ಠಾಣೆ ಬಳಿಯೇ ತುಕ್ಕು ಹಿಡಿದ ವಾಹನಗಳು
Team Udayavani, Nov 7, 2022, 11:43 AM IST
ಒಂದೆಡೆ ವಾಹನ ಕಳವು ಹೆಚ್ಚುತ್ತಿದ್ದರೆ, ಮತ್ತೂಂದೆಡೆ ಪತ್ತೆ ಹಚ್ಚಿದ ವಾಹನಗಳ ವಿಲೇವಾರಿ ಕ್ಷಿಣಿಸುತ್ತಿದೆ. ಕಾರಣ ವಾಹನ ಮಾಲೀಕರ ನಿರುತ್ಸಾಹ, ಕೋರ್ಟ್‌ನಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬ. ಹೀಗಾಗಿ ಸಾವಿರಾರು ವಾಹನಗಳು ಠಾಣೆ ಆವರಣ ಹಾಗೂ ಸರ್ಕಾರದ ಖಾಲಿ ನಿವೇಶನಗಳಲ್ಲಿ ತುಕ್ಕು ಹಿಡಿಯುತ್ತಿವೆ. ಈ ಪೈಕಿ ಕೆಲ ವಾಹನಗಳು ಮರು ಬಳಕೆಗೆ ಯೋಗ್ಯವಾದರೆ, ಬಹುತೇಕ ವಾಹನಗಳು ಗುಜರಿ ಸೇರುತ್ತಿವೆ. ಹೀಗಾಗಿ ನಗರದಲ್ಲಿ ವಾಹನಗಳ ಕಳವು ಹೇಗೆ? ಅವುಗಳ ವಿಲೇವಾರಿ ವಿಳಂಬ ಏಕೆ? ಎಂಬುದೇ ಈ ವಾರದ ಸುದ್ದಿಸುತ್ತಾಟ.
ಬೆಂಗಳೂರಿನಲ್ಲಿ ದಿನೇ ದಿನೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತೂಂದೆಡೆ ಅದೇ ವೇಗದಲ್ಲಿ ವಾಹನ ಕಳವು ಪ್ರಮಾಣವೂ ಅಧಿಕಗೊಂಡಿದೆ. ಹಾಗೆಯೇ ಕಳುವಾದ ವಾಹನಗಳನ್ನು ಪೊಲೀಸರು ಪತ್ತೆ ಹಚ್ಚಿ ಜಪ್ತಿ ಮಾಡಿ, ನಿರ್ದಿಷ್ಟ ಪ್ರದೇಶದಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಆದರೆ, ಕೆಲ ಮಾಲೀಕರು ವಾಹನಗಳನ್ನು ವಾಪಸ್ ಪಡೆದುಕೊಂಡರೆ, ಇನ್ನು ಕೆಲವರು ತಮ್ಮ ವಾಹನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳ ಕಳವು ಮಾಡುವ ಕಳ್ಳರು(ರಾಜ್ಯ ಮತ್ತು ಅಂತಾಜ್ಯ) ಗಡಿಭಾಗದಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಮೋಜಿಗಾಗಿ ಕಳವು ಮಾಡುವವರು ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ವಾಹನವನ್ನು ಎಲ್ಲೆಂದರಲ್ಲಿ ಬಿಟ್ಟು ಪರಾರಿಯಾಗುತ್ತಿದ್ದಾರೆ. ಅಂತಹ ಗಾಡಿಗಳನ್ನು ಪೊಲೀಸರು ಜಪ್ತಿ ಮಾಡಿದರೂ ವಾಹನ ಮಾಲೀಕರು ವಾಪಸ್ ಪಡೆಯಲು ಹಿಂಜರಿಯುತ್ತಾರೆ. ಏಕೆಂದರೆ, ವಾಹನ ಕಳುವಾದ ಕೆಲ ದಿನಗಳಲ್ಲೇ ಎಫ್ಐಆರ್ ಪ್ರತಿ ಆಧರಿಸಿ ವಿಮೆ ಪಡೆದು ಹೊಸ ವಾಹನ ಖರೀದಿಸುತ್ತಾರೆ. ಮತ್ತೂಂದೆಡೆ ಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ಕೂಡ ವಿಳಂಬವಾಗುತ್ತಿದ್ದು, ಕಳವು ವಾಹನಗಳು ಠಾಣೆಗಳ ಆವರಣದಲ್ಲಿ ವರ್ಷಗಟ್ಟಲೇ ನಿಂತಲ್ಲೇ ನಿಂತು ತುಕ್ಕು ಹಿಡಿದು ಗುಜರಿ ಪಾಲಾಗುತ್ತಿವೆ.
