ರೌಡಿಶೀಟರ್ ಗೌತಮ್‌ಗೆ ಗುಂಡೇಟು
Team Udayavani, Jan 28, 2019, 6:35 AM IST
ಬೆಂಗಳೂರು: ನಗರದಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಕೊಲೆ ಪ್ರಕರಣದಲ್ಲಿ ಬಂಧಿಸಲು ತೆರಳಿದ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಯಶವಂತಪುರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆ ಮೂಲಕ ಕಳೆದ 28 ದಿನಗಳಲ್ಲಿ ನಗರ ಪೊಲೀಸರು ಇಬ್ಬರು ರೌಡಿಶೀಟರ್‌ಗಳಿಗೆ ಗುಂಡಿನ ರುಚಿ ತೋರಿಸಿದ್ದಾರೆ.
ಜ.7ರಂದು ಕೆ.ಜಿ. ಹಳ್ಳಿ ಪೊಲೀಸರು ರೌಡಿಶೀಟರ್ ತಬ್ರೇಜ್ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು. ಯಶವಂತಪುರದ ಮಾಡೆಲ್ ಕಾಲೋನಿ ನಿವಾಸಿ ಗೌತಮ್ (22) ಬಂಧಿತ. ಆರೋಪಿ ಹಲ್ಲೆ ನಡೆಸಿದ್ದರಿಂದ ಕಾನ್‌ಸ್ಟೆಬಲ್‌ಗಳಾದ ಶಿವಕುಮಾರ್ ಮತ್ತು ಮುತ್ತಪ್ಪ ಭಜಂತ್ರಿ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಆರೋಪಿ ಗೌತಮ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಸುಲಿಗೆ, ಕೊಲೆ ಯತ್ನ ಹಾಗೂ ಲೈಂಗಿಕ ಕಿರುಕುಳ ಸೇರಿ ಆರಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಇದೀಗ ಈತನ ವಿರುದ್ಧ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆಗೊಳಗಾಗಿದ್ದ ವಿನೋದ್ ಸಾವು: ಆರೋಪಿ ಗೌತಮ್ ಸಹಚರರಾದ ಸಲ್ಮಾನ್ ಮತ್ತು ಪ್ರಶಾಂತ್ ಜತೆ ಸೇರಿ ಇತ್ತೀಚೆಗೆ ಮಾಡೆಲ್ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಾವಿಜನ್ ಸ್ಟೋರ್ ಮಾಲೀಕ ವಿನೋದ್ ಕುಮಾರ್ ಮತ್ತು ತರಕಾರಿ ವ್ಯಾಪಾರಿ ಮಾರುತಿ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ.
ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್ ಕುಮಾರ್ ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮಾರುತಿ ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. 13 ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಆರೋಪಿ ಗೌತಮ್, ಜ.24ರಂದು ರಾತ್ರಿ 7.30ರ ಸುಮಾರಿಗೆ ಸಲ್ಮಾನ್, ಪ್ರಶಾಂತ್ ಜತೆಗೂಡಿ ಮಾಡೆಲ್ ಕಾಲೋನಿಯ ಪೈಪ್‌ಲೈನ್ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ತೇಜು ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಆದರೆ, ತೇಜು ಬದಲಿಗೆ ಆತನ ಸ್ನೇಹಿತರಾದ ಸಂತೋಷ್ ಮತ್ತು ಆಕ್ಷಯ್ ಕಂಡಿದ್ದಾರೆ. ಕೂಡಲೇ ಇಬ್ಬರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ಸಂತೋಷ್ ಸ್ನೇಹಿತ ಮಾರುತಿ ಹಾಗೂ ವಿನೋದ್ ಕುಮಾರ್ ನೆರವಿಗೆ ಧಾವಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಗೌತಮ್ ಮತ್ತು ಸಹಚರರು ಮಾರಕಾಸ್ತ್ರಗಳಿಂದ ವಿನೋದ್ ಮತ್ತು ಮಾರುತಿಯವರ ಕುತ್ತಿಗೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಪೈಕಿ ವಿನೋದ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್, ಆರೋಪಿಗಳ ಪತ್ತೆಗೆ ಯಶವಂತಪುರ ಠಾಣೆ ಇನ್‌ಸ್ಪೆಕ್ಟರ್ ಮುದ್ದುರಾಜ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಪ್ರಶಾಂತ್ ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.
