ಯಾರದೋ ವಾಹನ; ಇನ್ನಾರದೋ ಪರ್ಮಿಟ್
Team Udayavani, Nov 30, 2018, 6:00 AM IST
ಬೆಂಗಳೂರು: ನಿಮ್ಮ ಬಳಿ ವಾಹನ ಇರಲೇಬೇಕೆಂದೇನೂ ಇಲ್ಲ. ಜೇಬಿನಲ್ಲಿ ಎರಡು ಸಾವಿರ ರೂ. ಇದ್ದರೆ ಸಾಕು, ನೀವು ಬಯಸಿದಲ್ಲಿ ಸಾರ್ವಜನಿಕ ಸಾರಿಗೆ ವಾಹನ ಓಡಿಸಲು ನಿಮಗೆ ಪರವಾನಗಿ ದೊರೆಯುತ್ತದೆ.
ಹೌದು, ಸಾರ್ವಜನಿಕ ಸಾರಿಗೆ ವಾಹನ ಓಡಿಸಲು ಅಗತ್ಯ ಇರುವ ಪರ್ಮಿಟ್(ಪರವಾನಗಿ) ಪಡೆಯಲು ಮಿತಿಯೂ ಇಲ್ಲ; ನಿಯಮಗಳೂ ಇಲ್ಲ. ಎರಡು ಸಾವಿರ ರೂ.ಗಳೊಂದಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಿದರೆ ಸಾಕು. ಆದರೆ, ಆ ಅರ್ಜಿಯಲ್ಲಿ ತಪ್ಪದೆ ಯಾವುದಾದರೂ ಗ್ರಾಮಾಂತರ ಮಾರ್ಗವನ್ನು ನಮೂದಿಸಬೇಕಷ್ಟೇ. ಕೆಲವೇ ದಿನಗಳಲ್ಲಿ ಪರವಾನಗಿ ನಿಮ್ಮ ಮನೆಗೇ ಬರುತ್ತದೆ. ಹಾಗಾಗಿ, ಇದು ಈಗ ಅಕ್ಷರಶಃ ದುಡ್ಡು ಮಾಡುವ ದಂಧೆ.
ಒಬ್ಬೊಬ್ಬರು ಒಂದಲ್ಲಾ ಎರಡಲ್ಲಾ ನೂರಾರು ಪರ್ಮಿಟ್‌ಗಳನ್ನು ಹೊಂದಿದ್ದಾರೆ. ಹಾಗೂ ಅದನ್ನು ಯಾವುದಾದರೂ ವಾಹನ ಇದ್ದವರಿಗೆ ಕೊಟ್ಟು, ಕುಳಿತಲ್ಲಿಯೇ ಸಾವಿರಾರು ರೂ. ಎಣಿಸಬಹುದು. ರಾಜ್ಯದಲ್ಲಿ 7,300 ಖಾಸಗಿ ಬಸ್‌ಗಳು ಸೇರಿದಂತೆ ಸಾರ್ವಜನಿಕ ವಾಹನಗಳ 16,839 ಪರ್ಮಿಟ್‌ಗಳಿವೆ. ಆದರೆ, ಅವುಗಳಲ್ಲಿ ಬಹುತೇಕರ ಹತ್ತಿರ ಸ್ವಂತ ವಾಹನಗಳೇ ಇಲ್ಲ. ಹೀಗೆ ತಮ್ಮ ಪರ್ಮಿಟ್‌ಗಳಲ್ಲಿ ಮತ್ತೂಬ್ಬರು ವಾಹನಗಳನ್ನು ಓಡಿಸಲು ಕೇಂದ್ರ ಮತ್ತು ರಾಜ್ಯದ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ಪ್ರಕರಣವೊಂದರಲ್ಲಿ ಹೈಕೋರ್ಟ್ ಆದೇಶವೊಂದನ್ನು ಮುಂದಿಟ್ಟುಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ವತಃ ಸಾರಿಗೆ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಇತ್ತೀಚೆಗೆ ನಡೆದ ಮಂಡ್ಯದಲ್ಲಿ ದುರಂತಕ್ಕೀಡಾದ ಬಸ್ ಹಾಗೂ ಪರ್ಮಿಟ್ ಬೇರೆ ಬೇರೆಯವರದ್ದಾಗಿದೆ. ಅಲ್ಲದೆ, ಪರ್ಮಿಟ್ ಅವಧಿ ಮುಗಿದಿದ್ದು, ನವೀಕರಣಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಳಿ ಅರ್ಜಿ ಸಲ್ಲಿಸಲಾಗಿತ್ತು ಎಂದೂ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಪರ್ಮಿಟ್ ಪಡೆಯುವ ಪ್ರಕ್ರಿಯೆ
ಗುತ್ತಿಗೆ, ಮಜಲು ವಾಹನ, ಆಲ್ ಇಂಡಿಯಾ ಟೂರಿಸ್ಟ್ ಮತ್ತು ಪಿಎಸ್‌ವಿ ಎಂದು ನಾಲ್ಕು ಪ್ರಕಾರ ಪರ್ಮಿಟ್‌ಗಳಿವೆ. ಇದರಲ್ಲಿ ಯಾವುದೇ ವಾಹನಕ್ಕೆ ಪರ್ಮಿಟ್ ಹೊಂದಲು ವಾಹನ ನಮ್ಮ ಬಳಿ ಇರಬೇಕೆಂಬ ನಿಯಮ ಇಲ್ಲ. ಯಾವ ಮಾರ್ಗದಲ್ಲಿ ಪರವಾನಗಿ ಬೇಕಿದೆ ಎಂಬುದನ್ನು ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಬೇಕು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆ ಮಾರ್ಗವನ್ನು ಪರಿಶೀಲನೆ ಮಾಡುತ್ತದೆ. ತದನಂತರ ಪರವಾನಗಿ ನೀಡಿ, 30 ದಿನಗಳಲ್ಲಿ ವಾಹನಗಳನ್ನು ಹಾಜರುಪಡಿಸುವಂತೆ ಸೂಚಿಸುತ್ತದೆ. ಆಮೇಲೆ ಪರ್ಮಿಟ್ ಹೊಂದಿದ ವ್ಯಕ್ತಿಯು ವಾಹನ ಇರುವ ಯಾವುದಾದರೂ ವ್ಯಕ್ತಿಯೊಂದಿಗೆ ಲೀಸ್ ಒಪ್ಪಂದ ಮಾಡಿಕೊಂಡು, ಅದರ ಪ್ರತಿಯೊಂದಿಗೆ ವಾಹನ ಹಾಜರುಪಡಿಸುತ್ತಾನೆ. ಇದಾಗಿ ಐದು ವರ್ಷದ ನಂತರ ನವೀಕರಣಕ್ಕಾಗಿ ಆತ ವಾಪಸ್ಸಾಗೋದು.