ಇನ್ನು ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ಪ್ರತಿ ವರ್ಷ 20-30 ಸಾವಿರ ವಾಹನಗಳು ಜಪ್ತಿಯಾಗುತ್ತಿದ್ದು, ಅವುಗಳ ವಿಲೇವಾರಿ(ಹರಾಜು)ಯೂ ಸೂಕ್ತ ಸಮಯದಲ್ಲಿ ನಡೆಯದೇ, ಅಲ್ಪ ಮೊತ್ತಕ್ಕೆ ಗುಜರಿ ಸೇರುತ್ತಿವೆ. ಹೀಗೆ ಕಳೆದ ನಾಲ್ಕು ವರ್ಷಗಳಲ್ಲಿ ಸಂಚಾರ ಪೊಲೀಸ್ ಠಾಣೆಗಳ ಆವರಣದಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಸಂಗ್ರಹವಾಗಿವೆ.
ವಿಚಾರಣೆ ವಿಳಂಬ: ಸಾಮಾನ್ಯವಾಗಿ ಕೊಲೆ, ಸುಲಿಗೆ, ದರೋಡೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಬಳಸುವ ವಾಹನಗಳು ಸಾಕ್ಷ್ಯಗಳಾಗುತ್ತವೆ. ಕೋರ್ಟ್ ಅನುಮತಿ ಹೊರತಾಗಿ ಯಾವುದೇ ಕಾರಣಕ್ಕೂ ಅವುಗಳ ಬಿಡುಗಡೆ ಸಾಧ್ಯವಿಲ್ಲ. ಈ ಮಧ್ಯೆ ವಾಹನ ಕಡೆಯವರು ವಾಹನ ಬಿಡುಗಡೆ ಕೋರಿ ಕೋರ್ಟ್ ಮೊರೆ ಹೋಗುತ್ತಾರೆ. ಗಂಭೀರ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಾವಾಗಿದ್ದರೆ ವಾಹನ ಬಿಡುಗಡೆ ಆಗಲ್ಲ. ಬಳಿಕ ಎರಡ್ಮೂರು ವರ್ಷಗಳ ಕಾಲ ವಿಚಾರಣೆ ನಡೆಯುತ್ತದೆ. ಅದುವರೆಗೂ ವಾಹನ ಠಾಣೆ ಆವರಣದಲ್ಲೇ ಇರುತ್ತದೆ. ಕೊಲೆ ಸೇರಿದಂತೆ ಹೈಪ್ರೊಫೈಲ್ ಪ್ರಕರಣಗಳಲ್ಲಿ ಬಳಕೆಯಾದ ವಾಹನಗಳಲ್ಲಿ ವಿಚಾರಣೆ ಪೂರ್ಣಗೊಳ್ಳುವವರೆಗೂ ವಾಹನಗಳನ್ನು ಕೋರ್ಟ್ ಬಿಡುಗಡೆ ಮಾಡುವುದಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಕ್ಕ ವಾಹನ, ನೂರಾರು ಕೋಟಿ ರೂ. ಮೌಲ್ಯದ ವಂಚನೆ ಪ್ರಕರಣದಲ್ಲಿ ಜಪ್ತಿ ಹೀಗೆ ಹಲವಾರು ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳು ಠಾಣೆ, ಸಿಐಡಿ, ಸಿಸಿಬಿ ಆವರಣದಲ್ಲಿ ಮಳೆ, ಬಿಸಿಲಿಗೆ ಒಣಗುತ್ತಿವೆ.
