ಬೆಂಗಳೂರಿನ ಕಸ.. ರಾಮನಗರಕ್ಕೆ ಪರಿಹಾರ?
ಮಾಗಡಿ, ದೇವನಹಳ್ಳಿ, ನೆಲಮಂಗಲಕ್ಕೂ ಅನುದಾನ , ನಗರದ ತ್ಯಾಜ್ಯದಿಂದ ಹಳ್ಳಿಗಳಿಗೆ ಸಮಸ್ಯೆ ಆಗಿದೆಯೇ?
Team Udayavani, Oct 6, 2020, 11:55 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಕ್ಕೂ ದೂರದ ರಾಮನಗರಕ್ಕೂ ಸಂಬಂಧ ಇದೆಯಾ? ಇಲ್ಲಿನ ಕಸದಿಂದ ಅಲ್ಲಿನ ಗ್ರಾಮಗಳು ಬಾಧಿತವಾಗುತ್ತಿವೆಯೇ?
– “ಹೌದು’ ಸಂಬಂಧ ಇದೆ ಹಾಗೂ ನಗರ ತ್ಯಾಜ್ಯದಿಂದ ರಾಮನಗರ ಮಾತ್ರವಲ್ಲ; ಮಾಗಡಿ, ದೇವನಹಳ್ಳಿ, ನೆಲಮಂಗಲ ಸೇರಿದಂತೆ ಜೆಡಿಎಸ್‌ಶಾಸಕರು ಪ್ರತಿನಿಧಿಸುವ ಈ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳೂ ಬಾಧಿತವಾಗುತ್ತಿದೆ ಎನ್ನುತ್ತದೆ ಸರ್ಕಾರದ ಆದೇಶ!
ಅಚ್ಚರಿ, ಆದರೂ ಸತ್ಯ. ಬೆಂಗಳೂರಿನ ಘನತ್ಯಾಜ್ಯ ವಿಲೇವಾರಿಯಿಂದಾಗಿ ರಾಮನಗರ, ಮಾಗಡಿ, ದೇವನಹಳ್ಳಿ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಕೆಲವು ಗ್ರಾಮಗಳು ಬಾಧಿತಗೊಂಡಿವೆ. ಅವುಗಳ ಅಭಿವೃದ್ಧಿ ನೆಪದಲ್ಲಿ ಸರ್ಕಾರವು 2018-19, 2019-20 ಹಾಗೂ 2020-21ನೇ ಸಾಲಿನ “ನವ ಬೆಂಗಳೂರು ಯೋಜನೆ’ ಅಡಿ ಈಚೆಗೆ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಈ ಮೊದಲು ಉದ್ದೇಶಿತ ಕ್ಷೇತ್ರಗಳಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ತಡೆಹಿಡಿಯಲಾಗಿತ್ತು. ಆದರೆ, ಈಚೆಗೆ ತಡೆಯನ್ನು ತೆರವುಗೊಳಿಸಿ ಕ್ರಿಯಾಯೋಜನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. 50 ಕೋಟಿ ರೂ.ಗಳಲ್ಲಿ ರಾಮನಗರಕ್ಕೆ 20 ಕೋಟಿ ಹಾಗೂ ಉಳಿದ ಮೂರೂ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಹತ್ತು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸಹಮತಿಸಿದೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧವೇ ಇಲ್ಲದ ಕ್ಷೇತ್ರಗಳಿಗೆ ನವ ಬೆಂಗಳೂರು ಯೋಜನೆ ಅಡಿ ಅನುದಾನ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ವಾಸ್ತವವಾಗಿ ಇರುವ ಘಟಕಗಳು: “ಸಾಮಾನ್ಯವಾಗಿ ನಗರದ ಘನತ್ಯಾಜ್ಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಸುಬ್ಬರಾಯನಪಾಳ್ಯ, ಲಿಂಗಧೀರನಹಳ್ಳಿ, ದೊಡ್ಡಬಿದರಕಲ್ಲು, ಸೀಗೇಹಳ್ಳಿ, ಮಹದೇವಪುರದ ಮಿಟ್ಟಿಗಾನಹಳ್ಳಿ, ಮಂಡೂರು, ಬೊಮ್ಮನಹಳ್ಳಿಯ ಕೆಸಿಡಿಸಿ, ಬೆಂಗಳೂರು ದಕ್ಷಿಣದ ಚಿಕ್ಕನಾಗಮಂಗಲ, ಬ್ಯಾಟರಾಯನಪುರದ ಬೆಳ್ಳಳ್ಳಿ ಘಟಕಗಳಿಗೆ ವಿಲೇವಾರಿ ಆಗುತ್ತದೆ. ಹೆಚ್ಚೆಂದರೆ ಸುತ್ತಲಿನ ನಾಲ್ಕಾರು ಕಿ.ಮೀ. ವ್ಯಾಪ್ತಿಯಲ್ಲಿ ದುರ್ವಾಸನೆ ಬರಬಹುದು. ಈ ಘಟಕಗಳ ಆಸುಪಾಸು ಬಾಧಿತಗೊಂಡ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ “ನವ ನಗರೋತ್ಥಾನ’ ಅಡಿ 517.24 ಕೋಟಿ ಹಾಗೂ “ಶುಭ್ರ ಬೆಂಗಳೂರು ಯೋಜನೆ’ ಅಡಿ 100 ಕೋಟಿ ರೂ. ಸೇರಿ ಒಟ್ಟು 617.24ಕೋಟಿ ರೂ. ನೀಡಿದೆ.
ಹೀಗಿರುವಾಗ, ರಾಮ ನಗರ, ಮಾಗಡಿ ಸೇರಿದಂತೆ ನಾಲ್ಕು ವಿಧಾನಸಭಾಕ್ಷೇತ್ರ ಗಳಿಗೆ ಇದೇ ಘನತ್ಯಾಜ್ಯ ವಿಲೇವಾರಿಯಿಂದ ಬಾಧಿತ ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿರುವುದು ಎಷ್ಟು ಸರಿ? ವಾಸ್ತವವಾಗಿ ಈ ಕ್ಷೇತ್ರಗಳಲ್ಲಿನ ಹಳ್ಳಿಗಳಿಗೆ ನಗರದ ತ್ಯಾಜ್ಯದಿಂದ ಸಮಸ್ಯೆ ಆಗಿರಲು ಸಾಧ್ಯವೇ’ ಎಂಬ ಪ್ರಶ್ನೆಕೇಳಿಬರುತ್ತಿದೆ. ಒಂದು ವೇಳೆ “ನವ ಬೆಂಗಳೂರು ಯೋಜನೆ’ ಅಡಿ ಅನುದಾನ ನೀಡಿದರೆ, ನಗರದ ಸುತ್ತಲಿರುವ ಉಳಿದ ವಿಧಾನಸಭಾ ಕ್ಷೇತ್ರಗಳಿಂದಲೂ ಇಂತಹದ್ದೇ ಬೇಡಿಕೆ ಇಡಬಹುದು. ಆಗ, ನಿರಾಕರಿಸಲು ಕಷ್ಟ ವಾಗುತ್ತದೆ. ಅಷ್ಟಕ್ಕೂ ಹೀಗೆ ಸಂಬಂಧವೇ ಇಲ್ಲದ ಕ್ಷೇತ್ರಗಳಿಗೆ ಅನುದಾನ ನೀಡುವುದು ಸಮಂಜಸವಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ಪ್ರಶ್ನಿಸಿದಾಗ, “ಈ ಬಗ್ಗೆ ಸದ್ಯಕ್ಕೆ ನನ್ನ ಗಮನಕ್ಕೆ ಬಂದಿಲ್ಲ. ನಾನು ಪರಿಶೀಲಿಸಿ, ನಂತರ ಪ್ರತಿಕ್ರಿಯಿಸುತ್ತೇನೆ’ ಎಂದಷ್ಟೇ ಹೇಳಿದರು.
–ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.