ವೈದ್ಯಕೀಯ ಸವಾಲಿಗೆ ಸಂಶೋಧನೆ ಪರಿಹಾರವಾಗಲಿ
Team Udayavani, Mar 27, 2019, 11:44 AM IST
ಬೆಂಗಳೂರು: ವೈದ್ಯಕೀಯ(ಔಷಧ)ವಲಯದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಅದೇ ಪ್ರಮಾಣದಲ್ಲಿ ಸವಾಲುಗಳು ಎದುರಾಗುತ್ತಿವೆ. ಹೊಸ ಸಂಶೋಧನೆಗಳ ಮೂಲಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮಂಗಳವಾರ ನಿಮ್ಹಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 21ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವೈದ್ಯರು, ವಿಜ್ಞಾನಿಗಳು ಹಾಗೂ ಎಂಜಿನಿಯರಗಳ ನಡುವೆ ಹೊಂದಾಣಿಕೆ ಅತಿ ಅಗತ್ಯ. ವಿಜ್ಞಾನ ಮತ್ತು ಔಷಧ ಒಟ್ಟೊಟ್ಟಿಗೆ ಸಾಗುವುದರಿಂದ ಹಲವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ವಿಶ್ವವಿದ್ಯಾಲಯಗಳು ಜ್ಞಾನ ಮಾತ್ರವಲ್ಲದೇ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನ ಮಾಡಬೇಕು. ವಿದೇಶಿ ವಿವಿಗಳು ಇದೇ ಕಾರಣಕ್ಕೆ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ವಿವಿಯ ಸಂಪ್ರದಾಯವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆ ವರ್ಗಾವಣೆಯಾಗುತ್ತಿರಬೇಕು ಎಂದು ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ ದೇಶದ ಅತ್ಯಗತ್ಯ ಸಾಮಾಜಿಕ ವಲಯವಾಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆ ತರುವ ಮೂಲಕ ವಿಶ್ವದಲ್ಲೇ ಉನ್ನತ ಸ್ಥಾನ ಪಡೆಯಲಿದ್ದೇವೆ. ಎಲ್ಲ ಸರ್ಕಾರಗಳು ಇದಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದೆ ಎಂದರು.
ವೈದ್ಯಕೀಯ ಹಾಗೂ ಔಷಧದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಹಾಗೆಯೇ ಹೊಸ ಸವಾಲುಗಳು, ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ವೈದ್ಯರು ಸಂಶೋಧಕರಾಗಬೇಕು. ವೈದ್ಯಕೀಯ ಸಂಶೋಧನೆಗಳು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರವರೆಗೂ ತಲುಪಬೇಕು. 50ಯಿಂದ 60 ಮಿಲಿಯನ್ ಮಕ್ಕಳು ಗ್ರಾಮೀಣ ಭಾಗದಲ್ಲಿದ್ದಾರೆ. ಅವರ ಆರೋಗ್ಯ ಅತಿ ಮುಖ್ಯವಾಗಿದೆ ಎಂದರು.
ಎಂಬಿಬಿಎಸ್‌ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ 6ರಿಂದ 8 ತಿಂಗಳು ಒರಿಯಂಟೇಶನ್ ಕಾರ್ಯಕ್ರಮ ಆರಂಭಿಸಿಬೇಕು. ಆಗ ಎಲ್ಲ ವಿಷಯದ ಬಗ್ಗೆ ವಿದ್ಯಾರ್ಥಿಗೆ ಸಮಗ್ರ ಮಾಹಿತಿ ಸಿಗುತ್ತದೆ. ವೈದ್ಯಕೀಯ ಶಿಕ್ಷಣ ಅಧಿಕಾರಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನದ ಮಾಹಿತಿ ನೀಡಬೇಕು ಎಂದು ಹೇಳಿದರು.
