ಮಾಲಿನ್ಯ ಇಲ್ಲಿ ನಿತ್ಯ-ನಿರಂತರ
Team Udayavani, Nov 4, 2018, 11:47 AM IST
ಬೆಂಗಳೂರು: ರಾಜ್ಯದ ಇತರೆ ನಗರಗಳು ವರ್ಷದ ಮೂರು ದಿನ ಮಾತ್ರ ಹೊಗೆಯಲ್ಲಿ ಮುಳುಗಿರುತ್ತವೆ. ಆದರೆ, ಉದ್ಯಾನ ನಗರಿ ವರ್ಷ ಪೂರ್ತಿ ಹೊಗೆಯಲ್ಲೇ ಮಿಂದೇಳುತ್ತದೆ! ಹೌದು, ಪ್ರಮುಖ ನಗರಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಸುಡುವ ಪಟಾಕಿಯಿಂದ ದೂಳಿನ ಪ್ರಮಾಣ ದುಪ್ಪಟ್ಟಾಗಿ ವಾಯುಮಾಲಿನ್ಯ ಉಂಟಾಗುತ್ತದೆ.
ಬೆಂಗಳೂರಿನ ಐದು ಪ್ರಮುಖ ಪ್ರದೇಶಗಳಲ್ಲಿ ಹೆಚ್ಚು-ಕಡಿಮೆ ವರ್ಷದ 365 ದಿನಗಳೂ ಇದೇ ಪ್ರಮಾಣದ ಹೊಗೆ ಆವರಿಸಿರುತ್ತದೆ. ಆದರೆ, ಇದಕ್ಕೆ ಕಾರಣ ದೀಪಾವಳಿಯ ಪಟಾಕಿ ಅಲ್ಲ; ನಿತ್ಯ ರಸ್ತೆಯಲ್ಲಿ ತುಂಬಿತುಳುಕುವ ವಾಹನಗಳು. ಸೆಂಟ್ರಲ್ ಸಿಲ್ಕ್ ಬೋರ್ಡ್, ಐಟಿಪಿಎಲ್, ವಿಕ್ಟೋರಿಯಾ ಆಸ್ಪತ್ರೆ, ಮೈಸೂರು ರಸ್ತೆ, ಪೀಣ್ಯ ಕೈಗಾರಿಕಾ ಪ್ರದೇಶ, ಇವು ನಗರದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿರುವ ಪ್ರದೇಶಗಳಾಗಿವೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ಮೂರು ವರ್ಷಗಳಲ್ಲಿ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಈ ಭಾಗಗಳಲ್ಲಿ ವಾಯು ಮಾಲಿನ್ಯದ ರಾಷ್ಟ್ರೀಯ ಮಟ್ಟದ ನಿಗದಿತ ಪ್ರಮಾಣಕ್ಕಿಂತ ಒಂದರಿಂದ ಒಂದೂವರೆ ಪಟ್ಟು ಹೆಚ್ಚಳ ಕಂಡುಬಂದಿದೆ.
2016-17ರಲ್ಲಿ ಕನಿಷ್ಠ ಶೇ.78ರಿಂದ ಗರಿಷ್ಠ ಶೇ.120ರವರೆಗೂ ಏರಿಕೆಯಾಗಿದೆ. ಇದು ದೀಪಾವಳಿಯಲ್ಲಿ ಉಳಿದ ಪ್ರದೇಶಗಳಲ್ಲಿ ಉಂಟಾಗುವ ವಾಯುಮಾಲಿನ್ಯಕ್ಕೆ ಸರಿಸಮವಾಗಿದೆ. ನಗರದಲ್ಲಿ ಮಿತಿಮೀರಿರುವ ವಾಹನಗಳ ವಾಯುಮಾಲಿನ್ಯಕ್ಕೆ ಇದೊಂದು ಸಣ್ಣ ಉದಾಹರಣೆ.
