ಕಾಯಂ ಸರ್ವೇಯರ್‌ಗಳ ನಿಯೋಜನೆ
Team Udayavani, Jan 24, 2019, 6:36 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರಂತರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಇಬ್ಬರು ಖಾಯಂ ಭೂ ಮಾಪಕರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದ್ದು, ನಗರದಲ್ಲಿ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಲಿದೆ.
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪ್ರಭಾವಿಗಳು ಹಾಗೂ ಗಣ್ಯರ ಹೆಸರುಗಳು ಕೇಳಿಬಂದ ಕೂಡಲೇ ಪಾಲಿಕೆ ಕಾರ್ಯಾಚರಣೆ ಸ್ಥಗಿತಗೊಳಿಸಿತು ಎಂಬ ಆರೋಪಗಳು ಕೇಳಿಬಂದಿದ್ದರಿಂದ ಇಬ್ಬರು ಖಾಯಂ ಭೂಮಾಪಕರನ್ನು ಸರ್ಕಾರ ಪಾಲಿಕೆಗೆ ನಿಯೋಜಿಸಿದೆ.
ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದರಿಂದ ಭಾರೀ ಮಳೆಯಾದಾಗ ಕೆಲವು ಬಡಾವಣೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಆ ಹಿನ್ನೆಲೆಯಲ್ಲಿ ಪಾಲಿಕೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ, ಒತ್ತುವರಿಯಲ್ಲಿ ಪ್ರಭಾವಿಗಳ ಹೆಸರು ಕೇಳಿಬಂದ ಕೂಡಲೇ ನಾನಾ ಕಾರಣಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಟೀಕೆಗಳಿಗೆ ಕಾರಣವಾಗಿತ್ತು.
ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ಇತ್ತೀಚೆಗೆ ನಗರದಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಪಾಲಿಕೆಗೆ ಸರ್ವೇ ಹಾಗೂ ಮಾರ್ಕಿಂಗ್‌ಗೆ ಇಬ್ಬರು ಭೂ ಮಾಪಕರನ್ನು ಸರ್ಕಾರ ನೀಡಿದ್ದು, ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭವಾಗಲಿದೆ. ಆದರೆ, ಅಧಿಕಾರಿಗಳು ಕಾರ್ಯಾಚರಣೆಯನ್ನು ನಿವೇಶನಗಳಿಗೆ ಸೀಮಿತಗೊಸುವರೇ ಅಥವಾ ಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್, ಬೃಹತ್ ಕಟ್ಟಡಗಳನ್ನೂ ನೆಲಸಮ ಮಾಡುವರೇ ಎಂದು ಕಾದು ನೋಡಬೇಕಿದೆ.
ಪಾಲಿಕೆಗೆ ಈ ಹಿಂದೆ ನಿಯೋಜಿಸಿದ್ದ ಭೂಮಾಪಕರು ನಾಲ್ಕು ವಲಯಗಳಲ್ಲಿ ಸರ್ವೇ ನಡೆಸಿ 450 ಪ್ರಕರಣಗಳಲ್ಲಿ ರಾಜಕಾಲುವೆ ಒತ್ತುವರಿ ಗುರುತಿಸಿದ್ದು, ಒತ್ತುವರಿಯಾಗಿರುವ ನಕ್ಷೆ ಹಾಗೂ ತೆರವುಗೊಳಿಸಬೇಕಾದ ಪ್ರದೇಶವನ್ನು ಗುರುತು ಮಾಡಿ ಪಾಲಿಕೆಗೆ ವರದಿ ಒಪ್ಪಿಸಿದ್ದಾರೆ. ಆದರೆ, ಒತ್ತುವರಿ ಮಾರ್ಕಿಂಗ್ ಮಾಡದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಶಯ ಮೂಡಿಸಿದ ಅಂಕಿ-ಅಂಶ: ಬಿಬಿಎಂಪಿ ವ್ಯಾಪ್ತಿಯ 800 ಕಿ.ಮೀ. ಉದ್ದದ ರಾಜಕಾಲುವೆಯ 1953 ಕಡೆ ಒತ್ತುವರಿಯಾಗಿದ್ದು, 2016ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವ ಮೊದಲೇ ಪಾಲಿಕೆ ಅಧಿಕಾರಿಗಳು 820 ಕಡೆ ತೆರವು ಕಾರ್ಯ ಕೈಗೊಂಡಿದ್ದರು. ಉಳಿದ 1,133 ಪ್ರಕರಣಗಳ ಪೈಕಿ ಎರಡು ವರ್ಷಗಳಲ್ಲಿ 571 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಿದ್ದು, 562 ಕಡೆ ತೆರವು ಬಾಕಿಯಿದೆ ಎಂದು ಸ್ವತಃ ಪಾಲಿಕೆ ಆಯುಕ್ತರೇ ಕೌನ್ಸಿಲ್ ಸಭೆಯಲ್ಲಿ ಹೇಳಿದ್ದರು.
ಆದರೆ, ಇತ್ತೀಚೆಗೆ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಪಾಲಿಕೆ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ 2,515 ರಾಜಕಾಲುವೆ ಒತ್ತುವರಿ ಪ್ರಕರಣಗಳಿವೆ ಎಂದು ತಿಳಿಸಲಾಗಿದೆ. ಜತೆಗೆ ಈವರೆಗೆ ಕೇವಲ 428 ಪ್ರಕರಣಗಳನ್ನು ತೆರವುಗೊಳಿಸಿದ್ದು, 450 ಪ್ರಕರಣಗಳಲ್ಲಿ ಸರ್ವೇ ಪೂರ್ಣಗೊಂಡಿದೆ. 2018-19ನೇ ಸಾಲಿನಲ್ಲಿ 51 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಿದ್ದು, ಇನ್ನೂ 1637 ಪ್ರಕರಣಗಳಲ್ಲಿ ತೆರವು ಬಾಕಿಯಿದೆ ಎಂಬ ಮಾಹಿತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗಾಗಿ ಸರ್ಕಾರ ಇಬ್ಬರು ಕಾಯಂ ಭೂಮಾಪಕರನ್ನು ಪಾಲಿಕೆಗೆ ನಿಯೋಜಿಸಿದೆ. ಅವರನ್ನು ಬಳಸಿಕೊಂಡು ನಿರಂತರವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು.
-ಪ್ರಹ್ಲಾದ್, ಮುಖ್ಯ ಇಂಜಿನಿಯರ್ (ಬೃಹತ್ ಮಳೆ ನೀರುಗಾಲುವೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.