ಅಂಬಿಗಾಗಿ ಅಭಿಮಾನದ ಕಂಬನಿ
Team Udayavani, Nov 26, 2018, 12:29 PM IST
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಆವರಿಸಿದ ನೀರವ ಮೌನ, ಮುಂಜಾನೆಯಾದರೂ ಕೇಳಿಸದ ಹಕ್ಕಿಗಳ ಕಲರವ, ತಾಲೀಮು ನಡೆಸದ ಕ್ರೀಡಾಪಟುಗಳು, ಮಡುಗಟ್ಟಿದ ದುಃಖದ ನಡುವೆ ನೆಚ್ಚಿನ ನಟನನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಹರಿದುಬಂದ ಜನಸಾಗರ, ಜನದಟ್ಟಣೆ ನಡುವೆಯೂ ಅಗಲಿದ ಅಂಬಿಗೆ ಅಂತಿಮ ನಮನ ಸಲ್ಲಿಸಿದ ಅಭಿಮಾನಿಗಳು…
ಆನಾರೋಗ್ಯದಿಂದ ಶನಿವಾರ ವಿಧಿವಶರಾದ ಹಿರಿಯ ನಟ ಅಂಬರೀಶ್ ಅವರ ಅಂತಿಮ ದರ್ಶನದ ಸಂದರ್ಭದಲ್ಲಿ ಕಂಡುಬಂದ ದೃಶ್ಯಗಳಿವು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ರಾಜ್ಯದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಬೆಳಗ್ಗೆ 6.30ಕ್ಕೆ ಕ್ರೀಡಾಂಗಣದ ಮುಂದೆ ಜಮಾಯಿಸಿದ್ದರು.
ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 7.20ಕ್ಕೆ ಕ್ರೀಡಾಂಗಣಕ್ಕೆ ತರಲಾಯಿತು. ಅದಕ್ಕೂ ಮೊದಲೇ ಸಾರ್ವಜನಿಕದ ದರ್ಶನಕ್ಕೆ ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು. ಬೆಳಗ್ಗೆ 8 ಗಂಟೆ ಹೊತ್ತಿಗೆ ಒಳಗೆ ಬಿಡುತ್ತಿದ್ದಂತೆ ಕಾತುರದಿಂದ ಕಾದಿದ್ದ ಅಭಿಮಾನಿಗಳು, ಬೆಂಬಲಿಗರು “ಕಲಿಯುಗ ಕರ್ಣ’ನನ್ನು ನೋಡಲು ನೋವಿನಿಂದಲೇ ಹೆಜ್ಜೆ ಹಾಕಿದರು. ಅಂಬರೀಶ್ ಅವರ ಪಾರ್ಥಿವ ಶರೀರ ಕಾಣುತ್ತಲೇ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು.
ಇಡೀ ಮೈದಾನದಲ್ಲಿದ್ದವರು ದುಃಖತಪ್ತರಾಗಿ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ನೋವಿನ ನಡುವೆಯೂ ಜೈಕಾರ ಕೂಗಿ ಅಂತಿಮ ನಮನ ಸಲ್ಲಿಸಿದರು. ಒಂದೆಡೆ ಸಾಗರೋಪಾದಿಯಲ್ಲಿ ಅಭಿಮಾನಿಗಳ ದಂಡು ಅಜಾತ ಶತ್ರುವಿನ ಅಂತಿಮ ದರ್ಶನಕ್ಕೆ ಬರುತ್ತಿದ್ದರೆ ಇನ್ನೊಂದೆಡೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಸೇರಿದಂತೆ ಅನ್ಯ ಭಾಷೆಗಳ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು, ಕಲಾವಿದರು, ರಾಜಕೀಯ ಮುಖಂಡರು ಅಗಲಿದ ನಾಯಕನಿಗೆ ಕಂಬನಿ ಮಿಡಿದರು.
