ಜಾಹಿರಾತು ನಿಷೇಧ ಆದೇಶಕ್ಕೆ ತಡೆ
Team Udayavani, Feb 8, 2019, 6:07 AM IST
ಬೆಂಗಳೂರು: ಒಂದು ವರ್ಷದ ಅವಧಿಗೆ ನಗರದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜಾಹೀರಾತು ಪ್ರದರ್ಶನ ನಿಷೇಧಿಸಿ ಬಿಬಿಎಂಪಿ ಕೌನ್ಸಿಲ್ ಸಭೆ ಅಂಗೀಕರಿಸಿದ್ದ ಠರಾವು ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಬುಧವಾರವಷ್ಟೇ ನೀಡಿದ್ದ ಮಧ್ಯಂತರ ತೀರ್ಪಿಗೆ ವಿಭಾಗೀಯಪೀಠ ಗುರುವಾರ ತಡೆಯಾಜ್ಞೆ ನೀಡಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಲ್.ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಇದಕ್ಕೂ ಮುನ್ನ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಜಾಹೀರಾತು ಕಂಪನಿಗಳು ಬಿಬಿಎಂಪಿಯ ಠರಾವು ರದ್ದುಪಡಿಸುವಂತೆ ತಮ್ಮ ಅರ್ಜಿಗಳಲ್ಲಿ ಮುಖ್ಯ ಮನವಿ ಮಾಡಿದ್ದವು.
ಹಾಗೆಯೇ, ಅರ್ಜಿಗಳು ಅಂತಿಮ ಇತ್ಯರ್ಥವಾಗುವರೆಗೂ ಬಿಬಿಎಂಪಿ ಠರಾವು ಗೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದವು. ಆದರೆ, ಏಕಸದಸ್ಯ ನ್ಯಾಯಪೀಠವು ಬಿಬಿಎಂಪಿಯ ಠರಾವು ರದ್ದುಪಡಿಸಿ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಅಲ್ಲದೆ, ವಾಸ್ತವವಾಗಿ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವು ಜಾಹೀರಾತು ಕಂಪನಿಗಳ ಅರ್ಜಿಗಳನ್ನು ಪುರಸ್ಕರಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದಂತಾಗಿದೆ. ಆದರೆ, ಜಾಹೀರಾತು ಕಂಪನಿಗಳ ತಕರಾರು ಅರ್ಜಿಗಳು ಬಾಕಿಯಿದೆ. ಹೀಗಾಗಿ ಏಕಸದಸ್ಯ ನ್ಯಾಯಪೀಠದ ಆದೇಶ ಸೂಕ್ತವಾಗಿಲ್ಲ. ಆ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ವಿಭಾಗೀಯ ನ್ಯಾಯಪೀಠ, ಮಧ್ಯಂತರ ಆದೇಶವು ಯಾವಾಗಲೂ ಅರ್ಜಿಯಲ್ಲಿ ಮಾಡಿದ ಮುಖ್ಯ ಮನವಿಗೆ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟಿತು. ನಂತರ ಬಿಬಿಎಂಪಿ ಕೌನ್ಸಿಲ್ ಸಭೆಯ ಠರಾವು ರದ್ದುಪಡಿಸಿ ಏಕಸದಸ್ಯ ನ್ಯಾಯಪೀಠ ಬುಧವಾರ ಹೊರಡಿಸಿದ್ದ ಮಧ್ಯಂತರ ಆದೇಶಕ್ಕೆ ತಡೆ ನೀಡಿ ಆದೇಶಿಸಿತು. ಅಲ್ಲದೆ, ಮೇಲ್ಮನವಿಗೆ ಆಕ್ಷೇಪಣೆ ಸಲ್ಲಿಸುವಂತೆ ಜಾಹೀರಾತು ಕಂಪನಿಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?: ನಗರದಲ್ಲಿ ಒಂದು ವರ್ಷದ ಅವಧಿಗೆ ಎಲ್ಲ ಬಗೆಯ ಜಾಹೀರಾತು ಪ್ರದರ್ಶನ ನಿಷೇಧಿಸಿ 2018ರ ಆ.6ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯವನ್ನು ರದ್ದುಪಡಿಸಲು ಕೋರಿ ಮೆಸರ್ಸ್ ಅವಿನಾಶಿ ಆ್ಯಡ್ಸ್ ಔಟ್‌ಡೋರ್ ಅಡ್ವಟೈಸಿಂಗ್ ಸೇರಿ 100ಕ್ಕೂ ಅಧಿಕ ಜಾಹೀರಾತು ಏಜೆನ್ಸಿಗಳು ಹೈಕೋರ್ಟ್‌ಗೆ ಪ್ರತ್ಯೇಕವಾಗಿ ತಕರಾರು ಅರ್ಜಿ ಸಲ್ಲಿಸಿದ್ದವು.
ಆ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಬಿಬಿಎಂಪಿಯ ಠರಾವು ರದ್ದುಪಡಿಸಿ ಬುಧವಾರ ಮಧ್ಯಂತರ ಆದೇಶ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಗುರುವಾರವೇ ಬಿಬಿಎಂಪಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.