ಕನ್ನಡಿಗರ ಕ್ಷಮೆ ಕೇಳಿದ ಸತ್ಯರಾಜ್
Team Udayavani, Apr 22, 2017, 11:25 AM IST
ಬೆಂಗಳೂರು: ಅಂತೂ ಇಂತೂ ತಮಿಳು ನಟ ಸತ್ಯರಾಜ್ ಕನ್ನಡಿಗರಲ್ಲಿ ಕ್ಷಮೆ ಕೋರಿದ್ದಾರೆ. ಈ ಮೂಲಕ ಕನ್ನಡಪರ ಸಂಘಟನೆಗಳಿಗೆ ಜಯ ಸಿಕ್ಕಂತಾಗಿದೆ. ಸತ್ಯರಾಜ್ ಈ ಹಿಂದೆ ಕಾವೇರಿ ಗಲಾಟೆ ವೇಳೆ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಅವರ ಮಾತು ವಿರೋಧಿಸಿ, ಅವರು ನಟಿಸಿರುವ “ಬಾಹುಬಲಿ-2′ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಈ ಹಿನ್ನೆಲೆಯಲ್ಲಿ ಸತ್ಯರಾಜ್, ಕನ್ನಡಿಗರ ಕ್ಷಮೆ ಕೋರುವ ಮೂಲಕ “ಬಾಹುಬಲಿ 2′ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಸತ್ಯರಾಜ್ ವೀಡಿಯೋ ಮೂಲಕ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದು, ಅವರ ಹೇಳಿಕೆಯ ಸಾರ ಹೀಗಿದೆ. “ಕಳೆದ 9 ವರ್ಷಗಳ ಹಿಂದೆ ಕಾವೇರಿ ವಿವಾದ ಎದ್ದಾಗ, ನಾನು ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ್ದೆ. ನನ್ನ ಮಾತುಗಳಿಂದ ಕನ್ನಡಿಗರಿಗೆ ನೋವಾಗಿದೆ ಎಂಬುದು ಅರ್ಥವಾಗಿದೆ.
ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ಅಂದು ಮಾತನಾಡಿದ ಮಾತನ್ನು ಇಟ್ಟುಕೊಂಡು “ಬಾಹುಬಲಿ-2′ ಚಿತ್ರದ ಬಿಡುಗಡೆಗೆ ಅಡ್ಡಿ ಮಾಡಬೇಡಿ. ನಾನು ಕನ್ನಡಿಗರ ಹಾಗೂ ಕರ್ನಾಟಕದ ವಿರೋಧಿ ಅಲ್ಲ. ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಭಾಷಣ ಮಾಡುವಾಗ, ಕನ್ನಡಿಗರ ಬಗ್ಗೆ ಮಾತನಾಡಿದ್ದೆ. ಅದರಿಂದ ಕನ್ನಡಿಗರಿಗೆ ನೋವಾಗಿದೆ. ಈಗ ಕ್ಷಮೆ ಕೋರುತ್ತಿದ್ದೇನೆ.
ನನ್ನ ತಪ್ಪು ಮಾತಿನಿಂದಾಗಿ ಚಿತ್ರಕ್ಕೆ ಅಡ್ಡಿಪಡಿಸಬೇಡಿ. ಚಿತ್ರ ಬಿಡುಗಡೆಗೆ ಕನ್ನಡಿಗರು ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿಕೊಂಡಿರುವ ಸತ್ಯರಾಜ್, “ನಾನು ಈಗಲೂ ತಮಿಳಿಗರ ಪರವಾಗಿದ್ದೇನೆ. ಹಾಗಂತ ಕನ್ನಡಿಗರನ್ನು ವಿರೋಧಿಸುತ್ತಿಲ್ಲ. ಕಾವೇರಿ ಹೋರಾಟದ ವಿಷಯ ಬಂದಾಗ, ಹೋರಾಟಕ್ಕೆ ಬೆಂಬಲ ಕೊಡುತ್ತೇನೆ. ಒಬ್ಬ ನಟನಾಗಿ ಹೋರಾಟ ಮಾಡುವುದಕ್ಕಿಂತ ತಮಿಳಿಗನಾಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ಅಂದಿನ ಮಾತುಗಳಿಂದ ಕನ್ನಡಿಗರಿಗೆ ನೋವಾಗಿದ್ದರೆ ಕ್ಷಮೆ ಇರಲಿ’ ಎಂದು ಸತ್ಯರಾಜ್ ಹೇಳಿದ್ದಾರೆ.
2008ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ನಡುವೆ ಕಾವೇರಿ ವಿವಾದ ಉಲ್ಬಣವಾಗಿದ್ದ ಸಮಯದಲ್ಲಿ ಚೆನ್ನೈನಲ್ಲಿ ತಮಿಳುನಾಡು ಚಿತ್ರರಂಗ ಪ್ರತಿಭಟನೆ ನಡೆಸಿತ್ತು. ಆ ಸಂದರ್ಭದಲ್ಲಿ ನಟ ಸತ್ಯರಾಜ…, ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡುವುದರ ಜೊತೆಗೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ… ಅವರ ವಿರುದ್ಧವೂ ಗುಡುಗಿದ್ದರು. ಇದರಿಂದ ಕನ್ನಡ ಪರ ಸಂಘಟನೆಗಳು ಕೆರಳಿದ್ದವು.
