ಅಪಾರ್ಟ್‌ಮೆಂಟ್‌ಗಳ ಸುತ್ತ ಪೀಕ್ ಅವರ್ ಕಿರಿಕಿರಿ…
ದಾರಿ ಯಾವುದಯ್ಯ ಸಂಚಾರಕೆ?
Team Udayavani, Mar 31, 2019, 12:23 PM IST
ಉದ್ಯೋಗ ಅರಸಿ ಬಂದ ವಲಸಿಗರ ಸಂಖ್ಯೆ ಹೆಚ್ಚಾದಂತೆ ಬೆಂಗಳೂರಿನ ವ್ಯಾಪ್ತಿಯೂ ವಿಸ್ತಾರವಾಯ್ತು. ಹೊರಗಿಂದ ಬಂದವರಿಗೆ ವಾಸ ಮಾಡಲು ಅಪಾರ್ಟ್‌ಮೆಂಟ್ ಸಂಸ್ಕೃತಿ ಹುಟ್ಟಿಕೊಂಡಿತು. ಕಡಿಮೆ ಜಾಗದಲ್ಲಿ ಅತಿ ಹೆಚ್ಚು ಜನರಿಗೆ ವಸತಿ ಕಲ್ಪಿಸುವ ಈ ಬಹುಮಹಡಿ ಕಟ್ಟಡಗಳು ಒಂದು ಕಾಲದಲ್ಲಿ ಪರಿಹಾರವಾಗಿ ಕಂಡವು. ಇವು ತಮ್ಮ ಜತೆ ಮಾಲ್, ಮನರಂಜನೆ ತಾಣಗಳನ್ನೂ ಆಕರ್ಷಿಸಿದವು. ಪರಿಣಾಮ ರಸ್ತೆಗಳ ಮೇಲೆ ಒತ್ತಡ ಹೆಚ್ಚಾಯಿತು. ಈಗ ಅದೇ ಅಪಾರ್ಟ್‌ಮೆಂಟ್ ಸಂಸ್ಕೃತಿ ನಗರದ “ಸಂಚಾರ ನಾಡಿ’ಯನ್ನು ಹಿಡಿದುನಿಲ್ಲಿಸುತ್ತಿದೆ!
ಬೆಂಗಳೂರು: ನಗರದಿಂದ ದೂರದ ಯಾವುದಾದರೊಂದು ಎತ್ತರದ ಪ್ರದೇಶದಲ್ಲಿ ನಿಂತು ಕಣ್ಣುಹಾಯಿಸಿದರೆ, ಪೆಟ್ಟಿಗೆಗಳನ್ನು ಹೊಂದಿಸಿಟ್ಟಂತೆ ಕಾಣುವ ಗಗನಚುಂಬಿ ಕಟ್ಟಡಗಳು ನೋಡಲು ಆಕರ್ಷಕವಾಗಿರುತ್ತವೆ. ಆದರೆ ಅವುಗಳ ಬುಡದಲ್ಲಿ ಕಣ್ಣುಹಾಯಿಸಿದರೆ, ಸಕ್ಕರೆಗೆ ಮುತ್ತಿಕ್ಕುವ ಇರುವೆ ಸಾಲುಗಳಂತೆ ವಾಹನಗಳು “ಕ್ಯು’ ನಿಂತಿರುತ್ತವೆ.
ಹೌದು, “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಮಾತು ನಗರದ ಅಪಾರ್ಟ್‌ಮೆಂಟ್‌ಗಳಿಗೆ ಅಕ್ಷರಶಃ ಹೋಲಿಕೆ ಆಗುತ್ತದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆದಂತೆಲ್ಲಾ ವಲಸಿಗರ ಸಂಖ್ಯೆಯೂ ಹೆಚ್ಚಿತು. ಹೀಗೆ ಬಂದವರಿಗೆ ನೆಲೆಸಲು ಮಾಡಿಕೊಂಡ ವ್ಯವಸ್ಥೆಯೇ ಅಪಾರ್ಟ್‌ಮೆಂಟ್ ಸಂಸ್ಕೃತಿ.
