![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 28, 2020, 8:45 PM IST
ಬೆಂಗಳೂರು: ಕೋವಿಡ್ 19 ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರವು ಕೈಗೊಂಡಿರುವ ಪ್ರಯತ್ನದಲ್ಲಿ ಬೆಂಗಳೂರು ಮೂಲದ ಸದಾಸ್ಮಿತ ಪ್ರತಿಷ್ಠಾನವು ಸಕ್ರಿಯವಾಗಿ ಭಾಗಿಯಾಗಿದೆ.
ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ, ಶುಶ್ರೂಷಕರಿಗೆ, ಪೊಲೀಸರಿಗೆ, ಸ್ವಚ್ಛತೆ ಹಾಗೂ ಆಶಾ ಕಾರ್ಯಕರ್ತರಿಗೆ, ಹಾಲು ಹಂಚುವ ಹುಡುಗರಿಗೆ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್‌ಗಳಿಗೆ, ಪತ್ರಕರ್ತರಿಗೆ, ಹೀಗೆ ಕೋವಿಡ್ 19 ವೈರಸ್ ವಿರುದ್ಧ ಮೊದಲ ಸಾಲಿನಲ್ಲಿ ನಿಂತು ಹೋರಾಡುತ್ತಿರುವ ಎಲ್ಲ ಕೋವಿಡ್ ಯೋಧರಿಗೆ ಪ್ರತಿಷ್ಠಾನದ ವತಿಯಿಂದ ಹೆಚ್ಚೆಚ್ಚು ಸೋಂಕು ನಿರೋಧಕ ಉಡುಗೆಗೆಗಳನ್ನು ವಿತರಿಸಲಾಗುತ್ತಿದೆ. ಹಾಗೆಯೇ ಸಂತ್ರಸ್ತರಿಗೆ ಅನ್ನ, ಆಹಾರ ದಿನಸಿಗಳನ್ನು ಹಂಚುತ್ತಿರುವ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಿಗೂ ಪ್ರತಿಷ್ಠಾನವು ಮಾಸ್ಕ್ ಹಾಗೂ ಸೆನಿಟೈಸರ್ ಒದಗಿಸುತ್ತಿದೆ.
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಪ್ರತಿನಿಧಿಸುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಬಹುತೇಕ ಎಲ್ಲ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಹಾಗೂ ಬಹುತೇಕ ಪೊಲೀಸ್ ಸಿಬ್ಬಂದಿಗೆ N95 ಮಾದರಿಯ ಮಾಸ್ಕ್‌ಗಳನ್ನು ವಿತರಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿರ್ವಹಿಸುತ್ತಿರುವ ಪ್ರಮುಖ ಆಸ್ಪತ್ರಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ರಾಜಾಜಿನಗರ ಇಎಸೈ ಆಸ್ಪತ್ರೆ, ಮಲ್ಲೇಶ್ವರದ ಕೆ. ಸಿ ಜನರಲ್ ಆಸ್ಪತ್ರೆ, ಕೆ. ಆರ್ ಪುರ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಇಂದಿರಾನಗರದ ಸಿ ವಿ ರಾಮನ್ ಆಸ್ಪತ್ರೆ, ಕೊಡಗಿನ ವೈದ್ಯಕೀಯ ಸಂಸ್ಥೆ ಆಸ್ಪತ್ರೆ, ಮಂಡ್ಯ ವೈದ್ಯಕೀಯ ಸಂಸ್ಥೆ ಆಸ್ಪತ್ರೆ, ಮೈಸೂರು ಕೆ ಆರ್ ಆಸ್ಪತ್ರೆ ಹಾಗೂ ಜೆಎಸ್ಸೆಸ್ ವೈದ್ಯಕೀಯ ಸಂಸ್ಥೆ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಸೋಂಕು ನಿರೋಧಕಗಳನ್ನ ಒದಗಿಸಲಾಗಿದೆ. ಇದರಲ್ಲಿ ವೈದ್ಯಕೀಯ ಸಿಬ್ಬಂದಿ ಧರಿಸುವ ಪಿಪಿಇ (Personal Protective Equipment) ಧಿರಿಸುಗಳು ಸೇರಿವೆ. ಈ ಆಸ್ಪತ್ರೆಗಳಿಗೆ ತಲಾ 200ರಿಂದ 400ರ ತನಕ N95 ಮಾದರಿ ಮಾಸ್ಕ್‌ಗಳ ಜೊತೆಗೇ ತಲಾ 40ರಿಂದ 100ರ ತನಕ ಪಿಪಿಇ ಧಿರಿಸುಗಳನ್ನು ಒದಗಿಸಲಾಗಿದೆ.