ಮಕ್ಕಳೇ ಟಾರ್ಗೆಟ್: ಅದರಲ್ಲೂ “ಪೀಕ್ ಅವರ್’ನಲ್ಲಿ ಅಂದರೆ ಬೆಳಿಗ್ಗೆ 8.30ರಿಂದ 10.30ರ ಅವಧಿಯಲ್ಲಿ ಈ ಪ್ರಮಾಣ ದುಪ್ಪಟ್ಟಾಗಿರುತ್ತದೆ. ಬನಶಂಕರಿ-ಮಾರತ್‌ಹಳ್ಳಿ ಮಾರ್ಗವೊಂದರಲ್ಲೇ ಉಸಿರಾಡುವಾಗ ದೇಹ ಸೇರಲ್ಪಡುವ ದೂಳಿನ ಕಣ (ಪಿಎಂ3)ಗಳು ಪ್ರತಿ ಕ್ಯೂಬಿಕ್ ಮೀಟರ್‌ಗೆ 70ರಿಂದ 800 ಮೈಕ್ರೋಗ್ರಾಂ ಆಗಿರುತ್ತದೆ.
ಈ ದೂಳಿಗೆ ಗುರಿಯಾಗುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ತೆರಳುವ ಮಕ್ಕಳು. ಇದೇ ಕಾರಣದಿಂದ ಹೆಚ್ಚು ಅನಾರೋಗ್ಯಕ್ಕೆ ಮಕ್ಕಳು ತುತ್ತಾಗುತ್ತಿದ್ದಾರೆ ಎಂದು “ಕ್ಲೈಮೇಟ್ ಟ್ರೆಂಡ್ಸ್’ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಿದೆ. ಅಜೀಂ ಪ್ರೇಮ್‌ಜಿ ಫಿಲಾಂಥಪಿಕ್ ಇನಿಷಿಯೇಟಿವ್ಸ್ ಸಂಸ್ಥೆಯು ಈ ಮಾಹಿತಿಯನ್ನು “ಉದಯವಾಣಿ’ಗೆ ನೀಡಿದೆ.
ಮುಂದಿನ ವಾರದಲ್ಲಿ ಈ ಮಾಲಿನ್ಯದ ಪ್ರಮಾಣ ಷೇರು ಸೂಚ್ಯಂಕದಂತೆ ಸರ್ರನೆ ಏರಲಿದೆ. ಏಕೆಂದರೆ, ಕೋರ್ಟ್ ಸೂಚನೆ ಸೇರಿದಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ನಡುವೆಯೂ ದೀಪಾವಳಿಗೆ ಕೋಟ್ಯಂತರ ರೂ. ಮೊತ್ತದ ಪಟಾಕಿ ಸುಡಲು ನಗರದ ಜನ ಈಗ ತುದಿಗಾಲಲ್ಲಿ ನಿಂತಿದ್ದಾರೆ.
ಮೂರ್‍ನಾಲ್ಕು ದಿನಗಳು ವಾಹನಗಳ ಅಬ್ಬರ ತಗ್ಗಬಹುದು. ಆದರೆ, ಆ ಜಾಗವನ್ನು ಪಟಾಕಿಗಳು ಆಕ್ರಮಿಸಿಕೊಳ್ಳಲಿವೆ. ಉದ್ದೇಶಿತ ಮಾರ್ಗಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುವುದರ ಜತೆಗೆ ಅವುಗಳ ವೇಗ ಮಿತಿ ಸಾಕಷ್ಟು ಕಡಿಮೆ ಆಗಿರುತ್ತದೆ. ಈ ಮಧ್ಯೆ ರಸ್ತೆ ವಿಸ್ತರಣೆ, ದುರಸ್ತಿ, ಫ್ಲೈಓವರ್ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಇದೆಲ್ಲವೂ ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿವೆ. ಅದರಲ್ಲೂ ಆಸ್ಪತ್ರೆ ಆಸುಪಾಸುಗಳಲ್ಲಿ ಕೂಡ ಮಾಲಿನ್ಯ ಪ್ರಮಾಣ ಅಧಿಕವಾಗಿದೆ. ಇದರಿಂದ ರೋಗಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಜ್ಞಾನಿ ನಾಗಪ್ಪ ತಿಳಿಸುತ್ತಾರೆ.
