ದೇಶದಲ್ಲೇ ಮೊದಲ ರ‍್ಯಾಪಿಡ್ ರಸ್ತೆ
ಪ್ರಿಕಾಸ್ಟ್ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ ನಿರ್ಮಾಣ
Team Udayavani, Nov 23, 2022, 12:14 PM IST
ಬೆಂಗಳೂರು: ವೈಟ್‌ಟಾಪಿಂಗ್ ಕಾಮಗಾರಿಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸೇರಿ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಬಿಬಿಎಂಪಿ ದೇಶದಲ್ಲೇ ಮೊದಲ ಬಾರಿಗೆ ರ‍್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳ ಪೈಕಿ 2 ಹಂತದಲ್ಲಿ 150 ಕಿ.ಮೀ.ಗೂ ಹೆಚ್ಚಿನ ರಸ್ತೆಗಳನ್ನು ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸ ಲಾಗಿದೆ ಹಾಗೂ ಕಾಮಗಾರಿ ಚಾಲ್ತಿಯಲ್ಲಿದೆ. ಅದರ ಜತೆಗೆ ಇದೀಗ 3ನೇ ಹಂತದಲ್ಲಿ 114.46 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡಲು ಯೋಜನೆ ರೂಪಿಸಲಾಗಿದೆ. ಹೀಗೆ ರಸ್ತೆ ಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಆರಂಭಿಸಿದ ನಂತರ 30ರಿಂದ 45 ದಿನಗಳ ಕಾಲ ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ಇದ ರಿಂದಾಗಿ ವಾಹನ ಸವಾರರ ಸಮಸ್ಯೆ ಹೆಚ್ಚಾಗಿ, ಸುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಕೇವಲ 5 ದಿನಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬಹುದಾದ ರ್ಯಾಪಿಡ್ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಪ್ರಿಕಾಸ್ಟ್ ಮಾದರಿಯಲ್ಲಿ ನಿರ್ಮಾಣ: ಈ ಹಿಂದೆ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಿಕಾಸ್ಟ್ ವಿಧಾನವನ್ನು ಬಳಸಿ ನಿರ್ಮಿಸಲಾಗಿತ್ತು. ಅದರಂತೆ ಗೋಡೆ, ಮೇಲ್ಛಾವಣಿ ಸೇರಿ ಕಟ್ಟಡದ ಬಹುತೇಕ ಭಾಗವನ್ನು ಮೊದಲೇ ನಿರ್ಮಿಸಿ ನಂತರ ಅದನ್ನು ತಂದು ಜೋಡಿಸಿ ಕಟ್ಟಡದ ರೂಪವನ್ನು ನೀಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ರ್ಯಾಪಿಡ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಅದರ ಪ್ರಕಾರ ರಸ್ತೆ ನಿರ್ಮಾಣ ಗುತ್ತಿಗೆ ಪಡೆದಿರುವ ಸಂಸ್ಥೆಯು ತನ್ನ ಕಾರ್ಖಾನೆಯಲ್ಲಿ 5 ಅಡಿ ಅಗಲ ಮತ್ತು 20 ಅಡಿ ಉದ್ದದ ಕಾಂಕ್ರೀಟ್ ಸ್ಲಾéಬ್‌ಗಳನ್ನು ನಿರ್ಮಿಸುತ್ತದೆ. ನಂತರ ಅದನ್ನು ತಂದು ರಸ್ತೆ ಮೇಲೆ ಜೋಡಿಸಲಾಗುತ್ತದೆ. ಅಲ್ಲದೆ, ಕಾಂಕ್ರೀಟ್ ಸ್ಲ್ಯಾಬ್ ಗಳು ಜೋಡಣೆಯಾಗುವ ಭಾಗ ವಾಹನ ಸಂಚಾರದ ನಂತರ ಜರುಗದಂತೆ ಮಾಡಲು ದೊಡ್ಡ ಪ್ರಮಾಣದ ತಂತಿಗಳ ಮೂಲಕ ಅದನ್ನು ಹಿಡಿದಿಡುವ ಕೆಲಸ ಮಾಡಲಾಗುತ್ತದೆ.
ಪ್ರಾಯೋಗಿಕ ರಸ್ತೆ ನಿರ್ಮಾಣ: ಪ್ರಾಯೋಗಿಕವಾಗಿ ಹಳೇ ಮದ್ರಾಸ್ ರಸ್ತೆಯಲ್ಲಿ 500 ಮೀ. ಉದ್ದದ ರಸ್ತೆಯನ್ನು ರ್ಯಾಪಿಡ್ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗು ತ್ತದೆ. ಅಲ್ಲದೆ ಮುಂದಿನ 45ರಿಂದ 60 ದಿನಗಳ ಕಾಲ ರಸ್ತೆಯ ಗುಣಮಟ್ಟ ಪರೀಕ್ಷಿಸಲಾಗುತ್ತದೆ.
