ಧರ್ಮಗ್ರಂಥ ಕಂಡು ಸತ್ಯ ಹೇಳಿದ ರೌಡಿ
Team Udayavani, Mar 3, 2019, 6:46 AM IST
ಅದು 2010. ಆತ ದುಬೈನಿಂದ ವಾಪಸ್ ಬಂದು ಕೆಲವೇ ದಿನಗಳಾಗಿತ್ತು. ಮಗಳೆಂದರೆ ಪ್ರಾಣ. ಧರೆಯ ಸಂತೋಷವನ್ನು ಆಕೆಯ ಬೊಗಸೆಗೆ ತಂದಿಡುವಷ್ಟು ಪ್ರೀತಿ. ದುಬೈನಿಂದ ತಂದಿದ್ದ ಉಡುಗೊರೆಗಳನ್ನು ಮಗಳಿಗೆ ನೀಡಿ ಸಂಭ್ರಮಿಸಿದ್ದ. ಕುಟುಂಬದ ಜತೆ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಿದ್ದ. ಅದೊಂದು ದಿನ ಮಧ್ಯಾಹ್ನ ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಹೇಳಿದ್ದ ಮಗಳು, ಸಂಜೆಯಾದರೂ ಮರಳಲಿಲ್ಲ. ರೆಹಮಾನ್ (ಹೆಸರು ಬದಲಾಯಿಸಲಾಗಿದೆ) ದಂಪತಿ ಎದೆಯಲ್ಲಿ ಆತಂಕ ಶುರುವಾಯಿತು. ಮಗಳ ಸ್ನೇಹಿತೆಯರು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದ್ದಾಯಿತು ಎರಡು ದಿನ ಕಳೆದರೂ ಮಗಳ ಸುಳಿವು ಸಿಗಲಿಲ್ಲ.
ಕಿಡ್ನಾಪ್ ಪ್ರಕರಣ ದಾಖಲು: ರೆಹಮಾನ್, ಅಳುತ್ತಲೇ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪ್ರಾಪೆ¤ (15 ವರ್ಷ) ಮಗಳ ನಾಪತ್ತೆ ದೂರು ದಾಖಲಿಸಿದರು. ತನಿಖೆ ಆರಂಭಿಸಿದ ಪೊಲೀಸರಿಗೆ ರೆಹಮಾನ್ ಪುತ್ರಿಯನ್ನು ಯುವಕನೊಬ್ಬ ಪ್ರೀತಿಸುತ್ತಿದ್ದ ವಿಚಾರ ಗೊತ್ತಾಗಿದೆ. ಹೀಗಾಗಿ, ಯುವಕ, ಆತನ ಕುಟುಂಬದ ವಿರುದ್ಧ ಒಳಸಂಚು, ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡರು.
ಹೈ ಕೋರ್ಟ್ ಕೆಂಡಾಮಂಡಲ: ದೂರು ದಾಖಲಿಸಿ ಹೆಚ್ಚು ಕಡಿಮೆ ತಿಂಗಳು ಕಳೆದರೂ ಪೊಲೀಸರಿಗೆ ಬಾಲಕಿ ಹಾಗೂ ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಪೊಲೀಸರು ತನಿಖೆ ಚುರುಕುಗೊಳಿಸಲಿಲ್ಲ ಎಂದು ಆರೋಪಿಸಿ ಮಗಳನ್ನು ಹುಡುಕಿಕೊಡುವಂತೆ ರೆಹಮಾನ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಿಗದಿತ ದಿನದಂದು ಅರ್ಜಿ ವಿಚಾರಣೆಗೆ ಬಂದಿತ್ತು, ಅಪ್ರಾಪೆ¤ಯ ಕಿಡ್ನಾಪ್ ಕೇಸ್ ಇದಾಗಿದ್ದರಿಂದ ಹೈಕೋರ್ಟ್ ಪೊಲೀಸರ ವಿರುದ್ಧ ಅಕ್ಷರಶಃ ಕೆಂಡಮಂಡಲವಾಗಿತ್ತು.
