ಪ್ರಾಪರ್ಟಿ ಡೆವಲಪ್‌ಮೆಂಟ್ ಆದಾಯ ಮೂಲ ಮರೆತ ನಮ್ಮ ಮೆಟ್ರೋ
Team Udayavani, Sep 30, 2019, 10:53 AM IST
“ಮೂರು ಬೋಗಿಗಳಿರುವ ಒಂದು ಮೆಟ್ರೋ ರೈಲು ಗರಿಷ್ಠ 950 ಪ್ರಯಾಣಿಕರನ್ನು ಕೊಂಡೊಯ್ಯುತ್ತದೆ. ಸದ್ಯಕ್ಕೆ 800 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಹಾಗಾಗಿ, ಇನ್ನೂ ಕನಿಷ್ಠ ನೂರು ಜನರನ್ನು ಕೊಂಡೊಯ್ಯುವಷ್ಟು ರೈಲಿನಲ್ಲಿ ಜಾಗ ಇದೆ’.
ಮೆಟ್ರೋ ರೈಲು ತುಂಬಿತುಳುಕುತ್ತಿರುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದ ಅಧಿಕಾರಿಯೊಬ್ಬರನ್ನು ಕೆಲ ದಿನಗಳ ಹಿಂದೆ ಕೇಳಿದಾಗ, ಆ ಮಹಾಶಯರು ಜಾಗದ ಮಹತ್ವವನ್ನು ಈ ಮೇಲಿನ ಸಮಜಾಯಿಷಿ ರೂಪದಲ್ಲಿ ತೆರೆದಿಟ್ಟಿದ್ದರು. ಆದರೆ, ಕಳೆದ ಒಂದೂವರೆ ದಶಕದಿಂದ ನಗರದ ಪ್ರಮುಖ ಭಾಗಗಳಲ್ಲಿ ಹತ್ತಾರು ಎಕರೆ ಜಾಗ ಯಾವುದೇ ಅಭಿವೃದ್ಧಿ ಕಾಣದೆ ಬಿದ್ದಿದೆ. ಈ ನಿಟ್ಟಿನಲ್ಲಿ ಇದುವರೆಗೆ ನಿಗಮವು ಗಮನಹರಿಸಿಲ್ಲ. ಇದರಿಂದ ಪರೋಕ್ಷವಾಗಿ ವಾರ್ಷಿಕ ಕೋಟ್ಯಂತರ ರೂ. ನಷ್ಟವಾಗುತ್ತಿದೆ.
ಹೌದು, ಬಿಎಂಆರ್‌ಸಿಎಲ್ ಸುಪರ್ದಿಯಲ್ಲಿ ಸುಮಾರು 25 ಎಕರೆ ಭೂಮಿ ಲಭ್ಯವಿದೆ. ಯೋಜನೆಗಾಗಿ ಖಾಸಗಿ ಮತ್ತು ಸರ್ಕಾರದಿಂದ ಪಡೆದ ಆ ಜಾಗವು ಆಯಾ ನಿಲ್ದಾಣಗಳಿಗೆ ಹೊಂದಿಕೊಂಡಿವೆ. ಹಾಗಾಗಿ, ಉಳಿದೆಡೆಗಿಂತ ಈ ಭೂಮಿಗೆ ಹೆಚ್ಚು ಬೇಡಿಕೆ ಮತ್ತು ಬೆಲೆ ಇದೆ. ನಿತ್ಯ ಸಾವಿರಾರು ಜನ ಅಲ್ಲಿಗೆ ಬಂದುಹೋಗುವುದರಿಂದ “ಪ್ರಾಪರ್ಟಿ ಡೆವಲಪ್‌ಮೆಂಟ್’ಗೆ ವಿಪುಲ ಅವಕಾಶಗಳಿವೆ. ಹಾಗೊಂದು ವೇಳೆ ಸಮರ್ಪಕ ಅಭಿವೃದ್ಧಿಪಡಿಸಿದರೆ, ನಮ್ಮ ಮೆಟ್ರೋಗೆ ನಿರಾಯಾಸವಾಗಿ ನೂರಾರು ಕೋಟಿ ರೂ. ಹರಿದುಬರಲಿದೆ. ಆದರೆ, ಇದುವರೆಗೆ ಆ ಖಾಲಿ ಜಾಗಗಳು ವಾಹನಗಳ ನಿಲುಗಡೆಗೆ ಸೀಮಿತವಾಗಿವೆ.
