![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 7, 2021, 9:37 AM IST
ಬೆಂಗಳೂರು: ರಸ್ತೆ ರಸ್ತೆಗಳಲ್ಲಿ ಬೀದಿ, ಬೀದಿ ಬಲೂನ್ ಮಾರಾಟ ಮಾಡುತ್ತ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಅಂತಹ ಮನೆಗಳ ನುಗ್ಗಿ ಕನ್ನ ಹಾಕುತ್ತಿದ್ದ ಬಗಾರಿಯಾ ಗ್ಯಾಂಗ್‌ನ ಮೂವರು ಸದಸ್ಯರನ್ನು ಅಮೃತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಜಸ್ಥಾನ ಮೂಲದ ಬಗಾರಿಯಾ ಗ್ಯಾಂಗ್‌ನ ಮುಖೇಶ್ (25), ಧರ್ಮ (26), ಲಕ್ಷ್ಮಣ್ (25) ಬಂಧಿತರು. ಆರೋಪಿಗಳಿಂದ 200 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತರೆ ಮೂವರು ಸದಸ್ಯರಿಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಬಲೂನು ಖರೀದಿಸಿ, ಹಗಲಿನಲ್ಲಿ ನಗರದಲ್ಲೆಲ್ಲಾ ಸುತ್ತಾಡಿ ಬಲೂನ್ ಮಾರಾಟ ಮಾಡುತ್ತಿದ್ದರು. ಆ ವೇಳೆ ಬೀಗ ಹಾಕಿರುವ ಐಷಾರಾಮಿ ಮನೆಗಳನ್ನು ಗುರುತಿಸುತ್ತಿದ್ದರು. ಆ ಮನೆಗಳಿಗೆ ಹೋಗಿ ಬೆಲ್ ಮಾಡುತ್ತಿದ್ದರು. ಯಾರೂ ಮನೆಯಿಂದ ಹೊರಗೆ ಬಾರದಿದ್ದರೆ, ಒಂದೆರಡು ದಿನ ಆ ಮನೆಯ ಬಳಿ ಸುತ್ತಾಡಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ:ಪಂಜ್ ಶೀರ್ ನಲ್ಲಿ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳ ದಾಳಿ
ಬಳಿಕ ಅದೇ ದಿನ ರಾತ್ರಿ ಆ ಮನೆಗೆ ಕನ್ನ ಹಾಕಿ ಲಾಕರ್ ಒಡೆದು ಕೆಲವೇ ಕ್ಷಣಗಳಲ್ಲಿ ಚಿನ್ನಾಭರಣ ದೋಚುತ್ತಿದ್ದರು. ಕದ್ದ ಚಿನ್ನಾಭರಣವನ್ನು ರಾಜಸ್ಥಾನದ ಜುವೆಲ್ಲರಿ ಅಂಗಡಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಒಂದು ವೇಳೆ ಬೆಲ್ ಮಾಡಿದಾಗ ಮನೆಯಿಂದ ಯಾರಾದರೂ ಹೊರ ಬಂದರೆ ಬಲೂನ್ ಖರೀದಿ ಸುವಂತೆ ಒತ್ತಾಯಿಸಿ ಅಲ್ಲಿಂದ ತೆರಳುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮೊಬೈಲ್ ನೆಟ್‌ವರ್ಕ್ ಮೂಲಕ ಪತ್ತೆ: ಆ.10ರಂದು ಆರೋಪಿಗಳು ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಮನೆಯ ಗ್ರಿಲ್‌ಗೇಟ್ ಹಾಗೂ ಮುಂಬಾಗಿಲು ಒಡೆದು ಒಳ ಪ್ರವೇಶಿಸಿ 200 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದರು. ಕೆಲ ದಿನಗಳ ಬಳಿಕ ಮಾಲೀಕರು ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅಮೃತಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಕೃತ್ಯ ನಡೆದ ಸ್ಥಳದ ಆಸು- ಪಾಸಿನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಮುಖ ಚಹರೆ ಪತ್ತೆಯಾಗಿತ್ತು. ಸ್ಥಳೀಯರ ಬಳಿ ಆರೋಪಿಗಳ ಬಗ್ಗೆ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ನಂತರ ಕೃತ್ಯ ನಡೆದ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೊಬೈಲ್‌ಗಳನ್ನು ಟವರ್ ಲೊಕೇಶನ್ ಮೂಲಕ ಪರಿಶೀಲಿಸಿದ್ದರು. ಸಾವಿರಾರು ಕರೆಗಳ ಜಾಡು ಹಿಡಿದು ತನಿಖೆ ನಡೆಸಿದಾಗ ರಾಜಸ್ಥಾನದ ಛಾಪನೇರಿ ಎಂಬ ಪ್ರದೇಶದ ಮೊಬೈಲ್ ನಂಬರ್ ವೊಂದರ ಸುಳಿವು ಸಿಕ್ಕಿತ್ತು. ಈ ಸುಳಿವು ಆಧರಿಸಿ ಅಲ್ಲಿಗೆ ತೆರಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.