ದಂಡಕ್ಕೂ ಜಗ್ಗದ ಮೊಂಡು ಪ್ಲಾಸ್ಟಿಕ್ ಪೆಡಂಭೂತ!
ಸುದ್ದಿ ಸುತ್ತಾಟ
Team Udayavani, Jul 22, 2019, 3:10 AM IST
ಚಿತ್ರಗಳು: ಫಕ್ರುದ್ದೀನ್ ಎಚ್.
ನಿಷೇಧಿತ ಪ್ಲಾಸ್ಟಿಕ್ ಬಳಸುವವರ ವಿರುದ್ಧ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜುಲೈ 15ರಿಂದ ಎಂಟು ವಲಯಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ದಂಡ ಪ್ರಯೋಗ ಮಾಡುತ್ತಿದೆ. ಆದರೆ, ಪ್ಲಾಸ್ಟಿಕ್ ವಿರುದ್ಧ ಈ ರೀತಿಯ ಆಂದೋಲನ ಇದೇ ಮೊದಲಲ್ಲ. ಐದು ವರ್ಷಗಳಿಂದಲೂ ಕಾರ್ಯಾಚರಣೆಗಳು ನಡೆಯುತ್ತಲೇ ಇವೆ. ಬಳಕೆ ಮಾತ್ರ ನಿಂತಿಲ್ಲ. ಇದರಿಂದ ವಶಕ್ಕೆ ಪಡೆಯುವ ಪ್ರಮಾಣವೂ ಏರಿಕೆ ಕ್ರಮದಲ್ಲೇ ಸಾಗಿದೆ. ಹಾಗಿದ್ದರೆ, ಪ್ಲಾಸ್ಟಿಕ್ ಕಡಿವಾಣಕ್ಕೆ ದಂಡವೊಂದೇ ಪರಿಹಾರವೇ? ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸುವ ಅವಶ್ಯಕತೆ ಇದೆಯೇ? ಇದಕ್ಕೆ ಪರ್ಯಾಯವಿಲ್ಲವೇ? ಇದೆಲ್ಲದರ ಸುತ್ತ ಈ ಬಾರಿಯ ಸುದ್ದಿಸುತ್ತಾಟ…
ಐದು ವರ್ಷಗಳಲ್ಲಿ ಬಿಬಿಎಂಪಿಯು ನಿಷೇಧಿತ ಪ್ಲಾಸ್ಟಿಕ್ ಬಳಕೆದಾರರ ಮೇಲೆ ವಿಧಿಸಿರುವ ದಂಡದ ಮೊತ್ತ 42 ಲಕ್ಷಕ್ಕೂ ಹೆಚ್ಚು. ಇದರಲ್ಲಿ ಕಳೆದ ಒಂದೇ ವಾರದಲ್ಲಿ 19 ಲಕ್ಷ ರೂ. ವಸೂಲು ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಅದರ ಬಳಕೆಗೆ ಕಡಿವಾಣ ಬೀಳುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಪಾಲಿಕೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದರ ಜತೆಗೆ ಜಾಗೃತಿಯನ್ನೂ ಮೂಡಿಸುತ್ತಿದೆ. ಫಲಿತಾಂಶ ಮಾತ್ರ ಶೂನ್ಯ. ಏಕೆಂದರೆ, ಅಧಿಕಾರಿಗಳು ಚಾಪೆ ಕೆಳಗೆ ನುಗ್ಗಿದರೆ, ಜನ ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.