ಈ ದೂರದೃಷ್ಟಿಯ ಕೊರತೆ ಆರ್ಥಿಕ ನಷ್ಟದಲ್ಲಿ ಪರಿಣಮಿಸುತ್ತಿದೆ. “ನಮ್ಮ ಮೆಟ್ರೋ’ ಮೊದಲ ಹಂತದ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿ ಮೆಟ್ರೋ ಡಿಪೋ ಸುತ್ತ 15 ಎಕರೆ, ಸ್ವಾಮಿ ವಿವೇಕಾನಂದ ರಸ್ತೆ (ಎಸ್.ವಿ.ರಸ್ತೆ)ಯಲ್ಲಿ 2 ಎಕರೆ, ಮೈಸೂರು ರಸ್ತೆಯಲ್ಲಿ 5 ಎಕರೆ, ವಿಜಯನಗರದಲ್ಲಿ 1 ಎಕರೆ ಸೇರಿದಂತೆ 23 ಎಕರೆ ಭೂಮಿ ಲಭ್ಯವಿದೆ. ಅದೇ ರೀತಿ, ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಯಲಚೇನಹಳ್ಳಿಯಲ್ಲಿ 2 ಎಕರೆ, ಪೀಣ್ಯದಲ್ಲಿ 1 ಎಕರೆ ಜಾಗ ಇದೆ. ಇದರಲ್ಲಿ ಬಹುತೇಕ ಎಲ್ಲ ಜಾಗವೂ ವಾಹನಗಳ ನಿಲುಗಡೆಗಾಗಿ ಟೆಂಡರ್ ನೀಡಲಾಗಿದೆ. ಬೈಯಪ್ಪನಹಳ್ಳಿಯ 15 ಎಕರೆ ಜಾಗ ಸಂಪೂರ್ಣ ಖಾಲಿ ಇದೆ.
ಇದಲ್ಲದೆ, ನಿಲ್ದಾಣಗಳ ಒಳಗಡೆ ಜಾಗ ಕೂಡ ಸಮರ್ಪಕ ಬಳಕೆ ಆಗುತ್ತಿಲ್ಲ. ಮೊದಲ ಹಂತದಲ್ಲಿ ಎರಡೂ ಮಾರ್ಗಗಳು ಕೂಡುವ ಮೆಜೆಸ್ಟಿಕ್‌ನಲ್ಲಿ ಇಂಟರ್‌ಚೇಂಜ್ ಸೇರಿ (ಇದು ಆರು ಫುಟ್ ಬಾಲ್ ಮೈದಾನ ಒಗ್ಗೂಡಿಸಿದಾಗ ಲಭ್ಯವಾಗುವ ವಿಶಾಲ ಜಾಗದಲ್ಲಿ ತಲೆಯೆತ್ತಿದೆ) 40 ನಿಲ್ದಾಣಗಳು ಬರುತ್ತವೆ.