ಕಡಿಮೆ ಜಾಗದಲ್ಲಿ ಅತಿ ಹೆಚ್ಚು ಜನರಿಗೆ ವಸತಿ ಸೌಕರ್ಯ ಕಲ್ಪಿಸುವ ಈ ಬಹುಮಹಡಿ ಕಟ್ಟಡಗಳು ಒಂದು ಕಾಲದಲ್ಲಿ ಪರಿಹಾರವಾಗಿ ಕಂಡವು. ಮುಂದೆ ಇದೊಂದು ಉದ್ಯಮವಾಗಿಯೂ ಉಗಮವಾಯಿತು. ಇವು ತಮ್ಮ ಜತೆಗೆ ಮಾಲ್‌ಗಳು, ಫನ್ ವರ್ಲ್ಡ್ನಂತಹ ಮನರಂಜನೆ ತಾಣಗಳನ್ನೂ ಆಕರ್ಷಿಸಿದವು.
ಇದೆಲ್ಲದರ ಪರಿಣಾಮ ರಸ್ತೆಗಳ ಮೇಲಿನ ಒತ್ತಡ ಸಾಕಷ್ಟು ಪಟ್ಟು ಹೆಚ್ಚಾಯಿತು. ಈಗ ಅದೇ ಅಪಾರ್ಟ್‌ಮೆಂಟ್ ಸಂಸ್ಕೃತಿ ನಗರದ “ಸಂಚಾರ ನಾಡಿ’ಯನ್ನು ಹಿಡಿದುನಿಲ್ಲಿಸುತ್ತಿದೆ! ಒಂದೊಂದು ಅಪಾರ್ಟ್‌ಮೆಂಟ್‌ನಲ್ಲೂ ಕನಿಷ್ಠ 500ರಿಂದ ಗರಿಷ್ಠ ಹತ್ತು ಸಾವಿರ ಜನ ವಾಸವಿರುತ್ತಾರೆ.
ಈ ಪೈಕಿ ಬಹುತೇಕರ ಬಳಿ ಸ್ವಂತ ವಾಹನಗಳಿರುತ್ತವೆ. ಬೆಳಗಾದರೆ ಸಾಕು, ಆ ಎಲ್ಲಾ ವಾಹನಗಳು ಒಮ್ಮೆಲೆ ರಸ್ತೆಗಿಳಿಯುತ್ತವೆ. ಹೀಗೆ ಸಾಗರದ ಅಲೆಯಂತೆ ವಾಹನಗಳೆಲ್ಲಾ ಒಟ್ಟಿಗೆ ರಸ್ತೆಗಪ್ಪಳಿಸಿದಾಗ, ಸಹಜವಾಗೇ ಸಂಚಾರಕ್ಕೆ ಬ್ರೇಕ್ ಬೀಳುತ್ತದೆ.
ಅತಿ ಹೆಚ್ಚು ಅಪಾರ್ಟ್‌ಮೆಂಟ್‌ಗಳಿರುವ ಪ್ರದೇಶಗಳೇ ಇಂದು ನಗರದ ಅತ್ಯಧಿಕ ಸಂಚಾರದಟ್ಟಣೆ ಪ್ರದೇಶಗಳು ಎಂದು ಗುರುತಿಸಿಕೊಂಡಿವೆ. ಈ ಮಾರ್ಗಗಳ ಪೈಕಿ ಬಹುತೇಕ ಕಡೆ “ಪೀಕ್ ಅವರ್’ನಲ್ಲಿ ವಾಹನಗಳ ವೇಗ ಮಿತಿ ಗಂಟೆಗೆ ಒಂದಂಕಿಯನ್ನೂ ದಾಟುತ್ತಿಲ್ಲ. ಪರಿಣಾಮ ನಿತ್ಯ ಸಾವಿರಾರು ಜನರ ಪಾಲಿಗೆ ನಗರ ಸಂಚಾರ ನರಕಯಾತನೆ ಆಗಿದೆ.
ನಿರ್ಮಿಸುತ್ತಿರುವ ವಿಧಾನ ತಪ್ಪು: “ಅಪಾರ್ಟ್‌ಮೆಂಟ್ ಸಂಸ್ಕೃತಿ ತಪ್ಪು ಎಂದಲ್ಲ; ಆದರೆ, ಅವುಗಳನ್ನು ನಿರ್ಮಿಸುತ್ತಿರುವ ವಿಧಾನ ತಪ್ಪು. ವಸತಿ ಪ್ರದೇಶಗಳಿಗೆ ಇವು ಸೀಮಿತವಾಗಿಲ್ಲ. ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಗಳು “ಸಂಚಾರ ಪರಿಣಾಮ ನಿರ್ಧರಣಾ ಅಧ್ಯಯನ’ ಮಾಡಬೇಕು.
