ಇಂದಿರಾ ಕ್ಯಾಂಟೀನ್ ಉದ್ಘಾಟಿಸೋದು ರಾಹುಲ್
Team Udayavani, Aug 11, 2017, 11:48 AM IST
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಸ್ಟ್ 16ರಂದು ಚಾಲನೆ ದೊರೆಯಲಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಯೋಜನೆ ಚಾಲನೆ ನೀಡುವುದು ಖಚಿತವಾಗಿದೆ.
ಪಾಲಿಕೆಯಿಂದ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಆ.16ರಂದು ಮಧ್ಯಾಹ್ನ 3 ಗಂಟೆಗೆ ಜಯನಗರ ವಾರ್ಡ್‌ನ ಕನಕನಪಾಳ್ಯ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ಗೆ ರಾಹುಲ್ ಗಾಂಧಿ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಜಯನಗರ ವಾರ್ಡ್‌ನ ಕನಕನಪಾಳ್ಯ ಕ್ಯಾಂಟೀನ್ ಉದ್ಘಾಟಿಸಿ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಿಂದ ಹಮ್ಮಿಕೊಂಡಿರುವ ಇಂದಿರಾಕ್ಯಾಂಟೀನ್ ಕುರಿತ ಅಧಿಕೃತ ಸಭಾ ಕಾರ್ಯಕ್ರಮದಲ್ಲಿ 30 ನಿಮಿಷಗಳ ಕಾಲ ಭಾಗವಹಿಸಲಿದ್ದಾರೆ. ಆನಂತರದಲ್ಲಿ ಪಾದಯಾತ್ರೆ ಮೂಲಕ ನ್ಯಾಷನಲ್ ಕಾಲೇಜು ಮೈದಾನಕ್ಕೆ ತೆರಳಿ ಅಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಬಿಬಿಎಂಪಿ ವತಿಯಿಂದ ಆಮಂತ್ರಣ ಪ್ರತ್ರಿಕೆನ್ನು ಸಿದ್ಧಪಡಿಸಲಾಗಿದ್ದು, ಮುದ್ರಣಕ್ಕೆ ನೀಡಲಾಗಿದೆ. ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ಸ್ಥಳೀಯ ಶಾಸಕ ಆರ್.ವಿ. ದೇವರಾಜ್ ಅವರ ತಂಡವು ಕನಕನಪಾಳ್ಯ ಇಂದಿರಾ ಕ್ಯಾಂಟೀನ್ ಸ್ಥಳ ಪರಿಶೀಲನೆ ನಡೆಸಿದ್ದು, ರಾಹುಲ್‌ಗಾಂಧಿ ಅವರ ಆಗಮದ ಹಿನ್ನೆಲೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸ್ಥಳೀಯ ಮುಖಂಡರಿಗೆ ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಆಯುಕ್ತರಿಂದ ನಿರಂತರ ಪರಿಶೀಲನೆ
ಆಗಸ್ಟ್ 16ರ ವೇಳೆಗೆ 125 ಕ್ಯಾಂಟೀನ್ ನಿರ್ಮಾಣ ಪೂರ್ಣಗೊಳಿಸಲೇಬೇಕಾದ ಒತ್ತಡ ಬಿಬಿಎಂಪಿ ಒಳಗಾಗಿದೆ. ಆ ಹಿನ್ನೆಲೆಯಲ್ಲಿ ಎಲ್ಲ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಅಧಿಕಾರಿಗಳು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಸ್ಟ್ 15ರ ವೇಳೆಗೆ 125 ಕ್ಯಾಂಟೀನ್ ಪೂರ್ಣಗೊಳಿಸಬೇಕು ಎಂದು ಆಯುಕ್ತ ಎನ್. ಮಂಜುನಾಥಪ್ರಸಾದ್ ಅವರು ರಾತ್ರಿ ಪೂರ್ತಿ ಕಾಮಗಾರಿ ಸ್ಥಳಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಗುರುವಾರ ರಾತ್ರಿ 9.30ರಿಂದ ತಡರಾತ್ರಿ 1.30ವರೆಗೆ ವಿವಿಧ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಪರಿಶೀಲನಾ ಕಾರ್ಯ ಹಮ್ಮಿಕೊಂಡಿದ್ದಾರೆ. ಈ ವೇಳೆ ಕೆಲವು ಕಡೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದನ್ನು ಗಮನಿಸಿದ ಅವರು ದಿನಕ್ಕೆ 7-8 ಕ್ಯಾಂಟೀನ್ ನಿರ್ಮಾಣ ಪೂರ್ಣಗೊಳ್ಳಬೇಕು. ನಿರ್ಮಾಣ ವಿಳಂಬವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಜೂನ್ 12ರಿಂದ ಆರಂಭವಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯವನ್ನು ತೀವ್ರಗತಿಯಲ್ಲಿ ಕೈಗೆತ್ತಿಕೊಂಡಿರುವ ಪಾಲಿಕೆಯ ಅಧಿಕಾರಿಗಳು, ಕೇವಲ 65 ದಿನಗಳ ಸೀಮಿತ ಅವಧಿಯಲ್ಲಿ ಗುರುವಾರದ ವರೆಗೆ 85 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಪೂರ್ಣಗೊಳಿಸಿದ್ದಾರೆ.
108 ಕಡೆಗಳಲ್ಲಿ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರತಿ ದಿನ 7-8 ಕ್ಯಾಂಟೀನ್‌ಗಳ ನಿರ್ಮಾಣ ಪೂರ್ಣಗೊಳ್ಳಲಿದೆ. ಉಳಿದ ಐದು ದಿನಗಳಲ್ಲಿ 125 ಕ್ಯಾಂಟೀನ್ ನಿರ್ಮಾಣ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.