“ರಣಂ’ ಸ್ಟಂಟ್ ಮಾಸ್ಟರ್ ಬಂಧನ
Team Udayavani, Apr 2, 2019, 5:00 AM IST
ಬೆಂಗಳೂರು: “ರಣಂ’ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಕಂಪ್ರಸ್ಡ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣ ಸಂಬಂಧ ಸೋಮವಾರ ಸಿನಿಮಾದ ಸಹಾಯಕ ಸಾಹಸ ನಿರ್ದೇಶಕ ಹಾಗೂ ಸ್ಟಂಟ್ ಮಾಸ್ಟರ್‌ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಕಗ್ಗಲೀಪುರ ನಿವಾಸಿ ಸುಭಾಷ್ (45) ಬಂಧಿತ. ಆರೋಪಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸಿನಿಮಾದ ಸಾಹಸ ನಿರ್ದೇಶಕ ವಿಜಯನ್ ಜತೆ ಸಹಾಯಕ ಸಾಹಸ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, 20 ವರ್ಷಗಳಿಂದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಘಟನೆ ಬಳಿಕ ಸುಭಾಷ್ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಕಗ್ಗಲೀಪುರದಲ್ಲಿರುವ ಮನೆಯಲ್ಲೇ ಅವಿತುಕೊಂಡಿದ್ದರು. ಈ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಎರಡು ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
ಮಾ.29ರಂದು ನಡು ರಸ್ತೆಯಲ್ಲೇ ರಣಂ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕಾರುಗಳನ್ನು ಸ್ಫೋಟಿಸುವ ದೃಶ್ಯಕ್ಕಾಗಿ ಸಿಲಿಂಡರ್‌ಗಳನ್ನು ಇಡಲಾಗಿದ್ದು, ಅವುಗಳನ್ನು ಸ್ಫೋಟಿಸುವ ಹೊಣೆಗಾರಿಕೆಯನ್ನು ಸುಭಾಷ್ ವಹಿಸಿಕೊಂಡಿದ್ದರು. ಅಲ್ಲದೆ, ಕಾರು ಸ್ಫೋಟಿಸುವ ಬಗ್ಗೆ ಇತರೆ ಸಿಬ್ಬಂದಿ ಜತೆ ಪೂರ್ವ ತಯಾರಿ ಕೂಡ ಸುಭಾಷ್ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಹೇಗೆ ಸ್ಫೋಟಗೊಂಡಿತು ತಿಳಿದಿಲ್ಲ!: “ಸಿಲಿಂಡರ್ ಹೇಗೆ ಸ್ಫೋಟಗೊಂಡಿತು ಎಂಬ ಬಗ್ಗೆ ತಿಳಿದಿಲ್ಲ. ನಾವು ಅದನ್ನು ಊಹಿಸಿಯೂ ಇರಲಿಲ್ಲ. ದುರಾದೃಷ್ಟವಶಾತ್ ದುರ್ಘಟನೆ ಸಂಭವಿಸಿದೆ. ಇಬ್ಬರು ಮೃತಪಟ್ಟಿರುವ ವಿಚಾರ ತಿಳಿದು ಆತಂಕಗೊಂಡು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಸ್ಥಳದಿಂದ ಓಡಿ ಹೋದೆವು. ಇತರೆ ಆರೋಪಿಗಳ ಬಗ್ಗೆ ಮಾಹಿತಿ ಇಲ್ಲ’ ಎಂದು ಸುಭಾಷ್ ವಿಚಾರಣೆ ವೇಳೆ ಮಾಹಿತಿ ನೀಡಿರುವುದಾಗಿ ಪೊಲೀಸರು ಹೇಳಿದರು.
ಆಸ್ಪತ್ರೆಗೆ ಭೇಟಿ: ಸೋಮವಾರ ಬೆಳಗ್ಗೆ ತಮ್ಮನ್ನು ಭೇಟಿಯಾದ ಮೃತ ಕುಟುಂಬದ ಸದಸ್ಯರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ನ್ಯಾಯಕೊಡಿಸುವ ಭರವಸೆ ನೀಡಿದರು. ಬಳಿಕ ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಎಚ್.ಎಂ.ನಾಗ್ತಿ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಎಸಿಪಿ ನಾಗ್ತಿ ಅವರು, ಎಲ್ಲ ಆರೋಪಿಗಳು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ. ಒಂದು ವೇಳೆ ನಿಮ್ಮ ಸಂಪರ್ಕಕ್ಕೆ ಸಿಕ್ಕರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಚಿನ್ನೇಗೌಡ ಅವರಿಗೆ ಸೂಚಿಸಿದ್ದಾರೆ.
