ಶೂಟೌಟ್ ಪ್ರಕರಣದಲ್ಲಿ ರೋಹಿತ್ ಪಾತ್ರ?
Team Udayavani, Feb 9, 2017, 11:29 AM IST
ಬೆಂಗಳೂರು: ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಹತ್ಯೆ ಪ್ರಯತ್ನ ಪ್ರಕರಣದಲ್ಲಿ ಮಂಗಳ ವಾರ ಪೊಲೀಸರಿಗೆ ಶರಣಾಗಿರುವ ರೋಹಿತ್ ಅಲಿಯಾಸ್ ಒಂಟೆ ರೋಹಿತ್‌ನ ಪಾತ್ರವಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ ನೇತೃತ್ವದ ಮೂವರು ಡಿಸಿಪಿಗಳ ತಂಡ ಮಂಗಳವಾರ ಬೆಳಗ್ಗೆಯೇ ರೋಹಿತ್ ಹಾಗೂ ಸೈಲೆಂಟ್ ಸುನೀಲನಿಗಾಗಿ ಪತ್ರಕರ್ತ ಅಗ್ನಿಶ್ರೀಧರ್ ಮತ್ತು ಬಚ್ಚನ್ ಮನೆಗಳ ಮೇಲೆ ಕ್ಷಿಪ್ರ ದಾಳಿ ನಡೆಸಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಒಂಟೆ ರೋಹಿತ್ ಹಾಗೂ ಸೈಲೆಂಟ್ ಸುನೀಲ್ ಮಂಗಳವಾರ ಪೊಲೀಸರಿಗೆ ಶರಣಾಗಿದ್ದರು. ಮಂಗಳವಾರ ರಾತ್ರಿಯಿಂದಲೇ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಇಬ್ಬರನ್ನೂ ತೀವ್ರ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದರು. ವಿಚಾರಣೆ ವೇಳೆ ಕಡಬೆಗೆರೆ ಶ್ರೀನಿವಾಸ್ ಕೊಲೆ ಯತ್ನದಲ್ಲಿ ಒಂಟೆ ರೋಹಿತನ ನೇರ ಕೈವಾಡವಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಡಬಗೆರೆ ಶ್ರೀನಿವಾಸನ ಬಲಗೈಬಂಟ ಟಾಟಾ ರಮೇಶ್‌ಗೆ ಫೆ.1ರಂದು ನೇರವಾಗಿ ದಮಕಿ ಹಾಕಿದ್ದ ಒಂಟೆ ರೋಹಿತ್ “ಸ್ವಲ್ಪ ದಿನಗಳಲ್ಲಿ ನಿಮ್ಮ ಬಾಸ್‌ಗೆ ಏನ್ ಆಗುತ್ತದೆ ನೋಡ್ತಿರು,” ಎಂದು ಬೆದರಿಸಿದ್ದ. ಈ ಹಿನ್ನೆಲೆಯಲ್ಲಿ ಟಾಟಾ ರಮೇಶ್ ಪೊಲೀಸರಿಗೆ ದೂರು ನೀಡಿದ್ದ. ಘಟನೆ ನಡೆದು ಎರಡು ದಿನಗಳಲ್ಲಿ ಕೋಗಿಲು ಕ್ರಾಸ್ ಬಳಿಯಲ್ಲಿ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲೆ ಬೆಳಗ್ಗೆ 9.30ರ ಸುಮಾರಿಗೆ ಶೂಟೌಟ್ ನಡೆದಿತ್ತು.
ಠಾಣೆಗೆ ಬಿಗಿ ಬಂದೋಬಸ್ತ್: ಪ್ರಕರಣದ ಪ್ರಮುಖ ಆರೋಪಿಗಳೆಂದು ಪರಿಗಣಿಸಲ್ಪಟ್ಟಿ ರುವ ಒಂಟೆ ರೋಹಿತ್ ಮತ್ತು ಸೈಲೆಂಟ್ ಸುನೀಲನ ವಿಚಾರಣೆ ಹಿನ್ನೆಲೆಯಲ್ಲಿ ಕೊತ್ತನೂರು ಪೊಲೀಸ್ ಠಾಣೆ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶ್ರೀನಿವಾಸನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಪಾಯ್ಸನ್ ರಾಮನನ್ನು ಕೂಡ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಒಂಟೆ ರೋಹಿತ್ ವಿರುದ್ಧ ಕೊಲೆ, ಕೊಲೆ ಬೆದರಿಕೆ, ದರೋಡೆ ಸೇರಿದಂತೆ 12 ಪ್ರಕರಣ ಗಳಿವೆ. ಅಂತೆಯೇ ಕೊಲೆ, ಜೀವ ಬೆದರಿಕೆ, ದರೋಡೆ, ದರೋಡೆ ಯತ್ನ ಸೇರಿದಂತೆ ಸೈಲೆಂಟ್ ಸುನೀಲ್ ವಿರುದ್ಧ 15 ಕೇಸುಗಳಿದ್ದು, ಹೈಗ್ರೌಂಡ್, ಜೆ.ಪಿ.ನಗರ, ಸಂಜಯನಗರ, ಯಲಹಂಕ, ಯಲಹಂಕ ನ್ಯೂಟೌನ್‌ನಲ್ಲಿಯೂ ಪ್ರಕರಣ ಪತ್ತೆಯಾಗಿವೆ.
