394 ಒತ್ತುವರಿ ತೆರವಿಗೆ ತಯಾರಿ
Team Udayavani, Oct 20, 2017, 12:03 PM IST
ಬೆಂಗಳೂರು: ನಗರ, ಜಿಲ್ಲಾವ್ಯಾಪ್ತಿಯಲ್ಲಿ ಈವರೆಗೆ ಪತ್ತೆಯಾದ ಸರ್ಕಾರಿ ಭೂಮಿ ಒತ್ತುವರಿ ಪೈಕಿ 16,000 ಎಕರೆ ವಶಕ್ಕೆ ಪಡೆಯಲಾಗಿದ್ದು, ಬಾಕಿಯಿರುವ 394 ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರದಿಂದ ಆರಂಭವಾಗಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯ ಸದನ ಸಮಿತಿ ವರದಿಯಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 5.30 ಲಕ್ಷ ಎಕರೆ ಭೂಮಿಯಿದ್ದು, ಇದರಲ್ಲಿ 1,22,918 ಎಕರೆ ಸರ್ಕಾರಿ ಭೂಮಿಯಾಗಿದೆ. ಈ ಪೈಕಿ 34,111 ಎಕರೆ ಭೂಮಿ ಖಾಸಗಿಯವರಿಂದ ಒತ್ತುವರಿಯಾಗಿದ್ದು, 11,774 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಬಹುದು ಎಂದು ವರದಿಯಲ್ಲಿತ್ತು.
ಅದರಂತೆ ಕಾರ್ಯಾಚರಣೆ ನಡೆಸಿ ಈವರೆಗೆ 11,380 ಎಕರೆ ಸರ್ಕಾರಿ ಭೂಮಿ ವಶಕ್ಕೆ ಪಡೆಯಲಾಗಿದೆ ಎಂದರು. ನಾನಾ ಕಾರಣಕ್ಕೆ ಸ್ಥಗಿತಗೊಂಡಿರುವ ತೆರವು ಕಾರ್ಯಾಚರಣೆಯನ್ನು ಸೋಮವಾರದಿಂದ ಆರಂಭವಾಗಲಿದೆ. ವರದಿಯಲ್ಲಿರುವ 394 ಎಕರೆ ಸರ್ಕಾರಿ ಭೂಮಿಯನ್ನೂ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಪಟ್ಟಂತೆ ಬಿಬಿಎಂಪಿ ನೀಡಿದ್ದ ಮಾಹಿತಿಯಂತೆ ಈಗಾಗಲೇ ಎರಡು ಬಾರಿ ಸರ್ವೆ ನಡೆಸಲಾಗಿದ್ದು, ಪಾಲಿಕೆಗೂ ತಿಳಿಸಲಾಗಿದೆ. ಜಿಲ್ಲಾಡಳಿತವು ಈವರೆಗೆ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆದಿರುವ 16,000 ಎಕರೆ ಭೂಮಿಯನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸಲಾಗುತ್ತಿದೆ. ಒಂದು ಲಕ್ಷ ಮನೆ ನಿರ್ಮಿಸುವ ಸರ್ಕಾರದ ಯೋಜನೆಗೆ 1,500 ಎಕರೆ ಭೂಮಿ ನೀಡಲಾಗುತ್ತಿದೆ.
ಈ ಪೈಕಿ ಈಗಾಗಲೇ 750 ಎಕರೆ ಭೂಮಿಯನ್ನು ವಸತಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದ್ಯದಲ್ಲೇ ಇನ್ನೂ 500 ಎಕರೆ ಹಸ್ತಾಂತರಕ್ಕೆ ಸ್ಥಳ ಗುರುತಿಸಲಾಗುತ್ತಿದೆ ಎಂದು ಹೇಳಿದರು. ಗುಂಜೂರಿನಲ್ಲಿ ವಶಕ್ಕೆ ಪಡೆಯಲಾದ ಸರ್ಕಾರಿ ಭೂಮಿಯಲ್ಲಿ ವಿಶೇಷ ಪ್ರವರ್ಗದವರಿಗೆ ಮನೆ ನಿರ್ಮಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಸುಮಾರು 37.24 ಕೋಟಿ ರೂ. ವೆಚ್ಚದಲ್ಲಿ 784 ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ನ್ಯಾಯಾಲಯದ ಅಹವಾಲು ಸ್ವೀಕರಿಸಿ ಕ್ರಮ
ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಒಟ್ಟು 9 ಎಕರೆ ಒತ್ತುವರಿಯಾಗಿದ್ದು, ಇದರಲ್ಲಿ 6 ಎಕರೆಯಲ್ಲಿ ಅಭಿವೃದ್ಧಿಪಡಿಸಲಾಗಿದ್ದ ನಿವೇಶನಗಳ ಒತ್ತುವರಿ ತೆರವುಗೊಳಿಸಲಾಗಿದೆ. ಬಾಕಿ ಉಳಿದ ನಾಲ್ಕು ಎಕರೆ ಪ್ರದೇಶದಲ್ಲಿ ಆಸ್ಪತ್ರೆ ಸೇರಿದಂತೆ 62 ಕಟ್ಟಡಗಳಿದ್ದು, ಇವುಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಅಹವಾಲು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.