ಬಿಎಂಟಿಸಿ ನಿಲ್ದಾಣಗಳಲ್ಲಿ ಪಿಐಎಸ್ ಸೇವೆ
Team Udayavani, Dec 26, 2018, 12:05 PM IST
ಬೆಂಗಳೂರು: ಇನ್ನು ಮುಂದೆ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ “ಬಸ್ ಇನ್ನು ಯಾವಾಗ ಬರುತ್ತೆ?’ ಎಂಬ ಪ್ರಶ್ನೆ ಕೇಳ ಬೇಕಿಲ್ಲ, ಗೊತ್ತಿಲ್ಲ ಎಂಬ ಉತ್ತರವನ್ನು ಪಡೆದು ಬಸ್‌ಗಾಗಿ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ.
ಹೌದು, ಬಿಎಂಟಿಸಿ ಹಾಗೂ ಬಿಬಿಎಂಪಿ ನಡುವಿನ ಮುಸುಕಿನ ಗುದ್ದಾಟದಿಂದ ಕಳೆದ ಮೂರು ವರ್ಷಗಳಿಂದ ಮೂಲೆ ಗುಂಪಾಗಿದ್ದ ಬಿಎಂಟಿಸಿ ನಿಲ್ದಾಣಗಳಲ್ಲಿ “ಪ್ರಯಾಣಿಕರ ಮಾಹಿತಿ ವ್ಯವಸ್ಥೆ” (ಪಿಐಎಸ್ ಫಲಕ) ಅಳವಡಿಕೆ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದ್ದು, ನಗರದ 2,212 ಬಸ್ ನಿಲ್ದಾಣಗಳಲ್ಲಿ ಪಿಐಎಸ್ ಬೋರ್ಡ್‌ಗಳನ್ನು ಬಿಎಂಟಿಸಿ ಅಳವಡಿಸಲಿದೆ. ಈ ಕಾಮಗಾರಿಗೆ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ನಿಲ್ದಾಣಗಳ ಬಸ್ ಸಂಚಾರ ಮಾಹಿತಿಯನ್ನು ಬಿಎಂಟಿಸಿ ಅಧಿಕಾರಿಗಳು ಬಿಬಿಎಂಪಿಗೆ ನೀಡಿದ್ದಾರೆ.
ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಬಸ್ ಬರುವ ಕುರಿತು ಯಾರಿಗಾದರೂ ಮಾಹಿತಿ ಕೇಳಿದರೆ “ಗೊತ್ತಿಲ್ಲ’ ಎಂಬ ಉತ್ತರ ಬರುತ್ತದೆ. ಇಂದಿಗೂ ಬಿಎಂಟಿಸಿ ಬಸ್‌ಗಳ ಮಾರ್ಗ, ಸಮಯದ ಬಗ್ಗೆ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ಇಲ್ಲ. ಇದರಿಂದಾಗಿ ತಮ್ಮ ಮಾರ್ಗದ ಬಸ್‌ಗಳಿಗಾಗಿ ಪ್ರಯಾಣಿಕರು ಸಾಕಷ್ಟು ಸಮಯ ಕಾಯಬೇಕಿದೆ.
ಇವುಗಳಿಗೆ ಪರಿಹಾರ ನೀಡಲು ಈ ಹಿಂದೆ ಎಲ್ಲಾ ಬಿಎಂಟಿಸಿ ನಿಲ್ದಾಣಗಳಲ್ಲೂ “ಪ್ರಯಾಣಿಕರ ಮಾಹಿತಿ ವ್ಯವಸ್ಥೆ”ಯನ್ನು ಅಳವಡಿಸಿ ಪ್ರಯಾಣಿಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಬಿಎಂಟಿಸಿ ಮುಂದಾಗಿತ್ತು. ಆದರೆ, ನಗರದ ಬಹುತೇಕ ಬಸ್ ನಿಲ್ದಾಣಗಳ ಸ್ವಾಮ್ಯತೆಯನ್ನು ಹೊಂದಿರುವ ಬಿಬಿಎಂಪಿ ಸಹಕಾರ ಸಿಗದೇ ಯೋಜನೆಗೆ ತಡೆ ಉಂಟಾಗಿತ್ತು.
ವ್ಯವಸ್ಥೆಗೆ ವೇಗ: ನಗರದ ಬಹುತೇಕ ಬಸ್ ಶೆಲ್ಟರ್‌ಗಳು (ತಂಗುದಾಣ) ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ಮಾದರಿ ನಿರ್ಮಾಣವಾಗಿದ್ದು, ಶೆಲ್ಟರ್ ನಿರ್ಮಿಸಿರುವ ಖಾಸಗಿ ಸಂಸ್ಥೆಗಳು ಜಾಹೀರಾತು ಪ್ರದರ್ಶಿಸುತ್ತವೆ. ಅದಕ್ಕಾಗಿ ಬಿಬಿಎಂಪಿಗೆ ತೆರಿಗೆ ಕಟ್ಟುತ್ತವೆ.