ವಿಮೆ ಕ್ಲೇಮ್: ವಾಹನ ಕಳೆದುಕೊಂಡ ವಾಹನ ಮಾಲೀಕರು ಪೊಲೀಸರಿಗೆ ದೂರು ನೀಡಿ ಕೆಲ ದಿನಗಳಲ್ಲೇ ವಿಮಾ ಕಂಪನಿಗೆ ಎಫ್ಐಆರ್ ಪ್ರತಿ ಲಗತ್ತಿಸಿ, ವಿಮೆ ಪಡೆದುಕೊಳ್ಳುತ್ತಾರೆ. 3-4 ತಿಂಗಳ ಬಳಿಕ ವಾಹನ ಸಿಕ್ಕಾಗ, ವಿಮೆ ಪಡೆದುಕೊಂಡಿದ್ದೇವೆ ಎನ್ನುತ್ತಾರೆ. ಆಗ ವಿಮಾ ಕಂಪನಿಗೆ ಮಾಹಿತಿ ನೀಡುತ್ತೇವೆ. ಆಗಲೂ ಕೆಲ ಕಂಪನಿಗಳು ಅಸಹಕಾರ ತೋರುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ವಾಹನ ವಿಲೇವಾರಿಯೂ ವಿಳಂಬ: ವಾಹನ ಪತ್ತೆಗೆ ಕನಿಷ್ಠ 15-20 ದಿನಗಳ ಬೇಕಾಗುತ್ತದೆ. ಐದಾರು ತಿಂಗಳ ಬಳಿಕ ವಾಹನ ಸಿಕ್ಕಾಗ ವಾಹನಗಳ(ಅಸಲಿ ನೊಂದಾಯಿತ ನಂಬರ್ ಇಲ್ಲದಾಗ) ಚಾರ್ಸಿ, ಎಂಜಿನ್ ನಂಬರ್ ನೊಂದಾಯಿಸಿ ಆರ್‌ಟಿಒದಿಂದ ಅಸಲಿ ನಂಬರ್, ಮಾಲೀಕರ ಪತ್ತೆ ಹಚ್ಚುತ್ತೇವೆ. ಮಾಲೀಕರು ವಾಹನ ವಾಪಸ್ ಪಡೆಯಲು ಇಚ್ಚಿಸದಿದ್ದಾಗ, ಕೋರ್ಟ್‌ಗೆ ತಿಳಿಸಿದ ಹರಾಜು ಪ್ರಕ್ರಿಯೆ ನಡೆಸುತ್ತೇವೆ. ಈ ಎಲ್ಲ ಪ್ರಕ್ರಿಯೆಗಳಿಗೆ ಕನಿಷ್ಠ 6-8 ತಿಂಗಳು ಬೇಕಾಗುತ್ತದೆ. ಅಷ್ಟರಲ್ಲಿ ವಾಹನಗಳು ಸಂಚರಿಸುವ ಸ್ಥಿತಿ ಕಳೆದುಕೊಳ್ಳುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಗರದಲ್ಲಿ ಹೆಚ್ಚುತ್ತಿರುವ ವಾಹನ ಕಳವು: ಕಳೆದ 8 ತಿಂಗಳಲ್ಲಿ 7,632 ದ್ವಿಚಕ್ರವಾಹನ ಕಳ್ಳತನವಾಗಿದೆ. ಒಂದೆಡೆ ಕದ್ದ ದ್ವಿಚಕ್ರವಾಹನಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದರೂ, ದುಪ್ಪಟ್ಟು ಪ್ರಮಾಣದಲ್ಲಿ ಮತ್ತೆ ಕಳುವಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. 2020ರಲ್ಲಿ ರಾಜ್ಯಾದ್ಯಂತ 7,991 ದ್ವಿಚಕ್ರವಾಹನ ಕಳವು ಪ್ರಕರಣ ದಾಖಲಾಗಿತ್ತು. ಆದರೆ, 2022ರಲ್ಲಿ ಆಗಸ್ಟ್‌ವರೆಗೆ 7,632 ದ್ವಿಚಕ್ರವಾಹನ ಕಳ್ಳತನವಾಗಿದೆ. ವರ್ಷದಿಂದ ವರ್ಷಕ್ಕೆ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಭಾರಿ ಏರಿಕೆ ಕಂಡು ಬರುತ್ತಿ ರುವುದನ್ನು ರಾಜ್ಯ ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ದ್ವಿಚಕ್ರವಾಹನ ಕಳವು ತಡೆಗಟ್ಟಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದು, ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಹಳೆ ದ್ವಿಚಕ್ರವಾಹನ ಕಳ್ಳರ ಪಟ್ಟಿ ಸಿದ್ಧಪಡಿಸಲಾಗಿದೆ. ಜಪ್ತಿ ಮಾಡಲು ಬಾಕಿ ಉಳಿದಿರುವ 36 ಸಾವಿರಕ್ಕೂ ಅಧಿಕ ದ್ವಿಚಕ್ರವಾಹನಗಳಿಗಾಗಿ ಶೋಧ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳ್ಳತನವಾದ ಬೈಕ್ ಪತ್ತೆ ಹೇಗೆ?: ಮನೆ ಮುಂದೆ ನಿಲುಗಡೆ ಮಾಡಿರುವ ದ್ವಿಚಕ್ರವಾಹನಗಳನ್ನೇ ಟಾರ್ಗೆಟ್ ಮಾಡುವ ಕಳ್ಳರು, ಹ್ಯಾಂಡ್‌ಲಾಕ್ ಮುರಿದು ಕ್ಷಣ ಮಾತ್ರದಲ್ಲಿ ಬೈಕ್ ಲಪಟಾಯಿಸುತ್ತಾರೆ. ನಂತರ ಬೈಕ್‌ನ ನಂಬರ್ ಪ್ಲೇಟ್ ಬದಲಾಯಿಸಿ ಸಿಕ್ಕಿದ ಬೆಲೆಗೆ ಮಾರಾಟ ಮಾಡುತ್ತಾರೆ. ಇತ್ತ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ದ್ವಿಚಕ್ರ ವಾಹನಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳುವ ವೇಳೆ ಕೃತ್ಯ ನಡೆದ ಆಸು-ಪಾಸಿನಲ್ಲಿ ಅಳವಡಿಸಿರುವ ಸಿಸಿಕ್ಯಾಮರಾ, ಟವರ್ ಲೊಕೇಶನ್ ಸೇರಿ ಇನ್ನೀತರ ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಾರೆ. ಆ ವೇಳೆ ಕಳ್ಳರ ಸುಳಿವು ಸಿಕ್ಕಿದರೆ ಕೂಡಲೇ ಅವರನ್ನು ಬಂಧಿಸಿ ಕದ್ದ ಬೈಕ್‌ನ ಮಾಹಿತಿ ಕಲೆ ಹಾಕುತ್ತಾರೆ. ದ್ವಿಚಕ್ರವಾಹನ ಕಳ್ಳರು ನಂಬರ್ ಪ್ಲೇಟ್ ಬದಲಾ ಯಿಸಿದರೂ, ಕಳ್ಳತನವಾದ ದ್ವಿಚಕ್ರವಾಹನದ ಚಾಸಿಸ್ ನಂಬರ್ ಹಾಗೂ ಎಂಜಿನ್ ನಂಬರ್ ಅನ್ನು ವಾಹನ ಮಾಲೀಕರಿಂದ ಪೊಲೀಸರು ಪಡೆಯುತ್ತಾರೆ. ಈ ಆಧಾರದ ಮೇಲೆ ಸಾಕ್ಷ್ಯ ಸಮೇತ ಕಳ್ಳತನವಾದ ಬೈಕ್ ಅನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ.
