ರಾಜ್ಯಸಭೆ ಚುನಾವಣೆ: ಜೆಡಿಎಸ್ ಕಾರ್ಯತಂತ್ರ
Team Udayavani, Mar 13, 2018, 6:25 AM IST
ಬೆಂಗಳೂರು: ಕಾಂಗ್ರೆಸ್ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದರೆ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂದು ಗೊತ್ತಿದ್ದರೂ ಬಿ.ಎಂ.ಫರೂಕ್ ಅವರನ್ನು ಕಣಕ್ಕಿಳಿಸಿರುವ ಜೆಡಿಎಸ್ ಗೆಲ್ಲಲು ರಣತಂತ್ರ ರೂಪಿಸುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಜತೆ ಸಂಪರ್ಕದಲ್ಲಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಹೀಗಾಗಿಯೇ ಸೋಮವಾರ “ಶುಭ ಗಳಿಗೆ’ ಎಂದು ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಫರೂಕ್ ಅವರಿಂದ ಇನ್ನೊಂದು ಸೆಟ್ ನಾಮಪತ್ರ ಸಲ್ಲಿಸಲಾಗಿದೆ. ಎಚ್.ಡಿ.ರೇವಣ್ಣ ಅವರು “ನೋಡ್ತಾ ಇರಿ ಏನಾಗುತ್ತದೆ ಅಂತ’ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ, ಕಾಂಗ್ರೆಸ್ , ಬಿಜೆಪಿ ಹಾಗೂ ಪಕ್ಷೇತರ ಶಾಸಕರು ಎಚ್.ಡಿ.ಕುಮಾರಸ್ವಾಮಿಯವರ ಸಂಪರ್ಕದಲ್ಲಿದ್ದಾರೆ. ಅವರು ಕೈ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ.
ಮತ್ತೂಂದು ಮೂಲಗಳ ಪ್ರಕಾರ, ಏಳು ಬಂಡಾಯ ಶಾಸಕರು ತಾಂತ್ರಿಕವಾಗಿ ಜೆಡಿಎಸ್‌ನಲ್ಲೇ ಇರುವುದರಿಂದ ಅವರಿಗೆ ವಿಪ್ ನೀಡಿ ಉಲ್ಲಂಘನೆ ಮಾಡಿದರೆ ಅದನ್ನೇ ಮುಂದಿಟ್ಟು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಮೊರೆ ಹೋಗಲು ಕಾರ್ಯತಂತ್ರ ರೂಪಿಸಲಾಗಿದೆ.
ಎಚ್.ಡಿ. ರೇವಣ್ಣ ಗರಂ:
ಜೆಡಿಎಸ್ ಅಭ್ಯರ್ಥಿಯಾಗಿರುವ ಬಿ.ಎಂ. ಫಾರೂಕ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದರೂ, ಎಚ್.ಡಿ. ರೇವಣ್ಣ ಅವರು ಸಮಯ ಹಾಗೂ ಮುಹೂರ್ತ ನೋಡಿಕೊಂಡು ಮತ್ತೂಂದು ಬಾರಿ ನಾಮಪತ್ರ ಸಲ್ಲಿಸಲು ಕರೆದುಕೊಂಡು ಬಂದಿದ್ದರು. ರಾಹುಕಾಲ ಮುಗಿಯುವ ಸಮಯವಾದರೂ ಫಾರೂಕ್ ವಿಧಾನಸೌಧಕ್ಕೆ ಬರದಿದ್ದಕ್ಕೆ ಗರಂ ಆಗಿದ್ದ ರೇವಣ್ಣ, ಬೇಗ ಬರದಿದ್ದರೆ ನಾನೇ ವಾಪಸ್ಸು ಹೋಗುತ್ತೇನೆ ಎಂದು ಆಪ್ತರ ಮೂಲಕ ಫೋನ್ ಮಾಡಿಸಿ ಕರೆಸಿ, ಮತ್ತೂಂದು ಬಾರಿ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿಗಳಿಗೆ ಮೂರು ಗಂಟೆ ಕಾಯ್ದ ಅಧ್ಯಕ್ಷರು.
