ಕೋಟಿ ರೂ. ದೋಚಿದ್ದ ಐವರ ಸೆರೆ
Team Udayavani, Feb 7, 2018, 12:12 PM IST
ಬೆಂಗಳೂರು: ಶ್ರೀಮಂತಿಕೆ, ಐಷಾರಾಮಿ ಜೀವನಕ್ಕೆಂದೇ ಮಾಡಿಕೊಂಡಿದ್ದ ಲಕ್ಷಾಂತರ ರೂ. ಸಾಲ ತೀರಿಸಲು 1.12 ಕೋಟಿ ರೂ. ಕಳವು ಮಾಡಿದ್ದ ಸಿಎಂಸ್ ಕಂಪನಿಯ ಇಬ್ಬರು ನೌಕರರು ಸೇರಿ ಐವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಸಿಎಂಎಸ್ ಕಂಪನಿಯ ವಾಹನ ಚಾಲಕ ನಾರಾಯಣಸ್ವಾಮಿ (46), ತುಮಕೂರು ಮೂಲದ, ಕಂಪನಿಯ ಕ್ಯಾಶ್ ಕಸ್ಟೋಡಿಯನ್ ನರಸಿಂಹರಾಜು (27), ಆಂಧ್ರಪ್ರದೇಶ ಮೂಲದ ರಿಜ್ವಾನ್ ಪಾಷಾ (31), ಕಾಮಾಕ್ಷಿಪಾಳ್ಯ ಜಗದೀಶ್ (33) ಮತ್ತು ಬಳ್ಳಾರಿಯ ರವಿ (31) ಬಂಧಿತರು.
ಇವರಿಂದ 1.3 ಕೋಟಿ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಟಾಟಾ ಸುಮೋ, ಒಂದು ಕಾರು, ಒಂದು ಬೈಕ್ ಹಾಗೂ ಒಂದು ಡಮ್ಮಿ ಏರ್‌ಗನ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜ.29ರಂದು ಸಂಜೆ 5 ಗಂಟೆಗೆ ರಾಜರಾಜೇಶ್ವರಿನಗರ, ವಿಜಯನಗರ, ನಾಗರಬಾವಿಯ ವಿವಿಧ ಮೋರ್, ಕಾಫಿಡೇ ಹಾಗೂ ಇತರೆ ಮಾಲ್‌ಗಳಿಂದ ಸಂಗ್ರಹಿಸಿದ್ದ 1.12 ಕೋಟಿ ರೂ.ನೊಂದಿಗೆ ಪರಾರಿಯಾಗಿದ್ದರು.
ಆರೋಪಿಗಳೆಲ್ಲ ಸ್ನೇಹಿತರಾಗಿದ್ದು, ನಾರಾಯಣಸ್ವಾಮಿ, ನರಸಿಂಹರಾಜು ಮತ್ತು ರಿಜ್ವಾನ್ ಬೆಟ್ಟಿಂಗ್ ದಂಧೆ, ಇತರೆ ಚಟಗಳ ದಾಸರಾಗಿದ್ದರು. ಇದಕ್ಕಾಗಿ ನಾರಾಯಣಸ್ವಾಮಿ 20 ಲಕ್ಷ ರೂ., ನರಸಿಂಹ 15 ಲಕ್ಷ ರೂ. ಹಾಗೂ ರಿಜ್ವಾನ್ 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದ.
ಈ ಸಾಲ ತೀರಿಸಲಾಗದೆ, ನಿತ್ಯ ಫೈನಾನ್ಷಿಯರ್‌ಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಇದೇ ವೇಳೆ ಐದು ತಿಂಗಳ ಹಿಂದಷ್ಟೇ ಸಿಎಂಸ್ ಸಂಸ್ಥೆಗೆ ಸೇರಿದ್ದ ನಾರಾಯಣಸ್ವಾಮಿ ಮತ್ತು ನರಸಿಂಹರಾಜು ಗ್ರಾಹಕರಿಂದ ಸಂಗ್ರಹವಾಗುತ್ತಿದ್ದ ಕೋಟ್ಯಂತರ ರೂ. ಹಣ ಕಳವು ಮಾಡಲು ಸಂಚು ರೂಪಿಸಿದ್ದರು. ಇದನ್ನು ಸ್ನೇಹಿತರಾದ ರಿಜ್ವಾನ್, ಜಗದೀಶ್ ಹಾಗೂ ರವಿಗೂ ತಿಳಿಸಿದ್ದರು.