ಇನ್ನು ಪರವಾನಗಿ ಪಡೆಯುವುದು ಗ್ರಾಮಾಂತರ ಮಾರ್ಗದಲ್ಲಿ; ಆದರೆ, ಕಾರ್ಯಾಚರಣೆ ಮಾಡುವುದು ಹೆದ್ದಾರಿಗಳಲ್ಲಿ. ಯಾಕೆಂದರೆ, ಪರ್ಮಿಟ್ ಪಡೆದ ಮಾರ್ಗದಲ್ಲಿ ಓಡಿಸಿದರೆ, ಪುಡಿಗಾಸೂ ಹುಟ್ಟುವುದಿಲ್ಲ ಎಂದು ಸ್ವತಃ ಖಾಸಗಿ ಬಸ್ ಮಾಲಿಕರೊಬ್ಬರು ತಿಳಿಸುತ್ತಾರೆ.
ನಿತ್ಯ ಸಾವಿರಾರು ಜನರನ್ನು ಹೊತ್ತೂಯ್ಯುವ ವಾಹನಕ್ಕೆ ಪರವಾನಗಿಯೇ ಇರುವುದಿಲ್ಲ. ಇದ್ದರೂ ಕಾರ್ಯಾಚರಣೆ ಮಾಡುವ ಮಾರ್ಗ ಬೇರೆಯಾಗಿರುತ್ತದೆ. ಇದರ ವಿರುದ್ಧ ನಿಯಮಿತವಾಗಿ ಕಾರ್ಯಾಚರಣೆಯೂ ನಡೆಯುವುದಿಲ್ಲ. ಇನ್ನು ಪರ್ಮಿಟ್ ವ್ಯವಹಾರದಲ್ಲಿ ಪ್ರಭಾವಿಗಳೇ ಇದ್ದಾರೆ. ಹಾಗಾಗಿ, ಅದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಇದೆಲ್ಲವೂ ಸಾರಿಗೆ ಸೇವೆಯ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ ಎಂದು ಸಾರಿಗೆ ತಜ್ಞರು ಆಕ್ರೋಶ ವ್ಯಕ್ತಪಡಿಸುತ್ತಾರೆ.
16,839 ಸಾರ್ವಜನಿಕ ಸಾರಿಗೆ ವಾಹನಗಳ ಪರವಾನಗಿಗಳಲ್ಲಿ ಈವರೆಗೆ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಿದ ಪರವಾನಗಿಗಳ ಸಂಖ್ಯೆ ಕೇವಲ 5. 2017-18ನೇ ಸಾಲಿಗೆ ಹೊಸದಾಗಿ 103 ಪರವಾನಗಿಗಳನ್ನು ನೀಡಲಾಗಿದೆ.
ವಾಹನ ಪ್ರಕಾರ ಚಾಲ್ತಿಯಲ್ಲಿರುವ ಪರ್ಮಿಟ್‌ಗಳು
ಸಾರ್ವಜನಿಕ ವಾಹನ 16,839
ಮೋಟಾರ್ ಕ್ಯಾಬ್ 2,78,531
ಆಟೋರಿಕ್ಷಾ 4,31,353
ಗೂಡ್ಸ್ ವಾಹನ 4,95,553
ಎಐಟಿಒಬಿ ಮತ್ತು ಪ್ರವಾಸಿ ಪ್ರಯಾಣಿಕರ ವಾಹನ 1,933
ಮ್ಯಾಕ್ಸಿಕ್ಯಾಬ್ 46,929
ಟೂರಿಸ್ಟ್ ಟ್ಯಾಕ್ಸಿ (ಆಲ್ ಇಂಡಿಯಾ) 46,993
ಟೂರಿಸ್ಟ್ ಮ್ಯಾಕ್ಸಿ ಕ್ಯಾಬ್ 23,580
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.