Safety Island: ಮಹಿಳಾ ಸುರಕ್ಷತೆಗೆ ಸೇಫ್ಟಿ ಐಲ್ಯಾಂಡ್
Team Udayavani, Aug 28, 2023, 4:28 PM IST
ಮಹಿಳಾ ಸುರಕ್ಷತೆ ಮತ್ತು ಹೆಣ್ಣು ಮಕ್ಕಳ ಮೇಲಿನ ಶೋಷಣೆಗೆ ಕಡಿವಾಣ ಹಾಕಲು ಒತ್ತುಕೊಡುತ್ತಿರುವ ನಗರ ಪೊಲೀಸರು, ಈ ನಿಟ್ಟಿನಲ್ಲಿ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ “ಸೇಫ್ಟಿ ಐಲ್ಯಾಂಡ್’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ತನ್ನ “ಕಾಸ್ಮೋಪಾಲಿಟಿನ್ ಛಾಯೆ’ಯಿಂದಾಗಿ ಜಾಗತಿಕ ಮನ್ನಣೆ ಪಡೆದುಕೊಂಡಿರುವ ಬೆಂಗಳೂರಿಗೆ ದೇಶ-ವಿದೇಶ ಪ್ರವಾಸಿಗರ ಆಗಮನ-ನಿರ್ಗಮನ ಇದ್ದೇ ಇದೆ. ಜತೆಗೆ ಉದ್ಯೋಗ ಅರಸಿ ಐಟಿಸಿಟಿಗೆ ಬರುವವರೂ ಹೆಚ್ಚಿದ್ದಾರೆ. ಅದರಲ್ಲೂ ಶಿಕ್ಷಣ- ಉದ್ಯೋಗಕ್ಕಾಗಿ ಹೆಣ್ಣು ಮಕ್ಕಳು ಗಣನೀಯ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ. ಜೊತೆಗೆ ಸ್ಥಳೀಯ ಹೆಣ್ಣು ಮಕ್ಕಳೂ ಇದ್ದಾರೆ. ಕಚೇರಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯಲ್ಲಿ ಮಹಿಳೆಯರ ಮೇಲಾಗುವ ಶೋಷಣೆ, ದೌರ್ಜನ್ಯಗಳಿಗೆ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ “ಸೇಫ್ಟಿ ಐಲ್ಯಾಂಡ್’ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದರ ಕಾರ್ಯನಿರ್ವಹಣೆ ಹೇಗಿದೆ ಎಂಬ ಚಿತ್ರಣ “ಸುದ್ದಿ ಸುತ್ತಾಟದಲ್ಲಿದೆ.
ಬೆಂಗಳೂರು: ಮನೆಯಲ್ಲಿ ಹೆಂಡತಿ ಒಬ್ಬಳೆ ಇದ್ದಾಳೆ. ಆಸ್ತಿ ವಿಚಾರವಾಗಿ ಕೆಲವರು ಮನೆಗೆ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ. ದಯಾಮಾಡಿ ನನ್ನ ಹೆಂಡತಿಯನ್ನು ಅವರಿಂದ ರಕ್ಷಿಸಿ ಎಂದು ಒಬ್ಬ ವಯೋವೃದ್ಧ ತನ್ನ ಬಳಿ ಮೊಬೈಲ್ ಇಲ್ಲದ ಕಾರಣ, ಸಮೀಪದಲ್ಲಿದ್ದ ಎಸ್‌ಒಎಸ್ ಸೇಫ್ಟಿ ಐಲ್ಯಾಂಡ್ ಬಟನ್ ಒತ್ತಿ, ಸರಿಸುಮಾರು ರಾತ್ರಿ 9 ಗಂಟೆಗೆ ಸಹಾಯ ಕೋರಿದರು.