ಅದನ್ನು ಆಧರಿಸಿ, ಅಲ್ಲಿ ಹೆಚ್ಚಾಗಲಿರುವ ದಟ್ಟಣೆ, ಅದಕ್ಕೆ ಪರಿಹಾರಗಳು ಸೇರಿದಂತೆ ಸೂಕ್ತ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಅಷ್ಟೇ ಅಲ್ಲ, ಆ ಯೋಜನೆಯಿಂದ ಆಗಬಹುದಾದ ಸಂಚಾರ ದಟ್ಟಣೆ ನಿವಾರಣೆಗೆ ರಸ್ತೆ ವಿಸ್ತರಣೆ ಅಥವಾ ಹೆಚ್ಚುವರಿ ರ್‍ಯಾಂಪ್ ಮತ್ತಿತರ ಪರ್ಯಾಯ ಮಾರ್ಗಗಳಿಗೆ ತಗಲುವ ವೆಚ್ಚವನ್ನು ಆ ಯೋಜನೆ ಮಾಲಿಕರಿಂದಲೇ ಭರಿಸುವಂತಾಗಬೇಕು.
ಆದರೆ, ಇದಾವುದೂ ಆಗುತ್ತಿಲ್ಲ. ಪರಿಣಾಮ ನಾಯಿ ಕೊಡೆಗಳಂತೆ ಅಪಾರ್ಟ್‌ಮೆಂಟ್‌ಗಳು ತಲೆಯೆತ್ತುತ್ತಿವೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮೂಲ ಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್ ವರ್ಮ ಬೇಸರ ವ್ಯಕ್ತಪಡಿಸುತ್ತಾರೆ.
“ಅಪಾರ್ಟ್‌ಮೆಂಟ್ ನಿವಾಸಿಗಳು ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರುತ್ತಾರೆ. ಬೆಳಗ್ಗೆ ಕೆಲಸಕ್ಕೆ ಹೋಗಿಬರುವುದು, ಸಂಜೆ ಮನರಂಜನೆಗಾಗಿ ತೆರಳುವುದು ಮಾಮೂಲು. ಇದರಿಂದ ಟ್ರಿಪ್‌ಗ್ಳ ಸಂಖ್ಯೆ ಹೆಚ್ಚಿರುತ್ತದೆ.
ಹಾಗಾಗಿ, ಅಮೆರಿಕ, ಸಿಂಗಪುರದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ಮನರಂಜನೆ ತಾಣಗಳು, ಮಾರುಕಟ್ಟೆಗಳು ಒಂದೇ ಕಡೆ ಇರುತ್ತವೆ. ನಮ್ಮಲ್ಲಿಯೂ ಈ ರೀತಿಯ ವ್ಯವಸ್ಥೆ ಇತ್ತೀಚೆಗೆ ಕಂಡುಬರುತ್ತಿದೆ. ಆದರೆ, ಅದರಿಂದ ಉಂಟಾಗುವ ಸಂಚಾರದಟ್ಟಣೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ವ್ಯವಸ್ಥೆ ಇಲ್ಲ’ ಎಂದು ಅವರು ಹೇಳಿದರು.
ವಾಯುಮಾಲಿನ್ಯವೂ ಹೆಚ್ಚುತ್ತಿದೆ: ಕಿರಿದಾದ ರಸ್ತೆಗಳು, ಲೇಔಟ್‌ಗಳ ನಡುವೆಲ್ಲಾ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿರುತ್ತದೆ. ಈ ಮಧ್ಯೆ ಸಮೂಹ ಸಾರಿಗೆ ವ್ಯವಸ್ಥೆಯೂ ಇರುವುದಿಲ್ಲ. ಪ್ರತಿಯೊಂದಕ್ಕೂ ನಿವಾಸಿಗಳು ಸ್ವಂತ ವಾಹನದೊಂದಿಗೆ ಹೊರಬೀಳಬೇಕಾಗುತ್ತದೆ. ಹೀಗೆ ಯೋಜಿತವಲ್ಲದ ಅಭಿವೃದ್ಧಿ ಕ್ರಮದಿಂದ ಹೆಚ್ಚು ಸಂಚಾರದಟ್ಟಣೆ ಉಂಟಾಗುತ್ತಿದೆ. ಇದು ವಾಯು ಮಾಲಿನ್ಯಕ್ಕೂ ಕಾರಣವಾಗುತ್ತಿದೆ ಎಂದು ಕ್ಲೀನ್ ಏರ್ ಪ್ಲಾಟ್‌ಫಾರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ರಂಗನಾಥ್ ತಿಳಿಸುತ್ತಾರೆ.
