ನೃತ್ಯದ ಮೂಲಕ ಇತಿಹಾಸದ ಮೆಲುಕು
Team Udayavani, Aug 16, 2019, 3:10 AM IST
ಬೆಂಗಳೂರು: ಕಾಶ್ಮೀರ ಚಲೋ, ಜಲಿಯನ್ ವಾಲಾ ಬಾಗ್, ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ ಸಹಿತ ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳನ್ನು ಶಾಲಾ ಮಕ್ಕಳು ನೃತ್ಯ ರೂಪಕದ ಮೂಲಕ ಪ್ರಸ್ತುತ ಪಡಿಸಿದರೆ, ಭಾರತೀಯ ಸೈನಿಕರು ಸಾಹಸ ಪ್ರದರ್ಶನದ ಮೂಲಕ 73ನೇ ಸ್ವಾತಂತ್ರೋತ್ಸವಕ್ಕೆ ವಿಶೇಷ ಮೆರುಗು ನೀಡಿದರು.
ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ತರ ಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ 650 ವಿದ್ಯಾರ್ಥಿಗಳು “ಭಾರತಾಂಬೆ ಮಡಿಲಿನ ಮಕ್ಕಳು’ ಎಂಬ ಪರಿಕಲ್ಪನೆಯಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಮಹತ್ಮಾ ಗಾಂಧೀಜಿ, ಜವಾಹರ್ ಲಾಲ್ ನೆಹರು, ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ್‌ಚಂದ್ರ ಭೋಸ್, ಬಾಲಗಂಗಾಧರ ತಿಲಕ್ ಮೊದಲಾದವರು ಬ್ರಿಟಿಷರ ವಿರುದ್ಧ ಹೋರಾಡಿದ ಬಗೆ, ದೇಶಕ್ಕಾಗಿ ಮಾಡಿದ ತ್ಯಾಗವನ್ನು 10 ನಿಮಿಷದ ನೃತ್ಯ ರೂಪಕದ ಮೂಲಕ ಸುಂದರವಾಗಿ ಪ್ರಸ್ತುತ ಪಡಿಸಿದರು.
ಸಾವಿರಾರು ಜನರು ಸ್ವಾತಂತ್ರ್ಯಕ್ಕಾಗಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಒಂದೇ ದಿನದಲ್ಲಿ ಬಂದಿಲ್ಲ. ಅದಕ್ಕಾಗಿ ಸುದೀರ್ಘ ಹೋರಾಟ ನಡೆದಿತ್ತು. ಈ ಹೋರಾಟದಲ್ಲಿ ಭಾಗಿಯಾಗಿದ್ದವರನ್ನು ನೃತ್ಯ ರೂಪಕರ ಮೂಲಕ ವಿದ್ಯಾರ್ಥಿಗಳು ಸ್ಮರಿಸಿದರು.
ಜಲಿಯನ್ ವಾಲಾ ಬಾಗ್: 1919ರಲ್ಲಿ ಪಂಜಾಬಿನ ಅಮೃತ್‌ಸರದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಭೆ ಮೇಲೆ ಜನರಲ್ ಡಯಾರ್‌ನ ಆದೇಶದಂತೆ ಗುಂಡು ಹಾರಿಸಿದ ಬ್ರಿಟಿಷ್ ಸೈನಿಕರು, ಸಾವಿರಾರು ಭಾರತೀಯರನ್ನು ಹತ್ಯೆಗೈದಿದ್ದರು. ಭಾರತದ ಸ್ವಾತಂತ್ರ್ಯದ ಒಂದು ಭಾಗವಾಗಿಯೇ ಜಲಿಯನ್ ವಾಲಾ ಬಾಗ್ ಹತ್ಯಕಾಂಡವನ್ನು ನೆನಪಿಸಿಕೊಳ್ಳುವ ಮತ್ತು ಈ ಘಟನೆ ನಡೆದು 100 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಹೇರೋಹಳ್ಳಿ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 600 ವಿದ್ಯಾರ್ಥಿಗಳು “ಜಲಿಯನ್ ವಾಲಾ ಬಾಗ್ ಹತ್ಯಕಾಂಡ-1919′ ಎಂಬ ಪರಿಕಲ್ಪನೆಯಡಿ ಇಡೀ ಹತ್ಯಕಾಂಡದ ದೃಶ್ಯಾವಳಿಗಳನ್ನು ನೃತ್ಯರೂಪದಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದರು.