ತಕ್ಷಣವೇ ಸಮೀಪವಿದ್ದ ಹೊಯ್ಸಳವನ್ನು ವೃದ್ಧರ ಹೆಂಡತಿಯಿದ್ದ ಮನೆಯ ವಿಳಾಸಕ್ಕೆ ಕಳುಹಿಸಿ, ಗಲಾಟೆಯನ್ನು ನಿಲ್ಲಿಸಲಾಗಿದ್ದು, ಭಯದಲ್ಲಿದ್ದ ವೃದ್ಧೆಯನ್ನು ಹೊಯ್ಸಳ ಸಿಬ್ಬಂದಿ ಸುರಕ್ಷಿತವಾಗಿರಿಸಿದರು. ಇದೇ ರೀತಿ, ಮಾಲ್ಡೀವ್ಸ್ ಛಾಯಾಗ್ರಾಹಕ ಹಸನ್ ಸಿಮ್ಹಾ, ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಶಿಪ್‌ಗಾಗಿ ತಮ್ಮ ದೇಶದ ತಂಡದೊಂದಿಗೆ ಕಳೆದ ಜೂನ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಹಸನ್ ಸಿಮ್ಹಾ ಹಾಗೂ ಇಬ್ಬರು ಸ್ನೇಹಿತರು ಮಧ್ಯಾಹ್ನದ ಹೊತ್ತಿಗೆ ಎಂ.ಜಿ.ರಸ್ತೆಯ ಬಳಿಯಿರುವ ಗರುಡಾ ಮಾಲ್‌ಗೆ ಆಟೋದಲ್ಲಿ ಬಂದಿಳಿದರು. ಆಗ ತಾವು ತಂದಿದ್ದ ಬ್ಯಾಗನ್ನು ಆಟೋದಲ್ಲೇ ಮರೆತು ಮಾಲ್‌ನತ್ತ ತೆರಳಿದರು.
ಕೆಲವೇ ಹೊತ್ತಿನಲ್ಲಿ ಮೊಬೈಲ್‌ನ ಪವರ್ ಬ್ಯಾಂಕ್, ಲ್ಯಾಪ್‌ಟಾಪ್, ಹಣ, ಡಾಲರ್, ಪರ್ಸ್ ಹಾಗೂ ಪಾಸ್‌ಪೋರ್ಟ್ ಇದ್ದ ಬ್ಯಾಗ್ ಅನ್ನು ನೆನಪಿಸಿಕೊಂಡು, ಆಟೋವನ್ನು ಹುಡುಕಲು ಪ್ರಾರಂಭಿಸಿದರು. ಯಾವುದೇ ಸುಳಿವು ಸಿಗದ ಕಾರಣ, ಸ್ಥಳೀಯರ ಸಲಹೆಯಂತೆ ಒಬ್ಬರು ಗರುಡಾ ಮಾಲ್ ಬಳಿಯಿದ್ದ ಸೇಫ್ಟಿ ಐಲ್ಯಾಂಡ್ ಬಳಿ ಹೋಗಿ ಬಟನ್ ಒತ್ತಿ, ನಡೆದ ಘಟನೆ ಬಗ್ಗೆ ನಿಯಂತ್ರಣ ಸಿಬ್ಬಂದಿಗೆ ಮಾಹಿತಿ ನೀಡಿದರು. ಉಳಿದ ಇಬ್ಬರು ಸಮೀಪದಲ್ಲಿದ್ದ ಅಶೋಕ್‌ನಗರ ಪೊಲೀಸ್ ಠಾಣೆಗೆ ತೆರಳಿದ್ದರು. ದೂರಿಗೆ ಸಂಬಂಧಿಸಿದಂತೆ ಹೊಯ್ಸಳ ತಂಡವು ಕೇವಲ 5 ನಿಮಿಷಗಳ ಒಳಗೆ ಸ್ಥಳಕ್ಕೆ ತೆರಳಿ, ಕಾರ್ಯಾಚರಣೆ ಪ್ರಾರಂಭಿಸಿದರು. ಸೇಫ್ಟಿ ಐಲ್ಯಾಂಡ್ ಬಳಿ 360 ಡಿಗ್ರಿ ಕ್ಯಾಮೆರಾ ಇರುವ ಕಾರಣ, ಆಟೋ ಪತ್ತೆ ಹಚ್ಚಿದ ಹೊಯ್ಸಳ ಸಿಬ್ಬಂದಿ ಹಸನ್‌ಗೆ ಆಟೋದಲ್ಲಿದ್ದ ಬ್ಯಾಗ್ ಅನ್ನು ಸುರಕ್ಷಿತವಾಗಿ ಅವರಿಗೆ ಹಿಂದಿರುಗಿಸಿದರು. ವಿದೇಶಿ ಹಸನ್ ಮತ್ತು ಸ್ನೇಹಿತರು ನಗರ ಪೊಲೀಸ್ ಇಲಾಖೆಗೆ ಅಭಿನಂದನೆ ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ನಗರದ ವಿವಿಧ 30 