ಮಳೆ ನೀರು ಕಾಲುವೆ ವಿನ್ಯಾಸ ತಜ್ಞರಿಗೆ ಪಾಲಿಕೆ ಪುನಃ ಮೊರೆ
Team Udayavani, Oct 21, 2017, 11:43 AM IST
ಬೆಂಗಳೂರು: ಮಳೆಯಿಂದ ಪದೇ ಪದೆ ನೆರೆಗೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಮಳೆನೀರು ಕಾಲುವೆ (sಠಿಟ್ಟಞ ಡಿಚಠಿಛಿr ಛrಚಜಿnಚಜಛಿ)ಗಳನ್ನು ಮರುವಿನ್ಯಾಸಗೊಳಿಸಿದ ತಜ್ಞರಿಗೆ ಪುನಃ ಮೊರೆಹೋಗಲು ಬಿಬಿಎಂಪಿ ನಿರ್ಧರಿಸಿದೆ.
ಕೋರಮಂಗಲ 4ನೇ ಬ್ಲಾಕ್, ಶಾಂತಿನಗರ ಟಿಟಿಎಂಸಿ, ನಾಯಂಡಹಳ್ಳಿ ಜಂಕ್ಷನ್, ಕೆ.ಆರ್.ಪುರದ ರಾಮಮೂರ್ತಿನಗರ, ಕುರುಬರಹಳ್ಳಿ ಸೇರಿದಂತೆ ನಗರದ ಕೆಲವು ಸೇರಿದಂತೆ ಹಲವು ಮಳೆನೀರು ಕಾಲುವೆಗಳನ್ನು ಇತ್ತೀಚೆಗೆ ಮರುವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ ಪ್ರತಿ ಮಳೆಯಲ್ಲೂ ಆ ಭಾಗಗಳಲ್ಲಿ ನೆರೆ ಉಂಟಾಗುತ್ತಿದ್ದು, ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸಿಕೊಡುವಂತೆ ಯೋಜನೆ ರೂಪಿಸಿದ ಸ್ಟುಪ್ ಕನ್ಸಲ್‌ಟೆಂಟ್‌ಗೆ ಪಾಲಿಕೆ ಮೊರೆಹೋಗಿದೆ.
ನಗರದಲ್ಲಿ ಕಳೆದ ಸುಮಾರು 30 ರಿಂದ 32 ವರ್ಷಗಳ ಮಳೆಯ ಇತಿಹಾಸ ತೆಗೆದುಕೊಂಡು, ಮಳೆ ನೀರು ಹರಿವಿನ ಲೆಕ್ಕಹಾಕಿ, ರಾಜಕಾಲುವೆ ಮರುವಿನ್ಯಾಸದ “ಸಮಗ್ರ ಯೋಜನಾ ವರದಿ’ (ಡಿಪಿಆರ್)ಯನ್ನು ಸಿದ್ಧಪಡಿಸಲಾಗಿರುತ್ತದೆ. ಆ ಡಿಪಿಆರ್ ಪ್ರಕಾರವೇ ಮರುವಿನ್ಯಾಸಗೊಳಿಸಿದರೂ ರಾಜಕಾಲುವೆಗಳು ಯಾಕೆ ಉಕ್ಕಿಹರಿದವು? ಹೀಗೆ ಪದೇ ಪದೇ ಸಮಸ್ಯೆ ಮರುಕಳಿಸಲು ಕಾರಣವೇನು?
ಇದಕ್ಕೆ ಪರಿಹಾರ ಏನು? ಡಿಪಿಆರ್ ಸಮರ್ಪಕವಾಗಿದೆಯೇ? ಇದೆಲ್ಲವನ್ನೂ ಸರಿಪಡಿಸಿಕೊಡುವಂತೆ ಕೇಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ಎರಡು ತಿಂಗಳಲ್ಲಿ ಮಳೆ ಗಮನಿಸಿದಾಗ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಕುರುಬರಹಳ್ಳಿ ಸೇರಿದಂತೆ ನಗರದ ಕೆಲವೇ ಕಡೆಗಳಲ್ಲಿ ಹೆಚ್ಚು ನೀರು ನುಗ್ಗುತ್ತಿದೆ. ಇದನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಿ, ಉಂಟಾಗುತ್ತಿರುವ ನೆರೆ ತಗ್ಗಿಸಲು ಸಾಧ್ಯವೇ? ಈ ನಿಟ್ಟಿನಲ್ಲಿ ಪರಿಹಾರಗಳನ್ನು ನೀಡುವಂತೆ ಕೋರಲಾಗಿದೆ.