ಬ್ರಿಟಿಷ್ ಸೇನಾನಿ ಜನರಲ್ ಡಯಾರ್ ಎಂಬ ಬುದ್ಧಿಹೀನ ಸೇನಾನಿ ನೀಡಿದ್ದ ಆದೇಶದಂತೆ, ಜಲಿಯನ್ ವಾಲಾ ಬಾಗ್‌ನಲ್ಲಿ ಸೇರಿದ್ದ ಸಾವಿರಾರು ಜನರ ಮಾರಣಹೋಮವನ್ನು ಬ್ರಿಟಿಷ್ ಸೈನಿಕರು ಮಾಡಿದ್ದರು. ಇದೇ ಕಿಚ್ಚು ಮುಂದೆ ಸ್ವಾತಂತ್ರ್ಯ ಹೋರಾಟವಾಗಿ ರೂಪುಗೊಂಡಿದ್ದನ್ನು ನೃತ್ಯರೂಪಕದಲ್ಲಿ ವಿದ್ಯಾರ್ಥಿಗಳು ಬಿಡಿ ಬಿಡಿಯಾಗಿ ವಿವರಿಸಿದರು.
ಸೈನಿಕರ ಸಾಹಸ: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್‌ನ 26 ಸೈನಿಕರು ಜಿಮ್ನಾಸ್ಟಿಕ್ಸ್‌ನ ವಿವಿಧ ಸಾಹಸಗಳನ್ನು ಪ್ರದರ್ಶಿಸು7ವ ಮೂಲಕ ನಿಬ್ಬೆರಗಾಗಿಸಿದರು. ಆರ್ಟಿಸ್ಟಿಕ್ ಜಿಮ್ನಾಸ್ಟಿಕ್, ಏರೋಬಿಕ್ ಜಿಮ್ನಾಸ್ಟಿಕ್, ಏರೋಬಿಟಿಕ್ ಜಿಮ್ನಾಸ್ಟಿಕ್, ಟುಬ್ಲಿಂಗ್ ಜಿಮ್ನಾಸ್ಟಿಕ್, ಟ್ರಮೊ³àಲೈನ್ ಜಿಮ್ನಾಸ್ಟಿಕ್ ಹಾಗೂ ರಿಧಮಿಕ್ ಜಿಮ್ನಾಸ್ಟಿಕ್ ಬಗೆಗಳ 12 ನಿಮಿಷದ ಪ್ರದರ್ಶನ ಮೈ ರೋಮಾಂಚನಗೊಳಿಸಿತು.
ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನ 13 ಯೋಧರು ಭಾರತದ ಅತಿ ಪುರಾತನ ಮಾರ್ಷಲ್ ಆರ್ಟ್‌ನಲ್ಲಿ ಒಂದಾದ ಕಲರಿಪಯಟ್ಟು ಪ್ರದರ್ಶಿಸಿದರು. ಕತ್ತಿ ಝಳಪಿಸುವುದು, ಶಸ್ತ್ರರಹಿತವಾಗಿ ಹೋರಾಟ ಮಾಡುವುದು ಸೇರಿದಂತೆ ಕೆಲವೊಂದು ಕಠಿಣ ವ್ಯಾಯಾಮಗಳನ್ನು ಪ್ರದರ್ಶಿಸಿ ಎಲ್ಲರ ಮನಗೆದ್ದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ: “ಜಲಿಯನ್ ವಾಲಾ ಬಾಗ್ ಹತ್ಯಕಾಂಡ-1919′ ನೃತ್ಯರೂಪಕ ಪ್ರಸ್ತುತ ಪಡಿಸಿದ ಹೇರೋಹಳ್ಳಿ ಬಿಬಿಎಂಪಿ ಸಂಯುಕ್ತ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಹಾಗೂ “ಭಾರತಾಂಬೆಯ ಮಡಿಲಿನ ಮಕ್ಕಳು’ ನೃತ್ಯ ರೂಪಕ ಸಾದರಪಡಿಸಿದ ಉತ್ತರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ಲಭಿಸಿದೆ.
ಪರೇಡ್ ಕಮಾಂಡರ್ ಎಂ.ಯೋಗೀಶ್ ಅವರಿಗೆ ಪ್ರಥಮ ಹಾಗೂ ಸಹ ಪರೇಡ್ ಕಮಾಂಡರ್ ಬಿ.ಆರ್.ಗಿರೀಶ್ ಅವರಿಗೆ ದ್ವಿತೀಯ ಬಹುಮಾನ ನೀಡಲಾಯಿತು. ಗೋವಾ ರಾಜ್ಯ ಪೊಲೀಸ್, ಶ್ವಾನದಳ ಹಾಗೂ ಸಮ ರ್ಥನಂ ಮತ್ತು ರಮಣ ಮಹರ್ಷಿ ವಿಕಲಚೇತನ ಸಂಸ್ಥೆಯ ಮಕ್ಕಳ ತಂಡಕ್ಕೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಧ್ವಜಾರೋಹಣ ಮಾಡುತ್ತಿದ್ದಂತೆ ಭಾರತೀಯ ವಾಯುಪಡೆಯ ಯೋಧರು ಹೆಲಿಕಾಪ್ಟರ್ ಮೂಲಕ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡಿದರು.
