ಶಾಸಕರ ಫಂಡಿಗೂ ಸರ್ಕಾರದ ಖೋತಾ
Team Udayavani, Mar 11, 2017, 3:45 AM IST
ಬೆಂಗಳೂರು: ಆರ್ಥಿಕ ವರ್ಷ ಮುಗಿಯುತ್ತಾ ಬಂದರೂ ಈ ಸಾಲಿನಲ್ಲಿ ಬಿಡುಗಡೆಯಾಗಬೇಕಿದ್ದ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಇನ್ನೂ ಬಿಡುಗಡೆಯಾಗದೆ ಇರುವುದು, ರಾಜ್ಯದಲ್ಲಿ ಆರ್ಥಿಕ ಬರ ಕಾಣಿಸಿಕೊಂಡಿದೆಯೇ ಎಂಬ ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಹೊಸ ಬಜೆಟ್ ಮಂಡನೆಗೆ ಸಿದ್ದರಾಮಯ್ಯನವರು ಸಿದ್ದವಾಗಿದ್ದರೂ ಸಹ ಹಳೆ ಬಜೆಟ್‌ನಲ್ಲಿ ಶಾಸಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ನೀಡುವುದಾಗಿ ಪ್ರಕಟಿಸಿದ್ದª ಮುಖ್ಯಮಂತ್ರಿಗಳು ಶೇಕಡಾ ಅರ್ಧದಷ್ಟೂ ಹಣವನ್ನು ಬಿಡುಗಡೆ ಮಾಡದೇ ಇರುವುದರಿಂದ ಕ್ಷೇತ್ರಾಭಿವೃದ್ಧಿ ನಿಧಿ ಹಣಕ್ಕಾಗಿ ಶಾಸಕರು ಹಪಹಪಿಸುವಂತಾಗಿದೆ.
ರಾಜ್ಯದಲ್ಲಿ 224 ಶಾಸಕರು, 75 ವಿಧಾನ ಪರಿಷತ್ ಸದಸ್ಯರು ಹಾಗೂ ಓರ್ವ ನಾಮ ನಿರ್ದೇಶಿತ ವಿಧಾನಸಭೆ ಸದಸ್ಯರೂ ಸೇರಿದಂತೆ ಒಟ್ಟು ಮುನ್ನೂರು ಶಾಸಕರಿಗೆ ತಲಾ ಎರಡು ಕೋಟಿಯಂತೆ ವಾರ್ಷಿಕ 600 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಬೇಕಿತ್ತು. ಆದರೆ, 2016-17 ನೇ ಹಣಕಾಸು ವರ್ಷ ಅಂತ್ಯಗೊಳ್ಳುತ್ತಾ ಬಂದರೂ ಬಹುತೇಕ ಶಾಸಕರಿಗೆ ಪೂರ್ಣ ಪ್ರಮಾಣದ ಶಾಸಕರ ನಿಧಿಯ ಅನುದಾನ ಲಭ್ಯವಾಗಿಲ್ಲ. ಇದುವರೆಗೂ ಎರಡು ಕಂತುಗಳಲ್ಲಿ ಒಂದು ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದು, ಮೊದಲ ಕಂತಿನಲ್ಲಿ ಒಟ್ಟು 144.82 ಕೋಟಿ ಹಾಗೂ ಎರಡನೇ ಕಂತಿನಲ್ಲಿ 148.83 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಮೊದಲ ಕಂತಿನಲ್ಲಿ ವಿಧಾನ ಪರಿಷತ್ತಿನ ಕೆಲವು ಸದಸ್ಯರ ಅವಧಿ ಮುಗಿಯುತ್ತಿದ್ದರಿಂದ ವಿ. ಸೋಮಣ್ಣ, ಲೆಹರ್‌ಸಿಂಗ್, ಅಶ್ವಥ ನಾರಾಯಣ ಹಾಗೂ ನಾರಾಯಣಸಾ ಬಾಂಢಗೆ ಯವರಿಗೆ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಹೀಗಾಗಿ ಇದುವರೆಗೂ 600 ಕೋಟಿ ರೂಪಾಯಿಯಲ್ಲಿ 293.65 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಎಲ್ಲ ಶಾಸಕರಿಗೂ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿಗೆ ಅನುದಾನದ ಹಣ ಮಂಜೂರಾಗದೇ ಇರುವುದು ಜನಪ್ರತಿನಿಧಿಗಳನ್ನು ಕೆರಳಿಸಿದೆ.
