![Summer](https://www.udayavani.com/wp-content/uploads/2025/02/Summer-415x249.jpg)
![Summer](https://www.udayavani.com/wp-content/uploads/2025/02/Summer-415x249.jpg)
Team Udayavani, Sep 30, 2018, 12:28 PM IST
ಬೆಂಗಳೂರು: ತರಗತಿ ಕೋಣೆಯಲ್ಲಿ ಸೈಲೆಂಟ್‌ಆಗಿದ್ದರೆ ವಿದ್ಯಾರ್ಥಿ ಪೆದ್ದ ಅಂತ, ಗಲಾಟೆ ಮಾಡಿದರೆ ಬುದ್ಧಿವಂತ ಎಂದರ್ಥ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿದ್ದರೂ ಮಕ್ಕಳು ಜಗಳವಾಡುತ್ತಿರುತ್ತಾರೆ. ಮೇಸ್ಟ್ರೆ ಸುಮ್ಮನಿರಿ ಎಂದ ನಂತರವೂ ಮಕ್ಕಳು ಜಾಸ್ತಿ ಗಲಾಟೆ ಮಾಡುತ್ತಾರೆ. ಖಾಸಗಿ ಶಾಲೆಗಳ ಶಿಕ್ಷಕರು “ಕ್ರಿಶ್ಚಿಯನ್ ನನ್ಸ್’ (ಕ್ರೈಸ್ತ ಸನ್ಯಾಸಿನಿಯರು) ರೀತಿ ಇರುತ್ತಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದ್ದಾರೆ.
ನಗರದ ಶಿಕ್ಷಕರ ಸದನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಳೇ ವಿದ್ಯಾರ್ಥಿಗಳ ಸಂಘದ ರಾಯಭಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಮಕ್ಕಳು ಸದಾ ಗಲಾಟೆ ಮಾಡುತ್ತಿರುತ್ತಾರೆ.
ಖಾಸಗಿ ಶಾಲೆ ಮಕ್ಕಳು ನಿಶಬ್ದವಾಗಿರುತ್ತಾರೆ. ಅಲ್ಲಿನ ಶಿಕ್ಷಕರು ಕ್ರಿಶ್ಚಿಯನ್ ನನ್‌ಗಳಂತೆ ಗಂಭೀರವಾಗಿರುತ್ತಾರೆ. ಶಿಕ್ಷಕರು ಗಂಭೀರವಾಗಿದ್ದರೆ ಮಕ್ಕಳು ದಿನಪೂರ್ತಿ ಗಂಭೀರವಾಗಿರುತ್ತಾರೆ. ಶಾಲೆಯ ಬೆಲ್ ಹೊಡೆದ ಕೂಡಲೇ ಹಕ್ಕಿಯಂತೆ ಹಾರಿ ಬಿಡುತ್ತಾರೆ ಎಂದು ಹೇಳಿದರು.