ಕೇವಲ 5 ದಿನಗಳಲ್ಲಿ ರಸ್ತೆ ರೆಡಿ : ಸದ್ಯ ವೈಟ್‌ಟಾಪಿಂಗ್ ರಸ್ತೆ ನಿರ್ಮಿಸಲು ಮೊದಲಿಗೆ ರಸ್ತೆ ಮೇಲಿನ ಡಾಂಬಾರು ತೆಗೆದು, ರಸ್ತೆಯನ್ನು ಸಮತಟ್ಟು ಮಾಡಲಾಗುತ್ತದೆ. ಅದಕ್ಕೆ ಒಂದರಿಂದ ಎರಡು ದಿನಗಳು ಬೇಕಾಗುತ್ತದೆ. ಅದರ ನಂತರ ದಿನವೊಂದರಲ್ಲಿ 100ರಿಂದ 150 ಮೀ. ಉದ್ದದಲ್ಲಿ ಕಾಂಕ್ರೀಟ್ ಮಿಶ್ರಣವನ್ನು ಹಾಕಿ ಸಮತಟ್ಟು ಮಾಡಲಾಗುತ್ತದೆ. ಕಾಂಕ್ರಿಟ್ ಮಿಶ್ರಣ ಬಿರುಕು ಬಿಡದಂತೆ ಅದಕ್ಕೆ ನೀರು ಹಾಕಿ ಕ್ಯೂರಿಂಗ್ ಮಾಡಲು ಕನಿಷ್ಠ 21 ದಿನಗಳು ಬೇಕಾಗುತ್ತದೆ. ಹೀಗಾಗಿ ವೈಟ್‌ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಕನಿಷ್ಠ 30ರಿಂದ 45 ದಿನಗಳು ಬೇಕಾಗಲಿದೆ. ಆದರೆ, ರ್ಯಾಪಿಡ್ ರಸ್ತೆಗಳ ನಿರ್ಮಾಣಕ್ಕೆ ಕೇವಲ 5 ದಿನಗಳು ಸಾಕಾಗುತ್ತದೆ. ರಸ್ತೆಯ ಡಾಂಬಾರು ಪದರ ತೆಗೆದು, ಸಮತಟ್ಟು ಮಾಡಲು 2 ದಿನ ಹಾಗೂ ಕಾಂಕ್ರೀಟ್ ಸ್ಲಾéಬ್‌ಗಳನ್ನು ಜೋಡಿಸಲು ಒಂದರಿಂದ ಎರಡು ದಿನ ಬೇಕಾಗಲಿದೆ. ಒಂದು ದಿನಕ್ಕೆ ಕನಿಷ್ಠ 150 ಮೀ. ಉದ್ದದ ರಸ್ತೆ ನಿರ್ಮಿಸಬಹುದಾಗಿದೆ. ಕಾಂಕ್ರೀಟ್ ಸ್ಲಾéಬ್ ಅಳವಡಿಸಿದ ಮರು ದಿನವೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ.
ವೈಟ್‌ಟಾಪಿಂಗ್ ಕಾಮಗಾರಿಗೆ ಹೆಚ್ಚಿನ ದಿನಗಳ ಕಾಲ ರಸ್ತೆ ಬಂದ್ ಮಾಡಬೇಕಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಅದನ್ನು ತಪ್ಪಿಸಲು ರ್ಯಾಪಿಡ್ ರಸ್ತೆ ನಿರ್ಮಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಹಳೇ ಮದ್ರಾಸ್ ರಸ್ತೆಯನ್ನು ರ್ಯಾಪಿಡ್ ರಸ್ತೆಯನ್ನಾಗಿ ಮಾಡಲಾಗುತ್ತಿದೆ. ಅದರಲ್ಲಿ ಯಶಸ್ವಿಯಾದರೆ ಹಾಗೂ ವೆಚ್ಚ ಕಡಿಮೆಯಾದರೆ ಮುಂದಿನ ಹಂತ ವೈಟ್ ಟಾಪಿಂಗ್ ಕಾಮಗಾರಿ ಕೈಬಿಟ್ಟು ರ್ಯಾಪಿಡ್ ರಸ್ತೆಗಳನ್ನು ನಿರ್ಮಿಸಲಾಗುವುದು. – ಪ್ರಹ್ಲಾದ್, ಬಿಬಿಎಂಪಿ ಪ್ರಧಾನ ಎಂಜಿನಿಯರ್
ಶೇ.18 ವೆಚ್ಚ ಹೆಚ್ಚಳ : ರ‍್ಯಾಪಿಡ್ ರಸ್ತೆಗೆ ವೈಟ್‌ಟಾಪಿಂಗ್ ರಸ್ತೆಗಿಂತ ಶೇ. 16ರಿಂದ 18 ಹೆಚ್ಚುವರಿ ವೆಚ್ಚವಾಗಲಿದೆ. ಕಾಂಕ್ರೀಟ್ ಸ್ಲಾéಬ್‌ಗಳನ್ನು ಕಾರ್ಖಾನೆಗಳಿಂದ ತರಲು ತಗಲುವ ಸಾರಿಗೆ ವೆಚ್ಚ ಹೆಚ್ಚುವ ಹಿನ್ನೆಲೆಯಲ್ಲಿ ವೈಟ್‌ಟಾಪಿಂಗ್‌ಗಿಂತ ರ್ಯಾಪಿಡ್ ರಸ್ತೆಯ ವೆಚ್ಚ ಹೆಚ್ಚಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಹೆಚ್ಚುವರಿ ವೆಚ್ಚ ತಗ್ಗಿಸಲು ಬಿಬಿಎಂಪಿ ಅಧಿಕಾರಿಗಳು ಚರ್ಚಿಸುತ್ತಿದ್ದು, ಅದು ಸಾಧ್ಯವಾದರೆ 3ನೇ ಹಂತದಲ್ಲಿ ನಿರ್ಮಿಸಲಿರುವ ವೈಟ್‌ಟಾಪಿಂಗ್ ರಸ್ತೆಗಳನ್ನು ರ್ಯಾಪಿಡ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗುತ್ತದೆ.
– ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.