ಕ್ಯಾಂಟೀನ್ ಸಿಸಿಟಿವಿ ಫೂಟೇಜ್ ನೀಡಲು ಸಿದ್ಧ
Team Udayavani, Jul 28, 2018, 11:43 AM IST
ಬೆಂಗಳೂರು: ಕರ್ನಾಟಕ ಬಂದ್ ದಿನ (ಜ.25) ಇಂದಿರಾ ಕ್ಯಾಂಟೀನ್‌ಗಳಲ್ಲಿ ಎಷ್ಟು ಜನರು ತಿಂಡಿ-ಊಟ ಮಾಡಿದ್ದಾರೆ ಎಂಬ ಸಿಸಿಟಿವಿ ಫೂಟೇಜ್ ನೀಡಲು ಸಿದ್ಧರಿರುವುದಾಗಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಅವರ ಆರೋಪಕ್ಕೆ ಪ್ರತಿಕ್ರಯಿಸಿದ ಅವರು, ಮೇ 12ರಂದು ಚುನಾವಣೆ ದಿನ ಮಾತ್ರ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸಿಲ್ಲ. ಉಳಿದಂತೆ 2017ರ ಆಗಸ್ಟ್ 16ರಿಂದ ಈವರೆಗೆ ಒಮ್ಮೆ ಕೂಡ ಸ್ಥಗಿತಗೊಂಡಿಲ್ಲ.
ಬಂದ್, ಮುಷ್ಕರ ನಡೆದ ದಿನಗಳಲ್ಲೂ ಕಾರ್ಯನಿರ್ವಹಿಸಿವೆ. ಆ ಬಗ್ಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಎಲ್ಲ ಕ್ಯಾಂಟೀನ್‌ಗಳಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಪಾಲಿಕೆ ಸದಸ್ಯರು ವೀಕ್ಷಿಸಬಹುದಾಗಿದ್ದು, ಅಕ್ರಮವಾಗಿ ಬಿಲ್ ಪಾವತಿಸಲಾಗಿದೆ ಎನ್ನಲಾದ ಜನವರಿ 25ರ ದಿನದ ಮೂರು ಹೊತ್ತಿನ ದೃಶ್ಯಾವಳಿಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದರು.
ಬಿಲ್ ಕೊಡಲೇಬೇಕು: ಜುಲೈ ತಿಂಗಳು ಕ್ಯಾಂಟೀನ್‌ಗಳಲ್ಲಿ ಊಟ ಮಾಡಿದ ಗ್ರಾಹಕರ ಸಂಖ್ಯೆ ಆಧರಿಸಿ ಆಗಸ್ಟ್ ತಿಂಗಳಿಗೆ ಇಂತಿಷ್ಟು ಜನರಿಗೆ ಆಹಾರ ಪೂರೈಕೆ ಮಾಡುವಂತೆ ಗುತ್ತಿಗೆದಾರರಿಗೆ ಮನವಿ ನೀಡಲಾಗುತ್ತದೆ.
ಅದರಂತೆ ಜನವರಿ 25ರಂದು ನಿಗದಿಪಡಿಸಿದಷ್ಟು ಜನರಿಗೆ ಆಹಾರ ಪೂರೈಕೆ ಮಾಡಲಾಗಿದೆ. ಆದರೆ, ಹೆಚ್ಚು ಜನ ಬಾರದಿದ್ದ ಸಂದರ್ಭದಲ್ಲೂ ಉಳಿಕೆಯಾಗುವ ಆಹಾರಕ್ಕೆ ಪಾಲಿಕೆಯಿಂದ ಬಿಲ್ ಪಾವತಿಸಲೇಬೇಕು ಎಂದು ಮಾಹಿತಿ ನೀಡಿದರು.
ಮೇಯರ್ ಆರ್.ಸಂಪತ್‌ರಾಜ್ ಮಾತನಾಡಿ, ತಮ್ಮ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿ ದಿನ ಎಷ್ಟು ಜನ ಊಟ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಅಧಿಕಾರ ಪಾಲಿಕೆ ಸದಸ್ಯರಿಗೆ ಇದೆ.
ಅವರು ಖುದ್ದು ಕ್ಯಾಂಟೀನ್‌ಗೆ ತೆರಳಿ ಪರಿಶೀಲಿಸಿ, ಅಕ್ರಮ ನಡೆಯುತ್ತಿದ್ದರೆ ಅದನ್ನು ತಡೆಯಬಹುದು. ಆದರೆ, ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ನೀಡುವ ಯೋಜನೆಯ ವಿರುದ್ಧ ಅಪಪ್ರಚಾರ ಮಾಡುವುದು ಬೇಡ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.