ಶಿಸ್ತುಬದ್ಧ ಪಥಸಂಚಲನ: ಪರೇಡ್ ಕಮಾಂಡರ್ ಎಂ.ಯೋಗೀಶ್ ಹಾಗೂ ಸಹ ಪರೇಡ್ ಕಮಾಂಡರ್ ಬಿ.ಆರ್.ಗಿರೀಶ್ ಅವರ ಮುಂದಾಳತ್ವದಲ್ಲಿ ಭಾರತೀಯ ಗಡಿ ಭದ್ರತಾ ಪಡೆ, ಕೇಂದ್ರ ಅರೆಸೇನಾ ಪಡೆ (ಮಹಿಳೆಯರು) ಗೋವಾ ಪೊಲೀಸ್, ಕೆಎಸ್‌ಆರ್‌ಪಿ, ಅಗ್ನಿಶಾಮಕ ದಳ, ಅಬಕಾರಿ ದಳ, ಗೃಹ ರಕ್ಷಕ ದಳ, ಟ್ರಾಫಿಕ್ ವಾರ್ಡನ್, ಶ್ವಾನದಳ, ಸಿವಿಲ್ ಡಿಫೆನ್ಸ್, ಎನ್‌ಸಿಸಿ ಬಾಯ್ಸ, ಭಾರತ್ ಸ್ಕೌಟ್ ಮತ್ತು ಗೈಡ್ಸ್, ಅಗ್ನಿಶಾಮಕ ದಳ, ಹೋಂಗಾರ್ಡ್ಸ್ ಹಾಗೂ ವಿವಿಧ ಶಾಲಾ ತಂಡಗಳು ಸೇರಿದಂತೆ ಶಾಲಾ ತಂಡಗಳು ಸೇರಿ 32 ತಂಡಗಳಿಂದ ಶಿಸ್ತುಬದ್ಧ ಪಥ ಸಂಚಲನ ನಡೆಯಿತು. ಸಮ ರ್ಥನಂ ಮತ್ತು ರಮಣಮಹರ್ಷಿ ವಿಕಲಚೇತನ ಸಂಸ್ಥೆ ಮಕ್ಕಳು ಪಥ ಸಂಚಲನಕ್ಕೆ ವಿಶೇಷ ಮೆರುಗು ನೀಡಿದರು. ಶ್ವಾನದಳದ ಪಥ ಸಂಚಲನ ಮನ ಗೆದ್ದಿತು.
ಪರೇಡ್ ಬಹುಮಾನ: ಸ್ವಾತಂತ್ರ್ಯೋತ್ಸವ ಪಥ ಸಂಚಲನದ 1ನೇ ಗುಂಪಿನಲ್ಲಿ ಬಿಎಸ್‌ಎಫ್ ಪ್ರಥಮ, ಸಿರ್‌ಪಿಎಫ್ ಮಹಿಳಾ ಪಡೆ ದ್ವಿತೀಯ ಹಾಗೂ ಕೆಎಸ್‌ಆರ್‌ಪಿ ಮಹಿಳಾಪಡೆ ತೃತೀಯ ಬಹುಮಾನ ಪಡೆದಿದೆ. 2ನೇ ಗುಂಪಿನಲ್ಲಿ ಕೆಎಸ್‌ಆರ್‌ಟಿಸಿ ಸೆಕ್ಯೂರಿಟಿ ಹಾಗೂ ಅಬಕಾರಿ ತಂಡ ಕ್ರಮವಾಗಿ ಮೊದಲೆರಡು ಬಹುಮಾನ ತಮ್ಮದಾಗಿಸಿಕೊಂಡಿವೆ. 3ನೇ ಗುಂಪಿನಲ್ಲಿ ಸಿವಿಲ್ ಡಿಫೆನ್ಸ್ ಮತ್ತು ಹೋಂ ಗಾರ್ಡ್ಸ್ ಸೌಥ್ ಮೊದಲೆರಡು ಸ್ಥಾನ ಪಡೆದಿದೆ. 4 ಗುಂಪಿನಲ್ಲಿ ಶ್ರೀಚೈತನ್ಯ ಸ್ಕೂಲ್, ಎಂಡೋವರ್ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಮಿತ್ರಾ ಅಕಾಡೆಮಿ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದಿವೆ. 5ನೇ ಗುಂಪಿನಲ್ಲಿ ಲಿಟ್ಲ ಫ್ಲವರ್ ಪಬ್ಲಿಕ್ ಸ್ಕೂಲ್ ಹಾಗೂ ಪೊಲೀಸ್ ಪಬ್ಲಿಕ್ ಶಾಲೆಯ ತಂಡ ಮೊದಲೆರಡು ಬಹುಮಾನ ತಮ್ಮದಾಗಿಸಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.