ಬೆಂಗಳೂರಲ್ಲಿ ಬೆರಳಚ್ಚು ತಂಡಕ್ಕೆ ಬಲ
Team Udayavani, Oct 31, 2018, 12:15 PM IST
ಬೆಂಗಳೂರು: ಸಾಕಷ್ಟು ಸುರಕ್ಷತಾ ಕ್ರಮಗಳ ನಡುವೆಯೂ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ಶೀಘ್ರವೇ ಪತ್ತೆಹಚ್ಚಲು ನಗರದ ಎಂಟು ಉಪ ಪೊಲೀಸ್ ಆಯುಕ್ತ (ಡಿಸಿಪಿ)ರ ವಲಯಗಳಲ್ಲೂ ಬೆರಳಚ್ಚು ತಂಡ ರಚಿಸಲು ರಾಜ್ಯ ಪೊಲೀಸ್ ಇಲಾಖೆ ತೀರ್ಮಾನಿಸಿದೆ.
ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಲು, ಒಂದೇ ತಂಡ ಎಷ್ಟು ಅಪರಾಧ ಕೃತ್ಯಗಳಲ್ಲಿ ತೊಡಗಿದೆ ಎಂಬುದನ್ನು ಪತ್ತೆಹಚ್ಚಲು ಪ್ರಮುಖ ಕಾರಣವಾಗುವುದು ಅವರ ಬೆರಳಚ್ಚು. ಇತ್ತೀಚೆಗೆ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳನ್ನು ಪೊಲೀಸರು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸುತ್ತಿಲ್ಲ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತ್ತು. ಬಹುತೇಕ ಪ್ರಕರಣಗಳಲ್ಲಿ ಪೊಲೀಸ್ ತನಿಖೆ ನಿಧಾನಗತಿಯಲ್ಲಿ ಸಾಗಲು ಕಾರಣವೇ ಬೆರಳಚ್ಚು ಕುರಿತ ಸಮಸ್ಯೆ.
ಈ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳ ಪ್ರಮುಖ ಸಾಕ್ಷ್ಯ ಎಂದು ಹೇಳಲಾದ ಬೆರಳಚ್ಚು ತಂಡ ರಚಿಸಿ ಹಾಗೂ ಇದಕ್ಕೆ ಸಂಬಂಧಿಸಿದ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿ ನಗರದ 8 ವಲಯಗಳಲ್ಲಿರುವ ಡಿಸಿಪಿ ಕಚೇರಿ ವ್ಯಾಪ್ತಿಯಲ್ಲಿ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬೆರಳಚ್ಚು ತಂಡ ಕಾರ್ಯನಿರ್ವಹಿಸುತ್ತಿದೆ.
ಒಬ್ಬ ಎಸಿಪಿ ನೇತೃತ್ವದಲ್ಲಿ ಒಬ್ಬ ಇನ್ಸೆಪಕ್ಟರ್, ಇಬ್ಬರು ಪಿಎಸ್‌ಐ, ಐವರು ಕಾನ್‌ಸ್ಟೆಬಲ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 3-4 ವಲಯಗಳಲ್ಲಿ ಒಮ್ಮೆಲೆ ಅಪರಾಧ ಕೃತ್ಯಗಳು ನಡೆದಾಗ ಇರುವ ತಂಡ ಏಕಕಾಲಕ್ಕೆ ಕಾರ್ಯ ನಿರ್ವಹಿಸುವುದು ಕಷ್ಟ. ಅಲ್ಲದೆ, ಸೂಕ್ತ ಸಮಯದಲ್ಲಿ ಸಾಕ್ಷ್ಯ ಸಂಗ್ರಹ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆರಳಚ್ಚು ವಿಭಾಗಗಳನ್ನು ವಿಸ್ತರಿಸುವ ಯೋಜನೆ ರೂಪಗೊಂಡಿದ್ದು, ಕೆಲ ತಿಂಗಳಲ್ಲಿ ಎಲ್ಲ ವಲಯಗಳಲ್ಲೂ ವಿಸ್ತರಣೆಯಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ದೇಶವೇನು?: ನಗರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಪೊಲೀಸ್ ಠಾಣೆಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅದೇ ರೀತಿ ಅಪರಾಧ ಪ್ರಕರಣಗಳು ಕೂಡ ಅಧಿಕವಾಗುತ್ತಿವೆ. ಆದರೆ, ಈ ಜನಸಂಖ್ಯೆ, ಪೊಲೀಸ್ ಠಾಣೆಗಳು ಹಾಗೂ ಹೆಚ್ಚುತ್ತಿರುವ ಪ್ರಕರಣಗಳಿಗೆ ತಕ್ಕಂತೆ ಬೆರಳಚ್ಚು ತಜ್ಞರಾಗಲಿ, ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರದ ಸಿಬ್ಬಂದಿಯಾಗಲಿ ಇಲ್ಲ.
