ಕೈದಿ ಶಶಿಕಲಾಗೆ ಐಷಾರಾಮಿ ಸೌಲಭ್ಯ: ಮಗದೊಂದು ವೀಡಿಯೋ ಬಹಿರಂಗ
Team Udayavani, Jul 19, 2017, 4:30 AM IST
ಬೆಂಗಳೂರು: ಅಕ್ರಮ ಪ್ರಕರಣಗಳಿಂದಾಗಿ ಇಡೀ ದೇಶದ ಗಮನ ಸೆಳೆದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಮತ್ತೂಂದು ಮುಖ ಅನಾವರಣಗೊಂಡಿದೆ. ತಮಿಳುನಾಡಿನ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ಗೆ ವಿಶೇಷ ಆತಿಥ್ಯ ನೀಡಿರುವ ಬಗ್ಗೆ ಮತ್ತೂಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿರುವಂತೆ ಶಶಿಕಲಾ ನಟರಾಜನ್ ಅವರು ಜೈಲಿನ ಉಡುಪು ಹೊರತುಪಡಿಸಿ ಖಾಸಗಿ ಉಡುಪು ಧರಿಸಿರುವುದು ಕಂಡು ಬಂದಿದ್ದು, ತಮ್ಮ ಕೊಠಡಿ ಮುಂಭಾಗದಲ್ಲಿ ರಾಜಾರೋಷವಾಗಿ ನಡೆದಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ದೃಶ್ಯದಲ್ಲಿ ಇಬ್ಬರು ಮಹಿಳಾ ಸಿಬಂದಿ ಕೂಡ ಇದ್ದು, ಇವರ ಸಮ್ಮುಖದಲ್ಲೇ ಶಶಿಕಲಾ ಮತ್ತು ಇಳವರಸಿ ಚರ್ಚಿಸುತ್ತಿರುವುದು ಹಾಗೂ ಶಶಿಕಲಾ ನಟರಾಜನ್ ಚೂಡಿದಾರ ಧರಿಸಿ ಬ್ಯಾಗ್ ಹಿಡಿದು ಕಾರಿಡಾರ್‌ನಲ್ಲಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿವೆ.
ಈ ವೀಡಿಯೋ ಬಹಿರಂಗದಿಂದಾಗಿ ಸರಕಾರ ಹಾಗೂ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬಂದಿಯನ್ನು ಇನ್ನಷ್ಟು ಇಕಟ್ಟಿಗೆ ಸಿಲುಕಿಸಿದೆ. ಇದೇ ಮಾದರಿಯ ವೀಡಿಯೋ ಎರಡು ದಿನಗಳ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಶಶಿಕಲಾ ಮತ್ತು ಇಳವರಸಿಗೆ ಅಡುಗೆ ಮನೆ, ಸ್ನಾನ, ಶೌಚಕ್ಕೆ 2 ಪ್ರತ್ಯೇಕ ಕೊಠಡಿಗಳನ್ನು ನೀಡಲಾಗಿದ್ದು, 4 ಕೊಠಡಿಗಳಿಗೆ ಬೇರೆಯವರು ಹೋಗದಂತೆ ಬ್ಯಾರಿಕೇಡ್ ಹಾಕಿರುವುದು ಬಹಿರಂಗಗೊಂಡಿತ್ತು. ಓದಲು ಪುಸ್ತಕ, ಕುರ್ಚಿ, ಪ್ರತ್ಯೇಕ ಹಾಸಿಗೆ ಹಾಗೂ ಸೀರೆ ಸಹಿತ ಹಲವು ಬಟ್ಟೆಗಳು ಕೊಠಡಿಯಲ್ಲಿದ್ದು, ಕುಕ್ಕರ್ ಮತ್ತು ಐದು ಬಗೆಯ ಪಾತ್ರೆಗಳನ್ನೂ ನೀಡಿರುವುದು ದೃಶ್ಯಗಳಲ್ಲಿವೆ.