ಸೂರ್ಯ ನೆತ್ತಿಗೇರುವ ಹೊತ್ತಿಗೆ ಸಾವಿರಾರು ಜನ ಕ್ರೀಡಾಂಗಣದ ಬಳಿ ಜಮಾಯಿಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಡಬೇಕಾಯಿತು. ಇನ್ನು ಗಂಟೆಗಟ್ಟಲೇ ಸಾಲಿನಲ್ಲಿ ನಿಂತು ಅಂಬರೀಶ್‌ರನ್ನು ಕೊನೆಯದಾಗಿ ನೋಡಿದ ಅಭಿಮಾನಿಗಳ ದುಃಖದ ಕಟ್ಟೆಯೊಡೆದಿತ್ತು. “ಬುಲ್ ಬುಲ್ ಮಾತಾಡು’, “ಕುಚುಕು ಎದ್ದೇಳು’, “ಮತ್ತೆ ಹುಟ್ಟಿ ಬಾ ಅಣ್ಣಾ’, “ಅಂಬಿ ಅಮರ್ ರಹೇ’, “ಕಲಿಯುಗದ ಕರ್ಣ ಎದ್ದೇಳು’ ಎಂಬ ಘೋಷಣೆ ಕೂಗುತ್ತಿದ್ದಂತೆ ಪತ್ನಿ ಸುಮಲತಾ ಅವರ ಕಣ್ಣುಗಳು ಒದ್ದೆಯಾಗುತ್ತಿದ್ದವು.
ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಬೇಕೆಂಬ ಮಂಡ್ಯ ಜನತೆಯ ಒತ್ತಡಕ್ಕೆ ಮಣಿದು, ಸಂಜೆ 4 ಗಂಟೆವರೆಗೆ ಮಾತ್ರ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಆನಂತರ ಮಂಡ್ಯಕ್ಕೆ ರವಾನಿಸಲಾಗುವುದು. ಅಭಿಮಾನಿಗಳು ಸಹಕಾರ ನೀಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ಅದಾದ ಬಳಿಕ ಅಂತಿಮ ದರ್ಶನ ಪಡೆಯಲು ಬರುವವರ ಸಂಖ್ಯೆ ದುಪ್ಪಟ್ಟಾಯಿತು. ಒಂದು ಹಂತದಲ್ಲಿ ಸಾಲುಗಟ್ಟಿ ನಿಂತಿದ್ದವರ ತಳ್ಳಾಟ, ನೂಕಾಟದ ಪರಿಣಾ, ಬ್ಯಾರಿಕೇಡ್‌ಗಳು ಕಿತ್ತುಬಂದವು.
ಇಷ್ಟಾದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡ ಪೊಲೀಸರು, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಮಧ್ಯಾಹ್ನ 3 ಗಂಟೆ ಮೀರುತ್ತಿದ್ದಂತೆ ಪಾರ್ಥಿವ ಶರೀರ ಮಂಡ್ಯಕ್ಕೆ ರವಾನೆಯಾಗುವ ಕಾರಣ ಎಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ಸಿಗದು ಎಂದು ಪೊಲೀಸರು ಧ್ವನಿವರ್ಧಕದಲ್ಲಿ ಪ್ರಕಟಿಸಿದರು. ಇದರಿಂದ ಸರತಿ ಸಾಲಿನಲ್ಲಿ ಕಾದಿದ್ದ ಸಾವಿರಾರು ಅಭಿಮಾನಿಗಳ ಅಕ್ರೋಶಕ್ಕೆ ಬ್ಯಾರಿಕೇಡ್‌ಗಳು ಬಾಗಿದವು. ಪೊಲೀಸರು ಹರಸಾಹಸ ನಡೆಸಿ ಬ್ಯಾರಿಕೇಡ್‌ಗಳು ಉರುಳದಂತೆ ತಡೆದರು.
ಶೀಘ್ರ ದರ್ಶನ ಪಡೆಯಲು ನೂಕು ನುಗ್ಗಲು ಆರಂಭವಾಗಿ ಸಾಲಿನಲ್ಲಿದ್ದವರಿಗೆ ಉಸಿರುಗಟ್ಟಿದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಹತ್ತಾರು ಮಹಿಳೆಯರು ಹಾಗೂ ಮಕ್ಕಳು ಸಾಲಿನಿಂದ ಹೊರಬಂದು ಸುಧಾರಿಸಿಕೊಂಡಿದ್ದು ಕಂಡುಬಂತು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು, ಪ್ರಮುಖ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ, ಸದ್ಯ ಸಾಲಿನಲ್ಲಿರುವ ಪ್ರತಿಯೊಬ್ಬರೂ ದರ್ಶನ ಪಡೆದ ಬಳಿಕವೇ ಪಾರ್ಥಿವ ಶರೀರವನ್ನು ಸ್ಥಳಾಂತರಿಸುವಾಗಿ ಘೋಷಿಸಿದ ನಂತರ ಪರಿಸ್ಥಿತಿ ಸ್ಪಲ್ಪಮಟ್ಟಿಗೆ ಹತೋಟಿಗೆ ಬಂದಿತು.