ಮೆಟ್ರೋ ನಿಲ್ದಾಣಕ್ಕೆ ಮಾರುತಿ ವ್ಯಾನ್ ಸೇವೆ!: ಜಾಲಹಳ್ಳಿಯ ಜಲ ವಾಯುವಿಹಾರ-ಮೆಟ್ರೋ ನಿಲ್ದಾಣದ ನಡುವೆ ಸ್ಥಳೀಯರೇ ಕೂಡಿಕೊಂಡು ಮಾರುತಿ ವ್ಯಾನ್ ಒಂದನ್ನು ಕಾರ್ಯಾಚರಣೆಗೆ ಬಿಟ್ಟಿದ್ದಾರೆ. ಪ್ರಯಾಣ ದರ ಕೇವಲ 5 ರೂ. ಅಷ್ಟೇ ಏಕೆ, ಈ ಹಿಂದೆ ನಗರದ ಉತ್ತರದ ಬ್ರಿಗೇಡ್ ಕೋರ್ಟ್‌ಯಾರ್ಡ್‌ನಲ್ಲಿ ಸ್ಥಳೀಯರೇ ಸೇರಿಕೊಂಡು ಸಮೀಪದ ಮೆಟ್ರೋ ನಿಲ್ದಾಣಕ್ಕೆ ಖಾಸಗಿ ಫೀಡರ್ ಬಸ್ ಸೇವೆ ಕಲ್ಪಿಸಿದ್ದರು!
ಇದಲ್ಲದೆ, ಸೌತ್ ಸಿಟಿ ಅಪಾರ್ಟ್‌ಮೆಂಟ್‌ನಿಂದ ಅಣತಿ ದೂರದಲ್ಲೇ ಒಂದು ನಿಲುಗಡೆ ತಾಣವಿದೆ. ಅಲ್ಲಿನ ನಿವಾಸಿಗಳು ಯಾರಾದರೂ ಬಂದು ಅಲ್ಲಿ ನಿಂತರೆ, ಆ ಮಾರ್ಗದಲ್ಲೇ ಹಾದುಹೋಗುವ ಕಾರೊಂದು ಆತನ ಮುಂದೆ ಬಂದು ನಿಲ್ಲುತ್ತದೆ. “ಲಿಫ್ಟ್ ಬೇಕಾ’ ಎಂದು ಚಾಲಕರು ಕೇಳುತ್ತಾರೆ! ಮೆಜೆಸ್ಟಿಕ್, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತಿತರ ಪ್ರಮುಖ ರಸ್ತೆಗಳಿಗೆ ತೆರಳುವವರು ಆ ಕಾರಿನಲ್ಲಿ ಜುಮ್ಮ ಅಂತ ಪ್ರಯಾಣ ಮಾಡಬಹುದು.
ಸಂಚಾರದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸ್ವಯಂಪ್ರೇರಿತವಾಗಿ ಇಂತಹ ಹಲವು ಪರಿಹಾರ ಮಾರ್ಗಗಳನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಕಂಡುಕೊಳ್ಳುತ್ತಿದ್ದಾರೆ. ಇದರರ್ಥ ಸಂಚಾರ ದಟ್ಟಣೆಯಿಂದ ಅವರೂ ಬೇಸತ್ತಿದ್ದಾರೆ. ಸಮೂಹ ಸಾರಿಗೆಗಿಂತ ಸ್ವಂತ ವಾಹನದಲ್ಲಿ ತೆರಳುವುದು ದುಬಾರಿಯೂ ಆದರೂ ಅನಿವಾರ್ಯವಾಗಿದೆ.
