ಕಟ್ಟಡ ಹತ್ತಿಳಿದು ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು
Team Udayavani, Jan 17, 2018, 12:06 PM IST
ಬೆಂಗಳೂರು: ಆತ ಹೆಣ್ಣು ಮಕ್ಕಳ ಕತ್ತಿಗೆ ಕೈ ಹಾಕಿ ಸರ ಕಿತ್ತೂಯ್ಯುತ್ತಿದ್ದ ಕಳ್ಳ. ಬಹಳ ದಿನಗಳಿಂದ ಕೈಗೆ ಸಿಗದೆ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ. ಆದರೆ ಮಂಗಳವಾರ ಮಹಿಳೆಯೊಬ್ಬರ ಸರ ಕದಿಯಲು ವಿಫಲಯತ್ನ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದ. ಆದರೆ ಆತನನ್ನು ಇಬ್ಬರು ಪೊಲೀಸ್ ಪೇದೆಗಳು ಹಿಂಬಾಲಿಸಿದರು.
ಆತ ಕಟ್ಟಡ ಏರಿದ. ಪೊಲೀಸರೂ ಕಟ್ಟಡ ಏರಿದರು. ಆತ ಒಂದರಿಂದೊಂದು ಕಟ್ಟಡಕ್ಕೆ ಜಿಗಿದು ತಪ್ಪಿಸಿಕೊಳ್ಳಲು ಶತಪ್ರಯತ್ನ ನಡೆಸಿದರೆ, ಛಲಬಿಡದ ಪೊಲೀಸರೂ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಕಡೆಗೂ ಆತನನ್ನ ಹಿಡಿದೇಬಿಟ್ಟರು.
ಸಾಕ್ಷಾತ್ ಸಿನಿಮಾದ ದೃಶ್ಯದಂತೆ ತೋರುವ ಈ ಘಟನೆ ಮಂಗಮ್ಮನಪಾಳ್ಯದಲ್ಲಿ ಮಂಗಳವಾರ ನಡೆದಿದೆ. ಸರ ಕಳವು ಮಾಡಿ ಮಾರುತಿ ಓಮ್ನಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಇಬ್ಬರು ಪೇದೆಗಳು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಸೆರೆ ಹಿಡಿದಿದ್ದಾರೆ. ಆನೇಕಲ್ ನಿವಾಸಿ ಸೋಮ ಅಲಿಯಾಸ್ ಸೋಮಶೇಖರ್ ಬಂಧಿತ.
ಪ್ರಾಣದ ಹಂಗು ತೊರೆದು ಆರೋಪಿಯನ್ನು ಬಂಧಿಸಿದ ಪೇದೆ ಮಹೇಶ್ ನಾಯಕ್ ಹಾಗೂ ಬಸವರಾಜುಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಗೆ ಮೆಚ್ಚಿ ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಅವರು ಇಬ್ಬರೂ ಪೇದೆಗಳಿಗೆ ತಲಾ 5 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಮಡಿವಾಳದ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್, ಹಣದಾಸೆಗೆ ಬಿದ್ದು ಕಳ್ಳತನಕ್ಕೆ ಇಳಿದಿದ್ದ. ತನ್ನ ಕೃತ್ಯಕ್ಕಾಗಿ 12 ದಿನಗಳ ಹಿಂದೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮಾರುತಿ ಓಮ್ನಿ ಕಾರು ಕಳವು ಮಾಡಿದ್ದು, ಎರಡು ದಿನಗಳ ಹಿಂದಷ್ಟೇ ಇದೇ ಕಾರಿನಲ್ಲಿ ಬಂದು ಐಪಿಎಸ್ ಕಾಲೋನಿಯಲ್ಲಿ ಮಹಿಳೆಯೊಬ್ಬರ ಸರ ಕಳವು ಮಾಡಿ ಪರಾರಿಯಾಗಿದ್ದ.
ಈ ಮಾಹಿತಿಯನ್ನಾಧರಿಸಿ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುವ ಓಮ್ನಿ ಕಾರುಗಳ ತಪಾಸಣೆಯಲ್ಲಿ ತೊಡಗಿದ್ದರು. ಜತೆಗೆ ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ನಗರಾದ್ಯಂತ ನಾಕಾಬಂದಿ ಹಾಕುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೂಚಿಸಿದ್ದರು. ಅದರಂತೆ ಆಗ್ನೇಯ ವಿಭಾಗದ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಎಲ್ಲೆಡೆ ನಾಕಾಬಂದಿ ಹಾಕಿ ಗಸ್ತು ತಿರುಗುತ್ತಿದ್ದರು.
