ಪೊಲೀಸ್ ಬಿಗಿ ಭದ್ರತೆ ನಡುವೆ ನಡೆದ ಪಿಯು ಪರೀಕ್ಷೆ
Team Udayavani, Mar 10, 2017, 3:45 AM IST
ಬೆಂಗಳೂರು: ಭಯ ಆತಂಕದೊಂದಿಗೆ ಪ್ರಾರಂಭವಾದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಐವರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಉಳಿದಂತೆ ರಾಜ್ಯದೆಲ್ಲೆಡೆ ಪರೀಕ್ಷೆಗೆ ಬಿಗಿ ಭದ್ರತೆ ಏರ್ಪಡಿಲಾಗಿತ್ತು.
ಈ ಬಾರಿ ತಾಲೂಕು ಖಜಾನೆಗಳ ಬದಲು, ಜಿಲ್ಲಾ ಖಜಾನೆಯಿಂದಲೇ ಆಯಾ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಪ್ರಶ್ನೆ ಪತ್ರಿಕೆಯನ್ನು ರವಾನೆ ಮಾಡಲಾಗಿದ್ದು ಸರಿಯಾದ ಸಮಯಕ್ಕೆ ಪತ್ರಿಕೆಯನ್ನು ತಲುಪಿಸಲಾಯಿತು. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಸಕಾಲಕ್ಕೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳು ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ಬರೆದರು. ಮೊದಲ ದಿನ ಗುರುವಾರ ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆಯಿತು.
ಬೆಂಗಳೂರಿನ ವಿವಿಧ ಪಪೂ ಕಾಲೇಜಿನ ಉಪನ್ಯಾಸಕರು ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕಾಲೇಜಿನಲ್ಲಿ ಕಪ್ಪು ಪಟ್ಟಿ ಧರಿಸಿ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪರೀಕ್ಷಾ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ ಈ ಬಾರಿ ಎಲ್ಲೆಡೆ ಪರೀಕ್ಷಾ ಕೇಂದ್ರಗಳಿಗೆ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.ಪರೀಕ್ಷಾ ಕೇಂದ್ರಗಳ ಮುಂದೆ, ಕಾಲೇಜಿನ ಗೇಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಪ್ರವೇಶ ಸಿಗದೇ ಕಣ್ಣೀರಿಟ್ಟರು: ಹಾಜರಾತಿ ಕೊರತೆ ಹಿನ್ನೆಲೆ ಪ್ರವೇಶ ಪತ್ರ ನಿರಾಕರಿಸಿದ್ದ ಬೆಂಗಳೂರಿನ ಶೇಷಾದ್ರಿಪುರಂ ಮತ್ತು
ಕೋರಮಂಗಲ ಪಿಯು ಕಾಲೇಜಿನ ಮುಂದೆ ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆಯಲು ಕೊನೆ ಕ್ಷಣದವರೆಗೂ ಪ್ರಯ ತ್ನಿಸಿದರು.
ಅಂಗಲಾಚಿ ಬೇಡಿದರೂ ಪ್ರಯೊಜನ ವಾಗಲಿಲ್ಲ. ಇದೇ ರೀತಿ ಹಾವೇರಿಯಲ್ಲಿಯೂ ಹಾಜರಾತಿ ಕೊರತೆಯಿಂದ 9 ವಿದ್ಯಾರ್ಥಿಗಳು ಪ್ರವೇಶ ಸಿಗದೇ ಪರಿಕ್ಷಾ ಕೇಂದ್ರದ ಹೊರಗೆ ಕಣ್ಣಿರಿಟ್ಟರು.ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಕಲಬುರಗಿಯಲ್ಲಿ ಮೂವರು ಮತ್ತು ದಾವಣಗೆರೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
ಉತ್ತರ ಪತ್ರಿಕೆಯೊಂದಿಗೆ ವಿದ್ಯಾರ್ಥಿ ಪರಾರಿ!: ದಾವಣಗೆರೆಯ ಹರಪನಹಳ್ಳಿ ದ್ವಿತೀಯ ಪಿಯು ವಿದ್ಯಾರ್ಥಿ ಬಿ.ಸುಹೇಲ್ ಪರೀûಾ ಸಮಯ ಮುಗಿಯುವ ಮುನ್ನವೇ ಉತ್ತರ ಪತ್ರಿಕೆಯೊಂದಿಗೆ ಪರಾರಿಯಾಗಿ ಕುತೂಹಲ ಮೂಡಿಸಿದ್ದಾನೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಹಾಗೂ ಇತರೆ ಕೆಲ ಅಧಿಕಾರಗಳ ತಂಡ ರಾಜಾಜಿನಗರ ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಲಾಗಿರುವ ಪರೀಕ್ಷಾ ಕ್ರಮಗಳು, ಭದ್ರತೆಗಳನ್ನು ಪರಿಶೀಲಿಸಿದರು.
ಐವರು ವಿದ್ಯಾರ್ಥಿಗಳು ಡಿಬಾರ್ ಆಗಿರುವುದು ಬಿಟ್ಟರೆ ರಾಜ್ಯಾದ್ಯಂತ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಎಲ್ಲೆಡೆ ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳು ತಲುಪಿವೆ. ಯಾವುದೇ ಗೊಂದಲ, ಅಕ್ರಮ ನಡೆದಿಲ್ಲ. ಈ ಬಾರಿಯ ಪರೀಕ್ಷೆಗೆ ಅನುಸರಿಸಲಾಗಿರುವ “ಕರ್ನಾಟಕ ಸುರಕ್ಷಾ ಪರೀಕ್ಷಾ ವ್ಯವಸ್ಥೆ’ ತುಂಬಾ ಉಪಯೋಗಿಯಾಗಿದೆ.
– ಸಿ. ಶಿಖಾ,
ಪಪೂ ಶಿಕ್ಷಣ ಇಲಾಖೆ ನಿರ್ದೇಶಕಿ
ವಿದ್ಯಾರ್ಥಿ ಬಿ.ಸುಹೇಲ್ ಉತ್ತರ ಪತ್ರಿಕೆಯೊಂದಿಗೆ ಪರಾರಿಯಾಗಿರುವುದರಿಂದ ಆತನನ್ನು ಡಿಬಾರ್ ಮಾಡಲಾಗಿದೆ. ಕನಿಷ್ಠ 3 ವರ್ಷಗಳ ಕಾಲ ಆತ ಪರೀಕ್ಷೆಗೆ ಕೂರುವಂತಿಲ್ಲ. ವಿದ್ಯಾರ್ಥಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
– ವಿಜಯಾನಂದ, ಜಿಲ್ಲಾ ಉಪ
ನಿರ್ದೇಶಕ, ಪಪೂ ಶಿಕ್ಷಣ ಇಲಾಖೆ,ದಾವಣಗೆರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.