ಈ ಪೈಕಿ ಬೆರಳೆಣಿಕೆಯಷ್ಟು ನಿಲ್ದಾಣಗಳಲ್ಲಿ ಮಾತ್ರ ಅಲ್ಲೊಂದು ಇಲ್ಲೊಂದು ಎಟಿಎಂಗಳು, ಸಣ್ಣ-ಪುಟ್ಟ ಮಳಿಗೆಗಳನ್ನು ತೆರೆಯಲಾಗಿದೆ. ಇದೆಲ್ಲದರಿಂದ ವಾರ್ಷಿಕ ಅಬ್ಬಬ್ಟಾ ಎಂದರೆ 40 ಕೋಟಿ ರೂ. ಆದಾಯ ಬರುತ್ತಿದೆ. ಮನಸ್ಸು ಮಾಡಿದರೆ ಇದರ ಹತ್ತುಪಟ್ಟು ಆದಾಯ ಇಲ್ಲಿ ತೆಗೆಯಬಹುದಾಗಿದೆ. ಆದರೆ, ವ್ಯವಸ್ಥಿತ ಪ್ರಾಪರ್ಟಿ ಡೆವಲಪ್‌ಮೆಂಟ್‌ಗೆ ಯೋಜನೆ ರೂಪಿಸುತ್ತಿಲ್ಲ ಎಂದು ಸ್ವತಃ ಬಿಎಂಆರ್ ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೆಟ್ರೋ ಎಂದರೆ ರೈಲು ಓಡಾಡಲು ಮಾರ್ಗ ನಿರ್ಮಿಸುವುದಲ್ಲ. ಅದಕ್ಕೆ ಪೂರಕವಾಗಿ ಪ್ರಾಪರ್ಟಿ ಡೆವಲಪ್‌ಮೆಂಟ್ ಮೂಲಕ ಜನರನ್ನು ಮೆಟ್ರೋ ನಿಲ್ದಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವುದೂ ಆಗಿದೆ. ಈ ನಿಟ್ಟಿನಲ್ಲಿ “ಸಾರಿಗೆ ಆಧಾರಿತ ಅಭಿವೃದ್ಧಿ’ (ಟ್ರಾನ್ಸಿಟ್ ಓರಿಯಂಟೆಡ್ ಡೆವಲಪ್‌ಮೆಂಟ್) ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಉದಾಹರಣೆಗೆ ಉದ್ಯೋಗಿಯೊಬ್ಬರ ಮನೆ ಇಂದಿರಾನಗರದಲ್ಲಿದೆ ಹಾಗೂ ಆತ ಕೆಲಸ ಮಾಡುವ ಕಚೇರಿ ರಿಚ್‌ಮಂಡ್ ರಸ್ತೆಯಲ್ಲಿದೆ ಎಂದುಕೊಳ್ಳೋಣ. ಇವೆರಡೂ ಜಾಗದಲ್ಲಿ ಮೆಟ್ರೋ ಸೇವೆ ಇಲ್ಲ. ಆತನನ್ನು ಮೆಟ್ರೋ ಮಾರ್ಗ ಇರುವ ಕಡೆಗೆ ಸೆಳೆಯಬೇಕು. ಇದಕ್ಕಾಗಿ ಮೆಟ್ರೋ ನಿಲ್ದಾಣಗಳ ಸುತ್ತ ಇರುವ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳು, ಕಚೇರಿಗಳನ್ನು ತೆರೆಯಲು ಪೂರಕವಾಗಿ ಪ್ರಾಪರ್ಟಿಯನ್ನು ಅಭಿವೃದ್ಧಿಪಡಿಸಬೇಕು. ಸಾಮಾನ್ಯವಾಗಿ ವಿದೇಶಗಳಲ್ಲಿರುವ ಮೆಟ್ರೋ ಯೋಜನೆಗಳಲ್ಲಿ ಈ ಮಾದರಿ ಅನುಸರಿಸಲಾಗುತ್ತದೆ ಎಂದು ಮೆಟ್ರೋ ತಜ್ಞರೊಬ್ಬರು ತಿಳಿಸಿದರು. ಪ್ರಸ್ತುತ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಹಾಗೂ ಸಂಪಿಗೆ ರಸ್ತೆ ನಿಲ್ದಾಣಗಳ ಆಸುಪಾಸು ಈ ಮಾದರಿಯ ಪ್ರಾಪರ್ಟಿ ಡೆವಲಪ್‌ಮೆಂಟನ್ನು ಕಾಣಬಹುದಾಗಿದೆ. ಇವೆರಡೂ ನಿಲ್ದಾಣಗಳ ಸುತ್ತ ಮಂತ್ರಿಸ್ಕ್ವೇರ್, ಒರಾಯನ್ ಮಾಲ್, ಶೆರಟನ್ ಹೋಟೆಲ್, ಬ್ರಿಗೇಡ್ ಮಿಲೇನಿಯಂ, ವರ್ಲ್ಡ್ ಟ್ರೇಡ್ ಸೆಂಟರ್ ಇವೆ. ಹೀಗೆ ಮಾಲ್‌ಗಳಿದ್ದಾಗ, ಅಲ್ಲಿಗೆ ಜನ ಬರುತ್ತಾರೆ. ಅವರು ಮೆಟ್ರೋ ರೈಲುಗಳನ್ನೂ ಬಳಸುತ್ತಾರೆ ಎಂದು ತಜ್ಞರು ಉದಾಹರಿಸುತ್ತಾರೆ. ಆದರೆ, ಈಗೆಲ್ಲಾ 10×20 ಅಡಿ ಜಾಗದಲ್ಲಿ ಒಂದು ಮಳಿಗೆ ತೆರೆಯುವುದೇ ಪ್ರಾಪರ್ಟಿ ಡೆವಲಪ್‌ಮೆಂಟ್ ಎಂದು ಬಿಂಬಿಸಲಾಗುತ್ತದೆ.
ಎಲ್ಲೆಲ್ಲಿ ಏನೇನು ಮಾಡಬಹುದು? : ಪ್ರಸ್ತುತ ಲಭ್ಯವಿರುವ ಭೂಮಿಯಲ್ಲೆಲ್ಲಾ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪೂರಕ ವಾತಾವರಣ ಇದೆ. ಅದರಲ್ಲೂ ಮುಖ್ಯವಾಗಿ ಎಸ್.ವಿ.ರಸ್ತೆಯು ವಸತಿ ಪ್ರದೇಶವಾಗಿದ್ದು, ಎಂ.ಜಿ.ರಸ್ತೆ, ಇಂದಿರಾನಗರದಂತಹ ಪ್ರತಿಷ್ಠಿತ ಪ್ರದೇಶಗಳಿಗೆ ಹತ್ತಿರವಾಗಿದೆ. ಐಟಿ ಮತ್ತು ವಾಣಿಜ್ಯ ಉದ್ದೇಶಿತ ಕೈಗಾರಿಕೆಗಳ ಸ್ಥಾಪನೆ ಅಥವಾ ಆಸ್ಪತ್ರೆ ನಿರ್ಮಾಣಕ್ಕೆ ಪೂರಕವಾಗಿದೆ. ಉತ್ತರ-ದಕ್ಷಿಣ ಕಾರಿಡಾರ್‌ನ ಪೀಣ್ಯ, ಯಶವಂತಪುರ, ಜಯನಗರ ಮತ್ತಿತರ ಭಾಗಗಳಿಗೆ ಮೆಟ್ರೋ ಸಂಪರ್ಕ ಇರುವುದರಿಂದ ಪ್ರಯಾಣಿಕರಿಗೆ ಇಲ್ಲಿಗೆ ಬರಲು ಅನುಕೂಲ ಆಗಲಿದೆ.