ಇದೇ ವೇಳೆ ಮಂಗಳವಾರ ನಸುಕಿನ 5 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರ ಪರ್ಸ್ ಕಳವು ಮಾಡಿ ಪರಾರಿಯಾಗಿದ್ದಲ್ಲದೇ, ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದ ಮಹಿಳೆಯೊಬ್ಬರ ಸರ ಕಳುವಿಗೆ ಯತ್ನಿಸಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ಆರೋಪಿಯ ಈ ಕೃತ್ಯವನ್ನು ಸ್ಥಳೀಯರು ಗಸ್ತು ಪೊಲೀಸ್ ಹಾಗೂ “ನಮ್ಮ 100′ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಈ ಮಾಹಿತಿಯಿಂದ ಎಚ್ಚೆತ್ತ ಪೊಲೀಸರು ವಾಕಿಟಾಕಿ ಮೂಲಕ ಎಲ್ಲೆಡೆ ನಾಕಾಬಂದಿ ಹಾಕಿ ಓಮ್ನಿ ಕಾರುಗಳನ್ನು ತಡೆದು ತಪಾಸಣೆ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡ ಆರೋಪಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದು, ಅನುಮಾನಗೊಂಡ ಪೊಲೀಸರು ಬೈಕ್ ಹಾಗೂ ಕಾರಿನಲ್ಲಿ ಆತನನ್ನು ಹಿಂಬಾಲಿಸಿ ಹಿಡಿದಿದ್ದಾರೆ.
ಸಿನಿಮೀಯ ರೀತಿಯಲ್ಲಿ ಬಂಧನ: ಆರೋಪಿ ಸೋಮಶೇಖರ್, ಗಾಬರಿಗೊಂಡು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿಕೊಂಡು ಮಂಗಮ್ಮನಪಾಳ್ಯ ಕಡೆ ಕಾರು ತಿರುಗಿಸಿದ್ದಾನೆ. ಇದೇ ವೇಳೆ ಪೇದೆಗಳಾದ ಮಹೇಶ್ ನಾಯಕ್ ಹಾಗೂ ಬಸವರಾಜು ಕೂಡ ಆರೋಪಿಯನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದರು. ಮಂಗಮ್ಮನಪಾಳ್ಯದಲ್ಲಿ ಆರೋಪಿ ಕಿರಿದಾದ ರಸ್ತೆಗೆ ನುಗ್ಗಿದ್ದಾನೆ.
ಆದರೆ, ರಸ್ತೆ ಕೊನೆಯಲ್ಲಿ ಬೇರೆಡೆ ಹೋಗಲು ಜಾಗವಿಲ್ಲದೇ, ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಕಟ್ಟಡ ಒಂದರ ಒಳಗೆ ನುಗ್ಗಿದ್ದು, ಅಲ್ಲಿಂದ ನೆಗೆದು ಮತ್ತೂಂದು ಕಟ್ಟಡ ಪ್ರವೇಶಿಸಿದ್ದಾನೆ. ತನ್ನನ್ನೇ ಹಿಂಬಾಲಿಸಿದ ಪೊಲೀಸ್ ಸಿಬ್ಬಂದಿ ಕಂಡು ಗಾಬರಿಗೊಂಡ ಆರೋಪಿ, ಎರಡನೇ ಮಹಡಿಯಿಂದ ಶೀಟ್ ಮನೆಯೊಂದರ ಮೇಲೆ ಜಿಗಿದಿದ್ದಾನೆ. ಪರಿಣಾಮ ಮನೆಯ ಮೂರು ಶೀಟ್‌ಗಳು ಪುಡಿಯಾಗಿವೆ.
ಈ ವೇಳೆ ಆರೋಪಿಯನ್ನು ಹಿಂಬಾಲಿಸುತ್ತಿದ್ದ ಇಬ್ಬರು ಪೇದೆಗಳು ಕೂಡ ಮನೆಯೊಳಗೆ ಹಾರಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಇತರೆ ಸಿಬ್ಬಂದಿ ಮನೆಯ ಬಾಗಿಲು ತೆರೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೇದೆ ಮಹೇಶ್ ನಾಯಕ್‌ಗೆ ಎಡಗೈ ಬೆರಳು ಹಾಗೂ ಬಸವಾರಾಜು ಬೆನ್ನಿಗೆ ಪೆಟ್ಟಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ವಿವರಿಸಿದರು.
ಶೀಟ್ ಹಾಕಿಸಿದ ಪೊಲೀಸರು: ಸರಗಳ್ಳನನ್ನು ಹಿಡಿಯುವ ಸಂದರ್ಭದಲ್ಲಿ ರಾಜೇಂದ್ರ ಹಾಗೂ ಸಾವಿತ್ರಮ್ಮ ಅವರ ಮನೆಯ ಶೀಟ್‌ಗಳು ಹಾನಿಗೀಡಾಗಿದ್ದರಿಂದ ಮನೆಯವರು ಶೀಟ್‌ಗಳನ್ನು ಹಾಕಿಸಿಕೊಂಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲೇ ಪೊಲೀಸರೇ ಮನೆಗೆ ಶೀಟ್‌ಗಳನ್ನು ಹಾಕಿಸಿ ದುರಸ್ಥಿಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.