ಅಂಗಡಿ ಮುಂದೆ ನಿಲ್ಲುತ್ತಿದ್ದಂತೆ ಎದುರಿಗೆ “ಬಿಬಿಎಂಪಿ ಆದೇಶದ ಮೇರೆಗೆ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ’ ಎಂಬ ಸಂದೇಶ ಕಾಣುತ್ತದೆ. ಆದರೆ, ಅದೇ ಅಂಗಡಿಯ ಗಲ್ಲಾಪೆಟ್ಟಿಗೆ ಬುಡದಲ್ಲಿ, ಗೋದಾಮುಗಳಲ್ಲಿ, ಗ್ರಾಹಕರ ಜೇಬುಗಳಲ್ಲಿ, ಮನೆಗಳಲ್ಲಿ ಪ್ಲಾಸ್ಟಿಕ್ ಭೂತ ಇರುತ್ತದೆ. ಬೆಳಗಾದರೆ ಬರುವ ಕಸದ ವಾಹನದಲ್ಲಿ ಕಾಣುವ ಪ್ಲಾಸ್ಟಿಕ್ ರಾಶಿಯೇ ಇದಕ್ಕೆ ಸಾಕ್ಷಿ. ಪ್ಲಾಸ್ಟಿಕ್‌ಗೆ ಪರ್ಯಾಯ ಸೃಷ್ಟಿಯಾಗದೆ ಇರುವುದರಿಂದ ಇದರ ಬಳಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂಬ ವಾದ ಒಂದೆಡೆಯಾದರೆ, ಇದು ಸೃಷ್ಟಿಸುವ ಅವಾಂತರದ ಬಗ್ಗೆ ಅರಿವಿನ ಕೊರತೆಯೂ ಮತ್ತೂಂದು ಕಾರಣ ಎನ್ನುತ್ತಾರೆ ತಜ್ಞರು.
ಪ್ಲಾಸ್ಟಿಕ್ ನಿಷೇಧದ ಕಾರ್ಯಾಚರಣೆಯನ್ನು ಪಾಲಿಕೆ ಪ್ರಾರಂಭಿಸಿದ ವೇಳೆ ನೋಡುವುದಕ್ಕೆ ಪೇಪರ್‌ನಿಂದ ತಯಾರಾದಂತೆ ಕಾಣಿಸುವ, ಆದರೆ ಪ್ಲಾಸ್ಟಿಕ್ ಅಂಶದಿಂದ ಕೂಡಿರುವ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿರುವುದು ಬೆಳಕಿಗೆಬಂದಿದೆ. ಇದು ಪಾಲಿಕೆಯ ಅಧಿಕಾರಿಗಳನ್ನೂ ಗೊಂದಲಕ್ಕೀಡುಮಾಡಿದೆ. ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆ ವೇಳೆ ಯಶವಂತಪುರ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಪೇಪರ್ ಲೋಟಗಳ ಮೇಲೂ ಪ್ಲಾಸ್ಟಿಕ್‌ನ ತೆಳುವಾದ ಲೇಪನವಿರುವ ಸಂಶಯ ವ್ಯಕ್ತವಾಗಿತ್ತು. ಹೀಗಾಗಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ವಸ್ತುಗಳು ಪ್ಲಾಸ್ಟಿಕ್ ಅಂಶದಿಂದ ಕೂಡಿರುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ವೇಳೆ ಅದನ್ನು ಹರಿಯುವುದು ಮತ್ತು ಬೆಂಕಿಗೆ ಹಾಕಬೇಕಾಯಿತು!
