ಕ್ಯಾಶ್‌ಬ್ಯಾಕ್ ಹಳಿಗಿಳಿದ ರೈಲ್ವೆ ಇಲಾಖೆ
Team Udayavani, May 24, 2018, 11:52 AM IST
ಬೆಂಗಳೂರು: ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (ಯುಟಿಎಸ್) ಬಳಕೆದಾರರಿಗೆ ರೈಲ್ವೆ ಇಲಾಖೆ ಆಕರ್ಷಕ ಕೊಡುಗೆ ನೀಡಲು ಮುಂದಾಗಿದೆ. ಯುಟಿಎಸ್ ಆ್ಯಪ್‌ನಲ್ಲಿರುವ “ಆರ್ -ವ್ಯಾಲೆಟ್’ಗೆ ಮಾಡುವ ಪ್ರತಿ ರಿಚಾರ್ಜ್‌ಗೆ ಹೆಚ್ಚುವರಿಯಾಗಿ ಶೇ. 5ರಷ್ಟು “ಕ್ಯಾಶ್ ಬ್ಯಾಕ್’ ನೀಡಲು ಇಲಾಖೆ ನಿರ್ಧರಿಸಿದೆ. ಅಂದರೆ, ಯುಟಿಎಸ್ ಬಳಕೆದಾರ ಉದಾಹರಣೆಗೆ ಸಾವಿರ ರೂ. ರಿಚಾರ್ಜ್ ಮಾಡಿಸಿದರೆ, ಆತನ ಖಾತೆಗೆ 1,050 ರೂ. ಜಮೆ ಆಗಲಿದೆ. ಪ್ರಯಾಣಿಕರನ್ನು ಆಕರ್ಷಿಸಲು ಈ “ಆಫರ್’ ನೀಡುತ್ತಿದ್ದು, ಗುರುವಾರದಿಂದಲೇ ಈ ಸೌಲಭ್ಯ ಎಲ್ಲ ವಿಭಾಗಗಳಲ್ಲಿ ಜಾರಿಗೆ ಬರಲಿದೆ.
ಅಲ್ಲದೆ, ರಿಚಾರ್ಜ್‌ನ ಗರಿಷ್ಠ ಮಿತಿಯನ್ನು ಕೂಡ ದುಪ್ಪಟ್ಟುಗೊಳಿಸಿದ್ದು, ಕನಿಷ್ಠ 100ರಿಂದ ಗರಿಷ್ಠ 10 ಸಾವಿರ ರೂ.ಗೆ ವಿಸ್ತರಿಸಲಾಗಿದೆ. ಕಾಯ್ದಿರಿಸದ ಟಿಕೆಟ್ ಪಡೆಯಲು ಆರ್ -ವ್ಯಾಲೆಟ್ (ರೈಲ್ವೆ ವ್ಯಾಲೆಟ್) ಅತ್ಯಗತ್ಯ. ಬಳಕೆ
ದಾರರು ಪೇಟಿಎಂ, ಮೊಬಿಕ್ವಿಕ್ ಅಥವಾ ಆನ್ ಲೈನ್ ಮೂಲಕ ಆರ್-ವ್ಯಾಲೆಟ್‌ಗೆ ಹಣ ತುಂಬಿಸ ಬಹುದು. ಈ ಕೊಡುಗೆಯಿಂದ ಯುಟಿಎಸ್ ಬಳಕೆದಾರರ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ನಿರೀಕ್ಷಿಸಿದೆ.
50 ಸಾವಿರ ಬಳಕೆದಾರರು: ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ತಾವು ಇದ್ದಲ್ಲಿಂದಲೇ ಟಿಕೆಟ್ ಪಡೆಯಲು ಅನುಕೂಲವಾಗುವಂತೆ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಫೆಬ್ರವರಿ 8ರಂದು ಯುಟಿಎಸ್ ಆ್ಯಪ್ ಬಿಡು
ಗಡೆ ಮಾಡಲಾಗಿತ್ತು. ಇದಾಗಿ ಮೂರೂವರೆ ತಿಂಗಳಲ್ಲಿ ಸುಮಾರು 50 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದು, ಇದರಿಂದ 17,35,452 ಮೊತ್ತದಷ್ಟು ಟಿಕೆಟ್ ಖರೀದಿಯಾಗಿದೆ. ನಿತ್ಯ ಸರಾಸರಿ 6000-6,500 ಜನ ಈ ವ್ಯವಸ್ಥೆಯನ್ನು ಬಳಕೆ ಮಾಡುತ್ತಿದ್ದಾರೆ.
ಯುಟಿಎಸ್ ಸೇವೆ ಎಲ್ಲ ರೈಲ್ವೆ ವಲಯಗಳಲ್ಲಿ ಜಾರಿಯಾಗಿದ್ದರೂ, ಅತಿ ಹೆಚ್ಚು ಬಳಕೆ ಇರುವುದು ಸಿಲಿಕಾನ್ ಸಿಟಿಯಲ್ಲಿ ಮಾತ್ರ. ಒಟ್ಟಾರೆ ನೋಂದಣಿಯಾದ 50,232ರಲ್ಲಿ 38,672 ಮಂದಿ ಬೆಂಗಳೂರಿನಿಂದಲೇ ನೋಂದಣಿ
ಮಾಡಿಕೊಂಡಿ ದ್ದಾರೆ. ಮೈಸೂರಿನಲ್ಲಿ 8,255 ಮತ್ತು ಹುಬ್ಬಳ್ಳಿಯಲ್ಲಿ 3,305 ನೋಂದಣಿ ಆಗಿವೆ.
