Rameswaram Cafe: : ಕೃತ್ಯ ವೇಳೆ 400 ಮೊಬೈಲ್ ಸಕ್ರಿಯ ಪರಿಶೀಲನೆ
Team Udayavani, Mar 3, 2024, 11:43 AM IST
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸಿಸಿ ಕ್ಯಾಮೆರಾದಲ್ಲಿ ಶಂಕಿತ ಆರೋಪಿಯ ಚಹರೆ, ಚಲನವಲನ ದೃಶ್ಯ ಸೆರೆಯಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮುಖಚಹರೆ ಕಾಣದಂತೆ ಮಾಸ್ಕ್ ಹಾಗೂ ಕೂಲಿಂಗ್ ಗ್ಲಾಸ್, ಟೋಪಿ ಧರಿಸಿರುವುದು ಗೊತ್ತಾಗಿದೆ.
ರಾಮೇಶ್ವರಂ ಕೆಫೆ ಮುಂದೆಯೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಅಲ್ಲೇ ಇರುವ ಹೋಟೆಲ್‌ನ ಹೊರ ಭಾಗದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ. ಶಂಕಿತ ಆರೋಪಿಯು ಸುಮಾರು 28-30 ವರ್ಷದವನಂತೆ ಕಂಡು ಬಂದಿದ್ದಾನೆ. ಕಪ್ಪು ಬಣ್ಣದ ಶೂ, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ತೆಳು ನೀಲಿ ಬಣ್ಣದ ಅಂಗಿ ಧರಿಸಿದ್ದ. ತಲೆಗೆ ಬಿಳಿ ಬಣ್ಣದ ಹ್ಯಾಟ್ ಧರಿಸಿದ್ದು, ಅದರ ಮೇಲೆ ನಂಬರ್ 10 ಎಂದು ನಮೂದಿಸಲಾಗಿತ್ತು. ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಹಾಕಿದ್ದ. ಬಲ ಭಾಗದ ಹೆಗಲಿಗೆ ಕಪ್ಪು ಬಣ್ಣದ ಬ್ಯಾಗ್ ಸಿಲುಕಿಸಿಕೊಂಡು, ರಾಮೇಶ್ವರಂ ಕೆಫೆಯತ್ತ ಕಾಲ್ನಡಿಗೆಯಲ್ಲಿ ಎಂಟ್ರಿ ಕೊಡುತ್ತಾನೆ. ಕೆಫೆಯಲ್ಲಿ ರವೆ ಇಡ್ಲಿಗೆ ದುಡ್ಡು ಕೊಟ್ಟು ಟೋಕನ್ ತೆಗೆದುಕೊಳ್ಳುತ್ತಾನೆ. ಇನ್ನು ತಿಂಡಿಯ ಪ್ಲೇಟ್ ಹಿಡಿದು ಅತ್ತಿತ್ತ ಓಡಾಡಿದ್ದಾನೆ. ಸಾರ್ವಜನಿಕರು ಹಾಗೂ ಸಿಸಿ ಕ್ಯಾಮೆರಾ ಸೆರೆಯಾಗದ ಜಾಗ ಹುಡುಕಲು ಪ್ರಯತ್ನಿಸಿದ್ದ. ನಂತರ ಇಡ್ಲಿ ತಿಂದು ಕೊನೆಗೆ ಕೈ ತೊಳೆಯುವ ಜಾಗಕ್ಕೆ ಬಂದು ಕೈ ತೊಳೆದು ಬ್ಯಾಗ್ ಅನ್ನು ವಾಷ್ ಬೇಸನ್ ಪಕ್ಕದಲ್ಲಿ ಇಟ್ಟು ತನಗೇನೂ ಗೊತ್ತೇ ಇಲ್ಲ ಎಂಬ ಮುಗªನಂತೆ ಶುಕ್ರವಾರ ಬೆಳಗ್ಗೆ 11.50ಕ್ಕೆ ಹೋಟೆಲ್‌ನಿಂದ ಹೊರ ಬಂದಿದ್ದಾನೆ. ಹೋಗುತ್ತಾ ವಾಚ್‌ನಲ್ಲಿ ಟೈಂ ನೋಡಿದ್ದಾನೆ. ಕೆಫೆಯಿಂದ ಹೊರಗೆ ಬಂದು ಎಡಭಾಗಕ್ಕೆ ಹೋಗಿ ಕಣ್ಮರೆಯಾಗಿದ್ದಾನೆ.