ಶಶಿಕಲಾ ಸಾಮಾನ್ಯ ಕೈದಿ: ಈಗ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದ ತಂಡ ಯಾವುದೇ ಸಂದರ್ಭದಲ್ಲೂ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶಶಿಕಲಾಗೆ ನೀಡಲಾಗುತ್ತಿದ್ದ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಹೀಗಾಗಿ ಕಳೆದೆರಡು ದಿನಗಳಿಂದ ಶಶಿಕಲಾ, ಇಳವರಸಿ ಸಾಮಾನ್ಯ ಕೈದಿ ಗಳಂತೆ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೈದಿಗಳ ಪ್ರತಿಭಟನೆ: ಪರಪ್ಪನ ಅಗ್ರಹಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ಬಯಲಿಗೆಳೆದ ಡಿಐಜಿ ರೂಪಾ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಜೈಲಿನಲ್ಲಿರುವ ನೂರಾರು ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸಿರುವುದು ಬೆಳಕಿಗೆ ಬಂದಿದೆ. ರೂಪಾ ಅವರ ವರ್ಗಾವಣೆ ರದ್ದುಪಡಿಸಬೇಕೆಂದು ಪರಪ್ಪನ ಅಗ್ರಹಾರ ಜೈಲಿನ 200 ಮಂದಿ ಕೈದಿಗಳು ಒತ್ತಾಯಿಸಿದ್ದು, ಮಂಗಳವಾರ ಬೆಳಗ್ಗಿನ ತಿಂಡಿ ತಿನ್ನದೇ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ವರ್ಗಾವಣೆಗೆ ವಿರೋಧ: ಅವ್ಯವಹಾರಗಳನ್ನು ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಬಯಲಿಗೆಳೆದಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಮೊದಲೇ ಅಂತಹ ಪ್ರಾಮಾಣಿಕ ಅಧಿಕಾರಿಯನ್ನು ಸರಕಾರ ವರ್ಗಾವಣೆ ಸರಿಯಲ್ಲ. ರಾಜ್ಯ ಸರಕಾರ ಪುನಃ ರೂಪಾ ಅವರನ್ನು ಡಿಐಜಿಯಾಗಿ ನೇಮಕ ಮಾಡಬೇಕೆಂದು ಕೈದಿಗಳು ಆಗ್ರಹಿಸಿದ್ದಾರೆ.
ಕಾನೂನು ಪ್ರಕಾರ ನಡೆಯುತ್ತಿದೆ: ನ್ಯಾಯಾಲಯದ ಅನುಮತಿ ಇಲ್ಲದೆ ಯಾರೊಬ್ಬರಿಗೂ ನಿಯಮ ಉಲ್ಲಂಘಿಸಿ ಸವಲತ್ತು ನೀಡದಂತೆ ರಾಜ್ಯ ಸರಕಾರ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಬೆಳವಣಿಗೆಯಿಂದ ಶಶಿಕಲಾ ಈಗ ಸಾಮಾನ್ಯ ಕೈದಿಯಾಗಿದ್ದು, ಎಲ್ಲರಂತೆ ಬಿಳಿಸೀರೆ, ಬಿಳಿ ಕುಪ್ಪಸ ಧರಿಸಿ, ಜೈಲಿನಲ್ಲಿ ತಯಾರಿಸಿದ ಊಟವನ್ನೇ ಮಾಡಬೇಕಾಗಿದೆ. ಸಾಮಾನ್ಯ ಮಹಿಳಾ ಕೈದಿಗಳ ಜತೆ ಅವರು ಇರಬೇಕಾಗಿದೆ. ಉಳಿದ ಗಣ್ಯ ಕೈದಿಗಳಿಗೂ ನೀಡುತ್ತಿದ್ದ ಸವಲತ್ತುಗಳನ್ನು ಹಿಂಪಡೆದುಕೊಂಡು, ಎಲ್ಲವೂ ಕಾನೂನು ಪ್ರಕಾರ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಅನಿತಾ ಮೇಲೂ ಆರೋಪ
ಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕಿಯಾಗಿ ಅನಿತಾ ಮಂಗಳವಾರ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇತ್ತ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದ್ದ ಅಕ್ರಮಗಳಲ್ಲಿ ಅನಿತಾ ಕೂಡ ಪಾಲುದಾರರು ಎನ್ನಲಾಗಿದ್ದು, ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಲು ಟಿಟಿ ದಿನಕರನ್ ಅವರಿಂದ ತಿಂಗಳಿಗೆ ಲಕ್ಷಾಂತರ ರೂ.ಲಂಚ ಪಡೆದು ಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಜೈಲಿನ ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿತಾ ಮಹಿಳಾ ಬ್ಯಾರಕ್‌ನ ಸಂಪೂರ್ಣ ಹೊಣೆ ಹೊತ್ತಿದ್ದರು. ಟಿಟಿ ದಿನಕರನ್ ಶಶಿಕಲಾ ಅವರನ್ನು ಕಾಣಲು ಪ್ರತೀ ವಾರ ಪರಪ್ಪನ ಅಗ್ರಹಾರಕ್ಕೆ ಬರುತ್ತಿದ್ದರು. ಈ ವೇಳೆ ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಲು ಅವಕಾಶ ಕಲ್ಪಿಸಿರುವುದಕ್ಕೆ ಅನಿತಾ ಅವರಿಗೆ ಪ್ರತಿ ತಿಂಗಳು ಇಂತಿಷ್ಟು ಲಂಚ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.