ಶೇ. 5ರಷ್ಟು “ಕ್ಯಾಶ್ ಬ್ಯಾಕ್’ನಿಂದ ಈ ಬಳಕೆದಾರರ ಸಂಖ್ಯೆ ಹೆಚ್ಚಲಿದೆ. ಈ ಮೊದಲು ಯುಟಿಎಸ್ ಆ್ಯಪ್ ವಿಂಡೋಸ್ ಮತ್ತು ಆ್ಯಂಡ್ರಾಯ್ಡಗೆ ಸೀಮಿತವಾಗಿತ್ತು. ಇತ್ತೀಚೆಗೆ ಆ್ಯಪಲ್ ಸೇರಿದಂತೆ ಐಒಎಸ್ ಮಾದರಿ ಮೊಬೈಲ್‌ಗಳಿಗೂ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲ, ಕನ್ನಡದಲ್ಲೂ ಈ ಮಾಹಿತಿ ಲಭ್ಯವಾಗುತ್ತಿದೆ.
ಒಟ್ಟಾರೆ ರೈಲ್ವೆ ಪ್ರಯಾಣಿಕರಲ್ಲಿ ಶೇ. 60ರಿಂದ 70ರಷ್ಟು ಜನ ಕಾಯ್ದಿರಿಸದ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದು, ಅಂತಹವರಿಗೆ ಈ ಸೇವೆ ಅನುಕೂಲಕರವಾಗಿದೆ. ಆದ್ದರಿಂದ ಎಲ್ಲ ವಲಯಗಳ ವ್ಯಾಪ್ತಿಯಲ್ಲೂ ಕಾಗದರಹಿತ ವ್ಯವಸ್ಥೆಯೂ ಜಾರಿಗೆ ಬಂದಿದೆ. ಆದರೆ, ಅರಿವಿನ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಬಳಕೆ ಆಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
ಲಾಭ ಹೇಗೆ?: ರೈಲು ಬರಲು ಇನ್ನು 5 ನಿಮಿಷವಷ್ಟೇ ಬಾಕಿ ಇದೆ. ಅಷ್ಟರಲ್ಲೇ ಟಿಕೆಟ್ ಪಡೆದು, ಪ್ಲಾಟ್‌ಫಾರಂ ಮುಂದೆ ನಿಲ್ಲಬೇಕು. ಆದರೆ, ಕೌಂಟರ್ ಮುಂದೆ ದೊಡ್ಡ ಸರದಿ ಇದೆ. ಇಂತಹ ಸಂದರ್ಭದಲ್ಲಿ ಯುಟಿಎಸ್ ಹೇಳಿ ಮಾಡಿಸಿದ
ವ್ಯವಸ್ಥೆ ಆಗಿದೆ. ಮಾರ್ಗದಲ್ಲೇ ಮೊಬೈಲ್‌ನಲ್ಲಿ ಟಿಕೆಟ್ ಪಡೆಯಬಹುದು. ನಂತರ ಮೊಬೈಲ್ ನಲ್ಲಿಯ ಟಿಕೆಟ್ ತೋರಿಸಿದರೆ ಸಾಕು.
ರೈಲ್ವೆ ನಿಲ್ದಾಣದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಯಾವುದೇ ವ್ಯಕ್ತಿ ತನ್ನ ಆ್ಯಂಡ್ರಾಯ್ಡ, ವಿಂಡೋಸ್ ಅಥವಾ ಐಒಎಸ್ ಮೊಬೈಲ್ ನಿಂದ ಕಾಯ್ದಿರಿಸದ ರೈಲ್ವೆ ಟಿಕೆಟ್‌ಗಳನ್ನು ಪಡೆಯಬ ಹುದು. ಆರ್-ವ್ಯಾಲೆಟ್‌ನಲ್ಲಿ ಶೇ. 5 ಕ್ಯಾಶ್ ಬ್ಯಾಕ್ ಸಿಗುವುದರಿಂದ ಲಾಭದಾಯಕವಾಗಿದೆ. ಯುಟಿಎಸ್‌ನಲ್ಲಿ ನೋಂದಣಿ ಆದವರು ಸರಾಸರಿ ಸಾವಿರ ರೂ. ರಿಚಾರ್ಜ್ ಮಾಡಿಕೊಳ್ಳುತ್ತಾರೆ. ಅವರಿಗೆ ಅನಾಯಾಸವಾಗಿ 50 ರೂ. ಹೆಚ್ಚು ಜಮೆ ಆಗುವುದರಿಂದ ಸಹಜವಾಗಿಯೇ ಇದು ಪ್ರಯಾಣಿಕರಿಗೆ ಲಾಭದಾಯಕವಾಗಿದೆ.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.