ರಾಜ್ಯ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ
Team Udayavani, Apr 2, 2018, 12:33 PM IST
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ರೈತರ ಆತ್ಮಹತ್ಯೆ ಹಾಗೂ ಬೆಂಗಳೂರಿನ ದುಸ್ಥಿತಿಯ ಕುರಿತು ರಾಜ್ಯ ಬಿಜೆಪಿ ಮೂರು ಪ್ರತ್ಯೇಕ ದೋಷಾರೋಪ ಪಟ್ಟಿ(ಚಾರ್ಜ್‌ಶೀಟ್) ಬಿಡುಗಡೆ ಮಾಡಿದೆ.
ಮೂರು ವಿಭಾಗವಾಗಿ ಸಿದ್ಧಪಡಿಸಿದ್ದ ದೋಷಾರೋಪ ಪಟ್ಟಿಯನ್ನು ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಡಿ.ವಿ.ಸದಾನಂದಗೌಡ, ರಾಜ್ಯಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್ ಮೊದಲಾದವರು ಭಾನುವಾರ ಮಲ್ಲೇಶ್ವರದಲ್ಲಿ ಬಿಡುಗಡೆ ಮಾಡಿದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಸುರಕ್ಷಿತವಾಗಿಲ್ಲ. 2012ರಲ್ಲಿ 3.70ಲಕ್ಷ ಇದ್ದ ಅಪರಾಧಗಳ ಸಂಖ್ಯೆ 2017ರಲ್ಲಿ 11.30 ಲಕ್ಷಕ್ಕೆ ಏರಿಕೆಯಾಗಿದೆ. ಅಪಹರಣ, ಕೊಲೆ, ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯವೂ ಹೆಚ್ಚಾಗಿದೆ. ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ, ಪೊಲೀಸರಿಗೆ ಕಿರುಕುಳ, ಅಧಿಕಾರಿಗಳ ಸಾವು, ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರ ಕಗ್ಗೊಲೆ.
ಕಾಂಗ್ರೆಸ್ ನಾಯಕರ ಮಕ್ಕಳ ಮತ್ತು ಅನುಯಾಯಿಗಳ ಗೂಂಡಾಗಿರಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಕಿಡ್ನಾಪ್ ಪ್ರಕರಣ, ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ, ಮಾನವ ಕಳ್ಳಸಾಗಣೆ, ಕೋಮು ಹಿಂಸಾಚಾರ ಹೆಚ್ಚಳ ಹೀಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಈ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ.
ರೈತನಿಗೆ ನೋವು ಕೊಟ್ಟ: ಕಾಂಗ್ರೆಸ್ 2013ರಿಂದ 2018ರ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಜಿಲ್ಲಾವಾರು ಅಂಕಿಅಂಶದೊಂದಿಗೆ ತೆರೆದಿಡಲಾಗಿದೆ. ಬೆಳಗಾವಿಯಲ್ಲಿ 252, ಚಿಕ್ಕಮಗಳೂರಿನಲ್ಲಿ 226, ಧಾರವಾಡದಲ್ಲಿ 203, ಹಾಸನದಲ್ಲಿ 251, ಹಾವೇರಿಯಲ್ಲಿ 268, ಮಂಡ್ಯದಲ್ಲಿ 267, ಮೈಸೂರಿನಲ್ಲಿ 270, ತುಮಕೂರಿನಲ್ಲಿ 182, ಶಿವಮೊಗ್ಗದಲ್ಲಿ 153 ಸೇರಿ ರಾಜ್ಯದಲ್ಲಿ ಐದು ವರ್ಷದಲ್ಲಿ 3800 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೃಷಿ, ಕೈಗಾರಿಕೆ ಮತ್ತು ಸೇವಾ ವಲದಯ ನಿರಂತರ ಕುಸಿತದ ಬಗ್ಗೆಯೂ ತಿಳಿಸಿದ್ದಾರೆ. ನೀರಾವರಿ ಯೋಜನೆಗೆ ಕೋಟ್ಯಂತರ ರೂ. ವ್ಯಯಿಸಿದರೂ ನೀರು ಮಾತ್ರ ಬರಲಿಲ್ಲ. ಸಣ್ಣ ನೀರಾವರಿಯಲ್ಲಿ ದೊಡ್ಡ ಭ್ರಷ್ಟಾಚಾರ, ರಾಜಕೀಯ ಉದ್ದೇಶಕ್ಕಾಗಿ ಸಾಲಮನ್ನಾ ಹೀಗೆ ರಾಜ್ಯ ಸರ್ಕಾರ ವೈಫಲ್ಯಗಳನ್ನು ಬಣ್ಣಬಣ್ಣದ ಹಾಳೆಗಳಲ್ಲಿ ಪಟ್ಟಿಮಾಡಿ ಜನರ ಮುಂದೆ ಇಟ್ಟಿದ್ದಾರೆ.