ಅಚ್ಚರಿಯಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲು ದಾಖಲೆಗಳನ್ನು ಕಲೆ ಹಾಕಲು ಹರ ಸಾಹಸ ಪಡೆಬೇಕಾಯಿತು. ಭಾನುವಾರ ಹೆಸರು ಅಂತಿಮವಾಗಿದ್ದರಿಂದ ಸೋಮವಾರವೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಯಾವುದೇ ಮುನ್ಸೂಚನೆ ಇಲ್ಲದಿರುವುದರಿಂದ ಪ್ರತಿಯೊಂದು ದಾಖಲೆ ಕಲೆ ಹಾಕಲು ಸಮಯ ತೆಗೆದುಕೊಂಡರು. ಅವರ ನಾಮಪತ್ರ ಸಲ್ಲಿಕೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಸಿಎಲ್‌ಪಿ ಕಚೇರಿಗೆ ಆಗಮಿಸಿ ಅಭ್ಯರ್ಥಿಗಳಿಗಾಗಿ ಕಾದು ಕುಳಿತರು.
ಅಭ್ಯರ್ಥಿಗಳ ಆಯ್ಕೆ ಆಗಿದ್ದು ಹೇಗೆ ?
ಎಲ್. ಹನುಮಂತಯ್ಯ:
ಎ.ಜೆ. ಸದಾಶಿವ ವರದಿ ಜಾರಿಯಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ದಲಿತ ಎಡಗೈ ಸಮುದಾಯದವರಿಗೆ ನ್ಯಾಯ ಕೊಡಬೇಕೆಂದು ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ಆಂಜನೇಯ ಒತ್ತಾಯಿಸಿದ್ದರಂತೆ. ಅವರ ಲೆಕ್ಕಾಚಾರದಂತೆ ದಲಿತ ಎಡಗೈ ಸಮುದಾಯದ ನಾಯಕಿ ಮೀರಾ ಕುಮಾರ್ ಅವರಿಗೆ ಟಿಕೆಟ್ ಕೊಡುವಂತೆ ಕೇಳಿಕೊಂಡಿದ್ದರು.
ಆದರೆ, ಹೊರ ರಾಜ್ಯದವರಿಗೆ ಟಿಕೆಟ್ ಕೊಡುವುದನ್ನು ವಿರೋಧಿಸಿದ ಸಿಎಂಗೆ ರಾಜ್ಯದ ದಲಿತ ಎಡಗೈ ಸಮುದಾಯದ ಅಭ್ಯರ್ಥಿ ಹೆಸರು ಸೂಚಿಸುವಂತೆ ಹೇಳಿದಾಗ ಎಲ್. ಹನುಮಂತಯ್ಯ ಅವರ ಹೆಸರು ಪ್ರಸ್ತಾಪಿಸಿದ್ದು, ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದಾರೆ.
ನಾಸೀರ್ ಹುಸೇನ್:
ರಾಜ್ಯದವರೇ ಆದ ಮಾಜಿ ಸಚಿವರುಗಳಾದ ಎ.ಎಂ. ಹಿಂಡಸಗೇರಿ ಹಾಗೂ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ನಜೀರ್ ಅಹಮದ್ ಅವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ನಜೀರ್ ಅಹಮದ್ ಪರವಾಗಿದ್ದರೆ, ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಎ.ಎಂ. ಹಿಂಡಸಗೇರಿ ಪರವಾಗಿ ಪಟ್ಟು ಹಿಡಿದು ಇಬ್ಬರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತು. ಆಗ ಒಮ್ಮತದ ಹೊಸ ಅಭ್ಯರ್ಥಿ ಹೆಸರು ಸೂಚಿಸುವಂತೆ ರಾಹುಲ್ ಗಾಂಧಿ ಕೇಳಿದಾಗ ಎಐಸಿಸಿ ಮಾಧ್ಯಮ ಘಕದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ನಾಸೀರ್ ಹುಸೇನ್ ಹೆಸರು ಪ್ರಸ್ತಾಪಿಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜಿ.ಸಿ. ಚಂದ್ರಶೇಖರ್
