ಗಂಧ ಕಳವು ಯತ್ನ; ಗುಂಡೇಟು
Team Udayavani, Jul 31, 2018, 10:46 AM IST
ಬೆಂಗಳೂರು: ಬಾಣಸವಾಡಿಯ ಸೇನಾ ಕ್ಯಾಂಪ್‌ನ ಗಂಧದ ಮರಗಳನ್ನು ಕಡಿದು ಸಾಗಿಸಲು ಬಂದಿದ್ದ ತಮಿಳುನಾಡು ಮೂಲದ ಕಳ್ಳರ ಮೇಲೆ ಬೆಳಗಿನ ಜಾವ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಒಬ್ಬನಿಗೆ ಗುಂಡೇಟು ತಗುಲಿದ್ದು, ಇತರ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ತಮಿಳುನಾಡಿನ ಸೇಲಂನ ಜಿಲ್ಲೆಯ ರಾಮರ್(40) ಎನ್ನಲಾಗಿದೆ. ಆತ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಬಾಣಸವಾಡಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ನಸುಕಿನ 2.30ರ ಸುಮಾರಿಗೆ ಸೇನಾ ಕ್ಯಾಂಪ್‌ನ ಕಾಂಪೌಂಡ್ ಜಿಗಿದ ಐವರು ಕಳ್ಳರು ಶ್ರೀಗಂಧದ ಮರವೊಂದನ್ನು ಕಡಿದು ಉರುಳಿಸಿದ್ದರು. ಮತ್ತೂಂದು ಮರವನ್ನು ಯಂತ್ರದ ಮೂಲಕ ಕತ್ತರಿಸುತ್ತಿದ್ದರು. 4 ಗಂಟೆ ಸುಮಾರಿಗೆ ಮರ ಕಡಿಯುವ ಶಬ್ಧ ಕೇಳಿ ಕ್ಯಾಂಪ್‌ನ ಕಾಂಪೌಂಡ್ ಬಳಿ ಗಸ್ತು ತಿರುಗುತ್ತಿದ್ದ ಸೇನಾ ಸಿಬ್ಬಂದಿ ರಾಜೇಶ್ ರಾಣಾ ಅಲ್ಲಿಗೆ ಧಾವಿಸಿದ್ದು ಬಂದೂಕು ತೋರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಕಳ್ಳರು ರಾಜೇಶ್ ಮೇಲೆಯೇ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ
ಆರೋಪಿಗಳ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ್ದು, ರಾಮರ್‌ನ ಎಡಗಾಲಿಗೆ ಒಂದು ಗುಂಡು ತಗುಲಿದೆ. ಇತರೆ ಆರೋಪಿಗಳು ಕಾಂಪೌಂಡ್ ಜಿಗಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೇನಾ ಪ್ರದೇಶಗಳಿಗೆ ಪ್ರವೇಶ ನಿಷೇಧ ಎಂದು ಗೊತ್ತಿದ್ದರೂ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅಲ್ಲದೆ, ಶ್ರೀಗಂಧದ ಮರಗಳನ್ನು ಕಳವು ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಬಾಣಸವಾಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಸೇನೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.