![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 18, 2019, 3:05 AM IST
ಬೆಂಗಳೂರು: ಪಾಲಿಕೆಯಿಂದ ನೇರವಾಗಿ ವೇತನ ಪಡೆಯುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸುವುದು, ಬಯೋಮೆಟ್ರಿಕ್ ಹಾಜರಾತಿ ರದ್ದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದಿಂದ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯ ಎದುರು ಪ್ರತಿಭಟಿಸಲಾಯಿತು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಪೌರಕಾರ್ಮಿಕರು, ಪ್ರತಿ ತಿಂಗಳು ನಿಗದಿತ ದಿನಾಂಕದಂದು ವೇತನ ನೀಡುತ್ತಿಲ್ಲ. ಗುತ್ತಿಗೆ ಪೌರಕಾರ್ಮಿಕರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿ, ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿ ಸಂಘದ ರಾಜ್ಯಾಧ್ಯಕ್ಷ ಮೈಸೂರು ನಾರಾಯಣ, ಬಿಬಿಎಂಪಿಯಿಂದ ನೇರವಾಗಿ ವೇತನ ಪಡೆಯುವ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ.
ಪಾಲಿಕೆಯಿಂದ ನಾಲ್ಕು ಸಾವಿರ ಪೌರಕಾರ್ಮಿಕರನ್ನು ಕಾಯಂ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಕೂಡಲೇ ರದ್ದುಪಡಿಸಿಬೇಕು. ಜತೆಗೆ ಪಾಲಿಕೆಯಿಂದ ನೇರವಾಗಿ ವೇತನ ಪಡೆಯುವ 17 ಸಾವಿರ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಗುತ್ತಿಗೆ ಪೌರಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಹಾಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪಾಲಿಕೆಯಲ್ಲಿರುವ ಕಾಯಂ ಪೌರಕಾರ್ಮಿಕರಿಗೆ ಪ್ರತಿ ವರ್ಷ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 20 ಸಾವಿರ ಬೋನಸ್ ನೀಡುವಂತೆ ಗುತ್ತಿಗೆ ಪೌರಕಾರ್ಮಿಕರಿಗೂ ನೀಡಬೇಕು. ಜತೆಗೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುವ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ತ್ಯಾಜ್ಯ ವಿಲೇವಾರಿ ಸ್ಥಗಿತ ಎಚ್ಚರಿಕೆ!: ಗುತ್ತಿಗೆ ಪೌರಕಾರ್ಮಿಕರ ಬೇಡಿಕೆಗಳನ್ನು ಜು.1ರೊಳಗೆ ಈಡೇರಿಸಲು ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ, ಜು.1ರಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ಗುತ್ತಿಗೆ ಪೌರಕಾರ್ಮಿಕರು ಪಾಲ್ಗೊಳ್ಳುವುದಿಲ್ಲ ಎಂದು ನಾರಾಯಣ ಅವರು ಎಚ್ಚರಿಕೆ ನೀಡಿದ್ದಾರೆ.
ಬಯೋಮೆಟ್ರಿಕ್ ರದ್ದು ಸಾಧ್ಯವಿಲ್ಲ – ಆಯುಕ್ತ: ಪೌರಕಾರ್ಮಿಕರಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಬಯೋಮೆಟ್ರಿಕ್ ಹಾಜರಾತಿಯಲ್ಲಿರುವ ನೂನ್ಯತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗುವುದು.
ಆದರೆ, ಯಾವುದೇ ಕಾರಣಕ್ಕೂ ಬಯೋಮೆಟ್ರಿಕ್ ಪದ್ಧತಿ ರದ್ದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಪಾಲಿಕೆಯಲ್ಲಿ ಕೇವಲ 4 ಸಾವಿರ ಕಾಯಂ ಪೌರಕಾರ್ಮಿಕ ಹುದ್ದೆಗಳಿದ್ದು, ರಾಜ್ಯ ಸರ್ಕಾರ ಸೂಚಿಸಿರುವ ಮಾನದಂಡಗಳ ಆಧಾರದ ಮೇಲೆ ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗುವುದು.
ಹಿಂದೆ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಪದವೀಧರೂ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರ ಪೌರಕಾರ್ಮಿಕರಾಗಿ ಕೆಲಸ ಮಾಡಿದವರಿಗೆ ಮಾತ್ರ ಕೆಲಸ ನೀಡಬೇಕು ಎಂದು ಸೂಚಿಸಿದ್ದು, ಅದರನ್ವಯ ಒಂದು ವಾರದಲ್ಲಿ ಜಾಹೀರಾತು ಪ್ರಕಟಿಸಲಾಗುವುದು ಎಂದು ಹೇಳಿದರು.
ಪ್ರತಿ ತಿಂಗಳು ನೇರವಾಗಿ ಪೌರಕಾರ್ಮಿಕರ ಖಾತೆಗೆ ಪಾವತಿಸುತ್ತಿರುವ ವೇತನ ಚೀಟಿಯನ್ನು ನೀಡಲು ಕೂಡಲೇ ಕ್ರಮಕೈಗೊಳ್ಳಲಾಗುವುದು. ಜತೆಗೆ ಗುರುತಿನ ಚೀಟಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಮೇಸ್ತ್ರಿಗಳಿದ್ದು, ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬಾರದು ಎಂದು ತಿಳಿಸಿದ್ದು, ಕೆಲವೊಮ್ಮೆ ಪೌರಕಾರ್ಮಿಕರೇ ಅವರ ವಿರುದ್ಧ ದೂರು ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ವರ್ಗಾವಣೆ ಮಾಡಲೇಬೇಕಾಗುತ್ತದೆ ಎಂದು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.