ಈ ಪೈಕಿ ಈಗಾಗಲೇ ಹಲವು ರಾಜಕಾಲುವೆಗಳ ವಿವರಗಳನ್ನೂ ಸಲ್ಲಿಸಲಾಗಿದೆ ಎಂದು ಮಳೆನೀರು ಕಾಲುವೆ ಮುಖ್ಯ ಎಂಜಿನಿಯರ್ ಬೆಟ್ಟೇಗೌಡ “ಉದಯವಾಣಿ’ಗೆ ತಿಳಿಸಿದರು. ಮಳೆನೀರಿನ ಹರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ರಾಜಕಾಲುವೆಗಳ ಮರುವಿನ್ಯಾಸ ಸಹಕಾರಿಯಾಗಿದೆ ಹೊರತು, ನಗರದಲ್ಲಿ ಉಂಟಾಗುವ “ದಿಢೀರ್ ನೆರೆ’ ಸಮಸ್ಯೆಯ ಸಂಪೂರ್ಣ ನಿವಾರಣೆಗೆ ಅದು ಪರಿಹಾರ ಆಗದು.
ಅಷ್ಟಕ್ಕೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂಬಳಕೆ ಯೋಜನೆಗೆ ತಕ್ಕಂತೆ ಮಳೆನೀರಿನ ಹರಿವು ಇರುತ್ತದೆ. ಅದನ್ನು ಆಧರಿಸಿ ರಾಜಕಾಲುವೆಗಳನ್ನು ವಿನ್ಯಾಸ ಮಾಡಲಾಗಿರುತ್ತದೆ. ಆದರೆ, ಪ್ರತಿ ಬಾರಿಯೂ ಭೂಬಳಕೆ ಯೋಜನೆ ಹೆಚ್ಚುತ್ತಲೇ ಇದೆ. ಇದರಿಂದ ಮಳೆ ನೀರಿನ ಹರಿವು ಪ್ರಮಾಣ ಏರಿಕೆಯಾಗುತ್ತಿದೆ. ರಾಜಕಾಲುವೆಗಳ ಗಾತ್ರ ಮಾತ್ರ ಅಷ್ಟೇ ಇದೆ. ಇದು ನೆರೆಗೆ ಮತ್ತೂಂದು ಪ್ರಮುಖ ಕಾರಣ ಎಂದು ಸ್ಟುಪ್ ಕನ್ಸಲ್ಟಂಟ್ಸ್ ಪ್ರೈ.ಲಿ., ಸಹ ಉಪಾಧ್ಯಕ್ಷ ವೈ.ಡಿ. ಮನಮೋಹನ್ ಸ್ಪಷ್ಟಪಡಿಸುತ್ತಾರೆ.
ಇನ್ನು ಈ ಮೊದಲು ನಗರದಲ್ಲಿ ಸಾಕಷ್ಟು ಕೆರೆಗಳಿದ್ದವು. ಅವೆಲ್ಲವೂ ಈಗ ಬಡಾವಣೆಗಳಾಗಿ ತಲೆಯೆತ್ತಿವೆ. ಈ ನಗರೀಕರಣದಿಂದ ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್‌ನಂತಹ ತಗ್ಗುಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಿ, ನೆರೆ ಉಂಟಾಗುತ್ತಿದೆ. ಇಷ್ಟೇ ಅಲ್ಲ, ರಾಜಕಾಲುವೆಗಳಲ್ಲಿ ಘನ್ಯತ್ಯಾಜ್ಯ, ಅವಶೇಷಗಳು,
ಒಳಚರಂಡಿ ನೀರು ಸೇರಿಕೊಳ್ಳುತ್ತಿದೆ. ಅಂದರೆ ಒಂದೆಡೆ ನೀರಿನ ಹರಿವು ಹೆಚ್ಚಳ, ಮತ್ತೂಂದೆಡೆ ಕೆರೆಗಳು ಮಾಯವಾಗಿರುವುದು, ಇನ್ನೊಂದೆಡೆ ಇದ್ದ ರಾಜಕಾಲುವೆಗಳಲ್ಲಿ ತ್ಯಾಜ್ಯ ಮತ್ತಿತರ ವಸ್ತುಗಳು ಸೇರಿಕೊಂಡಿರುವುದು ಇವೆಲ್ಲವುಗಳು ಕೂಡ ಪದೇ ಪದೇ ನೆರೆ ಉಂಟಾಗಲು ಕಾರಣವಾಗುತ್ತಿವೆ ಎಂದು ಮನಮೋಹನ್ ಸಮಜಾಯಿಷಿ ನೀಡುತ್ತಾರೆ.