ಮೂರನೇ ಅಭ್ಯರ್ಥಿ ಆಯ್ಕೆ ಕುರಿತಂತೆ ಜೆಡಿಎಸ್ ಇನ್ನೂ ದೆಹಲಿ ಮಟ್ಟದಲ್ಲಿ ಮಾತುಕತೆಯ ಪ್ರಯತ್ನ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಮಾತುಕತೆ ಯಶಸ್ವಿಯಾದರೆ ಮೂರನೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಬೇಕೆಂಬ ಸೂಚನೆಯ ಮೇರೆಗೆ ಕೆಪಿಸಿಸಿ ಅಧ್ಯಕ್ಷರ ಆಪ್ತರಾಗಿರುವ ಜಿ.ಸಿ. ಚಂದ್ರಶೇಖರ್ ಅವರಿಗೆ ಟಿಕೆಟ್ ಪಡೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಮಾತುಕತೆ ಮುರಿದು ಬಿದ್ದರೆ, ಜಿ.ಸಿ. ಚಂದ್ರಶೇಖರ್ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಪರಮೇಶ್ವರ್ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜೀವ್ ಚಂದ್ರಶೇಖರ್:
ಹಾಲಿ ಪಕ್ಷೇತರ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ ಹೊರ ರಾಜ್ಯದವರು ಹಾಗೂ ಅಧಿಕೃತ ಪಕ್ಷದ ಅಭ್ಯರ್ಥಿ ಅಲ್ಲ ಎಂಬ ಕಾರಣಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿತ್ತು. ಮಾಜಿ ಸಂಸದ ವಿಜಯ್ ಸಂಕೇಶ್ವರ್ ಹಾಗೂ ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಎನ್. ಶಂಕರಪ್ಪ ಅವರ ಹೆಸರೂ ಬಲವಾಗಿ ಕೇಳಿ ಬಂದಿತ್ತು. ಕೊನೆ ಕ್ಷಣದಲ್ಲಿ ರಾಜೀವ್ ಚಂದ್ರಶೇಖರ್ ಅಧಿಕೃತವಾಗಿ ಪಕ್ಷ ಸೇರುವ ಒಪ್ಪಿಗೆಯೊಂದಿಗೆ ರಾಜೀವ್ ಚಂದ್ರಶೇಖರ್ ಟಿಕೆಟ್ ಪಡೆದುಕೊಂಡಿದ್ದಾರೆ.
ಬಿ.ಎಂ. ಫಾರೂಕ್:
ಈ ಹಿಂದೆಯೇ ರಾಜ್ಯಸಭೆಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಅಲ್ಲದೇ ತಮ್ಮ ಗೆಲುವಿಗೆ ಅಗತ್ಯವಿರುವ ಮತಗಳನ್ನು ಸ್ವಂತ ಶಕ್ತಿಯಿಂದ ಸೆಳೆಯುವ ಭರವಸೆಯೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಸಭೆ ಚುನಾವಣೆ:ಅಭ್ಯರ್ಥಿಗಳ ಹೇಳಿಕೆ
ರಾಜೀವ್ ಚಂದ್ರಶೇಖರ್ ಹನ್ನೆರಡು ವರ್ಷ ಸುದೀರ್ಘ ರಾಜಕಾರಣದಲ್ಲಿದ್ದಾರೆ. ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿ ಮೂರನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಅವರು ಕನ್ನಡಿಗರೇ ಆಗಿದ್ದಾರೆ. ಅನೇಕ ಕನ್ನಡ ಪರ ಹೋರಾಟ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರವಾಸ ಬಂದ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಿದ್ದಾರೆ.
– ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ
ನಾನು ಎರಡು ಬಾರಿ ರಾಜ್ಯಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ನನಗೆ ಗೌರವ ನೀಡಿದೆ. ನಾನು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದೇನೆ. ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡಲು ನಿಮ್ಮ ಸಹಕಾರ ಬೇಕು.