ಆರೋಪಿಯ ಕಾಲಿಗೆ ಗುಂಡೇಟು: ಆರೋಪಿಯ ಬೆನ್ನು ಬಿದ್ದಿದ್ದ ವಿಶೇಷ ತಂಡ, ಭಾನುವಾರ ನಸುಕಿನ 2.10ರ ಸುಮಾರಿಗೆ ಗೌತಮ್, ಸಹಚರರಾದ ಸಲ್ಮಾನ್ ಹಾಗೂ ಪ್ರಶಾಂತ್ ಆರ್‌ಎಂಸಿ ಯಾರ್ಡ್‌ನ ಪ್ಲಾಟಿನಂ ಸಿಟಿ ಬಳಿಯ ಪೈಪ್‌ಲೈನ್ ರಸ್ತೆ ಸಮೀಪ ಓಡಾಡುತ್ತಿರುವ ಮಾಹಿತಿ ಸಂಗ್ರಹಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್ ಮುದ್ದುರಾಜ್ ಮತ್ತು ಸಿಬ್ಬಂದಿ, ಆರೋಪಿಗಳ ಬಂಧನಕ್ಕೆ ತೆರಳಿದ್ದರು.
ಪೊಲೀಸರನ್ನು ಕಂಡ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಬೆನ್ನಟ್ಟಿದ ಕಾನ್‌ಸ್ಟೆàಬಲ್‌ಗಳಾದ ಶಿವಕುಮಾರ್, ಮುತ್ತಪ್ಪ ಭಜಂತ್ರಿ ಮೇಲೆ ಆರೋಪಿ ಗೌತಮ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಮೂರು ಸುತ್ತುಗುಂಡು ಹಾರಿಸಿದ್ದಾರೆ. ಈ ಪೈಕಿ ಒಂದು ಗುಂಡು ಗೌತಮ್ ಬಲಗಾಲಿಗೆ ತಗುಲಿದೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು, ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಗೌತಮ್ ವಿರುದ್ಧ 2018ರಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ಈತನ ವಿರುದ್ಧ ಎರಡು ಕೊಲೆ ಯತ್ನ, ಎರಡು ಲೈಂಗಿಕ ಕಿರುಕುಳ ಹಾಗೂ ಒಂದು ಸುಲಿಗೆ ಪ್ರಕರಣ ದಾಖಲಾಗಿವೆ. ಹಲ್ಲೆ ಹಾಗೂ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಗೌತಮ್, ಭಾನುವಾರ ನಸುಕಿನಲ್ಲಿ ಆರ್‌ಎಂಸಿ ಯಾರ್ಡ್ ಬಳಿ ಓಡಾಡುತ್ತಿದ್ದ. ಈ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆರೋಪಿ ಗೌತಮ್ ಕಾಲಿಗೆ ಇನ್‌ಸ್ಪೆಕ್ಟರ್ ಮುದ್ದುರಾಜ್ ಗುಂಡು ಹಾರಿಸಿ, ಬಂಧಿಸಿದ್ದಾರೆ ಎಂದರು.
ಪ್ರಭಾವಳಿ ಸೃಷ್ಟಿಸಲು ಹಲ್ಲೆ: ಎರಡು ವಾರದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಗೌತಮ್, ಮಾಡೆಲ್ ಕಾಲೋನಿಯಲ್ಲಿ ಮತ್ತೆ ತನ್ನ ಪ್ರಭಾವಳಿ ಸೃಷ್ಟಿಸಲು ಕೋಳಿ ಅಂಗಡಿ ಮಾಲೀಕ ಸಲ್ಮಾನ್ ಹಾಗೂ ಕೋಳಿ ಸಾಗಣೆ ಲಾರಿ ಚಾಲಕ ಪ್ರಶಾಂತ್ ಜತೆ ಸೇರಿ ಸಂಚು ರೂಪಿಸಿದ್ದ. ಹಳೇ ದ್ವೇಷದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ತೇಜು ಎಂಬಾತನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಆದರೆ, ತೇಜು ಬದಲಿಗೆ ವಿನೋದ್ ಕುಮಾರ್ ಮತ್ತು ಮಾರುತಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.