ಮೊಬೈಲ್ ಬಳಸುತ್ತಿದ್ದ ಆರೋಪಿ: ಆತ ಮೊಬೈಲ್ ಬಳಕೆ ಮಾಡುತ್ತಿರುವ ದೃಶ್ಯ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಆತನ ಮೊಬೈಲ್ ಬಳಕೆಯಲ್ಲಿರುವುದು ಅನುಮಾನವಾಗಿದ್ದು, ಪೊಲೀಸರೂ ಗೊಂದಲಕ್ಕೊಳಗಾಗಿದ್ದಾರೆ. ಇಡ್ಲಿ ಖರೀದಿ ಮಾಡುವಾಗ ಬಿಲ್ ಕೌಂಟರ್‌ನ ಟೇಬಲ್ ಮೇಲೆ ಆ ವ್ಯಕ್ತಿ ಮೊಬೈಲ್ ಇಟ್ಟಿದ್ದ. ಮೊಬೈಲ್ ಹಿಡಿದುಕೊಂಡಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ್ದ. ತಿಂಡಿ ತಿನ್ನುವಾಗಲೂ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ಹಲವು ಬಾರಿ ಮೊಬೈಲ್ ಬಳಕೆ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಕೂಡಲೇ ಟವರ್ ಡಂಪ್ ಮಾಡಿ ತಾಂತ್ರಿಕ ಕಾರ್ಯಾಚರಣೆ ನಡೆಸಿದ್ದಾರೆ. ಆ ವೇಳೆ ಕೃತ್ಯ ನಡೆದ ಪ್ರದೇಶದ ಆಸುಪಾಸಿನಲ್ಲಿ 400ಕ್ಕೂ ಹೆಚ್ಚು ಮೊಬೈಲ್ ನಂಬರ್‌ಗಳು ಆ್ಯಕ್ಟೀವ್ ಆಗಿತ್ತು. ಹೀಗಾಗಿ ಒಂದು ತನಿಖಾ ತಂಡವು ಟ್ರೇಸ್ ಆಗಿರುವ 400 ಮೊಬೈಲ್ ನಂಬರ್‌ಗಳನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದೆ.
ಆದರೆ, ಶಂಕಿತ ಬಾಂಬರ್ ಬಳಕೆ ಮಾಡಿದ ಮೊಬೈಲ್ ನಂಬರ್ ನಿಗೂಢವಾಗಿದೆ. ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಶಂಕಿತ ಬಳಕೆಯಲ್ಲಿ ಇಲ್ಲದ ಮೊಬೈಲ್ ಬಳಸಿ ಮಾತನಾಡಿದಂತೆ ನಾಟಕವಾಡಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಸೈಡ್ ಬ್ಯಾಗ್ ಹಾಕಿಕೊಂಡು ಆ ಸೈಡ್ ಬ್ಯಾಗ್ ಒಳಗೆ ಮತ್ತೂಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಫೆಗೆ ಅವಸರದಲ್ಲಿ ಬಂದು ಅವಸರದಲ್ಲೇ ಹೊರ ಹೋಗುತ್ತಾನೆ. ಬಳಿಕ ರಸ್ತೆಯಲ್ಲೂ ವೇಗವಾಗಿ ಹೋಗುತ್ತಾನೆ.
ಅಂಬಾನಿ ಪುತ್ರನ ವಿವಾಹಕ್ಕೂ ರಾಮೇಶ್ವರಂ ಕೆಫೆ ತಿನಿಸು :
ಗುಜರಾತ್‌ನ ಜಾಮ್ ನಗರದಲ್ಲಿ ಮುಖೇಶ ಅಂಬಾನಿ ಮಗನ ವಿವಾಹದ ಊಟದ ತಯಾರಿ ಕೆಗೆ ರಾಮೇಶ್ವರಂ ಕೆಫೆಯೂ ಆಯ್ಕೆಯಾಗಿದೆ. 5 ದಿನದ ಹಿಂದೆಯೇ ರಾಮೇಶ್ವರಂ ಕೆಫೆಯ 50 ಜನರ ತಂಡ, ಜಾಮ್ ನಗರಕ್ಕೆ ತೆರಳಿದೆ. ಮುಖೇಶ್ ಅಂಬನಿಯ ಪುತ್ರನ ಮದುವೆಗೆ ದೇಶ- ವಿದೇಶಗಳಿಂದ ಬಾಣಸಿಗರನ್ನ ಕರೆಸಿದ್ದು, ಕರ್ನಾಟಕದಿಂದ ರಾಮೇಶ್ವರಂ ಕೆಫೆ ಆಯ್ಕೆಯಾಗಿದೆ.