– ರಾಜೀವ್ ಚಂದ್ರಶೇಖರ್, ಬಿಜೆಪಿ ಅಭ್ಯರ್ಥಿ
ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನನ್ನ ಕರ್ತವ್ಯ. ಕಾಂಗ್ರೆಸ್ ಹೈ ಕಮಾಂಡ್ ಜೊತೆಗೆ ನಮ್ಮ ನಾಯಕರು ಮಾತುಕತೆ ನಡೆಸಿದ್ದರು. ಕಾಂಗ್ರೆಸ್ ಬೇರೆ ಕಡೆಯಲ್ಲಾ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇಲ್ಲಿ ಕೊನೆ ಕ್ಷಣದಲ್ಲಿ ಯಾಕೆ ಬದಲಾವಣೆ ಮಾಡಿದರೋ ಗೊತ್ತಿಲ್ಲ.ನನಗೆ ಈಗಲೂ ಗೆಲ್ಲುವ ವಿಶ್ವಾಸ ಇದೆ.
– ಬಿ.ಎಂ. ಫಾರೂಕ್, ಜೆಡಿಎಸ್ ಅಭ್ಯರ್ಥಿ
ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಪಕ್ಷದ ಕೆಲಸವನ್ನು ಮಾಡಿದವರು. ಮೂವರೂ ಉತ್ಸಾಹಿಗಳಾಗಿದ್ದು, ಇವರ ಆಯ್ಕೆ ಪಕ್ಷದ ಕಾರ್ಯಕರ್ತರಿಗೆ ಉತ್ತೇಜನ ಕೊಡಲಿದೆ. ಈ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಅಭಿನಂದನೆಗಳು.
– ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್ ನಮ್ಮ ಮೇಲೆ ವಿಶ್ವಾಸ ಇಟ್ಟು ಔದಾರ್ಯ ತೋರಿದೆ. ಇದಕ್ಕೆ ಭಂಗ ಬಾರದಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್ ಯಾವ ರೀತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ ಮತ್ತು ಉಳಿದ ಪಕ್ಷಗಳು ಹೇಗೆ ಆಯ್ಕೆ ಮಾಡುತ್ತಿದೆ ಎನ್ನುವುದು ಜನತೆಗೆ ಗೊತ್ತಾಗಿದೆ.
– ಡಾ.ಎಲ್. ಹನುಮಂತಯ್ಯ, ಕಾಂಗ್ರೆಸ್ ಅಭ್ಯರ್ಥಿ
ಪಕ್ಷ ನಮಗೆ ದೊಡ್ಡ ಜವಾಬ್ದಾರಿ ನೀಡಿದೆ. ರಾಜ್ಯದ ಪರವಾಗಿ ರಾಜ್ಯಸಭೆಯಲ್ಲಿ ಹೇಗೆ ಕೆಲಸ ಮಾಡಬೇಕೋ ಆ ರೀತಿಯಲ್ಲಿ ನಾವು ಮೂವರೂ ಕೆಲಸ ಮಾಡುತ್ತೇವೆ. ರಾಜ್ಯದ ಹಿತ ಕಾಯುತ್ತೇವೆ. ನಾಯಕರ ನಂಬಿಕೆಯನ್ನೂ ಉಳಿಸಿಕೊಳ್ಳುತ್ತೇವೆ.
– ನಾಸೀರ್ ಹುಸೇನ್: ಕಾಂಗ್ರೆಸ್ ಅಭ್ಯರ್ಥಿ
ಪಕ್ಷಕ್ಕೆ ದುಡಿದ ಕಾರ್ಯಕರ್ತನೊಬ್ಬನನ್ನು ಗುರುತಿಸಿ ರಾಜ್ಯಸಭೆಗೆ ಅಭ್ಯರ್ಥಿಯಾಗಲು ಅವಕಾಶ ಮಾಡಿಕೊಟ್ಟಿದ್ದು ಹೆಮ್ಮೆ. ಸಣ್ಣ ಕಾರ್ಯಕರ್ತನನ್ನೂ ಪಕ್ಷ ಕಡೆಗಣಿಸುವುದಿಲ್ಲ ಎನ್ನುವುದು ಈ ಮೂಲಕ ಸಾಬೀತಾಗಿದೆ. ನಾಡು ನುಡಿಗಾಗಿ ನಾವು ಶ್ರಮಿಸುತ್ತೇವೆ.
– ಜಿ.ಸಿ. ಚಂದ್ರಶೇಖರ್, ಕಾಂಗ್ರೆಸ್ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.