ಅದೇ ರೀತಿ, ಮೈಸೂರು ರಸ್ತೆ ಮೂಲತಃ ವಸತಿ ಪ್ರದೇಶವಾಗಿದ್ದು, ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ, ವಿಜಯನಗರ, ರಾಜಾಜಿನಗರ, ಗಿರಿನಗರ ಈ ನಿಲ್ದಾಣದ ಸುತ್ತಮುತ್ತ ಬರುತ್ತವೆ. ಅಲ್ಲೆಲ್ಲಾ ಅತಿ ಹೆಚ್ಚು ಜನಸಂಖ್ಯೆ ಇದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಅಭಿವೃದ್ಧಿ ಹೊಂದುತ್ತಿವೆ. ಮಂಡ್ಯ, ಮೈಸೂರು, ರಾಮನಗರ ಕಡೆಯಿಂದ ಬರುವವರೆಲ್ಲಾ ಈಗ ಇಲ್ಲಿಯೇ ಬಸ್ ಇಳಿದು, ಮೆಟ್ರೋ ಏರುತ್ತಾರೆ. ಇಲ್ಲಿ ವಾಣಿಜ್ಯ ಮಳಿಗೆ, ವಸತಿ ಸಮುತ್ಛಯ ಮತ್ತಿತರ ಪ್ರಾಪರ್ಟಿ ಡೆವಲಪ್‌ಮೆಂಟ್ ಮಾಡಬಹುದು. ಅಲ್ಲದೆ, ಬೈಯಪ್ಪನಹಳ್ಳಿ ಪ್ರಮುಖ ನಾಲ್ಕು ಟರ್ಮಿನಲ್ ಗಳಲ್ಲೊಂದು. ಸಾಕಷ್ಟು ಜಾಗ ಅಲ್ಲಿ ಲಭ್ಯ ಇರುವುದರಿಂದ ಮಾಲ್, ಅಪಾರ್ಟ್‌ಮೆಂಟ್‌ಗಳು, ಕೈಗಾರಿಕೆ ಸ್ಥಾಪನೆ ಮಾಡಲು ಸೂಕ್ತವಾಗಿದೆ. ಇಲ್ಲಿಗೆ ಹತ್ತಿರದಲ್ಲೇ ನೈಋತ್ಯ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡುತ್ತಿದೆ. ಎರಡನೇ ಹಂತದಲ್ಲಿ ಇದು ವೈಟ್ ಫೀಲ್ಡ್ಗೆ ವಿಸ್ತರಣೆ ಆಗುವುದರಿಂದ ಐಟಿ-ಬಿಟಿ ವರ್ಗ ಈ ಮಾರ್ಗವನ್ನು ಹೆಚ್ಚು ಬಳಕೆ ಮಾಡಲಿದೆ. ಇದರಂತೆ ಉಳಿದೆಡೆಯೂ ಅಭಿವೃದ್ಧಿಪಡಿಸಲು ಅವಕಾಶಗಳಿವೆ ಎಂದು ತಜ್ಞರು ಹೇಳುತ್ತಾರೆ. ಈ ಹಿಂದೆ ನಡೆದ ಇನ್ವೆಸ್ಟ್ ಕರ್ನಾಟಕದಲ್ಲೂ ಸ್ವತಃ ಬಿಎಂಆರ್‌ಸಿಎಲ್ ಹೂಡಿಕೆದಾರರ ಮುಂದೆ ಇದನ್ನು ಸ್ಪಷ್ಟಪಡಿಸಿತ್ತು.