ಗ್ರಾಹಕರ ಪ್ರಮಾಣ ಇಳಿಮುಖ: ರಾಮೇಶ್ವರಂ ಕೆಫೆಯ ರಾಜಾಜಿನಗರ, ಇಂದಿರಾನಗರ ಮತ್ತು ಜೆಪಿ ನಗರದಲ್ಲಿ ಪ್ರತಿ ಶನಿವಾರ, ಭಾನುವಾರದಂದು ಗ್ರಾಹಕರಿಂದ ಗಿಜಿಗುಡುತಿತ್ತು. ಅದರೆ, ಶನಿವಾರ ಎಂದಿಗಿಂತ ಅರ್ಧದಷ್ಟು ಗ್ರಾಹಕರು ಕೂಡ ಕಾಣಸಿಗುತ್ತಿಲ್ಲ. ಅರ್ಧಕ್ಕರ್ಧ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ.
ವೋಲ್ವೋ ಬಸ್‌ನಲ್ಲಿ ಪ್ರಯಾಣಿಸಿದ್ದ ಶಂಕಿತ ಉಗ್ರ :
ಬಿಎಂಟಿಸಿ ವೋಲ್ವೋ ಡಿಪೋ- 13ರ ಕಾಮಾಕ್ಯಗೆ ಸೇರಿದ್ದ ಬನಶಂಕರಿಯಿಂದ ಐಟಿಪಿಎಲ್ ( ಸಿಲ್ಪ್ ಬೋರ್ಡ್ ಮಾರ್ಗ ) ಹೋಗುವ ಓಲ್ವೋ ಬಸ್‌ನಲ್ಲಿ ಶಂಕಿತ ಪ್ರಯಾಣಿಸಿರುವುದು ಗೊತ್ತಾಗಿದೆ. ಕುಂದಹಳ್ಳಿಯಿಂದ ಬಸ್ ಹತ್ತಿದ್ದ ಶಂಕಿತ ಆರೋಪಿಯು, ಸಿಎಂಆರ್‌ಐಟಿ ಕಾಲೇಜು ಸ್ಟಾಪ್‌ನಲ್ಲಿ ಇಳಿದುಕೊಂಡಿದ್ದಾನೆ. ನಂತರ ಅಲ್ಲಿಂದ ನಡೆದುಕೊಂಡು ರಾಮೇಶ್ವರಂ ಕೆಫೆಗೆ ಹೋಗಿದ್ದ. ಇದು ಆತ ಪ್ರಯಾಣಿಸಿದ್ದ ಓಲ್ವೋ ಬಸ್‌ನ ಸಿಸಿ ಕ್ಯಾಮೆರಾ ವಿಡಿಯೋವನ್ನು ಪರಿಶೀಲನೆ ವೇಳೆ ಕಂಡು ಬಂದಿದೆ. ಚಾಲಕ ಹಾಗೂ ನಿರ್ವಾಹಕರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಶಂಕಿತ ವ್ಯಕ್ತಿ ಬಿಎಂಟಿಸಿ ಬಸ್ಸಿನಲ್ಲಿ ಓಡಾಡಿದ್ದಾನೆ. ಬಸ್ಸಿನಿಂದ ಇಳಿದು ಹೋದ ಕುರಿತು ಅಧಿಕಾರಿಗಳು ಮಾಹಿತಿ ಕೇಳಿದ್ದರು. ಹೀಗಾಗಿ ಎಲ್ಲ ಸಿಸಿಟಿವಿ ಫೋಟೆಜ್‌ಗಳನ್ನು ಕೊಟ್ಟಿದ್ದೇವೆ. ನಾವು ಕೊಟ್ಟ ಮಾಹಿತಿ ಮೇಲೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ವೋಲ್ವೋ ಬಸ್ ಡಿಪೋ 25ಕ್ಕೆ ಸೇರಿದ್ದು, ರೂಟ್ ನಂಬರ್ 500 ಎಫ್ ಐಟಿಪಿಎಲ್, ಎಚ್‌ಎಸ್‌ಆರ್ ಲೇಔಟ್ ನಡುವೆ ಸಂಚಾರ ಮಾಡುವ ಬಸ್ ಇದಾಗಿದೆ ಎಂದು ತಿಳಿಸಿದ್ದಾರೆ.