ಇದರಿಂದ ಸಕಾಲದಲ್ಲಿ ತನಿಖೆ ನಡೆಸುವುದು ಕಷ್ಟವಾಗುತ್ತಿದೆ. ಪ್ರತಿ ವಲಯಗಳಲ್ಲಿ ಒಂದು ಬೆರಳಚ್ಚು ತಂಡ ಕಾರ್ಯನಿರ್ವಹಿಸಿದರೆ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರದಲ್ಲೇ ಸಾಕ್ಷ್ಯ ಸಂಗ್ರಹಿಸಬಹುದು. ಹೀಗಾದರೆ ಕೆಲವೇ ಗಂಟೆಗಳಲ್ಲಿ ಆರೋಪಿಯ ಹಿನ್ನೆಲೆಯನ್ನು ತನಿಖಾಧಿಕಾರಗಳಿಗೆ ನೀಡಲು ಸಾಧ್ಯವಾಗುತ್ತದೆ.
ಎಎಫ್ಐಎಸ್ ಸಾಫ್ಟ್ವೇರ್ ಅಭಿವೃದ್ಧಿ: ಪೊಲೀಸ್ ಇಲಾಖೆಯಲ್ಲಿ ಆರೋಪಿಗಳ ಬೆರಳಚ್ಚು ಸಂಗ್ರಹಿಸಲು ಜಪಾನ್ ಮೂಲದ ಕಂಪನಿಯೊಂದು ಅಭಿವೃದ್ಧಿ ಪಡಿಸಿರುವ ಎಎಫ್ಐಎಸ್ (ಆಟೋಮೇಟೆಡ್ ಫಿಂಗರ್‌ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಂ) ಎಂಬ ಸಾಫ್ಟ್ವೇರ್ ಅನ್ನು 2002ರಿಂದ ಬಳಸಲಾಗುತ್ತಿದೆ. ಇದೇ ಆಧಾರದ ಮೇಲೆ ಪ್ರತಿ ಜಿಲ್ಲೆಯಲ್ಲಿರುವ ಬೆರಳಚ್ಚು ತಜ್ಞರ ತಂಡ ಮಾಹಿತಿ ಸಂಗ್ರಹಿಸಿ ಒಂದೇ ಸರ್ವರ್‌ನಲ್ಲಿ ದಾಖಲಿಸುತ್ತಿದೆ.
ಅಲ್ಲದೆ, ಸಂಗ್ರಹಿಸಲಾದ ಆರೋಪಿಗಳ ಬೆರಳಚ್ಚನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಪತ್ತೆಯಾದ ಆರೋಪಿಗಳ ಬೆರಳಚ್ಚಿಗೆ ಹೊಂದಾಣಿಕೆ ಮಾಡಲು ಕಷ್ಟವಾಗುತ್ತಿತ್ತು. ದೇ ಕಾರಣದಿಂದ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿತ್ತು.
ಇದೀಗ ಈ ಎಎಫ್ಐಎಸ್ ಸಾಫ್ಟ್ವೇರ್ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗಿದ್ದು, ಸರ್ವರ್‌ನ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಮುಂದಿನ 20 ವರ್ಷಗಳಿಗೆ ಆಗುವಷ್ಟು ಮಾಹಿತಿ ಸಂಗ್ರಹ ಮಾಡುವ ಸಾಮರ್ಥ್ಯವ ನ್ನು ಸಾಫ್ಟ್ವೇರ್ ಹೊಂದಿದೆ. ಸದ್ಯ ಅಳವಡಿಸಿರುವ ಸಾಫ್ಟ್ವೇರ್‌ನಿಂದ ರಾಜ್ಯಾದ್ಯಂತ ನಿತ್ಯ ಕನಿಷ್ಠ 250ರಿಂದ 300 ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.