ಆದರೆ, ಸರ್ಕಾರಿ ಶಾಲೆಯಲ್ಲಿ ಮಕ್ಕಳು “ಸೈಲೆಂಟ್’ ಎಂದಷ್ಟೂ ಗಲಾಟೆ ಜಾಸ್ತಿ ಮಾಡ್ತಾರೆ. ಸರ್ಕಾರಿ ಶಾಲೆಯ ಶಿಕ್ಷಕರು, ಖಾಸಗಿ ಶಾಲೆಯ ಶಿಕ್ಷಕರಿಗಿಂತ ನೂರುಪಟ್ಟು ಬುದ್ಧಿವಂತರಿದ್ದಾರೆ. ಮಕ್ಕಳು ಕೂಡ ಅಷ್ಟೇ ಬುದ್ಧಿವಂತರಿದ್ದಾರೆ. ಆದರೆ, ಇವರಿಬ್ಬರು ಜತೆಯಾಗುತ್ತಿಲ್ಲ. ಸರ್ಕಾರಿ ಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕಲಿಕಾ ವಾತಾವರಣ ಸೃಷ್ಟಿಯಾದರೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸಬಹುದು ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವುದು ದೇವರ ಕೆಲಸ. “ನೀವು ಮಗುವಾಗಿಲ್ಲ ಎಂದರೆ ದೇವರ ಸಾಮ್ರಾಜ್ಯಕ್ಕೆ ಬರಲು ಸಾಧ್ಯವಿಲ್ಲ’ ಎಂಬ ಏಸು ಕ್ರಿಸ್ತರ ಹೇಳಿಕೆಯಂತೆ ಮಗು ಎಂದರೆ ಮುಗ್ಧತೆ. ಹೀಗಾಗಿ ಶಿಕ್ಷಕ ಮಗುವಾದಾಗ ಮಾತ್ರ ಮಗುವಿನ ಮನಸ್ಸನ್ನು ತಿಳಿದುಕೊಳ್ಳಲು ಸಾಧ್ಯ. ಮಗು ಎಂತಹ ವಾತಾವರಣದಲ್ಲಿ ಕಲಿಯುತ್ತದೆ ಎಂಬುದು ತಿಳಿದಾಗ ಮಾತ್ರ ಅದನ್ನು ಬದಲಾಯಿಸಲು ಸಾಧ್ಯ ಎಂದರು.
ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶಿಕ್ಷಣಕ್ಕೆ ಶೇ.3ರಷ್ಟು ಖರ್ಚು ಮಾಡುತ್ತೇವೆ. ಅಮೆರಿಕದಲ್ಲಿ ಶೇ.12, ಪಾಕಿಸ್ತಾನದಲ್ಲಿ ಶೇ.5ರಷ್ಟು ಹಣ ಶಿಕ್ಷಣಕ್ಕೆ ಖರ್ಚಾಗುತ್ತಿದೆ. ಭಾರತದಲ್ಲಿ ವೆಚ್ಚದ ಪ್ರಮಾಣ ಕಡಿಮೆ ಇರುವ ಪರಿಣಾಮ, ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ ಎಂದರು.
ಒಂದು ವೇಳೆ ಯುದ್ಧವಾದರೆ ಮಾನುಕುಲ ಹಾಗೂ ಸಂಪನ್ಮೂಲ ನಾಶವಾಗುತ್ತದೆ. ದೇಶದ ಗಡಿ ರಕ್ಷಣೆಗೆ ಖರ್ಚು ಮಾಡಬೇಕು. ಅಂತಿಮವಾಗಿ ಅದು ನಾಶವಾಗುತ್ತದೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ರಾಷ್ಟ್ರ ರಕ್ಷಣೆಗೆ ಬೇಕಾದ ಮಾನವ ಸಂಪನ್ಮೂಲ ವೃದ್ಧಿ ಮಾಡುತ್ತಿದ್ದೇವೆ. ಒಂದು ನಿರ್ಮಾಣ ವ್ಯವಸ್ಥೆಯಾದರೆ, ಇನ್ನೊಂದು ಒಡೆಯುವ ವ್ಯವಸ್ಥೆ. ಕಟ್ಟುವ ಕಾರ್ಯಕ್ಕೆ ಶೇ.3ರಷ್ಟು, ಒಡೆಯುವ ಕಾರ್ಯಕ್ಕೆ ಶೇ.26ರಷ್ಟು ಖರ್ಚು ಮಾಡುತ್ತಿದ್ದೇವೆ.
ಆದರೂ, ಇದು ಅನಿವಾರ್ಯ ಎಂದು ವಿಶ್ಲೇಷಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ 4500 ಕೋಟಿ ರೂ. ಅಗತ್ಯವಿದೆ. ಶೇ.60ರಿಂದ 65ರಷ್ಟು ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದೇವೆ. ವಾರ್ಷಿಕ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿಡುವ ಹಣ ಶಿಬ್ಬಂದಿ ವೇತನ ಹಾಗೂ ಇತರೆ ಕಾರ್ಯಕ್ಕೆ ಖರ್ಚಾಗುತ್ತದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ, ಹಳೆ ವಿದ್ಯಾರ್ಥಿಗಳ ಸಂಘ, ದಾನಿಗಳು ಹಾಗೂ ಪಾಲಕ, ಪೋಷಕರ ಸಹಾಯ, ಸಹಕಾರ ಅತಿ ಅಗತ್ಯ ಎಂದು ಕೋರಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ, ಮಾಜಿ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವಾ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಬಸವರಾಜ ಉಪಸ್ಥಿತರಿದ್ದರು.