ಸ್ಥಳಗಳಲ್ಲಿ ಸ್ಥಾಪಿಸಿರುವ ಎಸ್‌ಒಎಸ್ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಕಳೆದ ಜೂನ್ ತಿಂಗಳಲ್ಲಿ ಪ್ರಾರಂಭಿಸಿದ್ದು, ಸಾರ್ವಜನಿಕರಿಗೆ ತುಂಬಾ ಉಪಯೋಗವಾಗು ತ್ತಿದೆ. ನಿತ್ಯ 10- 15 ಕರೆಗಳು ಬರುತ್ತವೆ. ಇದರಲ್ಲಿ ಕ್ಷುಲ್ಲಕ ಪ್ರಕರಣಗಳು ಸ್ಥಳದಲ್ಲೇ ಇತ್ಯರ್ಥ ವಾಗುತ್ತವೆ. ಇತ್ಯರ್ಥವಾಗದ ಕೆಲವೊಂದು ಪ್ರಕರಣವನ್ನು ಠಾಣೆಯಲ್ಲಿ ದೂರು ದಾಖಲಿಸಿ ಕೊಂಡು ವಿಚಾರಣೆ ನಡೆಸಲಾಗುತ್ತದೆ. ಈ ಸೌಲಭ್ಯಕ್ಕೆ ಜನರೂ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
ಏನಿದು ಸೇಫ್ಟಿ ಐಲ್ಯಾಂಡ್? ಕಾರ್ಯ ನಿರ್ವಹಣೆ ಹೇಗೆ?:
ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಿತ್ಯ ಒಂದಲ್ಲ ಒಂದು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅಂತಹ ವೇಳೆ ಏನು ಮಾಡುವುದು ಎಂದು ದಿಕ್ಕುತೋಚದಂತಾಗುತ್ತದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ ಎಸ್‌ಒಎಸ್ ಎಂಬ ಮಷಿನ್ ಅನ್ನು ಸ್ಥಾಪಿಸಿದ್ದು, ಇದಕ್ಕೆ “ಆಪತ್ಭಾಂಧವ’ ಎಂದು ಹೆಸರಿಡಲಾಗಿದೆ. ನೀಲವರ್ಣದ ಈ ಮಷಿನ್ ಮೇಲೆ ಟೆಲಿಫೋನ್ ಚಿತ್ರ, ಸ್ಪೀಕರ್, ಮೈಕ್ ಹಾಗೂ ಕೆಂಪು ಬಣ್ಣದ ಬಟನ್ ನೀಡಲಾಗಿದೆ. ತುರ್ತು ದ್ವೀಪದ ಸುತ್ತಲೂ ನಡೆವ ಘಟನೆಯನ್ನು ವೀಕ್ಷಿಸಲು 360 ಡಿಗ್ರಿ ಕ್ಯಾಮೆರಾ ಅಳವಡಿಸಲಾಗಿದೆ. ಅಪಾಯದ ವೇಳೆ ಕೆಂಪು ಬಟನ್ ಒತ್ತಿದಾಕ್ಷಣ ನೇರ ಕಮಾಂಡ್ ಸೆಂಟರ್‌ನಲ್ಲಿ ಅಲರಾಂ ಹೊಡೆಯುತ್ತದೆ. ಅಲರಾಂ ಹೊಡೆದ ಕೇವಲ 10 ಸೆಕೆಂಡ್‌ಗಳಲ್ಲಿ ಕಮಾಂಡ್ ಸೆಂಟರ್‌ನಲ್ಲಿನ ಸಿಬ್ಬಂದಿ ಕರೆ ಸ್ವೀಕರಿಸಿ, ಸಮಸ್ಯೆಯನ್ನು ಆಲಿಸುತ್ತಾ, ಕರೆ ಮಾಡಿದ ವ್ಯಕ್ತಿಯನ್ನು ನೇರ ಕ್ಯಾಮೆರಾದಲ್ಲಿ ವೀಕ್ಷಿಸುತ್ತಾರೆ. ಆ ವ್ಯಕ್ತಿಯು ತೊಂದರೆಗೆ ಸಿಲುಕಿರುವುದು ಕಂಡುಬಂದಲ್ಲಿ ತಕ್ಷಣ ಸಮೀಪದ ಹೊಯ್ಸಳ 112ಕ್ಕೆ ಮಾಹಿತಿ ನೀಡುತ್ತಾರೆ. ಕೇವಲ 7- 9 ನಿಮಿಷಗಳ ಒಳಗೆ ಹೊಯ್ಸಳದ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಾರೆ. ಅಲ್ಲಿಯವರೆಗೂ ಕಮಾಂಡ್ ಸೆಂಟರ್ ಸಿಬ್ಬಂದಿ ದೂರುದಾರರ ಸಂಪರ್ಕದಲ್ಲಿದ್ದು, ಧೈರ್ಯ ತುಂಬುತ್ತಾರೆ. ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಅವರ ಸಮಸ್ಯೆಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತದೆ. ಇಲ್ಲದಿದ್ದರೆ, ಹತ್ತಿರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸುತ್ತಾರೆ.
ಪಿಂಕ್ ಹೊಯ್ಸಳ ಕಾರ್ಯಾಚರಣೆ:
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕುಟುಂಬ ಕಲಹ, ಹೆಣ್ಣುಮಕ್ಕಳೊಂದಿಗಿನ ದುರ್ನಡತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತೊಂದರೆಗಳನ್ನು ತಪ್ಪಿಸಬೇಕೆಂದು ಪೊಲೀಸ್ ಇಲಾಖೆ ಪಿಂಕ್ ಹೊಯ್ಸಳವನ್ನು ರೂಪಿಸಿತು. ಈ ರೀತಿಯ ಯಾವುದೇ ತೊಂದರೆಗಳಿಗೆ ಒಳಗಾದ ಮಹಿಳೆಯರು ತಕ್ಷಣವೇ 112ಗೆ ಕರೆ ಮಾಡಿದರೆ, ಕರೆ ಮಾಡಿದ 7ರಿಂದ 9 ನಿಮಿಷಗಳೊಳಗೆ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಪಿಂಕ್ ಹೊಯ್ಸಳ ಗಾಡಿಯು ಘಟನಾ ಸ್ಥಳಕ್ಕೆ ಆಗಮಿಸುತ್ತದೆ. ಮಹಿಳೆಯನ್ನು ಸಂರಕ್ಷಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅಥವಾ ಸಮೀಪದ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಜಾಗೃತಿ ಅತ್ಯಗತ್ಯ:
ತುರ್ತು ದ್ವೀಪ(ಎಸ್‌ಒಎಸ್) ಸ್ಥಾಪನೆಯಾಗಿ ಮೂರ್ನಾಲ್ಕು ತಿಂಗಳು ಕಳೆದವು. ನಿತ್ಯ 10ರಿಂದ 15 ಕರೆಗಳು ಮಾತ್ರ ಬರುತ್ತಿವೆ. ಈ ಸೌಲಭ್ಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮುಡಿಸುವ ಅಗತ್ಯವಿದೆ. ಪೊಲೀಸರು ಹಾಗೂ ಕೆಲ ಸಾರ್ವಜನಿಕರು ಎಸ್‌ಒಎಸ್ ಉಪಯೋಗವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಮೂಲಕ ಮಾಹಿತಿ ನೀಡುತ್ತಾ, ಇದರ ಮಹತ್ವ ತಿಳಿಸಿಕೊಡಲಾಗುತ್ತಿದೆ.