ರಾಜೀವ್‌ಗಾಂಧಿ ವಿವಿಯು ಎಂಡಿ-ಪಿಎಚ್.ಡಿ ಕಾರ್ಯಕ್ರಮ ಆರಂಭಿಸುವಂತೆ ಮನವಿ ಮಾಡಿದ ಅವರು, ವೈದ್ಯಕೀಯದ ಯಾವುದೇ ಒಂದು ವಿಭಾಗದಲ್ಲಿ ಅಧ್ಯಯನ ಮಾಡಿದರೂ, ಹಲವು ವಿಷಯಗಳನ್ನು ಅರಿತುಕೊಳ್ಳುವ ಮಾನಸಿಕತೆ ಬೆಳೆಸಿಕೊಳ್ಳಬೇಕು. ಹೊಸ ವಿಷಯಗಳ ಅಧ್ಯಯನಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ವಿ.ಆರ್.ವಾಲಾ, ಕುಲಪತಿ ಡಾ.ಎಸ್.ಸಚ್ಚಿದಾನಂದ, ಮೌಲ್ಯಮಾಪನ ಕುಲಸಚಿವ ಡಾ.ಕೆ.ಬಿ.ನಿಂಗೇಗೌಡ ಇತರರು ಹಾಜರಿದ್ದರು.
ಸಾಧಕರಿಗೆ ಗೌರವ: ಪ್ರಸಕ್ತ ಸಾಲಿನಲ್ಲಿ ತೇರ್ಗಡೆಯಾದ 30,556 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 44 ಪಿಎಚ್.ಡಿ, 129 ಸೂಪರ್ ಸ್ಪೆಷಾಲಿಟಿ(ಡಿಎಂ, ಎಂಸಿಎಚ್), 5711 ಸ್ನಾತಕೋತ್ತರ, 175 ಫೆಲೊಶಿಪ್ ಕೋರ್ಸ್, 16 ಪ್ರಮಾಣಪತ್ರ ಕೋರ್ಸ್ ಹಾಗೂ 24481 ಪದವಿಯ ಜತೆಗೆ ದಂತ ವೈದ್ಯ ಡಾ. ಕೆ.ಎಸ್. ನಾಗರಾಜು ಅವರಿಗೆ ಡಾಕ್ಟರ್ ಆಫ್ ಸೈನ್ಸ್(ಗೌರವ ಡಾಕ್ಟರೇಟ್) ಪ್ರದಾನ ಮಾಡಲಾಯಿತು.
ಮಂಗಳೂರಿನ ಎ.ಜೆ.ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿ ವಿದ್ಯಾರ್ಥಿ ಡಾ.ವಲ್ಲೀಶ್ ಶೆಣೈ 7 ಸ್ವರ್ಣ ಪದಕ ಹಾಗೂ 1 ನಗದು ಬಹುಮಾನ, ಬೆಂಗಳೂರಿನ ಡಿ.ಎ.ಪಾಂಡು ಸ್ಮಾರಕ ಆರ್.ವಿ.ದಂತ ಮಹಾವಿದ್ಯಾಲಯದ ಸ್ನಾತಕ ವಿದ್ಯಾರ್ಥಿ ಡಾ.ಜಿ.ಅಪರ್ಣಾ ಹಾಗೂ ಮಂಡ್ಯದ ಭಾರತಿ ಕಾಲೇಜ್ ಆಫ್ ಫಾರ್ಮಸಿಯ ಡಿ-ಫಾರ್ಮ ವಿದ್ಯಾರ್ಥಿನಿ ಡಾ.ಭಾತ್ಸಾ ಲಿಜಾ ಜಾನ್ಸನ್ ತಲಾ ಆರು ಸ್ವರ್ಣ ಪದಕ ಪಡೆದರು.
ಉತ್ತಮ ಕೆಲಸಕ್ಕೆ ನಿವೃತ್ತಿ ಎಂಬುದಿಲ್ಲ. ದೃಢ ಸಂಕಲ್ಪದಿಂದ ಗುರಿ ಸಾಧನೆ ಸಾಧ್ಯ. ಓದಿ ರ್‍ಯಾಂಕ್ ಪಡೆಯುವುದು ಒಂದೆಡೆಯಾದರೆ, ಜೀವನವನ್ನು ಉತ್ತಮವಾಗಿ ನಿರ್ವಹಣೆ ಮಾಡುವುದು ಅದಕ್ಕಿಂತ ದೊಡ್ಡ ಸಾಧನೆ. ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಅತಿ ಅಗತ್ಯ. ಹೊಸ ಅನ್ವೇಷಣೆಗಳ ಮೂಲಕ ಆಧುನಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಪದವೀಧರರ ಕೊಡುಗೆ ಅಗತ್ಯವಿದೆ.
-ಪ್ರೊ.ಸಿ.ಎನ್.ಆರ್.ರಾವ್, ವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.