ಶಿಸ್ತು ಎಂಬ ಅರ್ಥದಲ್ಲಿ ಹೇಳಿದ್ದು: ಕ್ರಿಶ್ಚಿಯನ್ ನನ್‌ಗಳು ತುಂಬಾ ಶಿಸ್ತು ಬದ್ಧರಾಗಿರುತ್ತಾರೆ ಎಂಬುದನ್ನು ಆ ರೀತಿಯಲ್ಲಿ ಹೇಳಿದ್ದೇನೆ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಸರ್ಕಾರಿ ಶಾಲೆಯ ಶಿಕ್ಷಕರು ಬುದ್ಧಿವಂತರಿದ್ದರೆ, ಖಾಸಗಿ ಶಾಲೆಯ ಶಿಕ್ಷಕರು ಶಿಸ್ತುಬದ್ಧರಾಗಿರುತ್ತಾರೆ. ಹೀಗಾಗಿ ನನ್ಸ್‌ಗಳು ಎಂದು ಪದ ಬಳಕೆ ಮಾಡಿದ್ದೇನೆ ಎಂದು ಸಚಿವರು ಕಾರ್ಯಕ್ರಮದ ನಂತರ ಸ್ಪಷ್ಟೀಕರಣ ನೀಡಿದರು.
ಖಾಸಗಿ ಗಿಳಿ ಮತ್ತು ಸರ್ಕಾರಿ ಗರುಡ!: ಗಿಳಿ ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ಹಾರುತ್ತದೆ. ಮನೆಯಲ್ಲಿ ಸಾಕಿರುವ ಗಿಳಿಯಾದರೆ, ನಾವು ಹೇಳಿದನ್ನೆಲ್ಲ ಕೇಳುತ್ತದೆ ಮತ್ತು ಹೇಳಿದಷ್ಟೇ ಮಾಡುತ್ತದೆ. ಗರುಡ ಹಾಗಲ್ಲ ತನಗೆ ಇಷ್ಟ ಬಂದಂತೆ ಮಾಡುತ್ತದೆ. ಸರ್ಕಾರಿ ಶಾಲೆ ಮಕ್ಕಳು ಗರುಡನಂತಾದರೆ, ಖಾಸಗಿ ಶಾಲೆ ಮಕ್ಕಳು ಗಿಳಿ ಇದ್ದಂತೆ. ಖಾಸಗಿ ಶಾಲೆಯಲ್ಲಿ ಓದಿನ ಮಕ್ಕಳು ಸಮಾಜಕ್ಕೆ ಏನೂ ಕೊಡುಗೆ ನೀಡುವುದಿಲ್ಲ.
ರಷ್ಯಾ, ಅಮೆರಿಕ, ಜರ್ಮನಿಗೆ ಹೋಗಿ ಸೇವೆ ಸಲ್ಲಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಇಲ್ಲಿಯೇ ಶಿಕ್ಷಕರು, ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಮಗು ಕಂಪ್ಯೂಟರ್ ಅಲ್ಲ, ಮಾನವೀಯ ಗುಣ ಇರುವ ವ್ಯಕ್ತಿ ಎಂಬುದನ್ನು ಪಾಲಕ, ಪೋಷಕರು ಅರ್ಥಮಾಡಿಕೊಂಡು, ಮಕ್ಕಳ ಸ್ಮರಣಶಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.
You seem to have an Ad Blocker on.
To continue reading, please turn it off or whitelist Udayavani.