ಎಲ್ಲೆಲ್ಲಿದೆ ಸೇಫ್ಟಿ ಐಲ್ಯಾಂಡ್?:
ಇಂದಿರಾನಗರದ ಸಿಎಂಎಚ್ ರಸ್ತೆ ಮೆಟ್ರೋ ಸ್ಟೇಷನ್, ಬಾಣಸವಾಡಿ, ಜ್ಞಾನಭಾರತಿ, ಚಾಮರಾಜಪೇಟೆ, ಗೋವಿಂದರಾಜ ನಗರ, ಉಪ್ಪಾರಪೇಟೆ, ಆರ್.ಟಿ. ನಗರ, ಸಂಜಯ್ ನಗರ, ಬಸವನಗುಡಿ, ಹಲಸೂರ್, ಕಬ್ಬನ್ ಪಾರ್ಕ್, ಮೈಸೂರ್ ಬ್ಯಾಂಕ್ ವೃತ್ತ ಸೇರಿದಂತೆ ನಗರದ 30 ವಿವಿಧ ಸ್ಥಳಗಳಲ್ಲಿ ಸೇಫ್ಟಿ ಲ್ಯಾಂಡ್ ಮಷಿನ್‌ಗಳನ್ನು ಸ್ಥಾಪಿಸಲಾಗಿದೆ.
ಅನುಕೂಲವೇನು?:
ಕಳ್ಳತನ, ದೌರ್ಜನ್ಯ, ಕಿರುಕುಳ, ಅಪಘಾತ ಸೇರಿದಂತೆ ಇತರ ಸಮಸ್ಯೆಗಳಿಗೆ ಸಿಲುಕಿದ ಮಹಿಳೆಯರು, ಮಕ್ಕಳು ಅಥವಾ ಸಾರ್ವಜನಿಕರಿಗೆ ನೆರವಾಗಲು ಪೊಲೀಸರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ. ಅಷ್ಟೇ ಅಲ್ಲದೇ, ಕೆಲವೊಂದು ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು, ವಾಹನ ಸವಾರರ ನಡುವಿನ ಸಣ್ಣಪುಟ್ಟ ಗಲಾಟೆಗಳು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕೈಮೀರಿ ನಡೆಯುತ್ತಿದ್ದಾಗ, ಟ್ರಾಫಿಕ್ ಪೊಲೀಸರು ಈ ತುರ್ತು ದ್ವೀಪವನ್ನು ಒಳಸುತ್ತಾರೆ.
ನಗರದಲ್ಲಿ ಸ್ಥಾಪಿಸಲಾಗಿರುವ 30 ತುರ್ತು ಐಲ್ಯಾಂಡ್‌ಗಳಲ್ಲಿ 25ರಿಂದ 27 ಸದಾ ಕಾರ್ಯಾಚರಣೆಯಲ್ಲಿರುತ್ತವೆ. ಸಾಮಾನ್ಯ ಜನಕ್ಕೆ ಇದರ ಮಹತ್ವ ತಿಳಿಸುವಲ್ಲಿ ಇಲಾಖಾ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಅತಿಹೆಚ್ಚು ಜನ ಸೇರುವ ಹಾಗೂ ನಿರ್ಭಿಡ ಪ್ರದೇಶಗಳಲ್ಲಿ ಮುಂದಿನ ಡಿಸೆಂಬರ್ ಒಳಗಾಗಿ ಇನ್ನೂ 20 ಸೇಫ್ಟಿ ಐಲ್ಯಾಂಡ್ ಮಷಿನ್‌ಗಳನ್ನು ಸ್ಥಾಪಿಸಲಾಗುತ್ತದೆ. ಆಪತ್ತಿನಲ್ಲಿರುವವರು ಇದರ ಸದುಪಯೋಗ ಪಡೆದುಕೊಳ್ಳಿ.-ರವೀಂದ್ರ ಕೆ.ಗಡಾದಿ, ಡಿಸಿಪಿ ಕಮಾಂಡ್ ಸೆಂಟರ್.
-ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.