ಬೆಂಗಳೂರಿಗೆ ಸಂಚಕಾರ: ಕಾಂಗ್ರೆಸ್ ಆಳ್ವಿಕೆಯಲ್ಲಿ ಬೆಂಗಳೂರಿನ ಕೆರೆಯೂ ಹೊತ್ತಿ ಉರಿದಿದೆ. ರಾಜ್ಯದ ರಾಜಧಾನಿ ಬೆಂಗಳೂರು ಡ್ರಗ್ಸ್ ರಾಜಧಾನಿಯಾಗಿದೆ. ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಗಾರ್ಬೆಜ್ ಸಿಟಿಯಾದ ಬಗೆ, ಕಸ ನಿರ್ವಹಣೆ ಎಂಬ ಲಂಚಕೂಪ, ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಹೋದ ಮಾನ, ಹೆಚ್ಚಿದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಗ್ರಾಮೀಣಾಭಿವೃದ್ಧಿ ಶೂನ್ಯ, ಅತ್ಯಾಚಾರ, ಅಪಹರಣಗಳಿಂದ ನರಳುತ್ತಿರುವ ಮಕ್ಕಳು, ಒಳಚರಂಡಿ ವ್ಯವಸ್ಥೆ ಸರ್ವನಾಶ, ಟ್ರಾಫಿಕ್ ಜಾಮ್‌ಜಾಮ್, ನಗರದಲ್ಲಿ ಕಾಂಗ್ರೆಸ್ ನಾಯಕರ, ಶಾಸಕರ ಪುತ್ರನ ಗೂಂಡಗಿರಿ, ಅನ್ನ ನೀಡುವ ಹೆಸರಿನಲ್ಲಿ ಅಕ್ರಮ ಎಂದು 64 ಹಗರಣ ಪಟ್ಟಿ ಮಾಡಲಾಗಿದೆ.
ಶಾಸಕರ ಮಕ್ಕಳ ದರ್ಪ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪರಿ, ರೈತರ ಆತ್ಮಹತ್ಯೆ, ಬೆಂಗಳೂರಿನಲ್ಲಿ ಬಿದ್ದಿರುವ ಗುಂಡಿಗಳು, ಸರ್ಕಾರಿ ಅಧಿಕಾರಿಗಳ ಮೇಲೆ ದಬ್ಟಾಳಿಕೆ ಸೇರಿ ಕಾನೂನು ಸುವ್ಯವಸ್ಥೆಯ ಲೋಪ, ರೈತರ ಆತ್ಮಹತ್ಯೆ ಹಾಗೂ ಬೆಂಗಳೂರಿಗೆ ಸಂಚಕಾರ ಈ ಮೂರು ವಿಷಯ ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ವೈಫಲ್ಯದ ಜಾರ್ಜ್‌ಶೀಟ್ ಸಿದ್ಧವಾಗಿದೆ.
-ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.