3.60 ಲಕ್ಷ ಆರೋಪಿಗಳ ಮಾಹಿತಿ: ಈಗ ಅಭಿವೃದ್ಧಿ ಪಡಿಸಿರುವ ಸಾಫ್ಟ್ವೇರ್‌ನಲ್ಲಿ ರಾಜ್ಯಾದ್ಯಂತ ಅಪರಾಧ ಪ್ರಕರಣಗಳಲ್ಲಿ ತೊಡಗಿರುವ 3.60 ಲಕ್ಷ ಆರೋಪಿಗಳ ಬೆರಳಚ್ಚು ಮಾಹಿತಿ ಸಂಗ್ರಹಿಸಲಾಗಿದೆ. ಈ ಮೂಲಕ ಒಮ್ಮೆ ಒಬ್ಬ ಆರೋಪಿಯ ಬೆರಳಚ್ಚು ಸಂಗ್ರಹಿಸಿ ಈ ಸಾಫ್ಟ್ವೇರ್‌ನಲ್ಲಿ ಪರಿಶೀಲಿಸಿದರೆ, ಆತನ ಇಡೀ ಅಪರಾಧ ಹಿನ್ನೆಲೆ ತೆರೆದುಕೊಳ್ಳುತ್ತದೆ. ಒಮ್ಮೆಲೇ ಒಬ್ಬ ಆರೋಪಿಯ ಬೆರಳಚ್ಚನ್ನು 10ರಿಂದ 100 ಮಂದಿಯ ಬೆರಳಚ್ಚುಗಳ ಜತೆ ಹೊಲಿಕೆ ಮಾಡಬಹುದು. ಈ ಮೂಲಕ ಪ್ರಕರಣದ ಶೇ.90ರಷ್ಟು ತನಿಖೆ ಮುಕ್ತಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರತ್ಯೇಕ ನೇಮಕ, ತರಬೇತಿ: ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಬೆರಳಚ್ಚು ವಿಭಾಗಕ್ಕೆ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ 24 ಮಂದಿ ಪಿಎಸ್‌ಐಗಳ ನೇಮಕವಾಗಿದ್ದು, ಮೈಸೂರಿನಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿದ್ದಾರೆ.
ಬಳಿಕ ಹೈದ್ರಾಬಾದ್‌ನಲ್ಲಿರುವ ಬೆರಳಚ್ಚು ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿ, ಬೆರಳಚ್ಚು ತಜ್ಞರನ್ನಾಗಿ ಮಾಡಿ ನೇಮಕ ಮಾಡಲಾಗುವುದು. ಈ ತರಬೇತಿ ವೇಳೆ ಅಪರಾಧ ಸ್ಥಳದಲ್ಲಿ ದೊರೆಯುವ ರಕ್ತದ ಮಾದರಿ, ಕೂದಲು, ಬೆರಳಚ್ಚು ಸೇರಿದಂತೆ ಕೆಲ ಪ್ರಮುಖ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಸಂಗ್ರಹಿಸುವ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಯಾವುದೇ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಬೆರಳಚ್ಚು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಅಪರಾಧ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನಗರದ 8 ಕಡೆ ಬೆರಳಚ್ಚು ತಂಡ ಸ್ಥಾಪಿಸಿ ಕಾರ್ಯ ವ್ಯಾಪ್ತಿ ವಿಸ್ತರಿಸಲು ತೀರ್ಮಾನಿಸಲಾಗಿದೆ.
-ಡಾ.ಎಂ.ಎ.ಸಲೀಂ, ಎಡಿಜಿಪಿ (ಅಪರಾಧ ಮತ್ತು ತಾಂತ್ರಿಕ ಸೇವೆಗಳು)
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.