ಪ್ರತ್ಯೇಕ ನೀತಿ ಎಂಡಿ : “ಪ್ರಾಪರ್ಟಿ ಡೆವಲಪ್‌ಮೆಂಟ್‌ಗೆ ಸಾಕಷ್ಟು ಅವಕಾಶಗಳಿವೆ. ಈ ಸಂಬಂಧ ಪ್ರತ್ಯೇಕ ನೀತಿ ರೂಪಿಸಲು ಉದ್ದೇಶಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದರು. ನಮ್ಮಲ್ಲಿ ಸಾಕಷ್ಟು ಭೂಮಿಯ ಲಭ್ಯತೆ ಇದೆ. ಅದನ್ನು ಅಭಿವೃದ್ಧಿಪಡಿಸಲಿಕ್ಕೇ ಹೆಚ್ಚು ಗಮನಹರಿಸಿದರೆ, ಯೋಜನೆ ಕುಂಠಿತವಾದೀತು ಎಂಬ ಕಾರಣಕ್ಕೆ ಇದುವರೆಗೆ ನಾವು ಅತ್ತ ಹೆಚ್ಚು ಒತ್ತು ನೀಡಿರಲಿಲ್ಲ. ಅಷ್ಟಕ್ಕೂ ನಮ್ಮ ಮುಖ್ಯಗುರಿ ನಿಗದಿತ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ, ಪ್ರಯಾಣಿಕರಿಗೆ ಸೇವೆಗೆ ಮುಕ್ತಗೊಳಿಸುವುದಾಗಿದೆ. ಈಗ ಪ್ರಾಪರ್ಟಿ ಡೆವಲಪ್‌ಮೆಂಟ್ ಚಿಂತನೆ ನಡೆದಿದ್ದು, ಪ್ರತ್ಯೇಕ ನೀತಿ ರೂಪಿಸಲಾಗುತ್ತಿದೆ. ಅದರಡಿ ಎಲ್ಲೆಲ್ಲಿ ಅವಕಾಶ ಇದೆ? ಮೆಟ್ರೋ ನಿಲ್ದಾಣ ಮತ್ತು ಟಿಟಿಎಂಸಿ ಅಥವಾ ಪ್ರಮುಖ ಬಸ್ ನಿಲ್ದಾಣದ ನಡುವೆ ಎತ್ತರಿಸಿದ ಪಾದಚಾರಿ ಮಾರ್ಗಕ್ಕೆ ಅವಕಾಶ ಇದೆಯೇ? ಅದಕ್ಕೆ ಎಷ್ಟು ಭೂಮಿ ಬೇಕಾಗುತ್ತದೆ? ಉಳಿದ ಪ್ರಾಪರ್ಟಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು? ಇದೆಲ್ಲವನ್ನೂ ಅಧ್ಯಯನ ಮಾಡಿ ನಿರ್ಧರಿಸಲಾಗುವುದು ಎಂದು ಹೇಳಿದರು. “ಸದ್ಯಕ್ಕೆ ಲಭ್ಯವಿರುವ ಜಾಗದಲ್ಲಿ ಪಾರ್ಕಿಂಗ್ ಮತ್ತಿತರ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ. ಬೈಯಪ್ಪನಹಳ್ಳಿಯಲ್ಲಿನ 15 ಎಕರೆ ಜಾಗ ಮಾತ್ರ ಖಾಲಿ ಇದೆ. ಈ ಜಾಗಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
2ನೇ ಹಂತದಲ್ಲಿ ಬೇಕಿದೆ ದೂರದೃಷ್ಟಿ :
“ಸ್ವಾಧೀನಪಡಿಸಿಕೊಂಡಾಗಿನ ದರ ಹಾಗೂ ಪ್ರಸ್ತುತ ಮಾರುಕಟ್ಟೆ ದರಕ್ಕೆ ಹೋಲಿಸಿದರೆ, ಭೂಮಿಯ ಬೆಲೆ ಈಗ ಮೂರ್‍ನಾಲ್ಕು ಪಟ್ಟು ಏರಿಕೆ ಆಗಿದೆ. ಅಂದರೆ ಉದಾಹರಣೆಗೆ 5 ಸಾವಿರ ರೂ.ಗೆ ಚದರ ಅಡಿ ಇದ್ದ ಭೂಮಿ, ಮೆಟ್ರೋ ಪೂರ್ಣಗೊಂಡ ನಂತರ 20 ಸಾವಿರ ರೂ. ತಲುಪಿದೆ. ಎರಡನೇ ಹಂತದಲ್ಲಿ ಈ ದೂರದೃಷ್ಟಿಯನ್ನು ಇಟ್ಟುಕೊಂಡು ಯೋಜನೆ ಕೈಗೆತ್ತಿಕೊಳ್ಳುವ ಅವಶ್ಯಕತೆ ಇದೆ. ಇದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಲಿದೆ. ಆ ಮೂಲಕ ಆದಾಯವೂ ಬರಲಿದೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.