ಬಿಎಂಟಿಸಿಯು ವ್ಯವಸ್ಥಿತವಾಗಿ ಅಧ್ಯಯನ ನಡೆಸಿ, 2-3 ಕಿ.ಮೀ. ವ್ಯಾಪ್ತಿಯಲ್ಲಿ ಬಿಎಂಟಿಸಿಯಿಂದ ಶಾರ್ಟ್‌ಲೂಪ್ ಸೇವೆಗಳನ್ನು ಕಲ್ಪಿಸಿದರೆ, ಈ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಪರಿಹಾರ ಸಿಗಬಹುದು ಎಂದು ಯೋಗೇಶ್ ರಂಗನಾಥ್ ಅಭಿಪ್ರಾಯಪಡುತ್ತಾರೆ.
ಕಾರು ಪೂಲಿಂಗ್‌ಗೆ ಪ್ರತಿಷ್ಠೆ ಅಡ್ಡಿ?: ಕಾರು ಪೂಲಿಂಗ್ ವಿದೇಶಗಳಲ್ಲಿ ಫಲ ನೀಡಿದೆ. ಆದರೆ, ನಮ್ಮಲ್ಲಿ ಇದಕ್ಕೆ ಪ್ರತಿಷ್ಠೆ ಅಡ್ಡಿಬರುತ್ತಿದೆ! ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿರುವವರು ಪ್ರತಿಷ್ಠಿತರು. ಅವರು ಕಾರಿನಲ್ಲಿ ತನಗಿಂತ ಕೆಳಗಿನ ಅಂತಸ್ತಿನವನು (ಶ್ರೀಮಂತಿಕೆ ಅಥವಾ ಅಧಿಕಾರದಲ್ಲಿ) ಬಂದು ಕುಳಿತುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಎಲ್ಲರ ಮನಃಸ್ಥಿತಿ ಹೀಗೇ ಇರುವುದಿಲ್ಲ. ಆದರೆ, ಕೆಲವರಿಗೆ ಪ್ರತಿಷ್ಠೆ ಅಡ್ಡಿಯಾಗುತ್ತದೆ. ಹಾಗಾಗಿ, ಕಾರ್ ಪೂಲಿಂಗ್‌ಗೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ.
ಎಲ್ಲಿ ಹೆಚ್ಚು ದಟ್ಟಣೆ?: ಮುಖ್ಯವಾಗಿ ಬನ್ನೇರುಘಟ್ಟ, ವೈಟ್‌ಫೀಲ್ಡ್, ಪೀಣ್ಯ, ಬೊಮ್ಮನಹಳ್ಳಿ, ಹೆಬ್ಟಾಳ, ಸಿ.ವಿ.ರಾಮನ್‌ನಗರ, ಮಹದೇವಪುರ, ಥಣಿಸಂದ್ರ ಮತ್ತಿತರ ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚಿವೆ. ಇದೇ ಭಾಗಗಳಲ್ಲಿ ಸಂಚಾರದಟ್ಟಣೆ ಕೂಡ ಅಧಿಕವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸುತ್ತಾರೆ.
ಪರಿಹಾರಗಳೇನು?
-ಅಪಾರ್ಟ್‌ಮೆಂಟ್, ಮಾಲ್, ಮನರಂಜನೆ ತಾಣಗಳ ನಡುವೆ ಬಿಎಂಟಿಸಿ ಬಸ್ ಸೇವೆ ಆರಂಭಿಸಬೇಕು.
-ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕ್ವಿಕ್ ರೈಡ್, ರೈಡ್‌ಶೇರ್‌ನಂತಹ ಸಮೂಹ ಸಾರಿಗೆ ವ್ಯವಸ್ಥೆಗಳಿಗೆ ಸಾರಿಗೆ ಇಲಾಖೆ ಸೂಕ್ತ ಷರತ್ತುಗಳೊಂದಿಗೆ ಅನುಮತಿ ನೀಡಬೇಕು.
-ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳು ತುಂಬಾ ದೂರ ಇರಬಾರದು. ಅವು ಸುತ್ತುವರಿದು ಬರುವುದರಿಂದ ಸಮಯ ವ್ಯಯವಾಗುತ್ತದೆ ಎಂದು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ.
-ಬೈಸಿಕಲ್ ಸವಾರರು, ಪಾದಚಾರಿಗಳಿಗೆ ಉತ್ತೇಜನ. ಇದು ಸುರಕ್ಷಿತ ಎಂದು ಮನವರಿಕೆ ಮಾಡುವುದು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.