ಚುನಾವಣೆ ಅಭ್ಯರ್ಥಿಗಳಿಗೆ ಭೀತಿ ಹುಟ್ಟಿಸಿದ ಮಳೆ
Team Udayavani, Sep 12, 2022, 12:52 PM IST
ಬೆಂಗಳೂರು: ನಿರಂತರ ಮಳೆ, ಪ್ರವಾಹ ಪರಿಸ್ಥಿತಿ, ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಳ ಹೀಗೆ ಬೆಂಗಳೂರಿನಲ್ಲಿ ಸಮಸ್ಯೆಗಳು ಹುಟ್ಟಿಕೊಂಡಿವೆ. ಇದು ಬಿಬಿಎಂಪಿ ಚುನಾವಣೆ ಬಗ್ಗೆ ಕನಸು ಕಾಣುತ್ತಿದ್ದ ಅಭ್ಯರ್ಥಿಗಳ ಆಸೆಗೆ ತಣ್ಣೀರೆರಚುವಂತೆ ಮಾಡಿದೆ. ಜತೆಗೆ ಇಷ್ಟೆಲ್ಲ ಸಮಸ್ಯೆಗಳನ್ನಿಟ್ಟುಕೊಂಡು ಜನರ ಬಳಿ ಮತ ಕೇಳಲು ಹೇಗೆ ಹೋಗುವುದು ಎಂದು ಚಿಂತೆಯೂ ಕಾಡಿದೆ.
ಕಳೆದ ವಾರ ಸುರಿದ ಭಾರಿ ಮಳೆಗೆ ಮಹದೇವಪುರ, ಪೂರ್ವ, ಬೊಮ್ಮನಹಳ್ಳಿ ವಲಯಗಳು ಬಹುತೇಕ ಮುಳುಗಿವೆ. ಅದರಲ್ಲೂ ರೈನ್ ಬೋ ಡ್ರೈವ್, ಅನುಗ್ರಹ ಲೇಔಟ್, ಎಚ್‌ಎಸ್‌ಆರ್ ಲೇಔಟ್‌ಗಳಂತಹ ಪ್ರತಿಷ್ಠಿತ ಬಡಾವಣೆಗಳು ಜಲಾವೃತವಾಗಿದ್ದು, ಜನರು ಹೋಟೆಲ್, ಸಂಬಂಧಿಕರ ಮನೆಗಳಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರವಾಹ ಪರಿಸ್ಥಿತಿ ಕಡಿಮೆಯಾದರೂ ಅದರಿಂದ ಆರೋಗ್ಯದ ಮೇಲಿನ ದುಷ್ಟಪರಿಣಾಮ ತೆಗೆ ಪರದಾಡುವಂತಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಬಿಬಿಎಂಪಿ ಚುನಾವಣೆ ನಡೆದು ಕಾರ್ಪೊರೇಟರ್ ಆಗಬೇಕು ಎಂದಿರುವವರಿಗೆ ಆತಂಕ ಎದುರಾಗಿದೆ. ಹೈಕೊರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ ಬೆಂಗಳೂರಿನ ಶಾಸಕರು ಬಿಬಿಎಂಪಿ ಚುನಾವಣೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದಲ್ಲದೆ, ಚುನಾವಣೆಗೆ ಮುಂದೂಡಲು ಬೇಕಾದ ಎಲ್ಲ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ವಾರ್ಡ್ ಮರುವಿಂಗಡಣೆ, ಮೀಸಲಾತಿಯಲ್ಲಾಗಿರುವ ಲೋಪಗಳನ್ನು ತಾವೇ ಹುಡುಕಿ, ಸಾರ್ವಜನಿಕರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಮಾಡಿದ್ದಾರೆ.
ಹೀಗಾಗಿ ಹೈಕೋರ್ಟ್ ನಲ್ಲಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ಕುರಿತಂತೆ ಐದಕ್ಕೂ ಹೆಚ್ಚಿನ ಅರ್ಜಿಗಳು ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ಹೈಕೊರ್ಟ್ ಬಿಬಿಎಂಪಿ ಚುನಾವಣೆಗೆ ಹಸಿರು ನಿಶಾನೆ ತೋರಿದರೆ ಚುನಾವಣಾ ಆಯೋಗ ಶೀಘ್ರದಲ್ಲಿ ಚುನಾವಣೆ ದಿನ ಘೋಷಿಸಲಿದೆ.