ವಿಶೇಷ ತಂಡದಿಂದ ಹುಡುಕಾಟ: ಹೈಕೋರ್ಟ್ ತಪರಾಕಿಗೆ ಕಂಗಾಲಾದ ಪೊಲೀಸರು ತನಿಖೆ ಮತ್ತಷ್ಟು ಚುರುಕುಗೊಳಿಸಿದರು. ಬಾಲಕಿಯನ್ನು ಕರೆದುಕೊಂಡು ಹೋದವನ ತಾಯಿ, ಸಹೋದರಿಯನ್ನು ವಿಚಾರಣೆಗೆ ಕರೆದರು. ಜಪ್ಪಯ್ಯ ಅಂದರೂ ಅವರು ಬಾಯ್ಬಿಡಲಿಲ್ಲ. ನಮಗೆ ಗೊತ್ತಿಲ್ಲ ಎಂಬುವುದನ್ನು ಬಿಟ್ಟರೆ ಬೇರೆ ಏನೂ ಹೇಳುತ್ತಿರಲಿಲ್ಲ. ಕಡೆಗೆ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದರು. ಬಾಲಕಿ ಹಾಗೂ ಯುವಕನ ಪತ್ತೆಗಾಗಿ ಮೈಸೂರು, ಮುಂಬೈ, ದೆಹಲಿಯಲ್ಲಿ ವಿಶೇಷ ತಂಡ ಹುಡುಕಾಟ ನಡೆಸಿದರೂ ಬಂದ ದಾರಿಗೆ ಸುಂಕವಿಲ್ಲ ಎಂಬ ಪರಿಸ್ಥಿತಿ ಉಂಟಾಗಿತ್ತು.
ಮತ್ತೂಂದು ತಂಡ ಯುವಕನ ಸಹೋದರ, ನಟೋರಿಯಸ್ ರೌಡಿ ನಿಗ್ರೋ ರಹೀಂ ಹಾಗೂ ಆತನ ಪತ್ನಿಯನ್ನು ಬಂಧಿಸಿತು. ಎಷ್ಟೇ ಕಠಿಣ ವಿಚಾರಣೆಗೆ ಒಳಪಡಿಸಿದರೂ ನಿಗ್ರೋ, “ನನಗೆ ಗೊತ್ತಿಲ್ಲ’ ಎಂದಷ್ಟೇ ಹೇಳುತ್ತಿದ್ದ. ಕಡೆಗೆ ಒಂದು ತಿಂಗಳ ಬಾಣಂತಿಯಾದ ಪತ್ನಿ, “ನಿಮಗೆ ಗೊತ್ತಿದ್ದರೆ ಹೇಳಿ’ ಎಂದರು. ನಿಗ್ರೋ ಮನಸ್ಸು ಕರಗಲಿಲ್ಲ. ಕಡೆಗೆ ರಹೀಂ ದಂಪತಿ ಕೂಡ ನ್ಯಾಯಾಂಗ ಬಂಧನಕ್ಕೆ ಒಳಗಾದರು.
ರೌಡಿ ವೀಕ್‌ನೆಸ್ ತಿಳಿದ ಪೊಲೀಸರು: ಒಂದೆಡೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಹೈಕೋರ್ಟ್, ಪ್ರತಿ ವಿಚಾರಣೆಯಲ್ಲಿ ಚಾಟಿ ಬೀಸುತ್ತಿತ್ತು. ಯಾವ ಆಯಾಮದಲ್ಲಿ ತನಿಖೆ ನಡೆಸಿದರೂ ಬಾಲಕಿ ಸುಳಿವು ಸಿಗದಿರುವುದು ಪೊಲೀಸರನ್ನು ಅಡಕತ್ತರಿಗೆ ಸಿಲುಕಿಸಿತ್ತು. ನಿಗ್ರೋ ರಹೀಂನಿಂದ ಸತ್ಯ ಬಾಯ್ಬಿಡಿಸುವುದು ಹೇಗೆ ಎಂಬ ತಲೆನೋವು ಶುರುವಾಗಿತ್ತು. ಹೀಗಾಗಿ ರೌಡಿ ನಿಗ್ರೋ ಆಸಕ್ತಿ, ಹವ್ಯಾಸ, ಆತನ ದೌರ್ಬಲ್ಯಗಳನ್ನು ತಿಳಿದುಕೊಳ್ಳಲು ಆರಂಭಿಸಿದಾಗ ನಿಗ್ರೋಗೆ “ಧರ್ಮಗ್ರಂಥ’ದ ವೀಕ್‌ನೆಸ್ ಇರುವುದು ಗೊತ್ತಾಗಿತ್ತು.