ಸಂಸ್ಕರಣೆಗೆ ನೆರವಾಗಬೇಕು: ಪ್ಲಾಸ್ಟಿಕ್ ಸಂಸ್ಕರಣೆಗೆ ಹಲವು ತೊಡಕುಗಳು ಉಂಟಾಗುತ್ತಿವೆ ಎನ್ನುತ್ತಾರೆ ರಾಜ್ಯ ಪ್ಲಾಸ್ಟಿಕ್ ಸಂಘದ ಕಾರ್ಯದರ್ಶಿ ಸುರೇಶ್ ಸಾಗರ. ಸೂಕ್ತ ನಿರ್ವಹಣೆ ವ್ಯವಸ್ಥೆ ಇಲ್ಲದ ಕಾರಣ, ಪ್ಲಾಸ್ಟಿಕ್ ಮರುಬಳಕೆ ಕಗ್ಗಂಟಾಗಿದೆ. ಸಂಸ್ಕರಣೆ ಮಾಡುವ ಮುನ್ನ ಬಳಸಿದ ಪ್ಲಾಸ್ಟಿಕ್ ಶುಚಿಗೊಳಿಸಬೇಕಾಗುತ್ತದೆ. ತೊಳೆದ ಕೊಳಚೆ ನೀರನ್ನು ಶುದ್ಧಿಗೊಳಿಸಲು ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಅವಶ್ಯಕತೆ ಇದೆ. ಈ ವ್ಯವಸ್ಥೆ ಇಲ್ಲದಿದ್ದರೆ ಮಂಡಳಿ ನೋಟಿಸ್ ನೀಡಿ, ದಂಡ ವಿಧಿಸುತ್ತದೆ. ಎಸ್‌ಟಿಪಿ ಅಳವಡಿಸಿಕೊಳ್ಳಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಕಾರ ನೀಡಬೇಕು. ಸರ್ಕಾರ ಪ್ಲಾಸ್ಟಿಕ್ ಸಂಸ್ಕರಣೆಗೆ ಸುಧಾರಿತ ತಂತ್ರಜ್ಞಾನ ಮತ್ತು ಯಂತ್ರಗಳನ್ನು ಒದಗಿಸಬೇಕು. ಪ್ಲಾಸ್ಟಿಕ್ ಮರುಬಳಕೆ ಮಾಡುವ ಸಂಸ್ಥೆಗಳಿಗೆ ಸಬ್ಸಿಡಿ ನೀಡಬೇಕು ಎನ್ನುವುದು ಅವರ ವಾದ.
ಕಿರುಕುಳವೇ ಹೆಚ್ಚು: “ರಾಜಾನುಕುಂಟೆಯಲ್ಲಿ ಪ್ಲಾಸ್ಟಿಕ್‌ಪಾರ್ಕ್ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸಲ್ಲಿಸಿತ್ತು. ಆದರೆ, ಈ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ. ಪ್ಲಾಸ್ಟಿಕ್ ಸಂಸ್ಕರಣೆ ಮಾಡುವವರಿಗೆ ಪ್ರತ್ಯೇಕ ಜಾಗ ನೀಡಿದರೆ ಮತ್ತು ಕ್ಲಸ್ಟರ್ ರೂಪಿಸಿಕೊಟ್ಟರೆ ಪ್ಲಾಸ್ಟಿಕ್ ಮರುಬಳಕೆ ಸುಲಭವಾಗಲಿದೆ. ಪ್ಲಾಸ್ಟಿಕ್ ಮರುಬಳಕೆ ಮಾಡುವ ಸಂಸ್ಥೆಗಳಿಗೆ ನೆರವಿಗಿಂತ ವಿವಿಧ ಇಲಾಖೆಗಳ ಕಿರುಕುಳವೇ ಹೆಚ್ಚಾಗಿದೆ,’ ಎಂದು ಸುರೇಶ್ ಬೇಸರ ವ್ಯಕ್ತಪಡಿಸುತ್ತಾರೆ.
ಸಾಂಬಾರು ಕಟ್ಟುವುದಕ್ಕೆ ಸಮಸ್ಯೆ: ಪ್ಲಾಸ್ಟಿಕ್ ನಿಷೇಧದ ನಂತರವೂ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳ ಬಳಕೆ ನಿಂತಿಲ್ಲ. “ಪ್ಲಾಸ್ಟಿಕ್ ಬಳಸಲಿಲ್ಲ ಎಂದರೆ, ಸಾಂಬಾರು, ಸಾಗು ಮತ್ತು ಚಟ್ನಿಯಂತಹ ದ್ರವ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದು ಹೇಗೆ’ ಎಂದು ಇದಕ್ಕೆ ಹೋಟೆಲ್ ಮಾಲಿಕರು ಪ್ರಶ್ನೆ ಮಾಡುತ್ತಾರೆ. ಹೋಟೆಲ್‌ಗಳ ಮಾಲಿಕರು ಪಾರ್ಸೆಲ್ ನೀಡುವುದಿಲ್ಲ ಎಂದು ಗ್ರಾಹಕರಿಗೆ ಹೇಳಿ ತಮ್ಮ ಆದಾಯ ಕಳೆದುಕೊಳ್ಳಲು ಸಿದ್ಧರಿಲ್ಲ. ಅದೇ ರೀತಿ, ಸಾರ್ವಜನಿಕರು ತಮ್ಮ ಮನೆಗಳಿಂದ ಡಬ್ಬಗಳನ್ನು ತೆಗೆದುಕೊಂಡು ಹೋಗುವುದಕ್ಕೂ ತಯಾರಿಲ್ಲ. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳದ್ದೂ ಇದೇ ಆರೋಪ. ಗ್ರಾಹಕರಿಗೆ ಪ್ಲಾಸ್ಟಿಕ್ ಕೈಚೀಲ ಇಲ್ಲ ಎಂದರೆ ಬೇರೆಯವರ ಬಳಿ ವ್ಯಾಪಾರ ಮಾಡುತ್ತಾರೆ ಎನ್ನುತ್ತಾರೆ ವ್ಯಾಪಾರಿಗಳು. ಈ ಹಗ್ಗಜಗ್ಗಾಟದಿಂದ ಪ್ಲಾಸ್ಟಿಕ್‌ಗೆ ಕಡಿವಾಣ ಬೀಳುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಕೈಚೆಲ್ಲಿದ ಮಾಲಿನ್ಯ ನಿಯಂತ್ರಣ ಮಂಡಳಿ: 2016ರ ನಂತರ ಪ್ಲಾಸ್ಟಿಕ್ ಉತ್ಪಾದನಾ ಕೇಂದ್ರಗಳ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇದುವರೆಗೆ ರಾಜ್ಯದ ಪ್ರಮುಖ ನಗರಗಳಲ್ಲಿನ 96 ಪ್ಲಾಸ್ಟಿಕ್ ಉತ್ಪಾದನಾ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಇವುಗಳಲ್ಲಿ 46ಕ್ಕೂ ಹೆಚ್ಚು ಕಂಪನಿಗಳನ್ನು ಶಾಶ್ವತವಾಗಿ ಮುಚ್ಚಲು ಸೂಚಿಸಲಾಗಿದೆ.
ಇದರಲ್ಲಿ ಬೆಂಗಳೂರಿನ 37 ಕಂಪನಿಗಳಿವೆ. ಆದರೆ, ಪ್ಲಾಸ್ಟಿಕ್ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಯುವುದಕ್ಕೆ ಮಂಡಳಿಗೂ ಸಾಧ್ಯವಾಗುತ್ತಿಲ್ಲ. ಹೊರ ರಾಜ್ಯಗಳಿಂದಲೂ ಪ್ಲಾಸ್ಟಿಕ್ ರಾಜ್ಯಕ್ಕೆ ಬರುತ್ತಿದೆ ಇದನ್ನು ತಡೆಯಬೇಕಾದರೆ ದೇಶದೆಲ್ಲೆಡೆ ಪ್ಲಾಸ್ಟಿಕ್ ನಿಷೇಧಿಸಬೇಕು ಎನ್ನುತ್ತಾರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು. ಈ ಮಧ್ಯೆ ಪ್ಲಾಸ್ಟಿಕ್ ತಯಾರಿಕೆ ಕೂಡ ಒಂದು ದಂಧೆಯಾಗಿದೆ. ರದ್ದಾದ ಕಂಪನಿಗಳು ರಾತ್ರಿ ವೇಳೆ ಹಾಗೂ ಇನ್ನು ಕೆಲವರು ಮನೆಗಳಲ್ಲೇ ಪ್ಲಾಸ್ಟಿಕ್ ಕವರ್ ಮತ್ತಿತರ ಉತ್ಪನ್ನ ತಯಾರಿಸುತ್ತಿರುವುದು ಅಧಿಕಾರಿಗಳಿಗೆ ಮತ್ತೂಂದು ತಲೆನೋವಾಗಿ ಪರಿಣಮಿಸಿದೆ.