ಎಲ್ಲ ಪಕ್ಷಗಳಿಂದ ಸಿದ್ಧತೆ: ಬಿಬಿಎಂಪಿ ಚುನಾವಣೆಗೆ ದಿನಾಂಕ ಘೋಷಣೆಯಾದರೆ ಅದನ್ನು ಎದುರಿಸಲು ಪಕ್ಷಗಳು ಸಿದ್ಧತೆ ನಡೆಸಿವೆ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿಯೇ ಈಗಾಗಲೇ ಮೂರ್ನಾಲ್ಕು ಸಭೆಗಳನ್ನು ನಡೆಸಿದೆ. ಇನ್ನು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಲು ಮುಂದಾಗಿದ್ದು, ಕ್ಷೇತ್ರವಾರು ಶಾಸಕರು, ಸಂಸದರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಜೆಡಿಎಸ್, ಆಮ್ ಆದ್ಮಿ ಪಕ್ಷ, ಎಸ್‌ಡಿಪಿಐ ಪಕ್ಷವೂ ಆಂತರಿಕ ಸಭೆ, ಸಮೀಕ್ಷೆ ನಡೆಸುತ್ತಿವೆ.
ಚುನಾವಣೆಗೆ ಮಾನಸಿಕವಾಗಿ ಸಿದ್ಧವಾಗಿಲ್ಲ: ಚುನಾವಣೆಗೆ ಬಾಹ್ಯವಾಗಿ ತಯಾರಿ ನಡೆಯುತ್ತಿದ್ದರೂ, ಯಾವ ಪಕ್ಷವೂ ಮಾನಸಿಕವಾಗಿ ಸಿದ್ಧವಾಗಿಲ್ಲ. ಮಳೆಯಿಂದ ಸೃಷ್ಟಿಯಾದ ಅವಾಂತರದ ನಂತರ ಚುನಾವಣೆ ಎದುರಿಸಲು ಕಷ್ಟವಾಗಿದೆ. ಅದರಲ್ಲೂ ಮಾಜಿ ಕಾರ್ಪೋರೇಟರ್‌ಗಳು ತಮ್ಮ ವಾರ್ಡ್‌ಗಳಿಗೆ ತೆರಳಿ ಸಮಸ್ಯೆ ಆಲಿಸುವ ಮನಸ್ಸು ಮಾಡಿಲ್ಲ. ಹೊಸ ಅಭ್ಯರ್ಥಿಗಳಿಗೆ ಮಳೆ ಸಂಕಷ್ಟ ಸೃಷ್ಟಿಸಿದೆ.
ರಸ್ತೆ ಗುಂಡಿ ಬಗ್ಗೆ ಸಮರ್ಪಕ ಉತ್ತರವಿಲ್ಲ : ಬಿಬಿಎಂಪಿ ಚುನಾವಣೆ ಎದುರು ನೋಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲದಿನಗಳ ಹಿಂದಷ್ಟೇ ವಾರ್ಡ್ ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು. ಇದೀಗ ಮಳೆಯಿಂದಾಗಿ ವಾರ್ಡ್ ರಸ್ತೆಗಳಲ್ಲೇ 10 ಸಾವಿರಕ್ಕೂ ಹೆಚ್ಚಿನ ಗುಂಡಿಗಳು ಸೃಷ್ಟಿಯಾಗಿದ್ದು, ಅವುಗಳನ್ನು ಮುಚ್ಚಲು ಬಿಬಿಎಂಪಿಯಲ್ಲಿ ಸಾಕಷ್ಟು ಹಣವಿಲ್ಲ. ಅದಕ್ಕಾಗಿ ಶಾಸಕರ ಅನುದಾನ ಪಡೆಯಬೇಕಾದ ಪರಿಸ್ಥಿತಿಯಿದೆ. ಆದರೆ, ಶಾಸಕರು ಈಗ ರಸ್ತೆ ದುರಸ್ತಿ ಮಾಡಿಸಿದರೆ, ಒಂದು ವೇಳೆ ಚುನಾವಣೆ ಘೋಷಣೆ ಆಗದಿದ್ದರೆ ವೃಥಾ ಅನುದಾನ ವ್ಯರ್ಥವಾಗಲಿದೆ ಎಂಬ ಮನೋಭಾವದಲ್ಲಿದ್ದಾರೆ. ಹೀಗಾಗಿ ಬಿಬಿಎಂಪಿ ಚುನಾವಣೆಯ ಆಕಾಂಕ್ಷಿಗಳಿಗೆ ಜನರು ರಸ್ತೆ ಗುಂಡಿ ಕುರಿತಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಸ್ಥಿತಿ ತಲುಪಿದ್ದಾರೆ.
-ಗಿರೀಶ್ ಗರಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.