ಶಬ್ದ ಮಾಲಿನ್ಯವೂ ಏರಿಕೆ: ಪಟಾಕಿಯಿಂದ ವಾಯುಮಾಲಿನ್ಯ ಮಾತ್ರವಲ್ಲ; ಶಬ್ದಮಾಲಿನ್ಯ ಕೂಡ ಉಂಟಾಗುತ್ತದೆ. ಅದರಲ್ಲೂ “ನಿಶ್ಶಬ್ದ ವಲಯ’ ಎಂದು ಗುರುತಿಸಲ್ಪಡುವ ಫೋರ್ಟಿಸ್ ಆಸ್ಪತ್ರೆ, ವಿಕ್ಟೋರಿಯಾ ಆಶ³ತ್ರೆಗಳ ಸುತ್ತಲಿನ ಪ್ರದೇಶದಲ್ಲಿ ಶಬ್ದದ ಪ್ರಮಾಣ ಶೇ.15ರಿಂದ 20ರಷ್ಟು ಹೆಚ್ಚಿರುತ್ತದೆ.
ರೋಗಿಗಳು, ಮಕ್ಕಳು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆ, ಕಾಲೇಜು, ಆಸ್ಪತ್ರೆ, ವೃದ್ಧಾಶ್ರಮದಂತಹ ಪ್ರದೇಶಗಳನ್ನು ಸಾಮಾನ್ಯವಾಗಿ ಸೂಕ್ಷ್ಮ ಎಂದು ಗುರುತಿಸಲಾಗುತ್ತದೆ. ಹಾಗಾಗಿ, ಅಲ್ಲಿ ಇತರೆಡೆಗಿಂತ ದೂಳಿನ ಪ್ರಮಾಣ ಹಾಗೂ ಶಬ್ದ ಮಾಲಿನ್ಯ ಸಾಧ್ಯವಾದಷ್ಟು ಕಡಿಮೆ ಇರಬೇಕು.
ಆದರೆ, ಹಬ್ಬದ ವೇಳೆ ಅದು ತಿರುವು-ಮುರುವಾಗಿದೆ. ಕೈಗಾರಿಕಾ ಪ್ರದೇಶಗಳ ಸುತ್ತ ಕೆಎಚ್‌ಬಿ ಕೈಗಾರಿಕಾ ಪ್ರದೇಶ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲೆಲ್ಲಾ ಹಬ್ಬದ ಆಸುಪಾಸು ಕಡಿಮೆ ಇರುತ್ತದೆ. ಪರಿಣಾಮ ರೋಗಿಗಳ ಸಂಖ್ಯೆ ಹೆಚ್ಚುವುದರ ಜತೆಗೆ ಈಗಾಗಲೇ ಆಸ್ಪತ್ರೆಯಲ್ಲಿರುವ ರೋಗಿಗಳಿಗೂ ಸಮಸ್ಯೆಯಾಗುತ್ತಿದೆ.
ಪ್ರತಿ ವರ್ಷ ಹಬ್ಬದ ಮೂರು ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಶೇ.20ರಿಂದ 30ರಷ್ಟು ಏರಿಕೆಯಾಗುತ್ತದೆ. ಅವರೆಲ್ಲರೂ ಅಲರ್ಜಿ, ಅಸ್ತಮಾ, ಸಿಒಪಿಡಿ (ಕ್ರಾನಿಕ್ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್) ರೋಗಿಗಳೇ ಆಗಿರುತ್ತಾರೆ ಎಂದು ಶ್ವಾಸಕೋಶ ತಜ್ಞರು ಹೇಳುತ್ತಾರೆ.
