ಮಹಾನಗರದ ಮೇಲೆ ಮಳೆ ಮುನಿಸು!
Team Udayavani, Aug 1, 2017, 11:33 AM IST
ಬೆಂಗಳೂರು: ಕಳೆದ ಏಳು ವರ್ಷಗಳಿಂದ ಬಿದ್ದಿರುವ ಮಳೆಯ ಲೆಕ್ಕಾಚಾರ ಹಾಕಿದರೆ ನಗರದಲ್ಲಿ ಪ್ರಸಕ್ತ ಜುಲೈ ತಿಂಗಳಲ್ಲಿ 7 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದ್ದು, ಇಡೀ ತಿಂಗಳಲ್ಲಿ ಕೇವಲ 58 ಮಿ.ಮೀ. ಮಳೆ ದಾಖಲಾಗಿದೆ.
2010ರಲ್ಲಿ ನಗರ ವ್ಯಾಪ್ತಿಯಲ್ಲಿ ಜುಲೈನಲ್ಲಿ 19 ಮಿ.ಮೀ. ಮಳೆಯಾಗಿತ್ತು. ಇದರ ನಂತರದಲ್ಲಿ ಅಂದರೆ 2011ರಿಂದ ಈಚೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಬಾರಿ ನಗರದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಜುಲೈನ ವಾಡಿಕೆ ಮಳೆ 112.9 ಮಿ.ಮೀ ಇದ್ದು, ಈವರೆಗೆ ಇದರ ಅರ್ಧದಷ್ಟು ಮಾತ್ರ ಮಳೆಯಾಗಿದೆ.
ಕಳೆದ ತಿಂಗಳು ಬಹುತೇಕ ದಿನಗಳು ನಗರದಲ್ಲಿ ಮೋಡಕವಿದ ವಾತಾವರಣ ಇತ್ತಾದರೂ ಮಳೆ ಮಾತ್ರ ಆಗಿಲ್ಲ. ಜೂನ್-ಜುಲೈ ತಿಂಗಳಲ್ಲಿ ವಾಡಿಕೆ ಮಳೆ 219.4 ಮಿ.ಮೀ ಇದ್ದು, ಕಳೆದೆರಡು ತಿಂಗಳಲ್ಲಿ ಕೇವಲ 83 ಮಿ.ಮೀ. ಮಳೆಯಾಗಿದೆ. ಹೀಗಾಗಿ ನಗರದಲ್ಲಿ ಈ ಎರಡು ತಿಂಗಳು ಶೇ.50ರಷ್ಟು ಮಳೆ ಕೊರತೆ ಕಂಡುಬಂದಿದೆ.
ಉಷ್ಣಾಂಶವೂ ಏರಿಕೆ
ಜೂನ್-ಜುಲೈನಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದು ಮಾತ್ರವಲ್ಲ, ನಗರದಲ್ಲಿ ಈ ಅವಧಿಯಲ್ಲಿ ಸರಾಸರಿಗಿಂತ ಹೆಚ್ಚು ತಾಪಮಾನ ಕೂಡ ದಾಖಲಾಗಿದೆ. ಸಾಮಾನ್ಯವಾಗಿ ನಗರದಲ್ಲಿ ಈ ಎರಡು ತಿಂಗಳಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 28.3 ಡಿಗ್ರಿ ಸೆಲ್ಸಿಯಸ್. ಆದರೆ, ಈ ಪೈಕಿ 21 ದಿನಗಳು ಸರಾಸರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಅಲ್ಲದೆ, ಹತ್ತು ದಿನಗಳು ನಗರದ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಜುಲೈನಲ್ಲಿ ಅತ್ಯಧಿಕ 31.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಖಂಡಿತವಾಗಿಯೂ ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಮಳೆ ಇಳಿಮುಖವಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಗೆ ಪೂರಕವಾದ ವಾತಾವರಣವೇ ಇಲ್ಲ. ಕಳೆದ ಒಂದೆರಡು ವಾರಗಳಲ್ಲಿ ನಗರದಲ್ಲಿ ಮಳೆಯಾಗಿದ್ದು, ಇದಕ್ಕೆ ಉಷ್ಣಾಂಶ ಮತ್ತು ಮಳೆಗೆ ಪೂರಕವಾದ ಸ್ಥಳೀಯ ಅಂಶಗಳು ಕಾರಣವೇ ಹೊರತು, ಮುಂಗಾರು ಮಾರುತಗಳಲ್ಲ’ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಎಸ್.ಎಂ. ಮೆಟ್ರಿ ತಿಳಿಸುತ್ತಾರೆ.
“ಮುಂದಿನ ದಿನಗಳಲ್ಲೂ ಮಳೆಗೆ ಪೂರಕವಾದ ಅಂಶಗಳು ಕಂಡುಬರುತ್ತಿಲ್ಲ. ಹಾಗಾಗಿ, ಇನ್ನೂ ಕೆಲವು ದಿನಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಹಾಗೊಂದು ವೇಳೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಂತಹ ಬೆಳವಣಿಗೆಗಳು ಕಂಡುಬಂದರೆ ಮಾತ್ರ ಮಳೆಯಾಗುವ ನಿರೀಕ್ಷೆ ಇದೆ,’ ಎಂದೂ ಮೆಟ್ರಿ ಸ್ಪಷ್ಟಪಡಿಸಿದರು.
ಟ್ಯಾಂಕರ್‌ಗೆ ಬೇಡಿಕೆ
ಈ ಮಧ್ಯೆ ನಗರ ಜಿಲ್ಲೆಯಲ್ಲಿರುವ 18 ಕೆರೆಗಳ ಪೈಕಿ ಶೇ.60ರಷ್ಟು ಕೆರೆಗಳು ಈಗಲೂ ಒಣಗಿವೆ. ಎರಡು ಕೆರೆಗಳು ಮಾತ್ರ ಭರ್ತಿಯಾಗಿದ್ದು, ಉಳಿದವುಗಳಲ್ಲಿ ನೀರು ಸಂಗ್ರಹ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಿದೆ. ಆದರೆ, ಕಳೆದ ವರ್ಷ ಜುಲೈನಲ್ಲಿ ಸುರಿದ ಭಾರೀ ಮಳೆಯಿಂದ ಕೋಡಿಚಿಕ್ಕನಹಳ್ಳಿ, ಮಡಿವಾಳ ಮತ್ತು ಹೊಸೂರು ರಸ್ತೆಯಲ್ಲಿ ದಿಢೀರ್ ನೆರೆ ಉಂಟಾಗಿತ್ತು.
ನಗರದ ಕೆಲವೆಡೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀರು ಸಂಪರ್ಕ ಕಡಿತಗೊಂಡಿದೆ. ಇದರ ಜತೆಗೆ ಕೆರೆಗಳು ಒಣಗುತ್ತಿರುವ ಬೆನ್ನಲ್ಲೇ ಖಾಸಗಿ ಟ್ಯಾಂಕರ್‌ಗಳಿಗೆ ಈಗಾಗಲೇ ಬೇಡಿಕೆ ಹೆಚ್ಚಿದೆ. ವರುಣನ ಅವಕೃಪೆ ಹೀಗೇ ಮುಂದುವರಿದರೆ ಬೇಸಿಗೆಗೂ ಮೊದಲೇ ನಗರಕ್ಕೆ ನೀರಿನ ಹಾಹಾಕಾರದ ಬಿಸಿ ಜೋರಾಗೇ ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