ದಂಡ, ನೋಟಿಸ್ ಸಾಕೇ?: ಜುಲೈ 15ರಿಂದ ಪಾಲಿಕೆ ನಡೆಸಿರುವ ಕಾರ್ಯಾಚರಣೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸಿದ ಮತ್ತು ಬಳಸುವುದಕ್ಕೆ ಉತ್ತೇಜನ ನೀಡಿದ ಆರೋಪದ ಮೇಲೆ 987 ಜನರಿಗೆ ನೋಟಿಸ್ ನೀಡಲಾಗಿದೆ. ನೂರಾರು ಜನರಿಗೆ ದಂಡವನ್ನೂ ವಿಧಿಸಲಾಗಿದೆ. ಕಳೆದ ಐದು ವರ್ಷಗಳಿಂದಲೂ ಈ ಪ್ರಕ್ರಿಯೆ ನಡೆಯುತ್ತಲೇ ಇದೆ. ಆದರೆ, ಇಲ್ಲಿವರೆಗೆ ಒಬ್ಬರಿಗೂ ಕಾನೂನಿನಡಿ ಶಿಕ್ಷೆಯಾಗಿಲ್ಲ. ಕೆಲವೆಡೆ ದಂಡವನ್ನೂ ನಿಯಮಾನುಸಾರ ವಿಧಿಸುತ್ತಿಲ್ಲ ಎನ್ನುವ ಆರೋಪವೂ ಇದೆ.
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಪಾಲಿಕೆ ತೆಗೆದುಕೊಂಡ ಕ್ರಮಗಳು
-ನಗರದ ಎಂಟು ವಲಯಗಳಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಗಳಿಂದ ಸಗಟು ವ್ಯಾಪಾರಿಗಳು, ಅಂಗಡಿಗಳು, ಮಳಿಗೆಗಗಳು, ಹೋಟಲ್ ಮತ್ತು ಪ್ಲಾಸ್ಟಿಕ್ ಉತ್ಪಾದಿಸುವ ಉದ್ದಿಮೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಪ್ಲಾಸ್ಟಿಕ್ ಜಪ್ತಿ ಮಾಡಿ ದಂಡ ವಿಧಿಸಲಾಗುತ್ತಿದೆ.
-ಎಲ್ಲ ಶಾಲಾ ಮುಖ್ಯಸ್ಥರ ಸಭೆ ಕರೆದು ಅವರೊಂದಿಗೆ ಸಮಾಲೋಚನೆ ನಡೆಸಿ, ಶಾಲಾ ಮಕ್ಕಳ ಮೂಲಕ ಪರಿಸರ ಜಾಗೃತಿ ಮೂಡಿಸುವ ಬಗ್ಗೆ ತಿಳಿಸಲಾಗುತ್ತಿದೆ.
-ಮೇಯರ್ ಗಂಗಾಂಬಿಕೆ ಅವರು ಇತ್ತೀಚಿಗೆ ಶಾಲಾ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಗಳು ಯಶಸ್ವಿಯಾಗಿವೆ. ಇದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿದರೆ, ಅವರು ಇತರರಿಗೂ ತಿಳಿಹೇಳುತ್ತಾರೆ ಎನ್ನುವ ಉದ್ದೇಶದಿಂದ ಈ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
-ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಹೀರಾತಿನ ಮೂಲಕ ಜಾಗೃತಿ.
-ಪ್ಲಾಸ್ಟಿಕ್ ಕವರ್‌ಗಳಿಗೆ ಪರ್ಯಾಯವಾಗಿ ಪಾಲಿಕೆಯಿಂದಲೇ ಪೇಪರ್ ಬ್ಯಾಗ್ ನೀಡಲು ಚಿಂತನೆ.
