ಅಂತ್ಯ ಕಾಣದ ಸಂಪುಟ ಸಂಕಟ; ಮುಂದುವರಿದ ಅಭಿಮಾನಿಗಳ ಪ್ರತಿಭಟನೆ
Team Udayavani, Jun 8, 2018, 6:00 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟದಲ್ಲಿ ಸ್ಥಾನ ಸಿಗದವರ ಮುನಿಸು ಹಾಗೂ ಅವರ ಬೆಂಬಲಿಗರ ಆಕ್ರೋಶ ಮುಂದುವರೆದಿದ್ದು, ಪಕ್ಷದ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರಿದಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳು ಮತ್ತು ಅತೃಪ್ತರ ಕ್ಷೇತ್ರಗಳಲ್ಲಿ ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕೆಲವೆಡೆ ರಸ್ತೆ ತಡೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಸಚಿವ ಸ್ಥಾನ ಸಿಗದ ಎಚ್.ಕೆ.ಪಾಟೀಲ್, ಎಂ.ಬಿ,ಪಾಟೀಲ್, ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ, ರೋಷನ್‌ಬೇಗ್, ರಾಮಲಿಂಗಾರೆಡ್ಡಿ ಸೇರಿ ಹಿರಿಯ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಂತೆ ಮತ್ತೂಂದೆಡೆ ಪಾಲಿಕೆ, ನಗರಸಭೆ, ಪಂಚಾಯತ್‌ಗಳಲ್ಲಿ ಸದಸ್ಯರಾಗಿರುವ ಅವರ ಬೆಂಬಲಿಗರು ರಾಜೀನಾಮೆ ನೀಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ನಾಯಕರ ವಿರುದ್ಧ ಬಹಿರಂಗವಾಗಿಯೇ ವಾಗ್ಧಾಳಿ ಸಹ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಹಿರಿಯ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಹಾಗೂ ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸಿದರು. ಚಳ್ಳಕೆರೆ ಶಾಸಕ ರಘು ಮೂರ್ತಿ ಅವರ ಬೆಂಬಲಿಗರೂ ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸಿ, ಚಿತ್ರದುರ್ಗ ಜಿಲ್ಲೆಗೆ ಆದ್ಯತೆ ನೀಡುವಂತೆ ಆಗ್ರಹಿಸಿದರು.
ಸಚಿವ ಸ್ಥಾನ ವಂಚಿತರ ಬೆಂಬಲಿಗರು ಬೆಳಗ್ಗೆಯಿಂದಲೇ ಕೆಪಿಸಿಸಿ ಕಚೇರಿ ಮುಂದೆ ಜಮಾಯಿಸಿ ಭಿತ್ತಿಪತ್ರ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದರಿಂದ ಒಂದು ತಂಡವಾದ ನಂತರ ಮತ್ತೂಂದು ತಂಡ ಪ್ರತಿಭಟನೆ ನಡೆಸುವಂತಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಕ್ವೀನ್ಸ್ ರಸ್ತೆ ಮಾತ್ರವಲ್ಲದೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.
ಮತ್ತೂಂದೆಡೆ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರ ಬೆಂಬಲಿಗರು ಪರಮೇಶ್ವರ್ ಮನೆ ಎದುರು ಪ್ರತಿಭಟನೆ ನಡೆಸಿ, ತಾವು ಮೂರು ಬಾರಿ ಶಾಸಕರಾಗಿದ್ದು ಶಿವಮೊಗ್ಗ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದರು. ಬೆಳಗಾವಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಬಸ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ರಾಜೀನಾಮೆ: ಇನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ಸಿಗದಿರುವುದನ್ನು ಖಂಡಿಸಿ, ದಾವಣಗೆರೆ ಮಹಾನಗರ ಪಾಲಿಕೆಯ 39 ಜನ ಸದಸ್ಯರು ದಾವಣಗೆರೆ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಹತ್ತು ಜನ ಎಪಿಎಂಸಿ ನಿರ್ದೇಶಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ದೊರೆದಿರುವುದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿ ಎಂ.ಬಿ.ಪಾಟೀಲ್ ಅವರಿಗೆ ಸ್ಥಾನ ನೀಡದಿರುವುದನ್ನು ಖಂಡಿಸಿ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡರು ತಮ್ಮ ವಿವಿಧ ಪದಾಧಿಕಾರಿಗಳ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನೊಂದೆಡೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಕರ್ನಾಟಕ ರೆಡ್ಡಿ ಜನ ಸಂಘ ಖಂಡಿಸಿದೆ. ರೆಡ್ಡಿ ಜನ ಸಂಘದ ಅಧ್ಯಕ್ಷ ವಿಜಯರಾಘವರೆಡ್ಡಿ, ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 45 ವರ್ಷಗಳಿಂದಲೂ ರಾಮಲಿಂಗಾ ರೆಡ್ಡಿ ಅವರು ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 7 ಬಾರಿ ಶಾಸಕರಾಗಿ ಆಯ್ಕೆಯಾಗಿ, ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ.
ಇಂತಹ,ವ್ಯಕ್ತಿಯನ್ನು ಕಡೆಗಣಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಮೈತ್ರಿ ಆಡಳಿತ ರಚನೆಗೆ ವಿಶೇಷ ಪಾತ್ರವಹಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ವರಿಷ್ಠರು ಕಡೆಗಣಿಸಿರುವುದು ಸರಿಯಾದ ಕ್ರಮವಲ್ಲ. ಜೂ.8 ರಂದು ರೆಡ್ಡಿ ಜನ ಸಂಘದ ಸಭೆ ನಡೆಯಲಿದೆ. ಅಲ್ಲಿ, ನಮ್ಮ ಮುಂದಿನ ನಡೆ ಏನು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
ವಿಜಯಪುರದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಸ್ಥಾನ ಸಿಗದೇ ಪಕ್ಷದ ನಾಯಕರ ವಿರುದ್ಧ ಬಂಡಾಯ ಎದ್ದಿರುವ ಎಂ.ಬಿ. ಪಾಟೀಲ್ ಅವರನ್ನು ಬಿಜೆಪಿಗೆ ಕರೆ ತರುವ ಜವಾಬ್ದಾರಿ ನೀಡಿದರೆ, ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.