ರಾಮಾಯಣ ಕೇವಲ ಕವಿ ಕಲ್ಪನೆ
Team Udayavani, Aug 25, 2018, 12:52 PM IST
ಬೆಂಗಳೂರು: “ರಾಮಾಯಣ ಕವಿ ಕಲ್ಪನೆ ಅಷ್ಟೇ.ಅದು,ನಮ್ಮ ಬದುಕಿಗೆ ಅತಿ ಹತ್ತಿರವಾಗಲಿ ಎಂಬ ದೃಷ್ಟಿಯಿಂದ ಪಾತ್ರಗಳನ್ನು ಸೃಷ್ಟಿ ಮಾಡಲಾಗಿದೆ’ಎಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
ಲಹರಿ ಅಡ್ವೊಕೇಟ್ ಫೋರಂ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಲಹರಿ ಲಾಯರ್ಸ್ ಆ್ಯಕ್ಟ್ -2018′, ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಲ್ಪನೆ ನೀಡಲಾಗಿದೆ. ಥೈಲ್ಯಾಂಡ್‌ನಲ್ಲಿ ರಾಮ, ಲಕ್ಷ್ಮಣ, ಸೀತೆಯರನ್ನು ಸಹೋದರ ಸಹೋದರಿ ರೀತಿಯಲ್ಲಿ ನೋಡಲಾಗುತ್ತಿದೆ. ಆದರೆ ಭಾರತದಲ್ಲಿ ವಾಲ್ಮೀಕಿ ಒಂದು ಗಂಡಿಗೆ ಒಂದೇ ಹೆಣ್ಣು ಎಂಬ ಕಲ್ಪನೆಯಲ್ಲಿ ರಾಮಾಯಣ ಹೆಣೆದಿದ್ದಾರೆ ಎಂದು ಇತಿಹಾಸ ಬಿಚ್ಚಿಟ್ಟರು.
12ನೇ ಶತಮಾನದಲ್ಲಿ ವಚನ ಚಳುವಳಿಕಾರ ಬಸವಣ್ಣನವರು ಮಾನವತ್ವದ ಮಹಾಕ್ರಾಂತಿ ಮಾಡಿದರು. ಆದರೆ, ಇಂದು ಮಾನವೀಯತೆ ಇಲ್ಲದ ರೀತಿಯಲ್ಲಿ ಬದುಕು ಸಾಗಿಸಲಾಗುತ್ತದೆ. ಹೀಗಾಗಿ ಮೊದಲು, ನಾವು ಮಾನವೀಯ ಗುಣಗಳನ್ನು ರೂಢಿಸಿಕೊಳ್ಳುವುದರ ಜತೆಗೆ ಅದನ್ನು ಬಿತ್ತುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ನಾವೇ ಸೃಷ್ಟಿಸಿಕೊಂಡ ಆಪತ್ತು: ಕೊಡಗು ಮತ್ತು ಕೇರಳದಲ್ಲಿ ಉಂಟಾಗಿರುವ ವಿಪತ್ತು ಮನುಷ್ಯರೇ ಸೃಷ್ಟಿಸಿಕೊಂಡಿರುವುದಾಗಿದೆ. ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡದೇ ಮೂಲೆಗುಂಪು ಮಾಡಿರುವುದು ಕೂಡ ಇದರಲ್ಲಿ ಸೇರಿದೆ. ಭೂಮಿ ಕೇವಲ ಮನುಷ್ಯ ಸಂಕುಲಕಷ್ಟೇ ಸೀಮಿತವಲ್ಲ ಎಂಬುವುದನ್ನು ಮಾನವ ಸಂಕುಲ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಬೆಂಗಳೂರಿನಲ್ಲೂ ಕೂಡ ಕೆರೆ ಹಾಗೂ ರಾಜಕಾಲುವೆ ಒತ್ತುವರಿಯಾಗಿದೆ. ಹೀಗಾಗಿ ಕೊಡಗು ಮತ್ತು ಕೇರಳದಲ್ಲಿ ಕಾಣಿಸಿಕೊಂಡಿರುವ ಪರಿಸ್ಥಿತಿ ಮುಂದೊಂದು ದಿನ ಸಿಲಿಕಾನ್‌ಸಿಟಿ ಬೆಂಗಳೂರಿಗೂ ಬರಬಹುದು ಎಂದು ಎಚ್ಚರಿಸಿದರು.