ಸಂಘಸಂಸ್ಥೆ, ವಿದ್ಯಾರ್ಥಿಗಳಿಂದಲೂ ಜಾಗೃತಿ: ನಿಷೇಧಿತ ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಹಾಗೂ ಬಳಕೆ ತಡೆಯುವ ನಿಟ್ಟಿನಲ್ಲಿ ಒಂದೆಡೆ ಬಿಬಿಎಂಪಿ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೊಂದೆಡೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಕೂಡ ಬಿಬಿಎಂಪಿ ಜತೆ ಕೈಜೋಡಿಸಿದ್ದು, ಪ್ಲಾಸ್ಟಿಕ್ ಕವರ್‌ಗಳನ್ನು ಬಳಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಲೇಜೊಂದರ ಎನ್‌ಸಿಸಿ ಕೆಡೇಟ್‌ಗಳು, ತಾವೇ ಪೇಪರ್ ಬ್ಯಾಗ್‌ಗಳನ್ನು ತಯಾರಿಸಿ, ಶೇಶಾದ್ರಿ ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ವಿತರಿಸಿದರು. ಹೀಗೇ ಹಲವು ಸಂಘ ಸಂಸ್ಥೆಗಳ ಸದಸ್ಯರು ಸಹ ಪೇಪರ್ ಹಾಗೂ ಬಟ್ಟೆಯಿಂದ ಮಾಡಿದ ಬ್ಯಾಗ್‌ಗಳನ್ನು ಉಚಿತವಾಗಿ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
2015ರಿಂದ 2019ರ ಮೇವರೆಗೆ ಪಾಲಿಕೆ ಜಪ್ತಿ ಮಾಡಿರುವ ಪ್ಲಾಸ್ಟಿಕ್ ಮತ್ತು ವಿಧಿಸಿದ ದಂಡ
ವಲಯ ಜಪ್ತಿ ಪ್ರಮಾಣ ದಂಡ
ದಕ್ಷಿಣ 25,819 4,59,830
ಪಶ್ಚಿಮ 32,689 6,55,5,700
ಪೂರ್ವ 29,435 5,38,700
ಬೊಮ್ಮನಹಳ್ಳಿ 71051 3,56,2,727
ರಾಜರಾಜೇಶ್ವರಿ ನಗರ 5,232 10,58,775
ಮಹದೇವಪುರ 6,736 16,67,650
ದಾಸರ ಹಳ್ಳಿ 39,923 13,42,700
ಯಲಹಂಕ 25,146 3,87,8,506
ಒಟ್ಟು 23,6034 27,56,588
ಪ್ಲಾಸ್ಟಿಕ್ ನಿಷೇಧಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಇದರ ಭಾಗವಾಗಿ ಜುಲೈ 15ರಿಂದ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಆಂದೋಲನವನ್ನೇ ಹಮ್ಮಿಕೊಳ್ಳಲಾಗಿದೆ. ಕಳೆದ ಒಂದು ವಾರದಲ್ಲಿ 9,380 ಕೆಜಿ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿ, 19.14 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ 4,543 ಅಂಗಡಿಗಳು, 2,512 ಬೀದಿಬದಿ ವ್ಯಾಪಾಸ್ಥರಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದು, 987ಜನರಿಗೆ ನೋಟೀಸ್ ನೀಡಲಾಗಿದೆ.
ಜು.15ರಿಂದ 20ರವರೆಗೆ ನಡೆದ ಕಾರ್ಯಾಚರಣೆ ವಿವರ
ವಲಯ ಜಪ್ತಿ ಪ್ರಮಾಣ ದಂಡ
ದಕ್ಷಿಣ 768 41,8000
ಪಶ್ಚಿಮ 1,445 2,86,600
ಪೂರ್ವ 1,427 3,67,700
ಬೊಮ್ಮನಹಳ್ಳಿ 376 2,64,100
ರಾಜರಾಜೇಶ್ವರಿ ನಗರ 2,944 1,84,800
ಮಹದೇವಪುರ 794 1,51,600
ದಾಸರಹಳ್ಳಿ 1,305 1,59,600
ಯಲಹಂಕ 321 81,630
ಒಟ್ಟು 9,380 19,14,030
ಪ್ಲಾಸ್ಟಿಕ್ ಬಳಸದಂತೆ ಮಕ್ಕಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಕವರ್‌ಗಳ ಬದಲಿಗೆ ಬಟ್ಟೆ ಚೀಲವನ್ನು ಉಚಿತವಾಗಿ ನೀಡುವ ಬಗ್ಗೆ ಚಿಂತನೆ ನಡೆದಿದೆ.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್
ನಿಷೇಧಿತ ಪ್ಲಾಸ್ಟಿಕ್ ಬಳಕೆಯ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
-ಮನೋರಂಜನ್ ಹೆಗ್ಡೆ, ಬಿಬಿಎಂಪಿ ಆರೋಗ್ಯಾಧಿಕಾರಿ
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.