ಬಿಎಂಟಿಸಿ ಜಾರಿಗೊಳಿಸಲು ಮುಂದಾಗಿರುವ ಈ ಪಿಐಎಸ್ ಯೋಜನೆಯೂ ಪಿಪಿಪಿ ಮಾದರಿಯದ್ದೇ ಆಗಿದ್ದು, ಪಿಐಎಸ್ ಫಲಕಗಳಲ್ಲಿ ಜಾಹೀರಾತು ಮೂಡಿಬರುತ್ತದೆ. ಇದರಿಂದಾಗಿ ಶೆಲ್ಟರ್ ನಿರ್ಮಿಸಿರುವ ಖಾಸಗಿ ಕಂಪನಿಗಳು ವಿರೋಧ ವ್ಯಕ್ತಪಡಿಸಿ ತಮ್ಮ ಆದಾಯಕ್ಕೆ ಕತ್ತರಿ ಬೀಳಬಹುದು ಎಂಬ ಆತಂಕದಿಂದ ತಂಗುದಾಣಗಳಲ್ಲಿ ಪ್ರಯಾಣಿಕ ಮಾಹಿತಿ ವ್ಯವಸ್ಥೆ (ಪಿಐಎಸ್)ಅಳವಡಿಕೆಗೆ ಬಿಬಿಎಂಪಿ ಆಕ್ಷೇಪ ಎತ್ತಿತ್ತು. ಇದರಿಂದ ಯೋಜನೆಗೆ ತೆರೆ ಬಿದ್ದಿತ್ತು.
ಈ ಕುರಿತು ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಸಮನ್ವಯ ಸಮಿತಿ ಸಭೆಯಲ್ಲಿ ಸಾಕಷ್ಟು ದಿನಗಳಿಂದಲೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬಿಎಂಟಿಸಿ ಅಧಿಕಾರಿಗಳು ಬಿಬಿಎಂಪಿ ಸಮನ್ವಯತೆ, ಸಹಕಾರಕ್ಕೆ ಕೋರುತ್ತಾ ಬಂದಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಬಿಬಿಎಂಪಿ ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ ನಿಲ್ದಾಣಗಳಲ್ಲಿ ಪಿಐಎಸ್ ಕಡ್ಡಾಯ ಅಳವಡಿಕೆಗೆ ಸೂಚಿಸಿದ್ದಾರೆ. ಹೀಗಾಗಿ ವ್ಯವಸ್ಥೆ ಜಾರಿಗೆ ವೇಗ ಸಿಕ್ಕಿದೆ.
ಏನು ಉಪಯೋಗ?: ಪ್ರಯಾಣಿಕರ ಮಾಹಿತಿ ವ್ಯವಸ್ಥೆಯಿಂದ ಆಯಾ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಫಲಕಗಳಲ್ಲಿ ಬಸ್‌ಎಲ್ಲಿದೆ, ಯಾವ ನಿಲ್ದಾಣದಿಂದ ಹೊರಟಿತು, ನಿಲ್ದಾಣಕ್ಕೆ ಎಷ್ಟೊತ್ತಿಗೆ ಬರಲಿದೆ ಎಂಬ ಮಾಹಿತಿ ಮೂಡಿಬರುತ್ತದೆ. ಜತೆಗೆ ಬಿಎಂಟಿಸಿ ಬಸ್‌ಗಳ ಸಂಚಾರದ ವೇಳಾಪಟ್ಟಿಯು ಪ್ರದರ್ಶಿತವಾಗಲಿದೆ. ಒಂದು ವೇಳೆ ಬಸ್ ತಡವಾದರೆ ಪ್ರಯಾಣಿಕರು ಕಾಯುವ ಬದಲು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಅನುಕೂಲವಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.
ಬಿಎಂಟಿಸಿ ತನ್ನ ವ್ಯಾಪ್ತಿಗೆ ಒಳಪಡುವ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಶಾಂತಿನಗರ, ವಿಜಯನಗರ, ಜಯನಗರ, ಯಶವಂತಪುರ, ಜಯನಗರ, ಕೆಂಗೇರಿ, ಐಟಿಪಿಎಲ್, ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಸ್ ನಿಲ್ದಾಣ ಸೇರಿದಂತೆ 100ಕ್ಕೂ ಹೆಚ್ಚುಕಡೆ ಮೊದಲ ಹಂತದಲ್ಲಿ ಪಿಐಎಸ್ ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಈ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿಯು ಮೈಸೂರು ನಿಲ್ದಾಣ ಮತ್ತು ಬಿಎಂಟಿಸಿಯು ಶಾಂತಿ ನಗರ ನಿಲ್ದಾಣದಲ್ಲಿ ಅಳವಡಿಸಿದೆ.