ಪೊಲೀಸ್ ಕಸ್ಟಡಿಗೆ ನಿಗ್ರೋ: ತಡಮಾಡದೆ ಮಾರನೇ ದಿನವೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನ್ಯಾಯಾಂಗ ಬಂಧನದಲ್ಲಿರುವ ನಿಗ್ರೋನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಆರಂಭಿಸಿದರು. ನಿಗ್ರೋ ಬಳಿ ಉತ್ತರವಿರಲಿಲ್ಲ. ಕಡೆಗೆ ಅಧಿಕಾರಿ ಮೊದಲೇ ತರಿಸಿಟ್ಟುಕೊಂಡಿದ್ದ “ಧರ್ಮಗ್ರಂಥ’ವನ್ನು ಮುಂದಿಟ್ಟು ಇದರ ಮೇಲೆ ಆಣೆ ಮಾಡಿ ಹೇಳು ಎಂದರು. ನಿಗ್ರೋ ಎದೆ ಧಸಕ್ಕೆಂದಿತು ಕುಳಿತಲ್ಲಿಯೇ ಕನಲಿಹೋಗಿದ್ದ. ಇಲ್ಲ ಸಾರ್ ನಾನು ಮಾಡೋದಿಲ್ಲ ಯಾವಗಂದ್ರೆ ಆವಾಗ ನಾನು ಧರ್ಮಗ್ರಂಥ ಮುಟ್ಟಲ್ಲ ಎಂದ.
ಸತ್ಯ ಬಾಯ್ಬಿಟ್ಟ ರೌಡಿ: ಕೂಡಲೇ ಆತನ ಬೇಡಿಕೆಯಂತೆ ಸ್ನಾನದ ವ್ಯವಸ್ಥೆ ಮಾಡಿಸಿ ಹೊಸಬಟ್ಟೆ ಕೊಡಿಸಿದರು. ಟೇಬಲ್ ಮೇಲೆ ಕೂತಿದ್ದ ನಿಗ್ರೋ, ಧರ್ಮಗ್ರಂಥದ ಮೇಲೆ ಕೈಯಿಟ್ಟಿದ್ದೇ ಕಣ್ಣಲ್ಲಿ ನೀರು ಹರಿಯಿತ್ತು. “ಸಹೋದರ ಬಾಲಕಿಯನ್ನು ಮೈಸೂರಿಗೆ ಕರೆತಂದಿದ್ದ. ಪೊಲೀಸರು ಹುಡುಕುತ್ತಿದ್ದಾರೆ ಎಂದು ಗೊತ್ತಾಗಿ ಮುಂಬೈಗೆ ಶಿಫ್ಟ್ ಮಾಡಿದೆ. ಅಲ್ಲೂ ಪೊಲೀಸರು ಹಿಂದೆ ಬಿದ್ದಾಗ ಇಬ್ಬರೂ ಮತ್ತೆ ಮೈಸೂರಿಗೆ ಬಂದು ಮದುವೆಯಾದರು. ಬಳಿಕ ಅವರ ಕೈಗೆ 5 ಸಾವಿರ ರೂ. ಕೊಟ್ಟೆ. ಆಮೇಲೆ ಅವರು ಎಲ್ಲಿಗೆ ಹೋದರು ಎಂದು ಗೊತ್ತಿಲ್ಲ. ಆಕೆಯ ಬಳಿ ಒಂದಷ್ಟು ಚಿನ್ನಾಭರಣವಿತ್ತು. ಆಕೆಯ ತಾಯಿಯೇ ಕಳುಹಿಸಿರಬಹುದು’ ಇದನ್ನು ಬಿಟ್ಟು ನನಗೆ ಬೇರೇನೂಗೊತ್ತಿಲ್ಲ ಎಂದ.
ತಾಯಿ ಪಾತ್ರವಿತ್ತು: ಇಷ್ಟು ಮಾಹಿತಿ ಪಡೆದ ಪೊಲೀಸರಿಗೆ ಬಾಲಕಿಯ ತಾಯಿಯ ಮೇಲೆ ಅನುಮಾನ ಶುರುವಾಯಿತು. ಆದರೆ, ಅವರನ್ನು ದೂಷಿಸುವಂತಿಲ್ಲ. ಆಗಿದ್ದಾಗಲಿ ಎಂದು ಆಕೆಯನ್ನು ಠಾಣೆಗೆ ಕರೆಯಿಸಿ ಮಗಳು ಎಲ್ಲಿದ್ದಾಳೆ ಎಂಬುದು ನಿಮಗೆ ಗೊತ್ತು. ನೀವೇ ಕಳಿಸಿದ್ದೀರಂತಲ್ಲಾ? ಎಂದರು. ಆಕೆ ಆರೋಪ ಅಲ್ಲಗಳೆದಳು. ತನಿಖೆ ಸರಿಯಾಗಿ ಮಾಡದೆ ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದೀರ ಎಂದು ವಾದಿಸಿದರು. ಅಲ್ಲಿಗೆ ಈ ಕೇಸ್‌ನಲ್ಲಿ ಆಕೆಯ ಪಾತ್ರವಿರಬಹುದು ಎಂದು ಖಚಿತವಾಗಿತ್ತು.