ಮಾಲೀಕರ ಅಸಹಕಾರ: ರಸ್ತೆ ಅಪಘಾತದಲ್ಲಿ ಜಪ್ತಿಯಾದ ವಾಹನಗಳನ್ನು ಕೆಲ ಮಾಲೀ ಕರು ಬಿಡಿಸಿಕೊಳ್ಳುವುದಿಲ್ಲ. ಈ ಬಗ್ಗೆ 2-3 ಬಾರಿ ನೋಟಿಸ್ ಕೊಟ್ಟರೂ ಮಾಲೀಕರು ಪ್ರತಿಕ್ರಿಯಿಸುವುದಿಲ್ಲ. ಮತ್ತೂಂದೆಡೆ ಪೊಲೀಸರನ್ನು ಕಂಡು ಸ್ಥಳದಲ್ಲಿ ಬಿಟ್ಟು ಹೋಗುವ ವಾಹನಗಳು ಅಧಿಕ ಸಂಖ್ಯೆಯಲ್ಲಿವೆ. ನಂಬರ್ ಪ್ಲೇಟ್ ಬದಲಾಯಿಸಿದ ವಾಹನಗಳ ಮಾಲೀಕರ ಪತ್ತೆ ದೊಡ್ಡ ಸವಾಲು. ವಾಹನ ಚಾರ್ಸಿ ನಂಬರ್, ಎಂಜಿನ್ ನಂಬರ್ ನೊಂದಾಯಿಸಿ ಆರ್‌ಟಿಓಗೆ ಮಾಹಿತಿ ನೀಡಿ ಮಾಲೀಕರಿಗೆ(ಹೊರ ರಾಜ್ಯ ಸೇರಿ) ನೋಟಿಸ್ ನೀಡುತ್ತೇವೆ. ಕೆಲವರು ಬಂದರೆ, ಬಹುತೇಕ ಮಂದಿ ಆಸಕ್ತಿ ತೋರುವುದಿಲ್ಲ. ಕೆಲವೊಮ್ಮೆ ವಿಳಾಸ ತಪ್ಪಾಗಿರುತ್ತದೆ. ಮಾಲೀಕರು ವಾಹನ ಮಾರಾಟ ಮಾಡಿದ್ದೇವೆ ಎನ್ನುತ್ತಾರೆ. ಅಂತಹ ವಾಹನಗಳು ಹೆಚ್ಚಾಗಿವೆ ಎನ್ನುತ್ತಾರೆ ಪೊಲೀಸರು.
ಐಶಾರಾಮಿ ವಾಹನಗಳಿಗೆ ಹೆಚ್ಚಿನ ಬೇಡಿಕೆ: ರಾಜ್ಯಾದ್ಯಂತ ದ್ವಿಚಕ್ರವಾಹನ ಕಳ್ಳತನ ಪ್ರಕರಣಗಳಲ್ಲಿ ಶೇ.70 ರಾಜ್ಯ ರಾಜಧಾನಿ ಪಾಲಾದರೆ, ಇನ್ನುಳಿದ ಶೇ.25 ಇತರ ಪ್ರಮುಖ ನಗರಗಳಲ್ಲಿ ನಡೆಯುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಶೇ.5 ದ್ವಿಚಕ್ರವಾ ಹನ ಕಳವು ಕೇಸ್ ದಾಖಲಾಗುತ್ತಿದೆ. ಕದ್ದ ಆಕ್ಟಿವಾ, ಜ್ಯುಪಿಟರ್‌ನಂತಹ ಗೇರ್‌ಲೆಸ್ ದ್ವಿಚಕ್ರವಾಹನಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಇವುಗಳನ್ನು ಖರೀದಿಸಲೆಂದೇ ಕೆಲ ಗ್ಯಾರೆಜ್ ಮಾಲೀಕರು ಹಾಗೂ ದ್ವಿಚಕ್ರವಾಹನ ಏಜೆಂಟರು ಕಳ್ಳರ ಜತೆಗೆ ನಿರಂತರ ಸಂಪರ್ಕದಲ್ಲಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಐಶಾರಾಮಿ ರಾಯಲ್ ಎನ್‌ಫೀಲ್ಡ್, ಕೆಟಿಎಂ ಡ್ನೂಕ್, ಬಿಎಂಡಬ್ಲ್ಯೂ ಸೇರಿ ಇನ್ನಿತರ ಐಶಾರಾಮಿ ಬೈಕ್‌ಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವ ಜಾಲವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್ ಕಳ್ಳರ ಮೇಲೆ ನಿಗಾ ಇಡಲಾಗಿದ್ದು, ಈಗಾಗಲೇ ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಮೌಲ್ಯಯುತ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಚಾರ್ಸಿ ನಂಬರ್ ಮತ್ತು ತಾಂತ್ರಿಕ ಕಾರ್ಯಾಚರಣೆಯಿಂದ ಕಳವು ಬೈಕ್‌ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. -ವಿನಾಯಕ್ ಪಾಟೀಲ್, ಉತ್ತರ ವಿಭಾಗ ಡಿಸಿಪಿ
-ಮೋಹನ್ ಭದ್ರಾವತಿ/ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.