ಮುಖ್ಯಮಂತ್ರಿಗಳ ಭರವಸೆಯಂತೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆ ಅಡಿ, ಹಲವಾರು ಕಾಮಗಾರಿಗಳನ್ನು ಗುತ್ತಿಗೆದಾರರ ಮೂಲಕ ಜಿಲ್ಲಾಡಳಿತಕ್ಕೆ ಖಜಾನೆಯಿಂದ ಹಣ ಬಾರದೇ ಇರುವುದರಿಂದ ಗುತ್ತಿಗೆದಾರರ ಕಣ್ತಪ್ಪಿಸಿ ಶಾಸಕರುಗಳು ತಿರುಗಾಡುವಂತಾಗಿದೆ.
ಶಾಸಕರು ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯಡಿ ತಮ್ಮ ಮತ ಕ್ಷೇತ್ರದಲ್ಲಿ ಸಮುದಾಯ ಭವನ, ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ, ಗ್ರಾಮೀಣ ರಸ್ತೆ, ಚರಂಡಿ ನಿರ್ಮಾಣ, ತುರ್ತು ಕುಡಿಯುವ ನೀರು ಸರಬರಾಜು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಕೊಠಡಿ ಜೀರ್ಣೋದ್ದಾರ, ಬೀದಿ ವಿದ್ಯುತ್ ದೀಪ ಅಳವಡಿಸುವುದು ಸೇರಿದಂತೆ ಮತದಾರರನ್ನು ಆಕರ್ಷಿಸುವಂತ ಯೋಜನೆಗಳನ್ನು ಕೈಗೊಳ್ಳಲು ಅವಕಾಶ ಇದೆ.
ಸರ್ಕಾರ ಮಾತಿನಂತೆ ಶಾಸಕರುಗಳು ಅಭಿವೃದ್ಧಿ ಕಾಮಗಾರಿಗಳ ಮೂಲಕ ಮತದಾರರನ್ನು ಮನ ಗೆಲ್ಲಲು ತಮಗಿರುವ ಒಳ್ಳೆಯ ಅವಕಾಶ ಎಂದು ಭಾವಿಸಿ ಹೆಚ್ಚು ಹೆಚ್ಚು ಯೋಜನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಕಾಮಗಾರಿಗಳನ್ನು ಮಂಜೂರು ಮಾಡಿದ್ದಾರೆ. ಸಕಾಲಕ್ಕೆ ಸರಿಯಾಗಿ ಹಣ ಬಿಡುಗಡೆ ಆಗದೇ ಇರುವುದರಿಂದ ಹಲವೆಡೆ ಕಾಮಗಾರಿಗಳು ಅಪೂರ್ಣಗೊಂಡಿವೆ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೇ ಇರುವುದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಉದಾಹರಣೆಗಳೂ ಸಹ ಸಾಕಷ್ಟಿವೆ ಎಂದು ಅನೇಕ ಶಾಸಕರು ತಮ್ಮ ಅಸಹಾಯಕತೆಯನ್ನು ಹೊರ ಹಾಕಿದ್ದಾರೆ.
ಸಂಸದರಿಗೆ ನೀಡುವ ಅನುದಾನದ ಮಾದರಿಯಲ್ಲಿಯೇ ಶಾಸಕರ ನಿಧಿಯನ್ನೂ ಸಹ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಶಾಸಕರ ನಿಧಿಗೆ ವರ್ಷದಿಂದ ವರ್ಷಕ್ಕೆ ಹಣವನ್ನು ಹೆಚ್ಚಿಸುತ್ತ ಬರಲಾಗುತ್ತಿದೆ ಆದರೂ, ಸರ್ಕಾರ ಸಕಾಲಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದೇ ಇರುವುದರಿಂದ ಕ್ಷೇತ್ರಾಭಿವೃದ್ಧಿ ಯೋಜನೆ ಫಲ ಸಾರ್ವಜನಿಕರಿಗೂ ಮತ್ತೂ ಶಾಸಕರಿಗೂ ಪರಿಣಾಮಕಾರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಹಲವು ಶಾಸಕರು ಹೇಳುತ್ತಾರೆ.
ಶಾಸಕರ ಅನುದಾನವನ್ನು ಬಿಡಿ ಬಿಡಿಯಾಗಿ ಬಿಡುಗಡೆ ಮಾಡುವುದರಿಂದ ಸರಿಯಾಗಿ ಯೋಜನೆ ಕೈಗೆತ್ತಿಕೊಳ್ಳಲು ಆಗುವುದಿಲ್ಲ. ನಮ್ಮ ನಿಧಿಯ ಹಣ ಬರುತ್ತದೆ ಎಂದು ಅನೇಕರಿಗೆ ಕೆಲಸದ ಶಿಫಾರಸ್ಸು ಪತ್ರವನ್ನು ನೀಡಿರುತ್ತೇವೆ. ಆದರೆ, ಹಣ ಬಿಡುಗಡೆ ಮಾಡದೇ ಕೆಲಸ ಆಗುವುದಿಲ್ಲ. ದುಡ್ಡು ಬರದಿರುವುದರಿಂದ ಜನರಿಗೆ ಏನಾದರೂ ಸಮಜಾಯಿಷಿ ನೀಡಿ ತಪ್ಪಿಸಿಕೊಳ್ಳಬೇಕು. ಕಂತಿನಲ್ಲಿ ಹಣ ಬಿಡುಗಡೆ ವ್ಯವಸ್ಥೆಯನ್ನು ಸರ್ಕಾರ ಕೈ ಬಿಡಬೇಕು.
– ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ
ನನ್ನ ಅನುದಾನದ ಹಣದ ಕ್ರಿಯಾ ಯೋಜನೆಯನ್ನು ಜಿಲ್ಲಾಧಿಕಾರಿಗೆ ಕೊಟ್ಟು ಹಣಕ್ಕಾಗಿ ದಾರಿ ಕಾಯುತ್ತ ಕುಳಿತಿದ್ದೇವೆ. ತೀವ್ರ ಬರ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಕಾಮಗಾರಿ ಕೈಗೊಳ್ಳಲು ಹಣ ಇಲ್ಲ. ಸರ್ಕಾರದಿಂದ ಅನುದಾನದ ಹಣ ಬರುತ್ತದೆಂದು ಅನೇಕ ಕಾಮಗಾರಿಗಳನ್ನು ಉದ್ರಿ ಮಾಡಿಸಿದ್ದೇವೆ. ಹಣ ಬಿಡುಗಡೆ ವಿಳಂಬವಾಗಿರುವುದರಿಂದ ಗುತ್ತಿಗೆದಾರರು ನಮ್ಮ ಮನೆಯ ಮುಂದೆ ಬಂದು ನಿಲ್ಲುವಂತಾಗಿದೆ.
-ಎನ್.ಎಚ್. ಕೋನರೆಡ್ಡಿ, ಜೆಡಿಎಸ್ ಶಾಸಕ.
ನನ್ನ ಕ್ಷೇತ್ರದ ಅನುದಾನ ಪೂರ್ಣ ಬಂದಿಲ್ಲ. ನಾನು ಈಗಾಗಲೇ ಅಡ್ವಾನ್ಸ್ ಕೆಲಸ ಮಾಡಿಸುತ್ತಿದ್ದೇನೆ. ಹಣ ಬಂದಾಗ ಕೊಡುವ ಭರವಸೆಯಿಂದ ಕೆಲಸ ನಡೆದಿದೆ. ಇದರಿಂದ ಶಾಸಕರಿಗೆ ತೊಂದರೆಯಾಗಿದೆ. ಆದರೆ, ಹಣ ಅಪನಗದೀಕರಣದಿಂದ ಸರ್ಕಾರದ ಪರಿಸ್ಥಿತಿ ಹೇಗಿದೆ ಅಂತಾನೂ ನಾವು ಯೋಚನೆ ಮಾಡಬೇಕು. ಸರ್ಕಾರ ಎಂಎಲ್‌ಎ ಫಂಡ್ ರಿಲೀಜ್ ಮಾಡಲು ಬೇರಾವುದೋ ಇಲಾಖೆ ಹಣವನ್ನು ತೆಗೆದು ಕೊಡುವುದು ಬೇಡ. ಸರ್ಕಾರಕ್ಕೆ ಆರ್ಥಿಕ ಶಿಸ್ತು ಇರಬೇಕು.
-ಪಿ.ರಾಜೀವ್, ಬಿಎಸ್‌ಆರ್ ಶಾಸಕ
ಶಾಸಕರ ಅನುದಾನಕ್ಕಾಗಿ ಈಗಾಗಲೇ ಕ್ರಿಯಾ ಯೋಜನೆ ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದೇನೆ. ಆದರೆ, ಪೂರ್ಣ ಹಣ ಬಿಡುಗಡೆಯಾಗಿಲ್ಲ. ಕೆಲವು ಕಾಮಗಾರಿಗೆ ಅನುಮತಿ ನೀಡಿದ್ದೇನೆ. ಅನುದಾನದ ಹಣ ಯಾವಾಗ ಬರುತ್ತದೋ ಆವಾಗ ನೀಡುತ್ತೇನೆ. ಅನುದಾನದ ವಿಷಯದಲ್ಲಿ ಪ್ರತಿವರ್ಷವೂ ಹೀಗೇ ಆಗುತ್ತದೆ.
-ಮಾಲಿಕಯ್ಯ ಗುತ್ತೇದಾರ, ಕಾಂಗ್ರೆಸ್ ಶಾಸಕ
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.