ಬಡವರಿಗೆ ವಸತಿ ಸಿಗುವವರೆಗೂ ಸತ್ಯಾಗ್ರಹ
Team Udayavani, Jun 16, 2017, 12:24 PM IST
ಬೆಂಗಳೂರು: “ಬಡವರಿಗೆ ಭೂಮಿ ನೀಡುವುದಾಗಿ ಭರವಸೆ ನೀಡಿ ಹಲವು ತಿಂಗಳುಗಳು ಕಳೆದರೂ ಸರ್ಕಾರ ಈ ವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಬಡವರಿಗೆ ಮಾಡಿದ ಅವಮಾನ’ ಎಂದು ಹಿರಿಯ ಸ್ವತಂತ್ರ್ಯ ಹೋರಾಟ ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ಭೂಮಿ ನೀಡಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆರಂಭಿಸಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, “ರಾಜ್ಯದಾದ್ಯಂತ ಇರುವ ಬಡ ಜನರಿಗೆ ಭೂಮಿ ನೀಡುವುದಾಗಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಆದರೆ, ಈವರೆಗೆ ಇಂತಹ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ. ಸರ್ಕಾರವು, ರಾಜ್ಯದಲ್ಲಿ ಭೂಮಿ ಮತ್ತು ವಸತಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಉನ್ನತಾಧಿಕಾರ ಸಮಿತಿ ರಚಿಸಬೇಕು. ಎರಡು ಮೂರು ದಿನಗಳಲ್ಲಿ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳದಿದ್ದಲ್ಲಿ ಸಿಎಂ ಬಳಿಗೆ ಮಾತುಕತೆಗೆ ತೆರಳುತ್ತೇನೆ,’ ಎಂದರು.
ರಾಜ್ಯದಾದ್ಯಂತ ಬಡ ಜನರು ಹೋರಾಟದ ಮೂಲಕ ಎತ್ತಿರುವ ಭೂಮಿ-ವಸತಿ ಸಂಬಂಧಿತ ಪ್ರಕರಣಗಳನ್ನು ಒಂದು ತಿಂಗಳೊಳಗೆ ಬಡವರ ಪರವಾಗಿ ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಬೇಕು. ಬಡವರ ಮೇಲೆ ಹಾಕಲಾಗಿರುವ ಎಲ್ಲ ಕೇಸುಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಈ ಮೊದಲು ಮಾತನಾಡಿದ ಲೇಖಕಿ ಡಾ. ವಿಜಯಾ ಅವರು, “ಎಲ್ಲ ಶಾಸಕರು ಭೂ ಮಾಫಿಯಾದಲ್ಲಿರುವುದರಿಂದಾಗಿ ಬಡವರಿಗೆ ನ್ಯಾಯ ದೊರೆಯುತ್ತಿಲ್ಲ. ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಬಡವರಿಗೆ ಭೂಮಿ ನೀಡುವ ಕುರಿತು ಮಾತನಾಡಿದ್ದು, ಅವುಗಳನ್ನು ಈಡೇರಿಸಲಾಗದ ಪರಿಸ್ಥಿತಿಗೆ ಅವರು ತಲುಪಿದ್ದರೆ, ಅಷ್ಟರ ಮಟ್ಟಿಗೆ ಭೂ ಮಾಫಿಯಾ ಬಲಾಡ್ಯವಾಗಿದೆ,’ ಎಂದು ಆತಂಕ ವ್ಯಕ್ತಪಡಿಸಿದರು.
“ಮುಖ್ಯಮಂತ್ರಿಗಳು ಬಡವರ ಪರ ಕಾಳಜಿ ಉಳ್ಳವರು ಮತ್ತು ದಕ್ಷರು ಎಂಬ ಭಾವನೆಯಿತ್ತು. ಆದರೆ ರಾಜ್ಯದ ಮಂತ್ರಿಗಳೇ ಜನರ ಭೂಮಿ ನುಂಗಿ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸುತ್ತಿದ್ದಾರೆ. ಅಂತಹವರಿಗೆ ಶಿಕ್ಷೆ ನೀಡುವ ಬದಲಿಗೆ, ಕ್ಲೀನ್‌ಚಿಟ್ ನೀಡುವುದು ಆಘಾತಕಾರಿ ವಿಚಾರವಾಗಿದೆ. ಭೂ ಕಬಳಿಕೆ ಮಾಡಿಕೊಂಡಿರುವ ಶಾಸಕರನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ,’ ಎಂದರು.
ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹೀರೇಮ, “ಉಳುವವನೇ ಭೂಮಿಯ ಒಡೆಯ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಬಡವರಿಗೆ ಭೂಮಿ ದೊರೆಯದಿರುವುದು ವಿಷಾದನೀಯ. ಸ್ವಾತಂತ್ರ್ಯ ಎಂಬುದು ಭೂ ಕಳ್ಳರ ಕಪಿಮುಷ್ಠಿಯಲ್ಲಿದ್ದು, ಇದರಿಂದ ಹೊರ ಬರಬೇಕಾದರೆ ನಾವು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಿದೆ. ರೈತರು, ಕಾರ್ಮಿಕರು, ಬಡವರು ನಡೆಸಿದ ಸ್ವಾತಂತ್ರ್ಯ ಹೋರಾಟ ಫಲವನ್ನು ಕಳ್ಳರು ಅನುಭವಿಸುತ್ತಿದ್ದಾರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ಆರ್.ಮಾನಸಯ್ಯ, ಸಮಾನತೆಗಾಗಿ ಜನಾಂದೋಲನದ ಸಿರಿಮನೆ ನಾಗರಾಜ್ ಹಾಗೂ ನೂರ್ ಶ್ರೀಧರ್, ಕರ್ನಾಟಕ ರೈತ ಸಂಘದ ಡಿ.ಎಚ್.ಪೂಜಾರ್, ಲಂಚ ಮುಕ್ತ ಕರ್ನಾಟಕದ ರವಿಕೃಷ್ಣಾ ರೆಡ್ಡಿ ಸೇರಿದಂತೆ ಪ್ರಮುಖರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
5 adjectives; ಮೋದಿ ಸರ್ಕಾರದ 5 ವಿಶೇಷಣಗಳು ಇವು..: ಖರ್ಗೆ ಕೆಂಡಾಮಂಡಲ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
Online Trading: ಆನ್‌ಲೈನ್ ಲಿಂಕ್ ಅಪ್ಲಿಕೇಶನ್ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
Panambur: ಬೀಚ್ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು
India A vs Australia A: ಸುದರ್ಶನ್ 96, ಪಡಿಕ್ಕಲ್ 80, ಆಸೀಸ್‌ಗೆ ಭಾರತ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.