ಶಂಕಿತನನ್ನು ಹೋಲುವ ಹಲವರ ವಿಚಾರಣೆ:
ಪ್ರಕರಣದಲ್ಲಿ ಐಸಿಸ್ ನಂಟಿರುವ ಸುಳಿವು ಸಿಕ್ಕಿದೆ ಬೆನ್ನಲ್ಲೇ ಸಿಸಿಬಿ ಪೊಲೀಸರ 8 ವಿಶೇಷ ತಂಡಗಳು ಒಂದು ಕಡೆ ತನಿಖೆ ನಡೆಸಿದರೆ ಮತ್ತೂಂದು ಕಡೆ ಎನ್‌ಐಎ, ರಾಜ್ಯ ಗುಪ್ತಚರ ಇಲಾಖೆ, ಕೇಂದ್ರ ಗುಪ್ತಚರ ಇಲಾಖೆ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ತನಿಖೆ ತೀವ್ರಗೊಳಿಸಿವೆ. ಎಫ್ಎಸ್‌ಎಲ್, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ತಂಡಗಳು ತನಿಖೆ ಮುಂದುವರೆಸಿವೆ.
ಶಂಕಿತ ಆರೋಪಿಗಾಗಿ ಹೊರ ರಾಜ್ಯಗಳಲ್ಲಿಯೂ ಹುಡುಕಾಟ ಆರಂಭಿಸಲಾಗಿದೆ. ಪಕ್ಕದ ಕೇರಳ, ತಮಿಳುನಾಡಿಗೂ ಸಹ ತಂಡಗಳು ತೆರಳಿರುವುದಾಗಿ ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಸಿಸಿಕ್ಯಾಮರಾ ದೃಶ್ಯಗಳಲ್ಲಿರುವ ಶಂಕಿತ ಆರೋಪಿಯನ್ನು ಹೋಲುವ ಹಲವರ ವಿಚಾರಣೆ ನಡೆಸಲಾಗಿದೆ. ಆರೋಪಿಯ ಫೋಟೋ ಆಧರಿಸಿ ಜಾಡು ಹಿಡಿಯಲಾಗುತ್ತಿದೆ.
ಹಳೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ವಿಚಾರಣೆ: ಫೋಟೋದಲ್ಲಿರುವ ಆರೋಪಿಯ ಪರಿಚಯವಿದೆಯೇ ಎಂದು ಈ ಹಿಂದೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ತನಿಖಾ ತಂಡ ವಿಚಾರಣೆ ನಡೆಸಿದೆ. ರಾಜ್ಯದ ವಿವಿಧ ಜೈಲಿನ ಅಧಿಕಾರಿಗಳಿಂದ 3 ತಿಂಗಳ ಹಿಂದಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಜೈಲಿನ ವಿಸಿಟರ್ ಲಿಸ್ಟ್ ಸಹ ಪರಿಶೀಲಿಸಲಾಗಿದೆ.
ಮಾ.8ಕ್ಕೆ ಹೋಟೆಲ್ ಮತ್ತೆ ಓಪನ್: ಸಿಇಒ:
ಬೆಂಗಳೂರು: ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಶುಕ್ರವಾರ ಶಿವರಾತ್ರಿ ದಿನದಂದು ಪುನಾರಂಭ ವಾಗುತ್ತದೆ. ಬಾಂಬ್ ಸ್ಫೋಟದ ಕೃತ್ಯವನ್ನು ಭಾರತೀಯರೆಲ್ಲರೂ ಖಂಡಿಸಬೇಕಿದೆ ಎಂದು ಹೋಟೆಲ್ ಸಹ-ಸಂಸ್ಥಾಪಕ ಮತ್ತು ಸಿಇಒ ರಾಘವೇಂದ್ರ ರಾವ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿ ರುವ ಅವರು, ಶಿವರಾತ್ರಿಯ ಮುಂದಿನ ಶುಕ್ರವಾರ (ಮಾ.8)ರಾಮೇಶ್ವರಂ ಕೆಫೆ ಮತ್ತೆ ಪ್ರಾರಂಭವಾಗಲಿದೆ. ನಮ್ಮ ಸಂಸ್ಥೆ ವತಿಯಿಂದ ಕರ್ನಾಟಕದ ಜನತೆಗೆ ವಂದನೆ ಸಲ್ಲಿಸುತ್ತೇನೆ ಎಂದರು. ರಾಮೇಶ್ವರಂ ಕೆಫೆ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. 2012ರಲ್ಲಿ ಕುಮಾರಪಾರ್ಕ್ ಸಮೀಪ ಶುರುವಾಗಿದೆ. ಹಲವು ಬಾರಿ ಸವಾಲುಗಳು ಎದುರಾಗಿವೆ. ಭಾರತೀಯರೆಲ್ಲರೂ ಬಾಂಬ್ ಸ್ಫೋಟಿಸಿದ ಕೃತ್ಯವನ್ನು ಖಂಡಿಸಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.