ಉಸಿರಾಡುವಾಗ ದೇಹ ಸೇರುವ ದೂಳಿನ ಕಣಗಳ ಪ್ರಮಾಣ
-ಪ್ರದೇಶ 2014-15 2015-16 2016-17 ರಾಷ್ಟ್ರೀಯ ಮಿತಿ
-ಐಟಿಪಿಎಲ್ 230 180 130 60
-ಯಲಹಂಕ (ಕೈಗಾರಿಕಾ ಪ್ರದೇಶ) 121 100 111 60
-ಪೀಣ್ಯ (ಕೈಗಾರಿಕಾ ಪ್ರದೇಶ) 144 127 109 60
-ಮೈಸೂರು ರಸ್ತೆ 209 119 107 60
-ಯಶವಂತಪುರ 129 105 93 60
-ಸೆಂಟ್ರಲ್ ಸಿಲ್ಕ್ ಬೋರ್ಡ್ 189 165 132 60
-ವಿಕ್ಟೋರಿಯಾ ಆಸ್ಪತ್ರೆ 162 135 127 60
-ವೈಟ್‌ಫೀಲ್ಡ್ 69 75 83 60
-ಸಿಟಿ ರೈಲು ನಿಲ್ದಾಣ 67 104 102 60
-ಬಾಣಸವಾಡಿ 85 84 80 60
-ದೊಮ್ಮಲೂರು 80 80 120 60
-ಕೆ.ಆರ್. ವೃತ್ತ – – 86 60
ದೀಪಾವಳಿಯಲ್ಲಿ ಮಾಲಿನ್ಯ ಎಷ್ಟು?: ಸಾಮಾನ್ಯ ದಿನಗಳಿಗೆ ಹೋಲಿಸಿದಾಗ 2017ರ ದೀಪಾವಳಿಯಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ (ಶೇ.168), ದೊಮ್ಮಲೂರು (ಶೇ.103), ಕೆ.ಆರ್.ಸರ್ಕಲ್ ಯುವಿಸಿಇ (ಶೇ.86), ಮೈಸೂರು ರಸ್ತೆ (ಶೇ.69.4), ಖಾಜಿಸೊಣ್ಣೆನಹಳ್ಳಿ ಐಟಿಪಿಎಲ್ (ಶೇ.62.5), ಯಶವಂತಪುರ (ಶೇ.57), ಪೀಣ್ಯ (ಶೇ.44.2), ಐಟಿಪಿಎಲ್ ಕೈಗಾರಿಕಾ ಪ್ರದೇಶದಲ್ಲಿ (ಶೇ.51) ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.
ಬಹುತೇಕ ದಿನ ಮಾಹಿತಿಯೇ ಅಲಭ್ಯ: ಹತ್ತು ಕಡೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಆನ್‌ಲೈನ್ ವಾಯು ಮಾಪನ ಕೇಂದ್ರ ಅಳವಡಿಸಿದೆ. ಈ ಪೈಕಿ ಬಿಟಿಎಂ ಲೇಔಟ್, ಜಲಮಂಡಳಿ, ಪೀಣ್ಯದಲ್ಲಿ ವರ್ಷದ ಬಹುತೇಕ ದಿನಗಳು ಮಾಹಿತಿಯೇ ಲಭ್ಯವಿಲ್ಲದಿರುವುದು ಕಂಡುಬಂದಿದೆ. ಅವುಗಳ ಮಾಹಿತಿ ಇಲ್ಲಿದೆ.
-ಮಾಪನ ಕೇಂದ್ರಗಳು 2015 2016 2017 (ದತ್ತಾಂಶ ಲಭ್ಯವಿಲ್ಲದ ದಿನಗಳು)
-ಬಿಟಿಎಂ ಲೇಔಟ್ 152 134 90
-ಜಲಮಂಡಳಿ 103 124 73
-ಪೀಣ್ಯ 104 276 79
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.