ಸಾಲು ರಜೆಗಳ ವರದಾನ: ಕೋಟ್ಯಂತರ ರೂ. ಲೂಟಿಗೆ ಸಂಚು ರೂಪಿಸಿದ ಆರೋಪಿಗಳು, ನಾಲ್ಕು ದಿನಗಳ ಸಾಲು ರಜೆ ಮೇಲೆ ಕಣ್ಣಿರಿಸಿದ್ದರು. ಜ.25 ಕರ್ನಾಟಕ ಬಂದ್, ಜ.26 ಗಣರಾಜ್ಯೋತ್ಸವ, ಜ.27 ಶನಿವಾರ, ಜ.28 ಭಾನುವಾರ. ಹೀಗಾಗಿ ಜ.29ರ ಸೋಮವಾರ ಗ್ರಾಹಕರಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತದೆ. ಅದನ್ನು ಕಳವು ಮಾಡಿದರೆ ಎಲ್ಲ ಸಾಲ ತೀರಿಸಬಹುದು ಎಂದೆಣಿಸಿದ್ದರು. ಅದರಂತೆ ನಾರಾಯಣಸ್ವಾಮಿ ಮತ್ತು ನರಸಿಂಹರಾಜು ಜ.29ರಂದು ಜ್ಞಾನಭಾರತಿ ವೃತ್ತದಲ್ಲಿ ಭದ್ರತಾ ಸಿಬ್ಬಂದಿ ನಟರಾಜ್‌ನನ್ನು ಬಾಳೆಹಣ್ಣು ತರಲು ಕಳುಹಿಸಿ ವಾಹನ ಸಮೇತ ಪರಾರಿಯಾಗಿದ್ದರು.
ಮೋಜು-ಮಸ್ತಿ ಮತ್ತು ವೇಶ್ಯಾವಾಟಿಕೆ: ರಿಜ್ವಾನ್ ಪಾಷಾ, ಜಗದೀಶ್, ರವಿ ಕಾರಿನಲ್ಲಿ ನಾರಾಯಣಸ್ವಾಮಿ ಮತ್ತು ನರಸಿಂಹರಾಜುರನ್ನು ಹಿಂಬಾಲಿಸುತ್ತಿದ್ದರು. ಮಾಗಡಿ ಮುಖ್ಯರಸ್ತೆಯ ಮಾಚೋಹಳ್ಳಿ ಹಾಗೂ ಚಿಕ್ಕಗೊಲ್ಲರಹಟ್ಟಿ ನಡುವಿನ ರಸ್ತೆಯಲ್ಲಿ ವಾಹನ ಬಿಟ್ಟು ಹಣದ ಜತೆ ಐವರೂ ಪರಾರಿತಯಾಗಿದ್ದರು. ಬಳಿಕ ಗೋವಾ, ಮಂಗಳೂರು, ಬಳ್ಳಾರಿ ಕಡೆ ಓಡಾಡಿ ಮೋಜು-ಮಸ್ತಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದ ಆರೋಪಿಗಳ ಪೈಕಿ ಕೆಲವರು ಸಾಲ ತೀರಿಸಿದರೆ, ಉಳಿದವರು ವೇಶ್ಯಾವಾಟಿಕೆಗೆ ಹಣ ಬಳಸಿದ್ದಾರೆ.
ಸುಳಿವು ಕೊಟ್ಟ ಟವರ್: ಆರೋಪಿಗಳ ಪೈಕಿ ನಾರಾಯಣಸ್ವಾಮಿ ಮತ್ತು ನರಸಿಂಹರಾಜು ಸದಾ ಮೊಬೈಲ್‌ಲ್ಲಿ ನಿರತರಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಮೊಬೈಲ್ ಟವರ್ ಬೆನ್ನತ್ತಿದ್ದ ಪೊಲೀಸರು, ಆರೋಪಿಗಳು ಮೋಜು-ಮಸ್ತಿ ಮುಗಿಸಿಕೊಂಡು ನಗರಕ್ಕೆ ಬರುತ್ತಿದ್ದಂತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.