ಸಿಡಿ ಪ್ರಕರಣದಲ್ಲಿ ಸಿಬಿಐ ತನಿಖೆ ಸದ್ಯ ಅನಗತ್ಯ: ಹೈಕೋರ್ಟ್
Team Udayavani, Apr 18, 2021, 5:07 PM IST
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್‌ಐಟಿಯಿಂದ ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ವಕೀಲರಾದ ಎಸ್. ಉಮೇಶ್ ಹಾಗೂ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ವರದಿಯನ್ನು ಪರಿಶೀಲಿಸಿತು. ಬಳಿಕ, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರು ಎಫ್‌ಐಆರ್‌ಗಳಲ್ಲೂ ಎಸ್‌ಐಟಿ ತನಿಖೆ ನಡೆಸಿ ಪ್ರತ್ಯೇಕ ವರದಿಗಳನ್ನು ಸಲ್ಲಿಸಿದೆ. ಈ ಮೂರು ವರದಿಗಳಲ್ಲೂ ತನಿಖೆಗೆ ಸಂಬಂಧಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ವಿವರವಿದೆ. ಇವುಗಳನ್ನು ಗಮನಿಸಿದರೆ ಸದ್ಯಕ್ಕೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದಿತು.
ಅಲ್ಲದೇ, ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲೇ ಭದ್ರಪಡಿಸಿಡಲು ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಪೀಠ, ಮುಂದಿನ ತನಿಖಾ ಪ್ರಗತಿ ವರದಿಯನ್ನು ಎಸ್‌ಐಟಿ ಮುಚ್ಚಿದ ಲಕೋಟೆಯಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರ ವಕೀಲ ಉಮೇಶ್ ಪರ ವಾದ ಮಂಡಿಸಿದ ವಕೀಲ ಬಿ.ವಿ ಶಂಕರನಾರಾಯಣ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗುತ್ತಿದೆ. ಅದನ್ನೇ ಇಟ್ಟುಕೊಂಡು ಟಿವಿ ವಾಹಿನಿಗಳು ಮೀಡಿಯಾ ಟ್ರಯಲ್ ನಡೆಸುತ್ತಿವೆ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು. ವಾದ ತಿರಸ್ಕರಿಸಿದ ನ್ಯಾಯಪೀಠ, ಯಾವ ಶಾಸನಾತ್ಮಕ ಅಧಿಕಾರ ಬಳಸಿ ಸರ್ಕಾರ ಮಾಧ್ಯಮಗಳನ್ನು ನಿರ್ಬಂಧಿಸಬೇಕು. ನಿರ್ದಿಷ್ಟ ಸುದ್ದಿ ಸಂಸ್ಥೆ ಮಾಡಿರುವ ಉಲ್ಲಂಘನೆ ತೋರಿಸಿ ಎಂದು ಪ್ರಶ್ನಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.