ಶುಶ್ರೂಷಾ ಸಿಬ್ಬಂದಿ, ಆಶಾಕಾರ್ಯಕರ್ತೆಯರು, ಸ್ವಚ್ಛತಾ ಸಿಬ್ಬಂದಿ ಹೊರತಾಗಿ ಮಾಧ್ಯಮದವರಿಗೂ ಸೋಂಕು ನಿರೋಧಕ ಸಾಧನಗಳನ್ನು ವಿತರಿಸಲಾಗುತ್ತಿದೆ. ಹಾಗೆಯೇ ಪ್ರತಿಷ್ಠಾನದ ವತಿಯಿಂದ ಬಡವರಿಗೆ ದವಸಧಾನ್ಯಗಳನ್ನು ವಿತರಿಸಲಾಗುತ್ತಿದೆ.
ಪ್ರತಿಷ್ಠಾನದ ಅಧ್ಯಕ್ಷ ಡಿ ವಿ ಶಿವರಾಮ ಗೌಡ ಅವರ ಪ್ರಕಾರ ಇದುವರೆಗೆ 800 ಪಿಪಿಇ ಧಿರಿಸುಗಳು, 15 ಸಾವಿರ N95 ಮಾದರಿಯ ಮಾಸ್ಕ್‌ಗಳು, 5 ಸಾವಿರ ಮಾಮೂಲಿ ಮಾಸ್ಕ್‌ಗಳು, 18 ಸಾವಿರ ಬಾಟಲಿ ಸೆನಿಟೈಸರ್‌ಗಳು ಸೇರಿದಂತೆ ಒಟ್ಟು 38800 ಸೋಂಕು ನಿರೋಧಕ ಪರಿಕರಗಳನ್ನು ವಿತರಿಸಲಾಗಿದೆ.
‘ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಅನಾಹುತ ಸೃಷ್ಟಿಸಿರುವ ಕೋವಿಡ್ 19 ವೈರಸ್ ಮಹಾಮಾರಿ ನಮ್ಮ ದೇಶಕ್ಕೂ ವಕ್ಕರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ಭಾರತ ಸರ್ಕಾರವವು ವಿಶ್ವ ಮೆಚ್ಚುವ ರೀತಿಯಲ್ಲಿ ಕೋವಿಡ್ 19 ವೈರಸ್ ಸೋಂಕು ಹರಡುವುದನ್ನು ತಡೆಯಲು ಕ್ರಮಕೈಗೊಂಡಿದೆ. ದೇಶದ ಜನರ ಜೀವ ಅಮೂಲ್ಯ. ಮೊದಲು ಅವರನ್ನು ಸಾವಿನ ದವಡೆಯಿಂದ ಪಾರುಮಾಡಬೇಕು. ಹಾಗೆಯೇ ಅವರ ಜೀವನವೂ ನಡೆಯಬೇಕು ಎಂಬುದು ನಮ್ಮ ನಿಲುವು.
ಅದಕ್ಕಾಗಿ ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆ ಮುಂತಾದ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ, ಸರ್ಕಾರದ ವತಿಯಿಂದ, ಪಕ್ಷದ ವತಿಯಿಂದ ಸಂಘ-ಸಂಸ್ಥೆಗಳ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಊಟ, ದಿನಸಿಗಳನ್ನು ಹಂಚಲಾಗುತ್ತಿದೆ. ನಮ್ಮ ಸದಾಸ್ಮಿತ ಪ್ರತಿಷ್ಠಾನದ ವತಿಯಿಂದಲೂ ದಿನಸಿಗಳನ್ನು ಹಂಚುತ್ತಿದ್ದೇವೆ, ಆದರೆ ನಾವು ಮೊದಲ ಸಾಲಿನಲ್ಲಿ ನಿಂತು ಜನರ ಜೀವರಕ್ಷಣೆಗಾಗಿ ಹೋರಾಡುತ್ತಿರುವ ಕೋವಿಡ್ ಯೋಧರ ಆರೋಗ್ಯ ರಕ್ಷಣೆಗೆ ಹೆಚ್ಚು ಗಮನಹರಿಸಿದ್ದೇವೆ” ಎಂದು ಪ್ರತಿಷ್ಠಾನದ ಮಹಾಪೋಷಕರೂ ಆಗಿರುವ ಕೇಂದ್ರ ಸಚಿವ ಸದಾನಂದ ಗೌಡ ಅವರು ತಿಳಿಸಿದರು.