“ಬಾಹುಬಲಿ-2′ ಚಿತ್ರದಲ್ಲಿ ಸತ್ಯರಾಜ್ ನಟಿಸಿರುವುದರಿಂದ ಆ ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿದ್ದವು. ಅದೂ ಅಲ್ಲದೆ, ಏ.28 ರಂದು ಬೆಂಗಳೂರು ಬಂದ್ ನಡೆಸಲು ನಿರ್ಧರಿಸಿದ್ದವು. ಈ ನಡುವೆ, ನಿರ್ದೇಶಕ ರಾಜಮೌಳಿ ಅವರು, ವೀಡಿಯೋ ಮೂಲಕ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆಗ ಕನ್ನಡ ಪರ ಸಂಘಟನೆಗಳು, ನಿರ್ದೇಶಕರ ಬಗ್ಗೆ ಗೌರವ ಇದೆ. ಆದರೆ, ಸತ್ಯರಾಜ್ ಹೇಳಿಕೆಯಿಂದ ನೋವಾಗಿದ್ದು, ಅವರು ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದವು.
ಕನ್ನಡಿಗರ ಮಾತು ಆಲಿಸಿದ ಸತ್ಯರಾಜ್, ಈಗ ಕ್ಷಮೆಯಾಚಿಸಿದ್ದಾರೆ. ಆದರೆ, “ಬಾಹುಬಲಿ-2′ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಅನುವು ಮಾಡಿಕೊಡುತ್ತವೆಯಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಯಾಕೆಂದರೆ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಶುಕ್ರವಾರ ಮಧ್ಯಾಹ್ನ ಆ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದ್ದರು. ಅದಾದ ಬಳಿಕ ಶನಿವಾರ (ಇಂದು) ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಬಿಡುಗಡೆಯ ವಿಷಯವಾಗಿ ಮಾತನಾಡುವುದಾಗಿ ಹೇಳಿದ್ದಾರೆ.
ಚರ್ಚೆ ನಂತರ ತೀರ್ಮಾನ: ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು, “ಸತ್ಯರಾಜ್ ಕ್ಷಮೆ ಕೇಳಿದ್ದಾರೆ ನಿಜ. ಆದರೆ, “ಬಾಹುಬಲಿ-2′ ಚಿತ್ರ ಬಿಡುಗಡೆ ವಿಚಾರವಾಗಿ, ಕನ್ನಡ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳ ಜತೆ ಚರ್ಚೆ ಮಾಡಬೇಕಿದೆ. ಶನಿವಾರ (ಇಂದು) ಸಭೆ ನಡೆಸಿ, ಅಲ್ಲಿ ಎಲ್ಲರ ತೀರ್ಮಾನ ಏನು ಬರುತ್ತದೆಯೋ ಅದಕ್ಕೆ ಬದ್ಧವಾಗುತ್ತೇವೆ.
ಈಗಾಗಲೇ ನಿರ್ದೇಶಕ ರಾಜಮೌಳಿ ಅವರು ಕ್ಷಮೆ ಕೇಳಿದ್ದಾರೆ. ಆದರೆ, ಅವರು ಕ್ಷಮೆ ಕೇಳುವ ಅಗತ್ಯವಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ಸತ್ಯರಾಜ್ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ್ದರಿಂದ ಅವರ ವಿರುದ್ಧ ಮಾತ್ರ ನಮ್ಮ ಹೋರಾಟವಾಗಿತ್ತು. ಈಗ ಕ್ಷಮೆಯಾಚಿಸಿದ್ದಾರೆ. ಚಿತ್ರ ಬಿಡುಗಡೆ ಕುರಿತು ಶನಿವಾರ ತೀರ್ಮಾನವಾಗಲಿದೆ’ ಎಂದು ಹೇಳಿದ್ದಾರೆ.
ಮೊದಲು ಸಾಬೀತುಪಡಿಸಲಿ
ದುಡ್ಡಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ತಮ್ಮ ಮೇಲೆ ಅಪಪ್ರಚಾರ ಮಾಡಿರುವ ಪ್ರಶಾಂತ್ ವಿರುದ್ಧ ಸಾ.ರಾ. ಗೋವಿಂದು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮೊದಲು ತಮ್ಮ ಮೇಲಿನ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ ಎಂದು ಗೋವಿಂದು ಸವಾಲು ಹಾಕಿದ್ದಾರೆ.
“ನಮ್ಮ ಮೇಲೆ ವಿನಾಕಾರಣ ಅಪಪ್ರಚಾರ ಮಾಡಿರುವ ಪ್ರಶಾಂತ್, ದುಡ್ಡಿಗೋಸ್ಕರ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆ ವ್ಯಕ್ತಿ ಮೇಲೆ ನಾನು ದೂರು ಕೊಟ್ಟಿದ್ದೇನೆ. ಒಂದು ವೇಳೆ ನಾವು ಹಣಕ್ಕಾಗಿ ಈ ಹೋರಾಟ ಮಾಡಿದ್ದು ಎಂದು ಸಾಬೀತುಪಡಿಸಿದರೆ, ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ. ಹಾಗೊಂದು ವೇಳೆ ಸಾಬೀತುಪಡಿಸದಿದ್ದರೆ, ನನ್ನ ಬೂಟು ಪಾಲಿಷ್ ಮಾಡಬೇಕು’ ಎಂದು ಸಾ.ರಾ.ಗೋವಿಂದು ಪ್ರಶಾಂತ್‌ಗೆ ಸವಾಲೆಸೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.