್ಪಾಟ್‌ಗಳಾಗುತ್ತಿರುವುದು ದುರಂತ.
ನೋ ಸೆಲ್ಫಿ ವಲಯ
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಅಪಾಯಕಾರಿ ಸ್ಥಳಗಳಲ್ಲಿ ನೋ ಸೆಲ್ಫಿ ನಾಮಫಲಕ ಅಳವಡಿಸಿ, ಸೆಲ್ಫಿ ನಿಷೇಧಿಸಲು ಮುಂದಾಗಿದೆ. ಬೆಂಗಳೂರಿನ ಸುತ್ತಲಿನ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟ, ದೇವರಾಯನ ದುರ್ಗ ಸೇರಿದಂತೆ ರಾಜ್ಯದ 400 ಪ್ರವಾಸಿ ತಾಣಗಳ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ನಿಷೇಧಿಸಲಿದೆ.
ಕ್ಲಿಕ್ಕಾಯ್ತು ಸಮೂಹ ಸೆಲ್ಫಿ
ಇತ್ತೀಚೆಗೆ ಸಮೂಹ ಸೆಲ್ಫಿ ಫೇಮಸ್ಸಾಗಿದೆ. ಮದುವೆ, ಕಾಲೇಜು ಕಾರ್ಯಕ್ರಮ, ದೇವರ ಉತ್ಸವ, ಹೀಗೆ ಎಲ್ಲೆಡೆ ಸಮೂಹ ಸೆಲ್ಫಿಗಳು ಕ್ಲಿಕ್ಕಾಗುತ್ತಿವೆ! ಕಾಲೇಜಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಸೆಲ್ಫಿ ಇದ್ದೇ ಇರುತ್ತದೆ. ಮದುವೆ ಮನೆಯಲ್ಲಿ ವಧುವರರೊಂದಿಗೆ ಸೆಲ್ಫಿ ಕಾಮನ್ನಾಗಿದೆ. ಸೆಲೆಬ್ರಿಟಿಗಳು ಎದುರಾದಾಗ ಅವರೊಂದಿಗೆ ಮಾತನಾಡುವುದಕ್ಕಿಂತ ಸೆಲ್ಫಿ ಕ್ಲಿಕ್ಕಿಸುವುದೇ ಸಂಭ್ರಮವಾಗುತ್ತಿದೆ.
ಸೆಲ್ಫಿ ತೆಗೆಯುವಾಗ ಎಚ್ಚರ ವಹಿಸಿ
-ಬೆಟ್ಟ, ಗುಡ್ಡದ ತುದಿ, ಅಸುರಕ್ಷಿತ ಸನ್ನಿವೇಶದಲ್ಲಿ ಸೆಲ್ಫಿ ಬೇಡ
-ವಾಹನ ಚಾಲನೆ ಮಾಡುವಾಗ, ರೈಲು ಹಳಿ ಮೇಲೆ, ಸೇತುವೆ ತುದಿ, ಮರದ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸದಿರಿ
-ಜಲಪಾತ, ನದಿ, ಆಳವಾದ ಕೆರೆ, ಬಾವಿ, ಸಮುದ್ರದ ಅಪಾಯಕಾರಿ ವಲಯದಲ್ಲಿ ಸೆಲ್ಫಿ ಅಪಾಯಕಾರಿ
-ಅಪಾಯಕಾರಿ ಪ್ರಾಣಿ, ಪಕ್ಷಿಗಳನರು° ಬೆನ್ನಿಗಿರಿಸಿಕೊಂಡು ಸೆಲ್ಫಿ ತೆಗೆಯುವ ಸಾಹಸ ಬೇಡ
-ಬಹುಮಹಡಿ ಕಟ್ಟದ ಮೇಲಿಂದ, ನಗರದ ಪಕ್ಷಿನೋಟ ನೋಡುವ ತವಕ, ಪ್ರಾಣಾಂತಕ
ಸೆಲ್ಫಿ ಬೇಕು. ಆದರೆ, ಪ್ರಾಣಕ್ಕೆ ಅಪಾಯ ಆಗದಂತೆ ಎಚ್ಚರವೂ ವಹಿಸಬೇಕು. ಡೇಂಜರ್ ಸ್ಪಾಟ್‌ಗಳಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇಧಿಸಬೇಕು.
-ವೀಣಾ, ವಿದ್ಯಾರ್ಥಿನಿ
ಅನೇಕ ಸಂದರ್ಭದಲ್ಲಿ ಸೆಲ್ಫಿ ಅಗತ್ಯವಿರುತ್ತದೆ. ಆದರೆ ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯುತ್ತಾರೆ ಇದರಿಂದ ಯಾವ ಉಪಯೋಗವೂ ಇಲ್ಲ.
-ಸತೀಶ್ ನಾಯ್ಕ ಸಮೇತಡ್ಕ, ಖಾಸಗಿ ಸಂಸ್ಥೆ ಉದ್ಯೋಗಿ
ಸೆಲ್ಫಿಯಿಂದ ಏನೂ ಪ್ರಯೋಜನವಿಲ್ಲ. ಒಳ್ಳೆಯ ಫೋಟೋ ತೆಗೆದು ಇನ್ನೊಬ್ಬರಿಂದ ಪ್ರಶಂಸೆ ಪಡೆದುಕೊಳ್ಳಬೇಕೆಂಬ ಆಸೆಯೇ ಹೊರತು ಇದು ಪ್ರತಿಭೆಯಲ್ಲ. ಇಲ್ಲಿ ಜಾಣ್ಮೆಯೂ ಇರುವುದಿಲ್ಲ. ಸೆಲ್ಫಿ ಬದಲಿಗೆ ಪ್ರತಿಭೆಯನ್ನು ಬೇರೆ ರೂಪದಲ್ಲಿ ಅನಾವರಣ ಮಾಡಿದರೆ, ವೈಯಕ್ತಿಕ ಬೆಳವಣಿಯೊಂದಿಗೆ ಕುಟುಂಬದವರಿಗೂ ಖುಷಿಯಾಗುತ್ತದೆ.
-ಡಾ.ಸಿ.ಆರ್.ಚಂದ್ರಶೇಖರ್, ಮನೋವೈದ್ಯ
* ರಾಜು ಖಾರ್ವಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.