ಕೋರ್ಟ್‌ನಲ್ಲಿ ದಿನಲೂ ವಾದ ಮಂಡನೆ ಮಾಡುವ ವಕೀಲರಲ್ಲೂ ನಾಟಕದ ಅಭಿರುಚಿ ಇದೆ ಎಂಬುವುದನ್ನು ಮರೆಯಲಾಗದು.ರಂಗಭೂಮಿ ಬೆಳವಣಿಗೆ ದೃಷ್ಟಿಯಿಂದ ಈ ಪ್ರಯತ್ನ ಖಷಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ಹೀಗೆ ನಡೆಯಲಿ ಎಂದು ಆಶಿಸಿದರು.
ವಕೀಲರಿಗೆ ಡ್ರಾಮಾ ಹೊಸದಲ್ಲ: ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಮಾತನಾಡಿ, ವಕೀಲರಿಗೆ ಡ್ರಾಮಾ ಹೊಸದೇನು ಅಲ್ಲ.ನ್ಯಾಯಾಲದಲ್ಲಿ ತಮ್ಮ ಕಕ್ಷಿದಾರರ ಜತೆ ಮಾತನಾಡುವಾಗ ಸೇರಿದಂತೆ ಹಲವು ಸನ್ನಿವೇಶಗಳಲ್ಲಿ ವಕೀಲರು ಆಗಾಗ ನಾಟಕ ಮಾಡುತ್ತಲೇ ಇರುತ್ತಾರೆ ಎಂದು ನಗೆ ಚಟಾಕಿಯನ್ನು ಹಾರಿಸಿದರು.
ಬಿಡುವಿಲ್ಲದ ತಮ್ಮ ವಕೀಲ ವೃತ್ತಿಯ ನಡುವೆಯೂ, ರಾಜ್ಯದಲ್ಲಿರುವ ವಕೀಲರನ್ನು ಸಂಘಟಿಸಿ ಎರಡು ದಿನಗಳ ನಾಟಕೋತ್ಸವ ಸ್ಪರ್ಧೆಯನ್ನು ಹಮ್ಮಿಕೊಳ್ಳುವುದು ಸಾಮಾನ್ಯದ ಕೆಲಸವೇನು ಅಲ್ಲ. ಇದೊಂದು ಉತ್ತಮವಾದ ಕೆಲಸವಾಗಿದ್ದು ವಯಕ್ತಿಕವಾಗಿ ನನಗೆ ಸಂತಸ ನೀಡಿದೆ ಎಂದು ಹೇಳಿದರು. ಲಹರಿ ಅಡ್ವೊಕೇಟ್ ಫೋರಂನ ಅಧ್ಯಕ್ಷೆ ಪಿ.ಅನು ಚಂಗಪ್ಪ, ಕಾರ್ಯದರ್ಶಿ ಆರ್.ಜಿ.ಚೌವ್ಹಾಣ್, ಶ್ರೀಕಾಂತ್ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಂತ್ರಸ್ತರಿಗೆ ನಿಧಿಸಂಗ್ರಹ: ಎರಡು ದಿನಗಳ ಈ ನಾಟಕೋತ್ಸವ ಸ್ಪರ್ಧೆಯಲ್ಲಿ ಶಿವಮೊಗ್ಗ, ಧಾರವಾಡ, ಮೈಸೂರು ಮತು ಬೆಂಗಳೂರು ಸೇರಿದಂತೆ ಒಟ್ಟು ಐದು ತಂಡಗಳು ಭಾಗವಹಿಸಿವೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 72, ಸಾವಿರ ರೂ. ದ್ವಿತೀಯ ಬಹುಮಾನ 50, ಸಾವಿರ ರೂ.ಹಾಗೂ ತೃತೀಯ ಬಹುಮಾನ 25 ಸಾವಿರ ರೂ.ನೀಡಲಾಗುವುದು. ಟಿಕೆಟ್ ಸಂಗ್ರಹದ ಹಣವನ್ನು ಕೊಡಗು ಸಂತ್ರಸ್ತರಿಗೆ ನೀಡಲು ಲಹರಿ ಅಡ್ವೋಕೆಟ್ ಫೋರಂ ನಿರ್ಧರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.