ಬಾಲಕಿ ತಾಯಿ ಜೈಲಿಗೆ!: ಮುಂದಿನ ವಿಚಾರಣೆ ವೇಳೆ, “ನಿಗ್ರೋ ಹೇಳಿದಂತೆ ಬಾಲಕಿಯ ತಾಯಿಯ ಮೇಲೆ ಅನುಮಾನವಿದೆ. ಆದರೆ ಅವರು ತನಿಖೆಗೆ ಸಹಕರಿಸುತ್ತಿಲ್ಲ’ ಎಂದು ಪೊಲೀಸರು ಹೈಕೋರ್ಟ್‌ಗೆ ತಿಳಿಸಿದರು. ಪ್ರತಿವಾದಿ ವಕೀಲರು, ಇದೊಂದು ಕಟ್ಟುಕತೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು. ಸರ್ಕಾರದ ಪರ ವಕೀಲರು “ರೌಡಿ ಸುಳ್ಳು ಹೇಳುತ್ತಿದ್ದಾನೋ ಅಥವಾ ಬಾಲಕಿಯ ತಾಯಿ ಸುಳ್ಳು ಹೇಳುತ್ತಿದ್ದಾರೋ’ ಖಚಿತವಾಗಲು ಮಂಪರು ಪರೀಕ್ಷೆಗೆ ಅನುಮತಿ ನೀಡುವಂತೆ ಮಾಡಿದ ಮನವಿಗೆ ಕೋರ್ಟ್ ಸಮ್ಮತಿಸಿತು.
ನಿಗದಿತ ದಿನದಂದು ರೌಡಿ ಹಾಗೂ ಬಾಲಕಿಯ ತಾಯಿಯ ಮಂಪರು ಪರೀಕ್ಷೆ ಮಾಡಲಾಯಿತು. ರೌಡಿ ನಿಗ್ರೋ ಹೇಳುತ್ತಿರುವುದು ಸತ್ಯ. ತಾಯಿ ಹೇಳುತ್ತಿರುವುದು ಸುಳ್ಳು ಎಂಬ ವರದಿ ಬಂದಿತ್ತು. ಇದೇ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು. ಕೋರ್ಟ್ ಬಾಲಕಿಯ ಪೋಷಕರ ವಿರುದ್ಧ ಕಿಡಿಕಾರಿತು. ಅನಗತ್ಯವಾಗಿ ಪೊಲೀಸರಿಗೆ ತೊಂದರೆ ನೀಡ್ತೀರಾ ಎಂದು ಛೀಮಾರಿ ಹಾಕಿತು. ಕಾನೂನಿನ ಅನ್ವಯ ಕ್ರಮ ಜರುಗಿಸಲು ಸೂಚಿಸಿತು.
ಮಗಳು ಹಾಗೂ ಯುವಕ ಪ್ರೀತಿಸುತ್ತಿದ್ದ ವಿಷಯ ತಿಳಿದಿದ್ದ ತಾಯಿ, ಪತಿಗೆ ಗೊತ್ತಾಗದಂತೆ ಚಿನ್ನಾಭರಣ ಹಾಗೂ ಹಣ ಕೊಟ್ಟು ಕಳುಹಿಸಿದ್ದಾಳೆ ಎಂಬುದು ತನಿಖೆಯಲ್ಲಿ ಗೊತ್ತಾಯಿತು. ಹೀಗಾಗಿ ಆಕೆಯನ್ನು ಒಳಸಂಚು (120ಬಿ) ಸೆಕ್ಷನ್ ಅಡಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬಳಿಕ ಕುಣಿಗಲ್ ತಾಲೂಕಿನ ಬಿಳಿದೇವಾಲಯದ ಗ್ರಾಮದ ಸಮೀಪ ಸಂಬಂಧಿಕರೊಬ್ಬರ ತೋಟದ ಮನೆಯಲ್ಲಿ ಉಳಿದುಕೊಂಡಿದ್ದ ಅಪ್ರಾಪ್ತೆ ಹಾಗೂ ಯುವಕನನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದೆವು ಎಂದು ತನಿಖಾ ತಂಡದಲ್ಲಿದ್ದ ಅಧಿಕಾರಿ ತಿಳಿಸಿದರು.
* ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.