ಇನ್ನು ಅಂತಿಮ ದರ್ಶನ ಪಡೆದ ಬಳಿಕವೂ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣ ಬಿಟ್ಟು ಹೋಗಲಿಲ್ಲ. ಬದಲಿಗೆ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳು ಹಾಗೂ ಕ್ರೀಡಾಂಗಣದಲ್ಲಿರುವ ಆಸನಗಳಲ್ಲಿ ಕುಳಿತು ಅಂಬಿಗೆ ಜೈಕಾರ ಹಾಕುತ್ತಿದ್ದರು. ಪಾರ್ಥಿವ ಶರೀರ ಹೊತ್ತ ಆ್ಯಂಬುಲೆನ್ಸ್ ಕ್ರೀಡಾಂಗಣದಿಂದ ಹೊರ ಹೋಗುತ್ತಿದ್ದಂತೆ ರಸ್ತೆಯುದ್ದಕ್ಕೂ ನಿಂತಿದ್ದ ಅಭಿಮಾನಿಗಳು, ಬೆಂಬಲಿಗರು ಕಣ್ಣಿರು ಹಾಕುತ್ತಲೇ ಜೈಕಾರ ಕೂಗಿದರು. ಭಾರವಾದ ಹೆಜ್ಜೆಗಳನ್ನಿಡುತ್ತಾ ಕ್ರೀಡಾಂಗಣದಿಂದ ಹೊರಗೆ ನಡೆದರು.
ನಾಟಿ ಕೋಳಿ, ಮುದ್ದೆ ತಂದಿದ್ದೇನೆ ಎದ್ದೇಳಣ್ಣಾ!: ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಬಂದವರ ಪೈಕಿ ಒಬ್ಬ ಅಭಿಮಾನಿ, ನಾಟಿ ಕೋಳಿ ಸಾರು, ಮುದ್ದೆ ತಂದಿದ್ದರು. ಪಾರ್ಥಿವ ಶರೀರದ ಬಳಿಗೆ ಬಂದ ಅವರು “ಅಣ್ಣಾ ನಿನ್ನಿಷ್ಟದ ನಾಟಿ ಕೋಳಿ ಸಾರು, ಮುದ್ದೆ ತಂದಿದ್ದೀನಿ ಎದ್ದೇಳಣ್ಣಾ ಎಂದು ಕಣ್ಣೀರು ಹಾಕುವ ಮೂಲಕ ಅಭಿಮಾನ ಪ್ರದರ್ಶಿಸಿದರು. ನೂರಾರು ಅಭಿಮಾನಿಗಳು ಬ್ಯಾರಿಕೇಡ್ ದಾಟಿ ಅಂತಿಮ ದರ್ಶನ ಪಡೆಯಲು ಮುಂದಾಗುತ್ತಿದ್ದರು. ಇನ್ನು ಕೆಲ ಅಭಿಮಾನಿಗಳು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದ ದೃಶ್ಯಗಳು ಕಂಡುಬಂದವು. ಒಟ್ಟಾರೆ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಕಂಠೀರವ ಕ್ರೀಡಾಂಗಣ ಶೋಕತಪ್ತ ಅಭಿಮಾನಿಗಳಿಂದ ತುಂಬಿತ್ತು.