‘ವೈದ್ಯರು, ಶುಶ್ರೂಷಕರು ಸೋಂಕುಪೀಡಿತರ ನೇರ ಸಂಪರ್ಕಕ್ಕೆ ಬರುತ್ತಾರೆ. ಅವರಿಗೂ ಸೋಂಕು ತಗಲುವ ಸಾಧ್ಯತೆ ತುಂಬಾನೇ ಜಾಸ್ತಿಯಿರುತ್ತದೆ. ಅವರಲ್ಲಿ ಅನೇಕ ಜನ ತಮ್ಮ ಮನೆಗೂ ಹೋಗದೆ ಕರ್ತವ್ಯ ನಿರ್ವಹಿಸುತ್ತಾರೆ. ಅಂತಹ ಜನರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಪ್ರತಿಷ್ಠಾನದ ವತಿಯಿಂದ ನಮ್ಮ ಕೈಲಾದಷ್ಟು PPE ಕಿಟ್ಟುಗಳು, N95 ಮಾದರಿ ಮಾಸ್ಕ್‌ಗಳನ್ನು ಒದಗಿಸುತ್ತಿದ್ದೇವೆ, ಇಂತಹ ಸಂದರ್ಭದಲ್ಲಿ ಎಷ್ಟು ಸೋಂಕು ನಿರೋಧಕ ತೊಡುಗೆಗಳು ಇದ್ದರೂ ಕಡಿಮೆಯೇ.” ಎಂದು ಸಚಿವರು ಹೇಳಿದರು.
ಹಾಗೆಯೇ ಲಾಕ್ಢೌನಿನ ಈ ಸಂದರ್ಭದಲ್ಲಿ ಪೊಲೀಸರಿಗೆ ಕಾನೂನು ವ್ಯವಸ್ಥೆಯನ್ನು ಕಾಪಾಡುವುದು ಒಂದು ದೊಡ್ಡ ಸವಾಲು. ಬೀದಿಗಳಿಯುವ ಜನರನ್ನು ನಿಯಂತ್ರಿಸುವುದು ಕಷ್ಟ. ಯಾರಿಗೆ ಸೋಂಕು ಇದೆಯೋ ಇಲ್ಲವೋ ಎಂಬುದು ತಿಳಿಯುವುದಿಲ್ಲ. ಆಸ್ಪತ್ರೆಯಲ್ಲಿ, ಪ್ರತ್ಯೇಕ ಕ್ವಾರಂಟೈನ್ ವಾರ್ಡುಗಳಲ್ಲಿ ಶಾಂತಿ-ಸುವ್ಯವಸ್ಥೆ ಜವಾಬ್ಧಾರಿಯೂ ಪೊಲೀಸರದೇ. ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಪೊಲೀಸರು ಸೋಂಕಿಗೆ ಒಳಗಾದ ಸಾಕಷ್ಟು ಉದಾಹರಣೆಗಳಿವೆ. ಅದಕ್ಕಾಗಿ ಅವರಿಗೆ N95 ಮಾದರಿ ಮಾಸ್ಕ್‌ಗಳು, ಸೆನಿಟೈಸರ್ ಒದಗಿಸುತ್ತಿದ್ದೇವೆ” ಎಂದು ಅವರು ವಿವರಿಸಿದರು.
ಇನ್ನು ಮನೆಮನೆಗೆ ಸಮೀಕ್ಷೆ ನಡೆಸಲು ತೆರಳುವ ಆಶಾಕಾರ್ಯಕರ್ತೆಯರು, ಮನೆಮನೆ ಬಾಗಿಲಿಗೆ ಹಾಲು ಹಾಕುವವರು, ಗ್ಯಾಸ್ ಸಿಲಿಂಡರ್ ಡೆಲಿವರಿ ಹುಡುಗರು, ಸ್ವಚ್ಛತಾ ಸಿಬ್ಬಂದಿ, ಸ್ಥಳದಲ್ಲಿದ್ದು ವರದಿಮಾಡುವ ಮಾಧ್ಯಮ ಮಿತ್ರರೂ ಸಾಕಷ್ಟು ರಿಸ್ಕ್ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಾರೆ. ಅವರಿಗೆಲ್ಲ ಪ್ರತಿಷ್ಠಾನದ ವತಿಯಂದ N95 ಮಾದರಿಯ ಮಾಸ್ಕ್, ಸೆನಿಟೈಸರ್ ಒದಗಿಸುತ್ತಿದ್ದೇವೆ, ಈ ಕಾರ್ಯ ಮುಂದುವರಿಯುತ್ತದೆ.
ಅನೇಕ ಸಂಘ-ಸಂಸ್ಥೆಗಳು ಕೋವಿಡ್ 19 ವೈರಸ್ ವಿರುದ್ಧದ ಈ ಹೋರಾಟದಲ್ಲಿ ಕೈಜೋಡಿಸಿವೆ. ಹಾಗೆಯೇ ನಮ್ಮದೂ ಒಂದು ಅಳಿಲುಸೇವೆ. ಎಲ್ಲರೂ ಒಟ್ಟಾಗಿ ಹೋರಾಡಿದರೆ ಈ ಮಹಾಮಾರಿಯನ್ನು ಮಣಿಸುವುದು ಕಷ್ಟದ ಕೆಲಸವಲ್ಲ’ ಎಂದು ಸಚಿವ ಸದಾನಂದ ಗೌಡ ಅವರು ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.