-ಅಪಾಯಕ್ಕೆ ಕಾರಣವಾಗಬಹುದಾದ ಜಾಗಗಳು 348
-252 ಜಾಗಗಳ ಅಭಿವೃದ್ಧಿ ಪಡಿಸಲು ಕ್ರಮ, ಉಳಿದ ಜಾಗಗಳನ್ನು ಗುರ್ತಿಸುವಿಕೆ ಕಾರ್ಯ
– ನಗರದ ಒಟ್ಟಾರೆ ರಸ್ತೆಜಾಲ 14 ಸಾವಿ ಕಿಲೋಮೀಟರ್
– ಮಳೆನೀರು ಕಾಲುವೆ ಉದ್ದ 850
-ಮರುವಿನ್ಯಾಸ ಸುಮಾರು 60 ಕೀ.ಮೀ
-ಟೆಂಡರ್ ಕರೆದಿದ್ದು 300 ಕೀ.ಮೀ
ಪರಿಹಾರಗಳೇನು?
* ನಗರದಲ್ಲಿರುವ ಎಲ್ಲ ಕೆರೆಗಳನ್ನು ರಾಜಕಾಲುವೆಗೆ ಜೋಡಣೆ ಮಾಡಬೇಕು. ಕೆರೆಗಳ ಹೂಳು ತೆಗೆಯಬೇಕು. ಇದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ.
* ಕೆರೆಗಳು ಲೇಔಟ್‌ಗಳಾಗಿರುವುದರಿಂದ ನಗರದಲ್ಲಿರುವ ಉದ್ಯಾನಗಳು, ರಕ್ಷಣಾ ಇಲಾಖೆ, ವಿಶ್ವವಿದ್ಯಾಲಯಗಳಂತಹ ತೆರೆದ ಪ್ರದೇಶಗಳಲ್ಲಿ ಕೆರೆಗಳಂತಹ ನೀರು ಸಂಗ್ರಹ ವ್ಯವಸ್ಥೆ ಮಾಡಬೇಕು. ಮಳೆ ನಿಂತ ಮೇಲೆ ಆ ನೀರನ್ನು ಪಂಪ್‌ಮಾಡಿ ಹೊರಹಾಕಬೇಕು. ಇದರಿಂದ ದಿಢೀರ್ ನೆರೆ ತಗ್ಗಬಹುದು.
* ತಗ್ಗು ಪ್ರದೇಶಗಳಲ್ಲಿರುವ ಕೆರೆಗಳಿಗೆ ಗೇಟುಗಳ ನಿರ್ಮಿಸಬೇಕು. ಅವುಗಳಿಗೆ ಸೆನ್ಸಾರ್ ಆಧಾರಿತ ಮುನ್ಸೂಚನಾ ವ್ಯವಸ್ಥೆ ಮಾಡಬೇಕು. ಕೆರೆ ತುಂಬುವ ಸೂಚನೆ ಬರುತ್ತಿದ್ದಂತೆ, ಆ ಗೇಟುಗಳನ್ನು ತೆರೆಯಬೇಕು. ಈ ಗೇಟುಗಳ ನಿರ್ವಹಣೆಗೆ ಪ್ರತ್ಯೇಕ ಒಂದು ತಂಡವನ್ನು ನಿಯೋಜಿಸಬೇಕು.
* ಎತ್ತರದ ಪ್ರದೇಶದಿಂದ ಬರುವ ಮಳೆನೀರನ್ನು ಒಮ್ಮೆಲೆ ತಗ್ಗುಪ್ರದೇಶಗಳಿಗೆ ಬರುವುದನ್ನು ತಡೆಯಬೇಕು. ಹೀಗೆ ಬರುವ ನೀರನ್ನು ಆಸುಪಾಸಿನಲ್ಲಿರುವ ಕೆರೆಗಳಿಗೆ ತಿರುಗಿಸಬೇಕು.
* ಬಿಬಿಎಂಪಿ. ಬಿಡಿಎ, ಜಲಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರಗಳು ಒಂದೇ ಸೂರಿನಡಿ ಕೆಲಸ ಮಾಡುವಂತಾಗಬೇಕು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.