ಅಂಬರೀಶ್ ಅಂತಿಮ ದರ್ಶನ ಟೈಮ್‍ಲೈನ್…
6.34: ಜೆ.ಪಿ.ನಗರ ನಿವಾಸದಿಂದ ಕಂಠೀರವ ಕ್ರೀಡಾಂಗಣದತ್ತ ಪಾರ್ಥಿವ ಶರೀರ ರವಾನೆ
7.03: ಚಾಮರಾಜಪೇಟೆ ಕಲಾವಿದರ ಸಂಘದ ಕಚೇರಿಯಲ್ಲಿ ಕೆಲ ಕಾಲ ದರ್ಶನಕ್ಕೆ ವ್ಯವಸ್ಥೆ
7.21: ಕಂಠೀರವ ಕ್ರೀಡಾಂಗಣ ತಲುಪಿದ ಪಾರ್ಥಿವ ಶರೀರ
8.17: ಸಾರ್ವಜನಿಕ ದರ್ಶನ ಆರಂಭ
8.41: ಪತ್ನಿ, ಪುತ್ರನೊಂದಿಗೆ ದರ್ಶನ ಪಡೆದ ರಾಘವೇಂದ್ರ ರಾಜಕುಮಾರ್. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ವಿಚಾರ, ಸರ್ಕಾರದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ ರಾಘವೇಂದ್ರ ರಾಜಕುಮಾರ್
9.46: ಪಾರ್ಥಿವ ಶರೀರ ಸ್ಪಷ್ಟವಾಗಿ ಕಾಣದ ಕಾರಣ, ಶವಪೆಟ್ಟಿಗೆ ಬದಲಾವಣೆ
9.49: ಕುಟುಂಬ ಸಮೇತ ಅಂತಿಮ ದರ್ಶನ ಪಡೆದ ಎಚ್.ಡಿ.ದೇವೆಗೌಡ ಕುಟುಂಬ
10.15: ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವ ಬಗ್ಗೆ ರಕ್ಷಣಾ ಸಚಿವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ ಸಿಎಂ
10:37: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ಅಂತಿಮ ನಮನ
11.40: ಸೇನಾ ಹೆಲಿಕಾಪ್ಟರ್ ಬಳಕೆಗೆ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿದ್ದಾಗಿ ಘೋಷಿಸಿದ ಸಿಎಂ
01.11: ವಾಯುಪಡೆ ಅಧಿಕಾರಿಗಳಿಂದ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ಇಳಿಸಲು ಜಾಗ ಪರಿಶೀಲನೆ
01.14: ಅಭಿಮಾನಿಗಳನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ
01.43: ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಮಂಡ್ಯಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ರವಾನಿಸಲು ನಿರ್ಧಾರ
03.00: ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ ಆ್ಯಂಬುಲೆನ್ಸ್
03.35: ಕಂಠೀರವ ಕ್ರೀಡಾಂಗಣದಿಂದ ಎಚ್‌ಎಎಲ್ ಕಡೆಗೆ ಆ್ಯಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರ ರವಾನೆ
4.00: ಎಚ್‌ಎಎಲ್ ತಲುಪಿದ ಅಂಬರೀಶ್ ಮೃತದೇಹ
4.15: ಎಚ್‌ಎಎಲ್‌ನಿಂದ ಮಂಡ್ಯ ಕಡೆಗೆ ಹಾರಾಟ
ಸ್ಟೇಡಿಯಂನಿಂದ ಸ್ಟುಡಿಯೋವರೆಗೆ
-ಹಡ್ಸನ್ ವೃತ್ತ
-ಹಲಸೂರು ಗೇಟ್ ಪೊಲೀಸ್ ಠಾಣೆ
-ಪೊಲೀಸ್ ಕಾರ್ನರ್
-ಕೆ.ಜಿ.ರಸ್ತೆ
-ಮೈಸೂರು ಬ್ಯಾಂಕ್ ವೃತ್ತ
-ಪ್ಯಾಲೆಸ್ ರಸ್ತೆ
-ಸಿಐಡಿ ಜಂಕ್ಷನ್
-ಬಸವೇಶ್ವರ ವೃತ್ತ ಸ್ಟಾಕ್ 10
-ಹಳೇ ಹೈಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್
-ವಿಂಡ್ಸರ್ ಮ್ಯಾನರ್ ಜಂಕ್ಷನ್
-ಕಾವೇರಿ ಜಂಕ್ಷನ್
-ಭಾಷ್ಯಂ ವೃತ್ತ
-ಸ್ಯಾಂಕಿ ರಸ್ತೆ
-ಮಾರಮ್ಮ ವೃತ್ತ
-ಬಿಎಚ್‌ಇಎಲ್
-ಯಶವಂತಪುರ ಫ್ಲೈಓವರ್
-ಮೆಟ್ರೋ ರೈಟ್ ಟರ್ನ್
-ಆರ್‌ಎಂಸಿ ಯಾರ್ಡ್ ಪೊಲೀಸ್ ಸ್ಟೇಷನ್
-ಗುರಗುಂಟೆ ಪಾಳ್ಯ ಸಿಗ್ನಲ್ ಲೆಫ್ಟ್ ಟರ್ನ್
-ಸಿಎಂಟಿಐ
-ಎಫ್ಟಿಎಲ್
-ಕಂಠೀರವ ಸ್ಟುಡಿಯೋ
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.