ಹತ್ತು ಮಂದಿಯೂ ಪೊಲೀಸರ ವಶಕ್ಕೆ
ಬೆಂಗಳೂರು: ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ 10 ಆರೋಪಿಗಳನ್ನು ನ್ಯಾಯಾಲಯವು ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.
ಮಂಗಳವಾರ ಬಂಧನಕ್ಕೊಳಗಾಗಿದ್ದ ಅಗ್ನಿ ಶ್ರೀಧರ ಆಪ್ತ ಎನ್ನಲಾದ ಸೈಯದ್ ಅಮಾನ್ ಬಚ್ಚನ್, ಸೈಲೆಂಟ್ ಸುನೀಲ್, ರೋಹಿತ್, ಖಾಸಗಿ ಅಂಗರಕ್ಷಕರಾದ ಬ್ರಿಜ್ ಭೂಷಣ್ ಹುಸೇನ್, ರಾಮ್‌ಕುಮಾರ್ ರಾಯ್, ಸಾಬೀರ್ ಆಲಿ, ಅರುಣ್‌ಕುಮಾರ್, ಅಮಾನುಲ್ಲಾ ಷರೀಫ್, ವರುಣ್‌ಕುಮಾರ್, ಜಬ್ಬರ್, ಬನಶಂಕರಿಯ ತನ್ವೀರ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು 44ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಗಿತ್ತು.
ವಿಚಾರಣೆ ಸಂದರ್ಭದಲ್ಲಿ ಸಂಪಿಗೇಹಳ್ಳಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯವು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನ ಪೊಲೀಸ್ ವಶಕ್ಕೆ ನೀಡಿದೆ.
ಆಸ್ಪತ್ರೆಯಿಂದ ಅಗ್ನಿ ಬೇಲ್ ಯತ್ನ
ಪೊಲೀಸ್ ದಾಳಿ ಹಿನ್ನೆಲೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿರುವು ಪತ್ರಕರ್ತ ಅಗ್ನಿ ಶ್ರೀಧರ್ ಆಸ್ಪತ್ರೆಯಿಂದಲೇ ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸಿದ್ದಾರೆ. ಅಗ್ನಿಶ್ರೀಧರ್ ಪರ ವಕೀಲ ಹನುಮಂತರಾಯಪ್ಪ ನಿರೀಕ್ಷಣಾ ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಶೂಟೌಟ್ ಪ್ರಕರಣದ ಆರೋಪಿಗಳಿಗೆ ರಕ್ಷಣೆ ನೀಡಿದ ಆರೋಪಕ್ಕಾಗಿ ಅಗ್ನಿಶ್ರೀಧರ್ ಅವರನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ರೌಡಿಗಳ ಆಸ್ತಿ ಮೇಲೆ ಪೊಲೀಸ್ ಕಣ್ಣು
ರೌಡಿ ಚಟುವಟಿಕೆಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರು ಇನ್ನು ಮುಂದೆ ಅವರ ಅಕ್ರಮ ಆಸ್ತಿಯ ಬಗ್ಗೆಯೂ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಮಾಫಿಯಾ, ಗಾಬೇಜ್ ಮಾಫಿಯಾ ಹೀಗೆ ಸಂಬಂಧವಿಲ್ಲದ ವಿಚಾರಗಳಲ್ಲಿ ತಲೆ ಹಾಕುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಗುಂಪು ಕಟ್ಟಿಕೊಂಡು ಬೆದರಿಕೆ ಹಾಕುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಅನಾವಶ್ಯಕ ವಿಚಾರಗಳ ಬಗ್ಗೆ ತಲೆಹಾಕಿದರೆ ಕ್ರಮ ಕೈಗೊಳ್ಳಲಾಗುವುದು. ರೌಡಿಗಳು, ರೌಡಿ ಶೀಟರ್‌ಗಳ ಅಕ್ರಮ ಆಸ್ತಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾವುದು ರೌಡಿಗಳ ಬೆದರಿಕೆ ಕರೆ ಬಂದರೆ ಸಮೀಪದ ಠಾಣೆಯಲ್ಲಿ ದೂರು ನೀಡಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.