ಪಿಐಎಸ್ ಕಾರ್ಯ ನಿರ್ವಹಣೆ ಹೇಗೆ?: ಬಿಎಂಟಿಸಿ ಚತುರ ಸಾರಿಗೆ ವ್ಯವಸ್ಥೆಯಡಿ ಎಲ್ಲಾ ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಈ ಜಿಪಿಎಸ್ ಸಾಧನವು ವಾಹನ ಸಂಚರಿಸುವ ಪ್ರದೇಶದ ಮಾಹಿತಿಯನ್ನು ಬಿಎಂಟಿಸಿ ನಿಯಂತ್ರಣ ಕೊಠಡಿಗೆ ನೀಡುತ್ತದೆ. ಈ ಮಾಹಿತಿಯ ಆಧಾರದ ಮೇಲೆಯೇ ಪ್ರಯಾಣಿಕರಿಗೆ ಬಸ್‌ಗಳ ಆಗಮನ, ನಿರ್ಗಮನ, ಬಸ್ ಪ್ರಸ್ತುತ ಯಾವ ರಸ್ತೆಯಲ್ಲಿದೆ, ಯಾವ ನಿಲ್ದಾಣದಿಂದ ಹೊರಟಿದೆ, ಯಾವ ನಿಲ್ದಾಣ ತಲುಪಲಿದೆ ಇತ್ಯಾದಿ ಮಾಹಿತಿ ಡಿಜಿಟಲ್ ಫಲಕದಲ್ಲಿ ನಕ್ಷೆ ಸಮೇತ ಪ್ರದರ್ಶಿಸಲಾಗುತ್ತದೆ.
ಪ್ರಯಾಣಿಕರ ಮಾಹಿತಿ ವ್ಯವಸ್ಥೆ (ಪಿಐಎಸ್) ಫಲಕ ಅಳವಡಿಸಲು ಬಿಎಂಟಿಸಿಗೆ ಅನುಮತಿ ನೀಡಿದ್ದೇವೆ. ಈಗಾಗಲೇ ಬಿಬಿಎಂಪಿ ಹಾಗೂ ಬಿಎಂಟಿಸಿ ಅಧಿಕಾರಿಗಳು ನಿಲ್ದಾಣಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಬಿಎಂಟಿಸಿ ತನ್ನ ಬಸ್‌ಗಳ ಸಂಚಾರ ಮಾಹಿತಿ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ನಗರದ 500ಕ್ಕೂ ಹೆಚ್ಚು ನಿಲ್ದಾಣದಲ್ಲಿ ಪಿಐಎಸ್ ಅಳವಡಿಸಲಾಗುವುದು.
-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ನಿಲ್ದಾಣಗಳ ಮಾಹಿತಿಯನ್ನು ಬಿಬಿಎಂಪಿಗೆ ಸಲ್ಲಿಸಲಾಗಿದೆ. ಯೋಜನೆಯ ಎಲ್ಲಾ ಗೊಂದಲಕ್ಕೂ ಪರಿಹಾರ ಸಿಕ್ಕಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.
-ಡಾ.ಎನ್.ವಿ.ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೆಶಕರು
-6,634 ಒಟ್ಟು ಬಸ್‌ಗಳ ಸಂಖ್ಯೆ
-45 ಡಿಪೊಗಳು
– 4,243 ಒಟ್ಟು ಬಸ್ ನಿಲ್ದಾಣಗಳು
-2,212 ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಲ್ದಾಣಗಳು
-70,025 ನಿತ್ಯ ಟ್ರಿಪ್‌ಗ್ಳ ಕಾರ್ಯಾಚರಣೆ
-5.03 ಕೋಟಿ ರೂ. ಪ್ರತಿದಿನ ಸಾರಿಗೆ ಆದಾಯ
– 11.5 ಲಕ್ಷ ನಿತ್ಯ ಕಿ.ಮೀ ಸಂಚಾರ
-50 ಲಕ್ಷಕ್ಕೂ ಹೆಚ್ಚು ಮಂದಿ ಪ್ರತಿದಿನ ಪ್ರಯಾಣಿಸುವವರ ಸಂಖ್ಯೆ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.