ಎಸಿಪಿ ಭೇಟಿ ನಂತರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಚಿನ್ನೇಗೌಡ ಅವರು, ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜೈನಬಳ ಆರೋಗ್ಯ ವಿಚಾರಿಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಫಿಲಂ ಚೇಂಬರ್‌ಗೆ ಮನವಿ: “ರಣಂ’ ಚಿತ್ರದ ಚಿತ್ರೀಕರಣ ದುರಂತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬದ ಸದಸ್ಯರು, ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ನ್ಯಾಯ ನೀಡುವಂತೆ ಮನವಿ ಮಾಡಿದ್ದಾರೆ.
ಮೃತ ಸುಮೈರಾ ಬಾನು ಕುಟುಂಬದವರು ನೀಡಿದ ಮನವಿ ಸ್ವೀಕರಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ ಅವರು, “ಮಂಡಳಿಯು ಶೀಘ್ರವೇ ಚಿತ್ರತಂಡಕ್ಕೆ ಸಂಬಂಧಿಸಿದವರನ್ನು ಕರೆಸಿ ಮಾತಾನಾಡಲಿದೆ,’ ಎಂದು ಭರವಸೆ ನೀಡಿದರು.
ಘಟನೆ ನಂತರ ಚಿತ್ರತಂಡದವರು ಸ್ಥಳದಿಂದ ತಲೆಮರೆಸಿಕೊಂಡಿದ್ದು, ವಾಣಿಜ್ಯ ಮಂಡಳಿಯ ಸಂಪರ್ಕಕ್ಕೂ ಸಿಕ್ಕಿಲ್ಲ. ಆದಷ್ಟು ಬೇಗ ಚಿತ್ರತಂಡದ ಸದಸ್ಯರನ್ನು ಸಂಪರ್ಕಿಸಿ, ನೊಂದ ಕುಟುಂಬಕ್ಕೆ ಖಂಡಿತವಾಗಿಯೂ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಮಾ.29 ರಂದು “ರಣಂ’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಗರದ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಶೆಲ್ ಕಂಪನಿ ಸಮೀಪ ನಡೆಯುತ್ತಿತ್ತು. ಈ ವೇಳೆ ಕಂಪ್ರಸ್ಡ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಚಿತ್ರೀಕರಣ ನೋಡಲು ಆಗಮಿಸಿದ್ದ ಸುಮೈರಾ ಬಾನು ಹಾಗೂ ಅವರ ಪುತ್ರಿ ಆಯೆರಾ ಬಾನು ಮೃತಪಟ್ಟಿದ್ದರು.
ಸುಮೈರಾ ಅವರ ಮತ್ತೂಬ್ಬ ಪುತ್ರಿ ಜೈನಬ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಬಳಿಕ ಚಿತ್ರತಂಡ ತಲೆಮರೆಸಿಕೊಂಡಿತ್ತು. “ರಣಂ’ ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ “ಆದಿನಗಳು’ ಚೇತನ್ ನಾಯಕರಾಗಿದ್ದಾರೆ. ಚಿರಂಜೀವಿ ಸರ್ಜಾ ಕೂಡ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ.
ದುರ್ಘಟನೆ ನಡೆದು ನಾಲ್ಕು ದಿನ ಕಳೆದರೂ ಚಿತ್ರತಂಡದ ಯಾರೊಬ್ಬರು ನಮ್ಮನ್ನು ಭೇಟಿಯಾಗಿಲ್ಲ. ಹೀಗಾಗಿ ರಣಂ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿದ್ದೇವೆ. ಅದಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
-ಮುನಾವರ್ ಖಾನ್, ಮೃತ ಮಹಿಳೆ ಸಂಬಂಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.